ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಗಾರಿಕೆಗಳಿಗೆ ರೈತರ ಭೂಸ್ವಾಧೀನ: ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಎಚ್ಚರಿಕೆ!

|
Google Oneindia Kannada News

ಬೆಂಗಳೂರು, ಸೆ.1: ರಾಜ್ಯದಲ್ಲಿನ ಪ್ರತಿಯೊಂದು ಕೈಗಾರಿಕಾ ಪ್ರದೇಶದಲ್ಲಿ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ. ಬುಧವಾರ ರಾಮನಗರದ ಹಾರೋಹಳ್ಳಿ, ಬಿಡದಿ, ಜಿಗಣಿ ಸೇರಿದಂತೆ ಮತ್ತಿತರ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಖುದ್ದು ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳಿಗೆ ಈ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ಸುತ್ತಮುತ್ತಲಿರುವ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ಕೊಟ್ಟ ಅಲ್ಲಿನ ನೈಜ ಸ್ಥಿತಿಯನ್ನು ಸಚಿವ ನಿರಾಣಿ ತಿಳಿದುಕೊಂಡರು. ಕೈಗಾರಿಕಾ ಪ್ರದೇಶಗಳಲ್ಲಿ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಮುಖ್ಯವಾಗಿ ರಸ್ತೆ, ವಿದ್ಯುತ್, ನೀರಿನ ಸಂಪರ್ಕ, ಚರಂಡಿ ವ್ಯವಸ್ಥೆ ಸೇರಿದಂತೆ ಇನ್ನಿತರ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಕೆಲವು ಕೈಗಾರಿಕಾ ಪ್ರದೇಶಗಳ ಪರಿಶೀಲನೆ ಸಂದರ್ಭದ ಅಧಿಕಾರಿಗಳ ಮೇಲೆ ಗರಂ ಆದ ಕೈಗಾರಿಕಾ ಸಚಿವ ನಿರಾಣಿ, "ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಾದರೆ ನಾನು ಸುಮ್ಮನಿರುವುದಿಲ್ಲ. ಆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಕೈಗೊಳ್ಳುತ್ತೇನೆ" ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಮೊದಲ ಸ್ಥಾನವೇ ನಮ್ಮ ಗುರಿ

ಮೊದಲ ಸ್ಥಾನವೇ ನಮ್ಮ ಗುರಿ

ಕರ್ನಾಟಕವನ್ನು ದೇಶದಲ್ಲೇ ಬಂಡವಾಳ ಹೂಡಿಕೆಯಲ್ಲಿ ಮೊದಲ ಸ್ಥಾನಕ್ಕೆ ಕೊಂಡೊಯ್ಯುವುದೇ ನಮ್ಮ ಗುರಿಯಾಗಿದೆ. ಇಲ್ಲಿರುವ ನೈಸರ್ಗಿಕ ಸಂಪನ್ಮೂಲವನ್ನು ಬಳಸಿಕೊಂಡು ಕೈಗಾರಿಕಾ ಕ್ರಾಂತಿ ಸೃಷ್ಟಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವ ನಿರಾಣಿ ನಿರ್ದೇಶನ ನೀಡಿದ್ದಾರೆ. ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬರಬೇಕು. ಮೂಲಭೂತ ಸೌಕರ್ಯಗಳಿಲ್ಲದಿದ್ದರೆ ಯಾರೊಬ್ಬರೂ ಬರುವುದಿಲ್ಲ. ಅಗತ್ಯವಿರುವ ಕಡೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.

