ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸರಕಾರದ ವಿರುದ್ದ ಪೇಜಾವರ ಶ್ರೀಗಳ ಹೇಳಿಕೆ: ಇಕ್ಕಟ್ಟಿನಲ್ಲಿ ಬಿಜೆಪಿ

|
Google Oneindia Kannada News

ವಿಶ್ವಹಿಂದೂ ಪರಿಷತ್ತಿನ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿರುವ, ನಾಡಿನ ಹಿರಿಯ ಯತಿ ಉಡುಪಿ ಪೇಜಾವರ ಮಠದ ವಿಶ್ವೇಶ್ವರತೀರ್ಥ ಶ್ರೀಗಳು, ಬಿಜೆಪಿ ವಿರುದ್ದ ತಮ್ಮ ಅಸಮಾಧಾನವನ್ನು ಮತ್ತೆ ಹೊರಹಾಕಿದ್ದಾರೆ.

ಹಿಂದಿನಿಂದಲೂ ಸಂಘ ಪರಿವಾರ ಮತ್ತು ಬಿಜೆಪಿ ವಿರುದ್ದದ ನಿಲುವನ್ನು ಪೇಜಾವರ ಶ್ರೀಗಳು ತಾಳಿದ್ದರೆ, ಶ್ರೀಗಳ ಹೇಳಿಕೆಗೆ ಅಷ್ಟಾಗಿ ಮಹತ್ವ ಬರುತ್ತಿರಲಿಲ್ಲ. ಆದರೆ, ಬಹುತೇಕ ಬಿಜೆಪಿ ಪರವಾದ ನಿಲುವನ್ನು ತಾಳುತ್ತಿದ್ದ ಶ್ರೀಗಳು, ಇದ್ದಕ್ಕಿದ್ದಂತೆ ಬದಲಾಗಲು ಕಾರಣವೇನು ಎನ್ನುವುದೇ ಭಕ್ತರಿಗೆ ಕಾಡುತ್ತಿರುವ ಪ್ರಶ್ನೆ.

ಜೂ 13ಕ್ಕೆ ಗೋವಿಂದ ಕಲ್ಯಾಣ ಮಂಟಪದಲ್ಲಿ ಪೇಜಾವರ ಶ್ರೀಗಳ ಇಫ್ತಾರ್ ಕೂಟಜೂ 13ಕ್ಕೆ ಗೋವಿಂದ ಕಲ್ಯಾಣ ಮಂಟಪದಲ್ಲಿ ಪೇಜಾವರ ಶ್ರೀಗಳ ಇಫ್ತಾರ್ ಕೂಟ

ಮೋದಿ ಸಮರ್ಥ ಪ್ರಧಾನಿ ಎನ್ನುತ್ತಿದ್ದ ಶ್ರೀಗಳು, ಕಳೆದ ನಾಲ್ಕು ವರ್ಷದಲ್ಲಿ ಕೇಂದ್ರದಿಂದ ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಡೆಯಲಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಜೊತೆಗೆ, ಗಂಗಾನದಿಯೂ ಶುದ್ದಿಯಾಗಿಲ್ಲ ಎಂದು ಹೇಳಿರುವುದು, ಬಿಜೆಪಿಯನ್ನು ಮುಜುಗರಕ್ಕೀಡುಮಾಡಿದೆ.

ಉಡುಪಿಯಲ್ಲಿ ಮಾತನಾಡುತ್ತಿದ್ದ ಪೇಜಾವರ ಶ್ರೀಗಳು, ರಾಜಕಾರಣಿಗಳು ರೆಸಾರ್ಟ್, ಆಪರೇಷನ್ ನಲ್ಲಿ ತಲ್ಲೀನರಾಗಿದ್ದಾರೆ. ವಿಪಕ್ಷ ಮುಕ್ತ ಸರ್ಕಾರ ಸರಿಯಲ್ಲ, ವಿಪಕ್ಷ ಇರಬೇಕು ಎಂಬುದು ನನ್ನ ವಾದ ಎನ್ನುವ ಮೂಲಕ, ಪರೋಕ್ಷವಾಗಿ ಬಿಜೆಪಿಯ 'ಕಾಂಗ್ರೆಸ್ ಮುಕ್ತ್ ಭಾರತ್' ಹೇಳಿಕೆಗೆ ಶ್ರೀಗಳು ಚಾಟಿಬೀಸಿದ್ದಾರೆ.

ಖಟ್ಟರ್ ಹಿಂದೂಪರ ನಿಲುವನ್ನೇ ತಾಳುತ್ತಿದ್ದ ಪೇಜಾವರ ಶ್ರೀಗಳು, ತಮ್ಮ ಪರ್ಯಾಯದ ಅವಧಿಯಲ್ಲಿ ಶ್ರೀಕೃಷ್ಣಮಠದ ಆವರಣದಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಮಾಧ್ವ ಪರಂಪರೆಯಲ್ಲೇ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಇದು ಹಲವರ ಕಣ್ಣನ್ನು ಕೆಂಪಾಗಿಸಿದ್ದರೆ, ಶ್ರೀಗಳ ಕ್ರಮವನ್ನು ಹಲವಾರು ಮುಖಂಡರು, ಸಂಘಟನೆಗಳು ಸ್ವಾಗತಿಸಿದ್ದವು. ಮುಂದೆ ಓದಿ..

