ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎಸ್‌ಸಿ: ಅಡಿಕೆ ತೋಟದಲ್ಲಿ ಕೂಲಿ ಕಾರ್ಮಿಕರ ಪುತ್ರನ ಯಶೋಗಾಥೆ

|
Google Oneindia Kannada News

ಬೆಂಗಳೂರು, ಸೆ. 28: ನಮ್ಮ ಅಪ್ಪ ಅಮ್ಮ ಅಡಿಕೆ ತೋಟದಲ್ಲಿ ಕೂಲಿ ಮಾಡುತ್ತಿದ್ದರು. ಬಿಪಿಎಲ್ ಕಾರ್ಡ್‌ಗಾಗಿ ಅರ್ಜಿ ಹಾಕಿದ್ದರು. ಕೆಲವರಿಗೆ ಸಿಕ್ಕಿದರೂ ನಮಗೆ ಸಿಗಲಿಲ್ಲ. ನಮ್ಮ ತಾಯಿಗೆ ಸಿಗಲಿಲ್ಲ, ನಮ್ಮಮ್ಮ ಕಣ್ಣೀರು ಹಾಕಿದ್ದರು. ಬಿಪಿಎಲ್ ಕಾರ್ಡ್ ಪಡೆಯೋಕೆ ತಹಶೀಲ್ದಾರ್, ಡಿಸಿ ಕಚೇರಿ ವರೆಗೂ ಹೋಗಿ ಬರಬೇಕಾಯಿತು. ಆ ಘಟನೆ ನನ್ನ ಮರೆಯಲಾಗಲಿಲ್ಲ. ಅವತ್ತೇ ತೀರ್ಮಾನ ಮಾಡಿದೆ ನಾನು ಒಬ್ಬ ದೊಡ್ಡ ಅಧಿಕಾರಿಯಾಗಬೇಕು ಅಂತ. ನನ್ನಮ್ಮನ ಕಣ್ಣೀರು, ನಾನು ಹಾಸ್ಟೆಲ್‌ನಲ್ಲಿ ಎದುರಿಸಿದ ಸಮಸ್ಯೆ ನಾನು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸುವಂತೆ ಮಾಡಿತು.

ಪ್ರಸಕ್ತ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಮುದಿಗೆರೆ ನಿವಾಸಿ ಸಂತೋಷ್ ಮನದಾಳದ ಮಾತು. ಒನ್ಇಂಡಿಯಾ ಕನ್ನಡ ಜತೆ ತನ್ನ ಬದುಕಿನ ಜರ್ನಿಯನ್ನು ಹಂಚಿಕೊಂಡಿದ್ದಾರೆ. ಭಾರತೀಯ ನಾಗರಿಕ ಸೇವೆಗೆ ಸೇರುವ ಮುನ್ನ ಆತ ಪಟ್ಟ ಕಷ್ಟ, ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದನ್ನು ಎಳೆಎಳೆಯಾಗಿ ಹಂಚಿಕೊಂಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿ ಕೇಂದ್ರ ಸೇವೆಗೆ ಆಯ್ಕೆಯಾಗಿರುವ ಕೂಲಿ ಕಾರ್ಮಿಕ ದಂಪತಿಯ ಪುತ್ರನಿಗೆ ಬೆನ್ನಲ್ಲೇ ಬಾಗಿ ನಿಂತು ಭಾರತೀಯ ನಾಗರಿಕ ಸೇವೆಗೆ ಸೇರುವಂತೆ ಮಾಡಿದ ಗುರುಗಳನ್ನು ನೆನಪಿಸಿಕೊಂಡಿದ್ದಾರೆ.