ಒಂದೇ ಒಂದು ಕೈಗಾರಿಕೆ ಮುಚ್ಚಲು ಬಿಡುವುದಿಲ್ಲ

ಒಂದೇ ಒಂದು ಕೈಗಾರಿಕೆ ಮುಚ್ಚಲು ಬಿಡುವುದಿಲ್ಲ

ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ನಿರಾಣಿ ಅವರು, "ನನ್ನ ಆಡಳಿತದಲ್ಲಿ ಒಂದೇ ಒಂದು ಕೈಗಾರಿಕೆಯನ್ನು ಮುಚ್ಚಲು ಬಿಡುವುದಿಲ್ಲ. ಇಡೀ ವಿಶ್ವವೇ ಕರ್ನಾಟಕದತ್ತ ತಿರುಗಿ ನೋಡಬೇಕು. ಆ ನಿಟ್ಟಿನಲ್ಲಿ ನಮ್ಮ ಕೈಗಾರಿಕೆಗಳು ಬೆಳೆಯಬೇಕು. ನಷ್ಟದಲ್ಲಿರುವ ಕೈಗಾರಿಕೆಗಳ ಪುನಶ್ಚೇತನಕ್ಕೆ ಗಮನ ಹರಿಸಬೇಕು. ರೋಗಗ್ರಸ್ಥ ಕೈಗಾರಿಕೆಗಳಿಗೆ ಕಾಯಕಲ್ಪ ನೀಡಿ ಲಾಭದತ್ತ ಕೊಂಡೊಯ್ಯುವುದು ನಮ್ಮೆಲ್ಲರ ಗುರಿಯಾಗಿರಬೇಕು" ಎಂದು ಸೂಚಿಸಿದರು.

ಬಲವಂತವಾಗಿ ರೈತರ ಭೂ ಸ್ವಾಧೀನ ಸಲ್ಲದು!

ಬಲವಂತವಾಗಿ ರೈತರ ಭೂ ಸ್ವಾಧೀನ ಸಲ್ಲದು!

ಕೈಗಾರಿಕಾ ಪ್ರದೇಶಗಳಿಗೆ ರೈತರ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳುವ ಸಂದರ್ಭದಲ್ಲಿ ಬಲವಂತವಾಗಿ ಒಂದೇ ಒಂದು ಇಂಚೂ ಸ್ವಾಧೀನ ಪಡಿಸಿಕೊಳ್ಳಬಾರದು ಎಂದು ಸಚಿವ ನಿರಾಣಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಉಪಯೋಗಕ್ಕೆ ಬಾರದ ಹಾಗೂ ರೈತರೇ ಸ್ವಯಂಪ್ರೇರಿತರಾಗಿ ಸರ್ಕಾರಕ್ಕೆ ಮಾರುಕಟ್ಟೆ ದರದಲ್ಲಿ ಮುಂದೆ ಬಂದರೆ ಮಾತ್ರ ಅಂತಹ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಾರ್ವಜನಿಕರಿಂದ ದೂರು ಬಂದರೆ ಕಠಿಣ ಕ್ರಮ!

ಸಾರ್ವಜನಿಕರಿಂದ ದೂರು ಬಂದರೆ ಕಠಿಣ ಕ್ರಮ!

ಕೆಐಎಡಿಬಿ ಅಧಿಕಾರಿಗಳು ಭೂ ಸ್ವಾಧೀನ ಪ್ರಕ್ರಿಯೆ ನಡೆಸುವ ವೇಳೆ ಅತ್ಯಂತ ಜಾಗ್ರತೆಯಿಂದ ಎಚ್ಚರಿಕೆ ಹೆಜ್ಜೆ ಇಡಬೇಕು. ರೈತರು ಉಪಯೋಗಿಸಿಕೊಳ್ಳುತ್ತಿದ್ದರೆ ಅಂತಹ ಜಮೀನನ್ನು ಸ್ವಾಧೀನ ಮಾಡಿಕೊಳ್ಳಬಾರದು. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದರೆ ನಾನು ಸುಮ್ಮನಿರುವುದಿಲ್ಲ. ಅಂತಹವರ ಮೇಲೆ ಶಿಸ್ತುಕ್ರಮ ಜರುಗಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಎಚ್ಚರಿಕೆ ಕೊಟ್ಟಿದ್ದಾರೆ.

English summary
There is no question of acquiring even an inch of land from the farmers in a forcible manner: Large & Medium Industries Minister Murugesh Nirani warned officials. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X