ಇಫ್ತಾರ್ ಕೂಟ ಆಯೋಜಿಸಲು ಶ್ರೀಗಳ ನಿರ್ಧಾರ

ಇಫ್ತಾರ್ ಕೂಟ ಆಯೋಜಿಸಲು ಶ್ರೀಗಳ ನಿರ್ಧಾರ

ಈ ವರ್ಷವೂ ಇಫ್ತಾರ್ ಕೂಟವನ್ನು ಆಯೋಜಿಸಲು ಶ್ರೀಗಳು ನಿರ್ಧರಿಸಿದ್ದಾರೆ. ಆದರೆ, ಕೃಷ್ಣಮಠದ ಆವರಣದಲ್ಲಿ ಇಫ್ತಾರ್ ನಡೆಸಲು ಅನುಮತಿಯನ್ನು ಈಗಿನ ಪರ್ಯಾಯ ಶ್ರೀಗಳಾದ ಪಲಿಮಾರು ಶ್ರೀಗಳು ನೀಡಬೇಕು. ಪರ್ಯಾಯಕ್ಕೆ ಮುನ್ನ 'ಒನ್ ಇಂಡಿಯಾ'ಗೆ ನೀಡಿದ ಸಂದರ್ಶನದಲ್ಲಿ ಅನುಮತಿ ನೀಡಲು ಸಾಧ್ಯವಿಲ್ಲ ಎನ್ನುವ ಮಾತನ್ನು ಪಲಿಮಾರು ಶ್ರೀಗಳು ಹೇಳಿದ್ದರು. ಹಾಗಾಗಿ, ಉಡುಪಿಯ ಕಿನ್ನಿಮೂಲ್ಕಿ ಬಳಿಯಿರುವ ಗೋವಿಂದ ಕಲ್ಯಾಣ ಮಂಟದಲ್ಲಿ ಪೇಜಾವರ ಶ್ರೀಗಳು ಇಫ್ತಾರ್ ಕೂಟ (ಜೂನ್ 13ರಂದು) ಆಯೋಜಿಸುವ ಸಾಧ್ಯತೆಯಿದೆ.

ಕೇಂದ್ರ ಸರ್ಕಾರದ ಬಗ್ಗೆ ನಿರೀಕ್ಷೆ ಬಹಳ ಇತ್ತು, ನಿರೀಕ್ಷೆಯಷ್ಟು ಸಾಧನೆಗಳು ಆಗಲಿಲ್ಲ

ಕೇಂದ್ರ ಸರ್ಕಾರದ ಬಗ್ಗೆ ನಿರೀಕ್ಷೆ ಬಹಳ ಇತ್ತು, ನಿರೀಕ್ಷೆಯಷ್ಟು ಸಾಧನೆಗಳು ಆಗಲಿಲ್ಲ

ಮೋದಿ ಸರ್ಕಾರದಿಂದ ಸಾಕಷ್ಟು ಕೆಲಸ ಆಗಿದೆ, ಕೇಂದ್ರ ಸರ್ಕಾರದ ಬಗ್ಗೆ ನಿರೀಕ್ಷೆ ಬಹಳ ಇತ್ತು. ನಿರೀಕ್ಷೆಯಷ್ಟು ಸಾಧನೆಗಳು ಆಗಲಿಲ್ಲ ಎಂಬ ಬೇಸರವಿದೆ. ರಾಮ ಮಂದಿರಕ್ಕಿಂತ ಮೊದಲು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು, ಗಂಗಾ ಶುದ್ಧೀಕರಣ ಸಂಪೂರ್ಣವಾಗಿಲ್ಲ. ನರೇಂದ್ರ ಮೋದಿಯವರ ಸರ್ಕಾರ ಬಂದು ನಾಲ್ಕು ವರ್ಷವಾದರೂ, ಚುನಾವಣೆ ಪೂರ್ವದಲ್ಲಿ ವಿದೇಶದಲ್ಲಿರುವ ಕಪ್ಪು ಹಣವನ್ನು ತರುವುದಾಗಿ ಭರವಸೆ ನೀಡಿದ್ದರು, ಅದು ಇನ್ನೂ ಈಡೇರಲಿಲ್ಲ ಎನ್ನುವ ಶ್ರೀಗಳ ಹೇಳಿಕೆ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿದೆ.

