INTERVIEW: ಬಿಜೆಪಿ ಶಾಸಕ ಯತ್ನಾಳ್ ಬೊಗಳುವುದರಿಂದ ಪ್ರಯೋಜನವಿಲ್ಲ!
ಬೆಂಗಳೂರು, ಡಿ. 04: ರಾಜ್ಯ ಬಿಜೆಪಿ ಸರ್ಕಾರದ ಮರಾಠ ಅಭಿವೃದ್ಧಿ ನಿಗಮ ರಚನೆ ನಿರ್ಧಾರ ಖಂಡಿಸಿ ನಾಳೆ (ಡಿ. 05) ಕರ್ನಾಟಕ ಬಂದ್ಗೆ ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿವೆ. ಬಂದ್ ಮಾಡಬಾರದು ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಾಟಾಳ್ ನಾಗರಾಜ್ ಅವರಿಗೆ ಮನವಿ ರೂಪದ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ನಾಳೆ (ಡಿ.05)ಯ ಕರ್ನಾಟಕ ಬಂದ್ ಕುರಿತು 'ಒನ್ಇಂಡಿಯಾ ಕನ್ನಡ'ದೊಂದಿಗೆ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಮಾತನಾಡಿದ್ದು, ಕರ್ನಾಟಕ ಬಂದ್ಗೆ ನಾಡಿನ ಜನತೆ ಬಹಳ ಚೆನ್ನಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಬಂದ್ ಸಂಪೂರ್ಣ ಯಶಸ್ವಿಯಾಗುತ್ತದೆ. ಈ ಬಂದ್ ಮೂಲಕ ಇಡೀ ನಾಡಿನ ಕನ್ನಡಿಗರು ಒಂದಾಗಿದ್ದಾರೆ. ಇದು ಕನ್ನಡಿಗರ ಸ್ವಾಭಿಮಾನ ಕಾಪಾಡುವ ಕರ್ನಾಟಕದ ಬಂದ್ ಆಚರಣೆ ಆಗಿದ್ದು, ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ಅದ್ಭುತವಾಗಿ ಬಂದ್ ನಡೆಯಲಿದೆ ಎಂದಿದ್ದಾರೆ.
ಚಿಕ್ಕಪೇಟೆಯಲ್ಲಿ ವರ್ತಕರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವಾಟಾಳ್ ನಾಗರಾಜ್
ಡಿಸೆಂಬರ್ 5 ರಂದು ಕರೆ ಕೊಟ್ಟಿರುವ ಕರ್ನಾಟಕ ಬಂದ್ ಕುರಿತು ಕನ್ನಡಪರ ಹೋರಾಟಗಾರದ ವಾಟಾಳ್ ನಾಗರಾಜ್ ಅವರು ಏನೇನು ಹೇಳಿದ್ದಾರೆ? ಇಲ್ಲಿದೆ ಅವರೊಂದಿಗಿನ ಸಂದರ್ಶನದ ಪೂರ್ಣ ವಿವರ.

ಸರ್ವಾನುಮತದ ಬಂದ್
* ಬಂದ್ಗೆ ಕನ್ನಡಪರ ಎಲ್ಲ ಸಂಘಟನೆಗಳು ಬೆಂಬಲ ಕೊಟ್ಟಿಲ್ಲ ಎಂಬ ಮಾತುಗಳಿವೆ. ಏನು ಹೇಳುತ್ತೀರಿ?
ವಾಟಾಳ್ ನಾಗರಾಜ್: ಅದೆಲ್ಲ ಸುಳ್ಳು. ಈಗ ಎಲ್ಲರೂ ಬೆಂಬಲ ಕೊಟ್ಟು ಬಿಟ್ಟಿದ್ದಾರೆ. ಕರ್ನಾಟಕ ಬಂದ್ ವಿರೋಧ ಮಾಡುವವರು ಈಗ ಒಬ್ಬರೂ ಇಲ್ಲ. ಬಂದ್ ಬಿಟ್ಟು ಬೇರೆ ಮಾತೇ ಇಲ್ಲ. ಕರ್ನಾಟಕ ಬಂದ್ ಸರ್ವಾನುಮತದ ಬಂದ್ ಆಗಲಿದೆ. ಸಾಮಾನ್ಯ ಬಂದ್ ಅಲ್ಲ. ಇದು ಸರ್ವಾನುಮತದ ಬಂದ್.
ರಾಜ್ಯ ಬಿಜೆಪಿ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಮಾಡಿದ್ದು ಅಕ್ಷಮ್ಯ ಅಪರಾಧ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಠವಾದಿ, ಸರ್ವಾಧಿಕಾರಿ. ಅವರು ತಮ್ಮ ಇಚ್ಚೆ ಬಂದ ಹಾಗೆ ಮಾಡಲು ಹೊರಟಿದ್ದಾರೆ. ಅದು ಒಳ್ಳೆಯದಲ್ಲ.

