ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಜೆಸ್ಟಿಕ್, ಮಾರ್ಕೆಟ್ ಪ್ರವೇಶಿಸಲು ಇನ್ಮುಂದೆ ಟೋಲ್

By ಬಾಲರಾಜ್ ತಂತ್ರಿ
|
Google Oneindia Kannada News

(ಮುಂದೊಂದು ದಿನ ಈ ಪದ್ದತಿ ಜಾರಿಗೆ ಬಂದರೂ ಬರಬಹುದು ಎನ್ನುವ ಕಾಲ್ಪನಿಕ ಲೇಖನವಿದು) ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಪಾವತಿಸುವ ಪದ್ದತಿಗೆ ಕಷ್ಟಪಟ್ಟು ಹೊಂದಿಕೊಂಡಿರುವ ಜನತೆ ಈಗ ರಾಜ್ಯ ಹೆದ್ದಾರಿಗೂ ಶುಂಕ ಪಾವತಿಸುವ ಅನಿವಾರ್ತೆಗೆ ಬಿದ್ದಿದ್ದಾರೆ.

ರಾಜ್ಯ ಹೆದ್ದಾರಿ ಸಂಚಾರಕ್ಕೂ ಸುಂಕ ಪಾವತಿಸುವ ನಿರ್ಣಯಕ್ಕೆ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಅನುಮೋದನೆ ಸಿಗುತ್ತಿದ್ದಂತೆಯೇ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸುಲಭವಾಗಿ ರಾಜ್ಯ ಖಜಾನೆ ತುಂಬಿಸುವ ಮತ್ತೊಂದು ಸಲಹೆಯನ್ನು ಸಿಎಂ ಕಿವಿಗೂದಿದ್ದಾರೆ ಎನ್ನಲಾಗುತ್ತಿದೆ.

ಅಧಿಕಾರಿಗಳ ವಿನೂತನ ಸಲಹೆಗೆ ಸಿಎಂ ತೀವ್ರ ಆಸಕ್ತಿ ವ್ಯಕ್ತ ಪಡಿಸಿದ್ದು, ಬೆಳಗಾವಿ ಅಧಿವೇಶನದ ನಂತರ ಇನ್ನೊಂದು ಸುತ್ತಿನ ಮಾತುಕತೆ ನಡೆಸುವುದಾಗಿ ಇಲಾಖೆಯ ಅಧಿಕಾರಿಗಳ ಬೆನ್ನುತಟ್ಟಿ ಕಳುಹಿಸಿದ್ದಾರೆಂದು ಸಿಎಂ ಕಾರ್ಯಾಲಯದಿಂದ ಮಾಹಿತಿ ಲಭ್ಯವಾಗಿದೆ.

ಆದರೂ, ಮೊದಲು ಸಿಎಂ ಈ ಸಲಹೆಗೆ ಸಾರ್ವಜನಿಕರಿಂದ ಪ್ರತಿಭಟನೆ ವ್ಯಕ್ತವಾಗಬಹುದು ಎನ್ನುವ ಕಾರಣಕ್ಕಾಗಿ ಹಿಂದಕ್ಕೆ ಸರಿದಿದ್ದರಂತೆ. ಆದರೆ ಸಭೆಯಲ್ಲಿದ್ದ ಇಲಾಖೆಯ ಅಧಿಕಾರಿಗಳು 'ಸಾರ್ವಜನಿಕರು ನಾಲ್ಕೈದು ದಿನ ಪ್ರತಿಭಟನೆ ಮಾಡಿ ಸುಮ್ಮನಾಗುತ್ತಾರೆ ಬಿಡಿ' ಎಂದು ಸಮಜಾಯಿಷಿ ನೀಡಿದ ನಂತರ ಸಿಎಂ ಇದಕ್ಕೆ ಮೌಕಿಕ ಸಮ್ಮತಿ ನೀಡಿದರು ಎನ್ನುವ ಮಾಹಿತಿ ಅಧಿಕಾರಿಗಳ ವಲಯದಿಂದ ಕೇಳಿ ಬಂದಿದೆ. (ಬೆಂಗಳೂರು ಟೋಲ್ ದರ ಕಮ್ಮಿಯಾಗುತ್ತಾ)