ನಮ್ಮದು ಬಡ ಕುಟುಂಬ. ನಮ್ಮ ತಂದೆ- ತಾಯಿ ಮಲೆನಾಡಿನ ಅಡಿಕೆ ತೋಟಕ್ಕೆ ಕೂಲಿಗೆ ಹೋಗುತ್ತಿದ್ದರು. ನಾನು ಸರ್ಕಾರಿ ಶಾಲೆಯಲ್ಲಿ ಓದಿದೆ. ಕಾಲೇಜು ಶಿಕ್ಷಣವನ್ನು ಕೂಡ ಹಾಸ್ಟಲ್‌ನಲ್ಲಿ ಮುಗಿಸಿದೆ. ನಾನು ಮೆಕ್ಯಾನಿಕಲ್ ವಿಭಾಗದಲ್ಲಿ ಡಿಪ್ಲೋಮಾ ಮಾಡಿದೆ. ನನ್ನ ತಂದೆ ವೀಳ್ಯೆದೆಲೆ ತೋಟಕ್ಕೆ ಹೋಗಿ ಕೆಲಸ ಮಾಡುತ್ತಿದ್ದರು. ನನ್ನ ತಾಯಿ ಕೂಡ ಕೂಲಿ ಮಾಡುತ್ತಿದ್ದರು. ಕೂಲಿ ಕೆಲಸ ಸಿಗಲಿಲ್ಲ ಎಂದರೆ ಮಲೆನಾಡಿನ ಕಡೆ ಅಡಿಕೆ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ದಿನಗೂಲಿಯಾಗಿ ದುಡಿದು ತರುತ್ತಿದ್ದ ಹಣದಲ್ಲಿ ಜೀವನ ಮಾಡುತ್ತಿದ್ದೆವು. ನಾನು ನನ್ನ ತಾಯಿಯ ತವರು ಮನೆಯಲ್ಲಿಯೇ ಇರುತ್ತಿದ್ದೆ. ನನ್ನ ಆರಂಭದ ಓದಿಗೆ ನನ್ನ ತಾಯಿ ಕಡೆ ಮನೆಯವರು, ತಾಯಿ ಅಕ್ಕನ ಮಕ್ಕಳು ಸಹಾಯ ಮಾಡಿದರು.

UPSC achiever : Migrant labor family student got 751th rank in UPSC Exam

ನಾನು ಹದಿನೆಂಟು ವರ್ಷ ಇರುವಾಗಲೇ ಡಿಪ್ಲೋಮಾ ಮುಗಿಸಿದೆ. ಕೆಲಸ ಮುಗಿಸಿದ ಕೂಡಲೇ ದುಡಿಯುವ ಅನಿವಾರ್ಯತೆ ಎದುರಾಯಿತು. ಡಿಪ್ಲೋಮಾ ಮುಗಿಸಿದ ಕೂಡಲೇ ಸಿವಿಲ್ ಇಂಜಿನಿಯರಿಂಗ್ ಫೀಲ್ಡ್‌ನಲ್ಲಿ ಕೆಲಸ ಮಾಡಿಸುತ್ತಿದ್ದೆ. ಒಂದು ವರ್ಷದ ಬಳಿಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ಲರ್ಕ್ ಕೆಲಸ ಸಿಕ್ಕಿತು. ಅಲ್ಲಿ ಮೂರು ವರ್ಷ ಕೆಲಸ ಮಾಡಿದೆ. ಅದಾದ ನಂತರ ಡಿಅರ್‌ಡಿಒದಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದೆ. ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಕೆಲಸ ಸಿಕ್ಕಿತು. ನಾನು ಓದುವಾಗ ಇಂಕಮ್ ಸರ್ಟಿಫಿಕೇಟ್ ಮಾಡಿಸುವಾಗಲೂ ನಾನು ತಾಲೂಕು ಕಚೇರಿಗೆ ಹೋಗಿ ಬರುವಾಗ ನಾನೇ ಅಧಿಕಾರಿ ಆಗಬೇಕು ಎಂದೆನಿಸುತ್ತಿತ್ತು ಎಂದು ತನ್ನ ಮನದಾಳದ ಮಾತು ಹಂಚಿಕೊಂಡರು.