ಯತ್ನಾಳ್ ಬೊಗಳಬಾರದು!
* ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಅವರು ನಿಮ್ಮ ಮೇಲೆ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡನೆ ಮಾಡುವ ಎಚ್ಚರಿಕೆ ನೀಡಿದ್ದಾರೆ? ಆ ಬಗ್ಗೆ ಏನು ಹೇಳುತ್ತೀರಿ?
ವಾಟಾಳ್ ನಾಗರಾಜ್: ಅಯ್ಯಯ್ಯೋ! ಈ ಶಿಕ್ಷೆಗೆಲ್ಲ ನಾನು ಹೆದರಿಕೊಳ್ಳುತ್ತೇನಾ? ಅವರು ಹೆದರಬೇಕು ಅಷ್ಟೇ. ಇಂಥದ್ದಕ್ಕೆಲ್ಲ ನಾನು ಹೆದರಿಕೊಳ್ಳುವುದಿಲ್ಲ. ಸುಮ್ಮನೆ ಅವರು ಬೊಗಳಬಾರದು. ಬೊಗಳುವುದರಿಂದ ಪ್ರಯೋಜನವೂ ಇಲ್ಲ. ಮತ್ತು ಆ ಮುನುಷ್ಯನಿಗೆ ಉತ್ತರ ಕೊಡುವ ಅಗತ್ಯವೂ ಇಲ್ಲ. ನಾನು ಅಂಥವರಿಗೆ ಉತ್ತರವನ್ನೂ ಕೊಡುವುದಕ್ಕೂ ಹೋಗುವುದಿಲ್ಲ.
* ನೀವು ಕರ್ನಾಟಕ ಬಂದ್ ಮಾಡುವುದರಿಂದ ಬಿಜೆಪಿ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ರಚನೆಯಿಂದ ಹಿಂದೆ ಸರಿಯುತ್ತದೆಯಾ?
ವಾಟಾಳ್ ನಾಗರಾಜ್: ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಲೇ ಬೇಕು. ಇಲ್ಲದೆ ಇದ್ದರೆ ಮುಂದೆ ಜೈಲ್ ಭರೋ ಚಳುವಳಿ ಮಾಡುತ್ತೇವೆ. ನಾವೆಲ್ಲ ಕನ್ನಡಿಗರು ಜೈಲಿಗೆ ಹೋಗುವುದಕ್ಕೂ ನಾವು ತೀರ್ಮಾನ ಮಾಡಿದ್ದೇವೆ. ರಾಜ್ಯದಲ್ಲಿರುವ ಕನ್ನಡಿಗರನ್ನೆಲ್ಲ ಜೈಲಿಗೆ ಹಾಕಲಿ. ನಮ್ಮನ್ನೆಲ್ಲ ಜೈಲಿಗೆ ಹಾಕಿ ಅವರು ರಾಜ್ಯಭಾರ ಮಾಡಲಿ.

ಯಡಿಯೂರಪ್ಪ ಸರ್ವಾಧಿಕಾರಿ!
* ಮರಾಠ ಅಭಿವೃದ್ಧಿ ನಿಗಮ ರಚನೆಯ ಹಿಂದಿನ ಉದ್ದೇಶ ಏನು?
ವಾಟಾಳ್ ನಾಗರಾಜ್: ಅವರು ರಾಜಕೀಯಕ್ಕಾಗಿ ಇದನ್ನು ಮಾಡುತ್ತಿದ್ದಾರೆ. ಇದು ಬರೀ ರಾಜಕೀಯ ಉದ್ದೇಶಕ್ಕಾಗಿ ಮಾಡಿರುವ ನಿಗಮವದು. ಅದರೊಂದಿಗೆ ಬೆಳಗಾವಿಯಲ್ಲಿ ದಿ. ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಲೋಕಸಭಾ ಸ್ಥಾನಕ್ಕೆ ಉಪ ಚುನಾವಣೆ ಬರುತ್ತದೆ. ಜೊತೆಗೆ ಬಸವಕಲ್ಯಾಣದಲ್ಲಿ ಉಪ ಚುನಾವಣೆ ಬರುತ್ತದೆ.
ಅದಕ್ಕೆ ಮರಾಠಿಯವರು ಬೆಂಬಲ ಕೊಡಬೇಕು. ಇದಕ್ಕೆ ಇದೆಲ್ಲ ನಡೆಯುತ್ತಿದೆ. ಚುನಾವಣೆಗಾಗಿ ಈ ಕಮಾಲ್ ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಕನ್ನಡಿಗರನ್ನು ತುಳಿದು ಇವರು ಯಾಕೆ ಅಧಿಕಾರ ಮಾಡಬೇಕು? ಇವರು ಅಧಿಕಾರದಲ್ಲಿ ಇರುವುದು ನಾಲ್ಕು ದಿನವೊ? ಐದು ದಿನವೊ? ಐದು ವರ್ಷವೊ? ಹತ್ತು ವರ್ಷಗಳೊ? ಅಷ್ಟೆ. ಜನಕ್ಕೆ ಒಂದು ಒಳ್ಳೆಯ ಆಡಳಿತ ಕೊಡಬೇಕು.
