ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಷ್ಠಿತ ಕ್ಷೇತ್ರ : ಸಕ್ಕರೆ ನಾಡು ಮಂಡ್ಯದಲ್ಲಿ ಯಾರಿಗೆ ಸಿಹಿ?

|
Google Oneindia Kannada News

ಮಂಡ್ಯ, ಏ. 8 : ಉಪ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದ್ದ ಮಂಡ್ಯದಲ್ಲಿ ಲೋಕಸಭೆ ಚುನಾವಣೆಯ ಫಲಿತಾಂಶ ಏನಾಗಬಹುದು? ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಉಪ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ್ದ ಕಾಂಗ್ರೆಸ್ ಪಕ್ಷದ ರಮ್ಯಾ ಅವರಿಗೆ ಸೋಲಿನ ರುಚಿ ತೋರಿಸಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಣತಂತ್ರ ರೂಪಿಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

2013ರ ಆಗಸ್ಟ್ ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೊದಲ ಬಾರಿ ಚುನಾವಣೆ ಎದುರಿಸಿದ್ದ ರಮ್ಯಾ ಗೆಲವು ಸಾಧಿಸುವ ಮೂಲಕ ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯವನ್ನು ಕೈವಶ ಮಾಡಿಕೊಂಡಿದ್ದರು. ಅಂದು ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡರು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ. ಉಪ ಚುನಾವಣೆಯಲ್ಲಿ ಮುಖಾಮುಖಿಯಾಗಿದ್ದವರೇ ಈಗ ಮತ್ತೊಮ್ಮೆ ಚುನಾವಣಾ ಕಣಕ್ಕೆ ಧುಮುಕಿದ್ದಾರೆ.

Mandya Lok Sabha constituency

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ರಮ್ಯಾ, ಜೆಡಿಎಸ್ ನಿಂದ ಸಿಎಸ್ ಪುಟ್ಟರಾಜು, ಬಿಜೆಪಿಯಿಂದ ಬಿ.ಶಿವಲಿಂಗಯ್ಯ, ಆಮ್ ಆದ್ಮಿ ಪಕ್ಷದಿಂದ ಡಾ.ಹನುಮಂತಪ್ಪ ಕಣದಲ್ಲಿದ್ದಾರೆ. ಹಾಲಿ ಸಂಸದೆ ರಮ್ಯಾ ಅವರಿಗೆ ಚುನಾವಣೆಯಲ್ಲಿ ಸೋಲುಣಿಸಬೇಕು ಎಂದು ಜೆಡಿಎಸ್ ತನ್ನ ಕಾರ್ಯತಂತ್ರ ರೂಪಿಸಿದ್ದರೆ, ಮಂಡ್ಯವನ್ನು ಗೆದ್ದು ಶಕ್ತಿ ಹೆಚ್ಚಿಸಿಕೊಳ್ಳಬೇಕೆಂದು ಬಿಜೆಪಿ ಸಿದ್ಧವಾಗಿದೆ. [ಮಂಡ್ಯ ಕ್ಷೇತ್ರದ ಸಂಕ್ಷಿಪ್ತ ಪರಿಚಯ]

ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರ ನಡುವಿನ ಬಣ ರಾಜಕೀಯ ರಮ್ಯಾ ಪಾಲಿಗೆ ಹಿನ್ನಡೆ ಉಂಟುಮಾಡಿದೆ. ಮತ್ತೊಂದು ಕಡೆ ಉಪ ಚುನಾವಣೆಯಲ್ಲಿ ರಮ್ಯಾ ಜೊತೆಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದ್ದರಿಂದ ರಮ್ಯಾ ಗೆಲುವಿಗಾಗಿ ಸಾಕಷ್ಟು ಶ್ರಮಪಡಬೇಕಾಗಿದೆ. ಕಾಂಗ್ರೆಸ್ ಬಣ ರಾಜಕೀಯವನ್ನು ಬಂಡವಾಳ ಮಾಡಿಕೊಂಡು ಕ್ಷೇತ್ರವನ್ನು ಪುನಃ ವಶಪಡಿಸಿಕೊಳ್ಳಲು ಜೆಡಿಎಸ್ ಬಯಸುತ್ತಿದೆ.

ರಮ್ಯಾ
ರಮ್ಯಾ ಆಗಸ್ಟ್ 21ರಂದು ನಡೆದ ಉಪಚುನಾವಣೆಯಲ್ಲಿ ಯಾವುದೇ ರಾಜಕೀಯ ಅನುಭವವಿಲ್ಲದಿದ್ದರೂ, ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಸಂಸತ್ ಪ್ರವೇಶಿಸಿದ್ದರು. ಎಸ್ಎಂ ಕೃಷ್ಣ, ಅಂಬರೀಶ್ ಮತ್ತು ರಾಜ್ಯ ಸರ್ಕಾರವೇ ರಮ್ಯಾ ಬೆಂಬಲಕ್ಕೆ ನಿಂತು ಶ್ರಮಿಸಿತ್ತು. ಸದ್ಯ, ಅಂಬರೀಶ್ ವಿಶ್ರಾಂತಿ ಪಡೆಯುತ್ತಿದ್ದು, ಚುನಾವಣೆಯಲ್ಲಿ ಪ್ರಚಾರ ಕೈಗೊಂಡಿಲ್ಲ. [ರಮ್ಯಾ ಸಂಕ್ಷಿಪ್ತ ಪರಿಚಯ]

