ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ: ಜನ ಏನನ್ತಾರೆ?

By Srinath
|
Google Oneindia Kannada News

ಚಿಕ್ಕಮಗಳೂರು, ಮಾರ್ಚ್6- ರಾಜ್ಯದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರವು ಈ ಬಾರಿಯೂ ಪ್ರತಿಷ್ಠೆಯ ಕಣವಾಗಿ ಮಾರ್ಪಡುವ ಲಕ್ಷಣಗಳಿವೆ. ತನ್ನದೇ ಆದ ವಿಶಿಷ್ಟ ಇತಿಹಾಸ ಹೊಂದಿರುವ ಕ್ಷೇತ್ರದಲ್ಲಿ ಜನಸಂಚಾರ ಮಾಡಿ, ಮತದಾರರ ನಾಡಿಮಿಡಿತ ಅರಿತಾಗ ವಿಭಿನ್ನ ಚಿತ್ರಣಗಳು ಮೂಡುತ್ತವೆ.

ಸದಾನಂದ ಗೌಡರು ಮುಖ್ಯಮಂತ್ರಿ ಆಗುವ ಭರದಲ್ಲಿ ಕಾಂಗ್ರೆಸ್ಸಿನ ಜಯಪ್ರಕಾಶ್ ಹೆಗ್ಡೆ ಅವರಿಗೆ 21 ತಿಂಗಳ ಹಿಂದೆ ಫಲತಾಂಬೂಲದೊಂದಿಗೆ ಕಾಣಿಕೆಯಾಗಿ ನೀಡಿದ್ದು ಈಗ ಇತಿಹಾಸ. ಹಾಗಾಗಿ ಸಹಜವಾಗಿ ಕಾಂಗೈ ಮೇಲುಗೈ ಆಗಿದೆ. ಕಾಂಗ್ರೆಸ್ ಪಕ್ಷದಿಂದ ಜಯಪ್ರಕಾಶ್ ಹೆಗ್ಡೆ ಅವರು ಈ ಬಾರಿಯೂ ಕಣಕ್ಕಿಳಿದು, ಜಯಭೇರಿ ಬಾರಿಸಲು ಕಾತುರರಾಗಿದ್ದಾರೆ. ಆದರೂ ಕ್ಷೇತ್ರದಲ್ಲಿ ಬಿಜೆಪಿ ಪ್ರಭಾವವೂ ಪ್ರಧಾನವಾಗಿದೆ.

udupi-chikmagalur-ls-constituency-bjp-fights-between-ct-ravi-shobha

ಈ ಮಧ್ಯೆ, ಖಡಕ್ ಪೈಪೋಟಿ ನೀಡಲು ಬಿಜೆಪಿ ಸಹ ಪ್ಲಾನ್ ಹಾಕುತ್ತಿದೆ. ಆದರೆ ಅಂತಿಮವಾಗಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ನಿಗೂಢವಾಗಿದೆ. ಈ ಮಧ್ಯೆ ನಿಮ್ಮ ಮತ ಯಾರಿಗೆ ಶೋಭಾಗೋ, ಅಥವಾ ರವಿಗೋ ಎಂದು ಮತದಾರರನ್ನೇ ಕೇಳುವಂತಾಗಿದೆ.

ನರೇಂದ್ರ ಮೋದಿ ಪ್ರಧಾನಿ ಆಗಬೇಕೆಂಬ ಮಹದಾಸೆ ಹೊತ್ತಿರುವ ಬಿಜೆಪಿಯು ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ರಾಜಿ ಮಾಡಿಕೊಳ್ಳದೆ ಗೆಲ್ಲುವ ಕುದುರೆಯನ್ನಷ್ಟೇ ಮೈದಾನದಲ್ಲಿ ಇಳಿಸಬೇಕು ಎಂಬ ಇರಾದೆ ಹೊಂದಿದೆ. ಆದರೆ ಕೊನೆಯ ಕ್ಷಣದ 'ರಾಜಕೀಯ' ನಿರ್ಧಾರ ಏನಿರುತ್ತದೋ ಎಂಬುದು ಸದ್ಯದ ಕುತೂಹಲ.

ಏನೇ ಆಗಲಿ ಅಂತಿಮ ಕದನಕ್ಕೂ ಮುನ್ನ, ಪಕ್ಷದ ಮಾಜಿ ಸಚಿವರುಗಳಾದ ಶೋಭಾ ಕರಂದ್ಲಾಜೆ ಮತ್ತು ಸಿಟಿ ರವಿ ಮಧ್ಯೆ ಸದ್ಯಕ್ಕಂತೂ ಮುಸುಕಿನ ಗುದ್ದಾಟ ನಡೆದಿದೆ. ಕೊನೆಗೆ ಯಾರ ಕೈ ಮೇಲಾಗುತ್ತದೆ ಎಂಬುದನ್ನು ಅವಲಂಬಿಸಿ, ಜಯಪ್ರಕಾಶ್ ಹೆಗ್ಡೆ ವಿರುದ್ಧ ಕಣಕ್ಕೆ ಇಳಿಯಬಹುದು.