ಇನ್ನೊಂದು ಸುತ್ತಿನ ಮಾತುಕತೆಗೆ ಮುನ್ನ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು, ಬಿಬಿಎಂಪಿಯ ಆಡಳಿತ ಸಮಿತಿಯ ಸದಸ್ಯರು ಮತ್ತು ರಾಜ್ಯದ ಮಹಾನಗರಪಾಲಿಕೆ ಮೇಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಸಿಎಂ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಈ ಪ್ರಾಸ್ತವಿಕ ಯೋಜನೆಗೆ 'ಸುಂಕ ಭಾಗ್ಯ' ಯೋಜನೆ ಎಂದು ನಾಮಕರಣ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. 'ದಂತ ಭಾಗ್ಯ' ಯೋಜನೆಯಂತೆ ಇದು ಕೂಡಾ ದೇಶದಲ್ಲೇ ಮೊದಲೆನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಅಧಿಕಾರಿಗಳು ತಮ್ಮ ಶರ್ಟ್ ಕಾಲರ್ ಗಳನ್ನು ತಾವೇ ಮೇಲೆತ್ತಿ ಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇಲಾಖೆ ಸಿದ್ದಪಡಿಸಿರುವ ಸುಂಕ ಭಾಗ್ಯ ಯೋಜನೆಯ ಕರಡು ಪ್ರತಿಯಲ್ಲಿ ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ಹೊರತು ಪಡಿಸಿ ರಾಜ್ಯದ 11 ಮಹಾನಗರಪಾಲಿಕೆಯ ವ್ಯಾಪ್ತಿಯ ಸಿಟಿ ಲಿಮಿಟ್ ನಲ್ಲಿ ಸಂಚರಿಸುವ ವಾಹನಗಳಿಗೆ ಟೋಲ್ ವಿಧಿಸುವ ಪದ್ದತಿ ಜಾರಿಗೆ ತರಲು ನಿರ್ಧರಿಸಲಾಗಿದೆ ಎನ್ನುವುದು ಈಗ ಸುದ್ದಿ.

ಮಹಾನಗರಪಾಲಿಕೆಯ ಆಯಕಟ್ಟಿನ ಪ್ರದೇಶಗಳಲ್ಲಿ ಸಂಚರಿಸುವ ವಾಹನಗಳಿಗೆ ಮಾತ್ರ ಪ್ರಾಯೋಗಿಕವಾಗಿ ಟೋಲ್ ವಿಧಿಸಲು ಸರಕಾರಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ. ಇದರಲ್ಲಿ ಸೈಕಲ್, ಎತ್ತಿನಗಾಡಿ, ತಳ್ಳುವಗಾಡಿ, ಜಟಕಾಗಾಡಿಗಳಿಗೆ ವಿನಾಯತಿ ನೀಡಲು ನಿರ್ಧರಿಸಲಾಗಿದೆ.

ಅಲ್ಲದೇ, ಪ್ರಾಸ್ತವಿಕ ಈ ಟೋಲ್ ವ್ಯವಸ್ಥೆ ಪದ್ದತಿಯಲ್ಲಿ ಮೀಸಲಾತಿ ಜಾರಿಗೆ ತರಬೇಕೇ, ಹಿರಿಯ ನಾಗರಿಕರಿಗೆ ಮತ್ತು ಮಿಲಿಟರಿ ವಾಹನಗಳಿಗೆ ವಿನಾಯತಿ ನೀಡಬೇಕೇ, ಬೇಡವೇ ಎನ್ನುವುದನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲು ನಿರ್ಧರಿಸಲಾಗಿದೆ.

ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ ಧಾರವಾಡ, ದಾವಣಗೆರೆ, ಕಲಬುರಗಿ , ಮಂಗಳೂರು, ಶಿವಮೊಗ್ಗ, ವಿಜಯಪುರ, ಬಳ್ಳಾರಿ ಮತ್ತು ತುಮಕೂರು ಮಹಾನಗರಪಾಲಿಕೆಯ ನಿರ್ದಿಷ್ಟ ಜನನಿಬಿಡ ಪ್ರದೇಶಗಳಲ್ಲಿ ಟೋಲ್ ವ್ಯವಸ್ಥೆ ಪದ್ದತಿಗೆ ಶಿಫಾರಸು ಮಾಡಲಾಗಿದೆ.