ಸರ್ಕಾರಕ್ಕೆ ಬರುವ ಸಾವಿರಾರು ಕೋಟಿ ದುಡ್ಡನ್ನು ಅಧಿಕಾರ ಮಾಡುವವರು ಮನೆಯಲ್ಲಿ ಇಟ್ಟುಕೊಳ್ಳುವದಕ್ಕೆ ಬರಲ್ಲ. ಎಲ್ಲೊ ಒಂದಿಷ್ಟು ತಿನ್ನೋದಕ್ಕೆ, ಉಣ್ಣುವುದಕ್ಕೆ ಮಾಡಿಕೊಳ್ಳಲಿ, ಬೇಡ ಅಂತಾ ಯಾರೂ ಹೇಳುತ್ತಾರೆ. ಹಾಳಾಗಿ ಹೋಗಲಿ. ಇದೆನಿದು ನಾಡಿಗೆ ದ್ರೋಹ ಮಾಡುವ ದರಿದ್ರ. ಇದು ಒಳ್ಳೆಯದಲ್ಲ. ಎಂತೆಂಥ ಮಹನೀಯರು ಮುಖ್ಯಮಂತ್ರಿಗಳಾಗಿದ್ದರು. ಅವರೆಲ್ಲ ಹಾಕಿದ್ದ ದಾರಿಯನ್ನು ಯಡಿಯೂರಪ್ಪ ಅವರು ಮರೆತೆ ಬಿಟ್ಟಿದ್ದಾರೆ. ಮುಖ್ಯಮಂತ್ರಿಗಳ ಕುರ್ಚಿಯಲ್ಲಿ ಎಂತೆಂಥವರು ಕುಳಿತಿದ್ದರು. ನಾನೂ ಕೂಡ 1967 ರಿಂದ ವಿಧಾನಸಭೆಯ ಸದಸ್ಯ. ನಿನ್ನೆ ಮೊನ್ನೆ ಬಂದವನಲ್ಲ.

ಬೆಳಗಾವಿ ಬಿಟ್ಟು ಕೊಡುವ ತಯಾರಿ
* ಮರಾಠ ಅಭಿವೃದ್ಧಿ ನಿಗಮ ರಚನೆಯಿಂದ ಗಡಿ ತಂಟೆ ತೆಗೆಯುವ ಮರಾಠಿಗರಿಗೆ ರಾಜ್ಯ ಸರ್ಕಾರವೇ ಕುಮ್ಮಕ್ಕು ಕೊಟ್ಟಂತಾಗುವುದಿಲ್ಲವಾ?
ವಾಟಾಳ್ ನಾಗರಾಜ್: ಹೌದೌದು...ಸರಿಯಾದ ಚಿಂತನೆ. ನಾನೂ ಇದನ್ನೇ ಹೇಳುತ್ತಾ ಇದ್ದೇನೆ. ಸರ್ವೋಚ್ಛ ನ್ಯಾಯಾಲಯದಲ್ಲಿ ಅವರು ಹಾಕಿರುವ ಗಡಿ ವಿವಾದದ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಇದು ಅಪಾಯಕಾರಿ ನಡೆ. ಮರಾಠಿ ಮಾತನಾಡುವ ಬಹುಸಂಖ್ಯಾತರು ನಾವಿದ್ದೇವೆ. ನಮಗೆ ಕಾರವಾರ ಬಿಟ್ಟುಕೊಡಿ. ನಿಪ್ಪಾಣಿ ಕೊಡಿ. ಈ ಕಡೆ ಬೆಳಗಾವಿ ಬಿಟ್ಟುಕೊಡಿ ಅಂತಾ ಅವರು ಕೇಳುತ್ತಿದ್ದಾರೆ. ಇವರು ಮಾಡುತ್ತಿರುವ ನಿಗಮ ಬಹುಸಂಖ್ಯಾತರಿಗೆ ಅಂತಾಗುತ್ತದೆ. ಸರ್ಕಾರದ ಈ ನಡೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಕೊಡುವುದಕ್ಕೆ ಇವರು ತಯಾರಾಗಿದ್ದಾರೆ. ಇದು ಒಳ್ಳೆಯದಲ್ಲ. ಇದಕ್ಕೆ ಅವಕಾಶ ಕೊಡಲೇ ಬಾರದು ಎಂದು ವಾಟಾಳ್ ನಾಗರಾಜ್ ಅವರು ಮಾತು ಮುಗಿಸಿದರು.