ಮಹಾಭಾರತ ಚುನಾವಣೆ ನಿನ್ನೆಯೇ ಘೋಷಣೆಯಾಗಿದೆ. ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಖೈರಾಗಿದ್ದು, ಇನ್ನೇನು ಇದೇ ವಾರಾಂತ್ಯ ಬಿಡುಗಡೆ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅವರು ಹೇಳಿದ್ದಾರೆ. ಆದರೆ ಪ್ರಹ್ಲಾದ ಜೋಶಿ ಹೇಳುವಷ್ಟು ಸುಲಲಿತವಾಗಿ ಬಿಜೆಪಿ ಪಟ್ಟಿ ಬಿಡುಗಡೆ ಕಾಣುವುದು ದುಸ್ಸಾಧ್ಯವಾಗಿದೆ. ಕೆಲ ಕ್ಷೇತ್ರಗಳಂತೂ ಪಕ್ಷಕ್ಕೆ ಬಿಸಿ ತಂದಿದೆ. ಅದರಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವೂ ಒಂದು.

ಪಕ್ಷವೇನೋ ತನ್ನದೇ ಅನಿವಾರ್ಯ ಕಾರಣಗಳಿಂದಾಗಿ ಶೋಭಾ ಕರಂದ್ಲಾಜೆ ಅವರಿಗೆ ಮಣೆ ಹಾಕಲು ಮುಂದಾಗಿದೆ. ಆದರೆ ಕ್ಷೇತ್ರದ ಜನ ರವಿ ಪರ ಸೀಟಿ ಹೊಡೆಯುತ್ತಿದ್ದಾರೆ. ರವಿ ಪ್ರಸ್ತುತ ಚಿಕ್ಕಮಗಳೂರು ಶಾಸಕರೂ ಹೌದು. ಖುದ್ದು ರವಿಗೆ ಶೋಭಾ ಇಲ್ಲಿಂದ ಸ್ಪರ್ಧಿಸುವುದು ಇಷ್ಟವಿಲ್ಲ. ತಾವೇ ಕಣಕ್ಕಿಳಿಯ ಬಯಸಿರುವ ರವಿಗೆ ಶೋಭಾ ಕಣಕ್ಕಿಳಿದು ಗೆದ್ದುಬಿಟ್ಟರೆ ಕ್ಷೇತ್ರದ ಮೇಲಿನ ಹಿಡಿತ ತಮ್ಮ ಕೈ ತಪ್ಪುತ್ತದೆ ಎಂಬ ಆತಂಕವೂ ಕಾಡುತ್ತಿದೆ.

ಬೂತ್ ಮಟ್ಟದಲ್ಲಿ ಸಭೆ ಸೇರಿದ್ದ ಬಿಜೆಪಿ ಕಾರ್ಯಕರ್ತರು ಜಿಲ್ಲಾ ನಾಯಕರನ್ನು ಭೇಟಿ ಮಾಡಿ ರವಿ ಪರ ತಮ್ಮ ಇರಾದೆಯನ್ನು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಕ್ಷೇತ್ರದ ಜತೆ ಮೂರನೆಯ ಹೆಸರೂ ತಳುಕು ಹಾಕಿಕೊಂಡು ಬಿಜೆಪಿಗೆ ಶಾನೆ ತಲೆ ಬಿಸಿ ಉಂಟಾಗಿತ್ತು. ಆದರೆ ಮೂರನೆಯ ವ್ಯಕ್ತಿ ಸದಾನಂದ ಗೌಡರನ್ನು ಪಕ್ಷವು ಬೆಂಗಳೂರು ಉತ್ತರ ಕ್ಷೇತ್ರದಲ್ಲೇ ಕಟ್ಟಿಹಾಕಿದ್ದು, ಸದ್ಯಕ್ಕೆ ಶೋಭಾ ಮತ್ತು ರವಿ ಮಧ್ಯೆ ಹೊಯ್ದಾಡುತ್ತಿದೆ.

English summary
Lok Sabha polls 2014- Udupi-Chikmagalur constituency BJP fights between CT Ravi- Shobha Karandlaje. Uncertaintainty still hangs over BJP's candidate for Udupi-Chikmagalur constituency. Although the BJP high command was willing to field former minister Shobha Karandlaje from the constituency for the forthcoming elections, the BJP workers and party leaders in Udupi are learnt to have expressed preference for C T Ravi, who presently represents Chikmagalur as MLA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X