ದೂರ ಶಿಕ್ಷಣದಲ್ಲಿ ಪದವಿ: ನಾನು ಹಾಸ್ಟೆಲ್‌ನಲ್ಲಿ ಎದುರಿಸಿದ ಸಮಸ್ಯೆ, ನನ್ನ ತಾಯಿ ರೇಷನ್ ಕಾರ್ಡ್‌ಗಾಗಿ ಕಣ್ಣೀರು ಹಾಕಿದ್ದು ಮರೆಯಲಾಗಲಿಲ್ಲ. ಸಿವಿಲ್ ಸರ್ವೀಸ್‌ಗೆ ಸೇರಬೇಕೆಂಬ ಆಸೆಯಿಂದ ನಾನು ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ದೂರ ಶಿಕ್ಷಣದಲ್ಲಿ ಪದವಿ ಮಾಡಿದೆ. ಕೆಲಸ ಮಾಡುತ್ತಲೇ ದೂರ ಶಿಕ್ಷಣದಲ್ಲಿ ಪದವಿ ಮುಗಿಸಿ ನಾನು ಲೋಕ ಸೇವಾ ಅಯೋಗ ನಡೆಸುವ ಪರೀಕ್ಷೆಗೆ ತಯಾರಿ ನಡೆಸಲು ಆರಂಭಿಸಿದೆ ಎನ್ನುತ್ತಾರೆ ಸಂತೋಷ್.

UPSC achiever : Migrant labor family student got 751th rank in UPSC Exam

ನನಗೆ ಮಾರ್ಗದರ್ಶನ: ನಾನು ಓದಲು ಅರಂಭಿಸಿದೆ. ಡಿಆರ್‌ಡಿಒದಲ್ಲಿ ಬೆಳಗ್ಗೆ ಎಂಟು ಗಂಟೆಗೆ ಕೆಲಸಕ್ಕೆ ಹೋಗುತ್ತಿದ್ದೆ. ಸಂಜೆ ಏಳು ಗಂಟೆಯಿಂದ ರಾತ್ರಿ ಹನ್ನೆರಡುವರೆಗೂ ಓದಲು ಆರಂಭಿಸಿದೆ. ಅರಂಭದಲ್ಲಿ ಸ್ವಯಂ ಅಧ್ಯಯನ ಹಾಕಿದೆ. 2017 ರಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ಪೂರ್ವಭಾವಿ ಪರೀಕ್ಷೆಯಲ್ಲಿ ಒಂದು ಅಂಕದಿಂದ ಅನುತ್ತೀರ್ಣನಾದೆ. ನನ್ನ ಪರಿಸ್ಥಿತಿ ನೋಡಿ ಮೊದಲು ವಿನಯ್ ಸರ್ ನನಗೆ ಟೆಸ್ಟ್ ಸೀರೀಸ್ ಕೊಟ್ಟು ಓದಲು ಹೇಳಿದರು. ಅಲ್ಲಿಂದ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. 2018 ರಲ್ಲಿ ನಾನು ಸಂದರ್ಶನಕ್ಕೆ ಹೋಗಿ ವಿಫಲನಾದೆ. ಆನಂತರ ನನಗೆ IndiaforIAS ಅಕಾಡೆಮಿಯ ಶ್ರೀನಿವಾಸ್ ಸರ್ ಪರಿಚಯವಾದರು. ಅಲ್ಲಿಂದ ನನ್ನ ಓದಿನ ದೆಸೆಯೇ ಬದಲಾಯಿತು ಎಂದು ತನ್ನ ಮೊದಲ ಸೋಲಿನ ಬಗ್ಗೆ ಸಂತೋಷ್ ಮುಕ್ತವಾಗಿ ಹಂಚಿಕೊಂಡರು.