ಎಸ್ಎಂ ಕೃಷ್ಣ ಪ್ರಚಾರ ನಡೆಸುತ್ತೇನೆ ಎಂದು ಹೇಳಿದ್ದಾರೆ. ಉಳಿದ ನಾಯಕರು ರಾಜ್ಯಾದ್ಯಂತ ಪ್ರಚಾರ ಮಾಡುತ್ತಿದ್ದು, ಮಂಡ್ಯದಲ್ಲಿ ಒಂದು ಸುತ್ತು ಪ್ರಚಾರ ನಡೆಸಲಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ನಾಯಕರ ಬಣ ರಾಜಕೀಯವೇ ರಮ್ಯಾ ಅವರ ದೊಡ್ಡ ಸವಾಲಾಗಿದ್ದು, ಎಲ್ಲರೂ ಒಗ್ಗಟ್ಟಾದರೆ ಮಾತ್ರ ರಮ್ಯಾ ಗೆಲುವು ಸಾಧಿಸಬಹುದಾಗಿದೆ. [ರಮ್ಯಾ ಪ್ರಚಾರದ ಚಿತ್ರಗಳು]

ಬಿ.ಶಿವಲಿಂಗಯ್ಯ
ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಬಿಜೆಪಿ ಈ ಬಾರಿ ಡಾ.ಬಿ.ಶಿವಲಿಂಗಯ್ಯ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಮೂಲತಃ ಸಿವಿಲ್ ಇಂಜಿನಿಯರ್ ಆಗಿರುವ ಶಿವಲಿಂಗಯ್ಯ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರಾಗಿ 1991ರಿಂದ 1997ರವರೆಗೆ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿರುವ ಅವರು, ಸಂಘದ ಮಂಡ್ಯ ಜಿಲ್ಲೆಯ ನಿರ್ದೇಶಕರು. ಇವರಿಗೆ ಇದು ಮೊದಲ ಚುನಾವಣೆ. ಒಕ್ಕಲಿಗೆ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ನಡೆದರೆ ಶಿವಲಿಂಗಯ್ಯ ಗೆಲುವು ಖಚಿತ.

ಸಿಎಸ್ ಪುಟ್ಟರಾಜು
ಉಪ ಚುನಾವಣೆಯಲ್ಲಿ ರಮ್ಯಾ ವಿರುದ್ಧ ಸ್ಪರ್ಧಿಸಿ ಸೋತಿದ್ದ ಸಿಎಸ್ ಪುಟ್ಟರಾಜು ಈ ಬಾರಿ ಪುನಃ ಸ್ಪರ್ಧೆಗೆ ಇಳಿದಿದ್ದಾರೆ. 2008ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, 2013ರಲ್ಲಿ ಮೇಲುಕೋಟೆ ಕ್ಷೇತ್ರದಲ್ಲಿ ಸೋಲನುಭವಿಸಿದ ಸಿಎಸ್ ಪುಟ್ಟರಾಜು ಈ ಬಾರಿ ಅನುಕಂಪದ ಆಧಾರದ ಮೇಲೆ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಕಾಂಗ್ರೆಸ್ ಬಣ ರಾಜಕೀಯ, ಅನುಕಂಪ ಪುಟ್ಟರಾಜು ಅವರನ್ನು ಗೆಲುವಿನ ದಡ ಸೇರಿಸಬಹುದು.

ಡಾ.ಹನುಮಂತಪ್ಪ
ಆಮ್ ಆದ್ಮಿ ಪಕ್ಷ ಸಹ ಮಂಡ್ಯದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಸುಮಾರು 42 ವರ್ಷಗಳಿಂದ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಹೃದಯ ತಜ್ಞರಾಗಿ ಕಾರ್ಯನಿರ್ವಹಿಸಿದ ಡಾ.ಹನುಮಂತಪ್ಪ ಕ್ಷೇತ್ರದ ಆಮ್ ಆದ್ಮಿ ಅಭ್ಯರ್ಥಿ. ಬಡವರಿಗೆ ಪುನರ್ವಸತಿ ಕಲ್ಪಿಸಲು ಅವರು ನಡೆಸಿದ ಕಾನೂನು ಹೋರಾಟದಿಂದ ಬಡವರಿಗೆ 124 ಎಕರೆ ಭೂಮಿ ದೊರಕಿದೆ. ಜನಪರ ಕಾಳಜಿ ಇರುವ ಹನುಮಂತಪ್ಪ ಅವರನ್ನು ಆಮ್ ಆದ್ಮಿ ಪಕ್ಷ ಚುನಾವಣೆ ಕಣಕ್ಕಿಳಿಸಿದೆ.

English summary
Elections 2014 : Sitting MP of Mandya Lok Sabha constituency Ramya will take on JDS candidate C.S. Puttaraju, BJP's B.Shivalingaiah and Aam Aadmi Party's Dr.Hanumanthappa in Lok Sabha Election 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X