ಕೊಟ್ಟ ಭರವಸೆ ಈಡೇರಿಸದೇ ಇರುವುದೇ ಕಾರಣ

ಕೊಟ್ಟ ಭರವಸೆ ಈಡೇರಿಸದೇ ಇರುವುದೇ ಕಾರಣ

ಮೋದಿ ಸರಕಾರ ಮುಂದಿನ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡರೆ, ಅದು ಕೊಟ್ಟ ಭರವಸೆ ಈಡೇರಿಸದೇ ಇರುವುದೇ ಕಾರಣ ಎನ್ನುವ ಪೇಜಾವರ ಶ್ರೀಗಳ ಮಾತಿನಿಂದ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು ತೀವ್ರ ಮುಜುಗರ ಪಡುವಂತಾಗಿದೆ. ಜೊತೆಗೆ, ಶ್ರೀಗಳ ಹೇಳಿಕೆಯಿಂದ ಪಕ್ಷದ ಇಮೇಜಿಗೆ ಆಗಬಹುದಾದ ಧಕ್ಕೆ ತಪ್ಪಿಸಲು, ಬಿಜೆಪಿ ಡ್ಯಾಮೇಜ್ ಕಂಟ್ರೋಲಿಗೆ ಮುಂದಾಗಿದೆ. ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು, ಯಾವುದೇ ಹೇಳಿಕೆ ನೀಡದಂತೆ ಪೇಜಾವರ ಶ್ರೀಗಳಿಗೆ ಒತ್ತಡ ಹೇರುತ್ತಿದ್ದಾರೆ ಎನ್ನುವ ಮಾಹಿತಿಯಿದೆ.

ಗಂಗಾನದಿ ಸಾಕಷ್ಟು ಅಭಿವೃದ್ದಿಯಾಗಿದೆ

ಗಂಗಾನದಿ ಸಾಕಷ್ಟು ಅಭಿವೃದ್ದಿಯಾಗಿದೆ

ಪೇಜಾವರ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, ಗಂಗಾನದಿ ಸಾಕಷ್ಟು ಅಭಿವೃದ್ದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಶ್ರೀಗಳು ಗಂಗಾನದಿ ಬಳಿ ಹೋಗಿಲ್ಲವೇನೋ? ಪೇಜಾವರ ಶ್ರೀಗಳು ನನಗೆ ದೇವರ ಸಮಾನ. ನನಗೆ ಅವಕಾಶ ಸಿಕ್ಕರೆ, ನಾನೇ ಶ್ರೀಗಳನ್ನು ಕರೆದುಕೊಂಡು ಹೋಗಿ, ಗಂಗಾನದಿ ಕಡೆ ಕರೆದುಕೊಂಡು ಹೋಗಿ, ಆಗಿರುವ ಬದಲಾವಣೆಗಳನ್ನು ವಿವರಿಸುತ್ತೇನೆಂದು ಈಶ್ವರಪ್ಪ ಹೇಳಿದ್ದಾರೆ.

ಸಾಕಷ್ಟು ಚರ್ಚೆಗೆ ನಾಂದಿ ಹಾಡಿದ ಇಫ್ತಾರ್ ಕೂಟ

ಸಾಕಷ್ಟು ಚರ್ಚೆಗೆ ನಾಂದಿ ಹಾಡಿದ ಇಫ್ತಾರ್ ಕೂಟ

ವಿರೋಧ ಪಕ್ಷಗಳು ಮಾಡುತ್ತಿರುವ ಅಪಪ್ರಚಾರದಿಂದಾಗಿಯೇ ಪೇಜಾವರ ಶ್ರೀಗಳು ಕೇಂದ್ರ ಸರಕಾರದ ವಿರುದ್ದ ಇಂತಹ ಹೇಳಿಕೆಯನ್ನು ನೀಡಿದ್ದಾರೆ. ನಾವು ಖುದ್ದಾಗಿ ಅವರನ್ನು ಭೇಟಿಯಾಗಿ, ಮೋದಿ ಸರಕಾರದಿಂದಾಗಿರುವ ಅಭಿವೃದ್ದಿ ಕೆಲಸವನ್ನು ವಿವರಿಸುತ್ತೇವೆ. ಕರ್ನಾಟಕ ಬಿಜೆಪಿ ಮತ್ತು ಅಗತ್ಯ ಬಿದ್ದರೆ ಕೇಂದ್ರ ಬಿಜೆಪಿ ಘಟಕದಿಂದ ಶ್ರೀಗಳಿಗೆ ಮನವರಿಕೆ ಮಾಡುವ ಕೆಲಸವನ್ನು ಮಾಡುತ್ತೇವೆ ಎಂದು ಸಿಟಿ ರವಿ ಹೇಳಿದ್ದಾರೆ. ಒಟ್ಟಿನಲ್ಲಿ ಶ್ರೀಗಳ ಮೋದಿ ಸರಕಾರದ ಬಗೆಗಿನ ಹೇಳಿಕೆ ಮತ್ತು ಇಫ್ತಾರ್ ಕೂಟ, ಸಾಕಷ್ಟು ಚರ್ಚೆಗೆ ನಾಂದಿ ಹಾಡಿದೆ.

English summary
Vishweshwara Theertha Seer of Udupi Pejawar Mutt statement on Narendra Modi led union government, embarrassing for BJP. Seer said,Prime Minister Narendra Modi not fulfilled the some of the promises he had made before assuming PMO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X