ನನಗೆ ಇಂಗ್ಲೀಷ್ ಬರುತ್ತಿರಲಿಲ್ಲ: ನನಗೆ ಮೊದಲು ಬಿಪಿನ್ ಚಂದ್ರ ಪುಸ್ತಕ ಇದೆ ಅಂತಲೇ ಗೊತ್ತಿರಲಿಲ್ಲ. ಅದನ್ನು ಓದುತ್ತಲೇ ಅದರ ಮೇಲೆ ನಿಯಂತ್ರಣ ಸಾಧಿಸಿದೆ. ಸಾಮಾನ್ಯವಾಗಿ ಲಕ್ಷಾಂತರ ಮಂದಿ ಸಿವಿಲ್ ಸೇವೆಗೆ ಸೇರಬೇಕು ಎಂದು ಲಕ್ಷಾಂತರ ಮಂದಿ ಅರ್ಜಿ ಹಾಕುತ್ತಾರೆ. ಬಹುತೇಕರು ಪರೀಕ್ಷೆ ಬರೆಯಲ್ಲ. ಐವತ್ತು ಸಾವಿರ ಜನ ಪರೀಕ್ಷೆ ಬರೆದರೂ ಹತ್ತು ಸಾವಿರ ಮಂದಿ ಪೂರ್ವ ಭಾವಿ ಪರೀಕ್ಷೆಯಲ್ಲಿ ಉತ್ತೀರ್ಣ ರಾಗುತ್ತಾರೆ. ಅದಲ್ಲಿ ಅಂತಿಮ ಪರೀಕ್ಷೆಗೆ ಆಯ್ಕೆಯಾಗುವುದು ಒಂದು ಸಾವಿರ ಮಂದಿ. ಶ್ರದ್ಧೆ, ಛಲದಿಂದ ಓದಿದರೆ ಭಾರತೀಯ ನಾಗರಿಕ ಸೇವೆ ಪಾಸು ಮಾಡುವುದು ದೊಡ್ಡ ಕಷ್ಟವೇನಲ್ಲ.

UPSC achiever : Migrant labor family student got 751th rank in UPSC Exam

ನಿರಂತರ ಕಲಿಕೆ ಇರಬೇಕು. ಸೋಲು ಎದುರಾದರೂ ಬಿಡಬಾರದು ಇನ್ನೂ ಯಾರೇ ಆಗಲೀ ಪ್ರಾಮಾಣಿಕವಾಗಿ ಭಾರತೀಯ ನಾಗರಿಕ ಸೇವೆಗೆ ಸೇರುತ್ತೇನೆ ಎಂದು ಬಯಸುವ ಗ್ರಾಮೀಣ ವಿದ್ಯಾರ್ಥಿಗಳಿಗೆ ನಾನು ಸದಾ ಮಾರ್ಗದರ್ಶನ ನೀಡುತ್ತೇನೆ. ನಾನು ಸಿವಿಲ್ ಸರ್ವೀಸ್‌ನಲ್ಲಿ ಯಶಸ್ಸು ಗಳಿಸಲು ನಾಲ್ಕು ವರ್ಷ ಪಡೆಯಿತು. ನಾನು ಮೊದಲ ಪ್ರಯತ್ನದಲ್ಲಿ ಅನುತ್ತೀರ್ಣ ಆದರೂ ನಾನು ವಿಮುಖನಾಗದೇ ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಂಡೆ. ಹೀಗಾಗಿ ನಾಲ್ಕು ವರ್ಷದ ಬಳಿಕ ಯಶಸ್ಸು ಗಳಿಸಿದೆ. ಪ್ರಾಮಾಣಿಕವಾಗಿ ಕೇಂದ್ರ ಲೋಕ ಸೇವಾ ಅಯೋಗ ಪರೀಕ್ಷೆ ತೆಗೆದುಕೊಳ್ಳುವರಿಗೆ ನಾನು ಸಹಾಯ ಮಾಡಲು ಸದಾ ಸಿದ್ಧವಿರುತ್ತೇನೆ ಎಂದು ಸಂತೋಷ್ ತನ್ನ ಮನದಾಳದ ಮಾತು ಹಂಚಿಕೊಂಡಿದ್ದಾರೆ. ಪ್ರಸಕ್ತ ಸಾಲಿನ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ 751 ನೇ Rank ಗಳಿಸಿದ್ದಾರೆ.