ದ್ವಿಚಕ್ರ ವಾಹನಗಳಿಗೆ 10 ರೂಪಾಯಿ, ನಾಲ್ಕು ಚಕ್ರದ ವಾಹನಗಳಿಗೆ 25, ಭಾರೀ ವಾಹನಗಳಿಗೆ 40 ರೂಪಾಯಿ (ಒಂದು ಎಂಟ್ರಿಗೆ, ದಿನದ ಸುಂಕ) ನಿಗದಿ ಪಡಿಸಲು ನಿರ್ಧರಿಸಲಾಗಿದೆ. (ಬೆಂಗಳೂರಿಗರ ಮೇಲೆ ಮತ್ತಷ್ಟು ಟೋಲ್ ಹೊರೆ)

ಸಾರ್ವಜನಿಕರಿಂದ ಇದಕ್ಕೆ ತೀವ್ರ ಪ್ರತಿಭಟನೆ ಅಥವಾ ವಿಪಕ್ಷಗಳು ಬಂದ್ ಗೆ ಕರೆ ನೀಡಿದ ಪಕ್ಷದಲ್ಲಿ ದರದಲ್ಲಿ ಕಡಿತಗೊಳಿಸ ಬೇಕಾಗಿರುವುದರಿಂದ ಮೊದಲೇ ಈ ಮೊತ್ತವನ್ನು ನಿಗದಿ ಪಡಿಸಿದರೆ ನಂತರ ಸರಿಹೋಗುತ್ತದೆ ಎಂದು ಅಧಿಕಾರಿಗಳು ಜಾಣತನ ಮರೆದಿದ್ದಾರೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.

ಸಮಿತಿ ಸಿದ್ದಪಡಿಸಿರುವ ಕರಡು ಪ್ರತಿಯಲ್ಲಿ 'ಟೋಲ್ ತೆಗೆದುಕೊಳ್ಳುವ ನೀವು ರಸ್ತೆಯಲ್ಲಿನ ಗುಂಡಿಗಳನ್ನು ಯಾಕೆ ಮುಚ್ಚುವುದಿಲ್ಲ, ಉತ್ತಮ ರಸ್ತೆ ಏಕೆ ನೀಡುತ್ತಿಲ್ಲ' ಎಂದು ವಾಹನದಾರರು ಟೋಲ್ ಅಧಿಕಾರಿಗಳ ಜೊತೆ ಜಗಳಕ್ಕಿಳಿದರೆ ಅಂತಹ ವಾಹನಗಳನ್ನು ಕಪ್ಪುಪಟ್ಟಿಯಲ್ಲಿ ಸೇರಿಸಲು ಟೋಲ್ ಬೂತಿನಲ್ಲಿ RTO ಅಧಿಕಾರಿಗಳನ್ನು ನೇಮಿಸಲು ಕರಡಿನಲ್ಲಿ ಶಿಫಾರಸು ಮಾಡಲಾಗಿದೆ.

Toll system to be implemented in City limit, an imaginary article

ಹನ್ನೊಂದು ಮಹಾನಗರಪಾಲಿಕೆಗಳ ಈ ಕೆಳಗಂಡ ಸ್ಥಳಗಳಲ್ಲಿ ಟೋಲ್ ಪದ್ದತಿ ಜಾರಿಗೆ ತರಲು ಸಮಿತಿ ಶಿಫಾರಸು ಮಾಡಿದೆ:

ಬೆಂಗಳೂರು : ಅವೆನ್ಯೂ ರಸ್ತೆ, ಮೆಜೆಸ್ಟಿಕ್ ಪ್ರವೇಶಿಸುವ ಸುಭೇದಾರ್ ಛತ್ರಂ ರಸ್ತೆ, ರಸೆಲ್ ಮಾರ್ಕೆಟ್ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಪ್ಯಾಲೇಸ್ ರಸ್ತೆ.
ಮೈಸೂರು : ಕೆ ರ್ ಆರ್ ಮತ್ತು ಜಯರಾಮರಾಜೇಂದ್ರ ಸರ್ಕಲ್
ಬೆಳಗಾವಿ : ಮಾರುತಿ ಗಲ್ಲಿ, ಕೊಲ್ಹಾಪುರ ಕ್ರಾಸ್
ಹುಬ್ಬಳ್ಳಿ ಧಾರವಾಡ : ಚನ್ನಮ್ಮ ಸರ್ಕಲ್, ಸ್ಟೇಷನ್ ರಸ್ತೆ
ದಾವಣಗೆರೆ : ಪಿ ಬಿ ರಸ್ತೆ
ಕಲಬುರಗಿ : ಸೇಡಂ ರಸ್ತೆ
ಮಂಗಳೂರು : ಹಂಪನಕಟ್ಟೆ
ಶಿವಮೊಗ್ಗ : ನೆಹರೂ ರಸ್ತೆ
ವಿಜಯಪುರ : ಸಿದ್ದೇಶ್ವರ ರಸ್ತೆ
ಬಳ್ಳಾರಿ : ಮೋತಿ ಸರ್ಕಲ್
ತುಮಕೂರು : ಬಿ ಎಚ್ ರಸ್ತೆ

English summary
Government planning to implement Toll system in 11 Mahanagara Palike limit in certain areas, an imaginary article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X