UPSC achiever : Migrant labor family student got 751th rank in UPSC Exam

ನನಗೊಬ್ಬ ಗುರು ಸಿಕ್ಕರು: ನಾನು ಹೀಗೆ ಪ್ರಯತ್ನ ಮಾಡುವಾಗಲೇ ನನಗೆ IndiaforIAS ಅಕಾಡೆಮಿಯ ಶ್ರೀನಿವಾಸ್ ಸರ್ ಪರಿಚಯವಾದರು. 2018 ರಲ್ಲಿ ಸಂದರ್ಶನಕ್ಕೆ ಹೋಗಿ ವಿಫಲವಾದ ನಂತರ ನನಗೆ ಗುರುವಾಗಿ ಬೆನ್ನೆಲಬಾಗಿ ನಿಂತರು. ನನ್ನ ಬಳಿ ಯಾವ ಶುಲ್ಕವನ್ನು ಕೇಳಲಿಲ್ಲ. ನಾಗರಿಕ ಸೇವೆಗೆ ಸೇರುವ ಬಗ್ಗೆ ಮಾರ್ಗದರ್ಶನ ನೀಡಿದರು. ಪಾಠ ಮಾಡಿ ಬೆನ್ನು ತಟ್ಟಿದ್ದರು. ಸದಾ ಸ್ಫೂರ್ತಿದಾಯಕವಾಗಿ ಓದಲು ಪ್ರೇರಣೆ ನೀಡಿದರು. ಹೀಗಾಗಿ ನಾನು ಭಾರತೀಯ ನಾಗರಿಕ ಸೇವೆಗೆ ಸೇರಲು ಅನುಕೂಲವಾಯಿತು. ನಾನು ಸದಾ ನನ್ನ ಗುರು ಶ್ರೀನಿವಾಸ್ ಸರ್‌ಗೆ ಚಿರ ಋಣಿಯಾಗಿರುತ್ತೇನೆ ಎಂದು ಸ್ಮರಿಸಿದರು ಸಂತೋಷ್.

UPSC achiever : Migrant labor family student got 751th rank in UPSC Exam

ನನ್ನ ನೆಚ್ಚಿನ ವಿದ್ಯಾರ್ಥಿಯಲ್ಲಿ ಒಬ್ಬ: ತನ್ನ ವಿದ್ಯಾರ್ಥಿ ನಾಗರಿಕ ಸೇವೆಗೆ ಅಯ್ಕೆಯಾದ ಬಗ್ಗೆ ಇಂಡಿಯಾಫಾರ್ ಐಎಎಸ್ ಅಕಾಡೆಮಿಯ ಸಂಸ್ಥಾಪಕ ಶ್ರೀನಿವಾಸ್ ಸಂತಸ ವ್ಯಕ್ತಪಡಿಸಿದರು. ಸಂತೋಷ್ ತುಂಬಾ ಕಷ್ಟದಿಂದ ಬೆಳೆದು ಬಂದಿದ್ದ ಹುಡುಗ. ಆತನ ಪ್ರತಿಭೆ ನೋಡಿ ನಾಗರಿಕ ಸೇವೆಗೆ ಆಯ್ಕೆಯಾಗುತ್ತಾನೆ ಎಂಬ ನಂಬಿಕೆಯಿತ್ತು. ಹೀಗಾಗಿ ನಾನು ಪ್ರಾಮಾಣಿಕವಾಗಿ ಸಹಾಯ ಮಾಡಿದೆ. ಅದರಂತೆ ಆತ ಯಶಸ್ಸು ಗಳಿಸಿದ್ದಾನೆ. ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯಿಂದ ಗ್ರಾಮೀಣ ಭಾಗದ 84 ಮಕ್ಕಳಿಗೆ ಸಹಾಯ ಮಾಡಿದ್ದೇನೆ. ಅನೇಕರು ಸಂತೋಷ್ ರೀತಿ ಭಾರತೀಯ ನಾಗರಿಕ ಸೇವೆಗೆ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ತುಂಬಾ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹ ನೀಡಿದರೆ ಯಶಸ್ಸು ಗಳಿಸುತ್ತಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಾಗರಿಕ ಸೇವೆಗೆ ಬರಬೇಕು ಎಂಬುದು ನನ್ನ ಆಶಯ ಎನ್ನುತ್ತಾರೆ ಶ್ರೀನಿವಾಸ್.

English summary
Success story of IAS topper Santhosh, Migrant labor family Student succeed in UPSC 2020 exam know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X