ನಾಯಕತ್ವ ವಿಚಾರದಲ್ಲಿ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ: ನಳಿನ್ ಕುಮಾರ್ ಕಟೀಲ್
ಬೆಂಗಳೂರು, ನವೆಂಬರ್ 23: ನಾಯಕತ್ವದ ವಿಚಾರದಲ್ಲಿ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ನಾನು ನಾಯಕತ್ವದ ಬಗ್ಗೆ ರಾಜ್ಯಾಧ್ಯಕ್ಷನಾಗಿ ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ. ಸಂಪುಟ ವಿಳಂಬದ ಬಗ್ಗೆ ಕಾರ್ಯಕರ್ತರು ಹಾಗೂ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.
ಸಂಪುಟ ವಿಸ್ತರಣೆಯ ಸುದ್ದಿಯೇ ಇಲ್ಲ: ರಾಜಾಹುಲಿ ಬಿಎಸ್ವೈಗೆ ಆಗುತ್ತಿರುವ ಹಿನ್ನಡೆಗೆ ಇದಾ ಕಾರಣ?
ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಸಂಪುಟ ಯಾವಾಗ ರಚನೆ ಮಾಡಬೇಕು, ಏನು ಮಾಡಬೇಕು ಎನ್ನುವುದು ಪಕ್ಷಕ್ಕೆ ಗೊತ್ತಿದೆ. ಯಾವಾಗ ಮಾಡಬೇಕೋ ಆಗಲೇ ಮಾಡಲಾಗುತ್ತದೆ ಎಂದರು.

ಮಸ್ಕಿ, ಬಸವ ಕಲ್ಯಾಣ ಕ್ಷೇತ್ರ
ಮಸ್ಕಿ, ಬಸವಕಲ್ಯಾಣ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಪ್ರಮುಖರನ್ನು ಜೋಡಿಸಲಾಗಿದೆ, ಸಮೀಕ್ಷೆ ಮಾಡಿ ಯೋಚನೆ ಮಾಡಿ ಪಕ್ಷ ಅಭ್ಯರ್ಥಿ ಆಯ್ಕೆ ಮಾಡಲಿದೆ,ಒಂದೊಂದು ಕ್ಷೇತ್ರದಲ್ಲಿ ಐದಾರು ಆಕಾಂಕ್ಷಿಗಳು ಇದ್ದಾರೆ.ಬೆಳಗಾವಿ ಉಪಚುನಾವಣೆ ವಿಚಾರವಾಗಿ ಸರ್ವೇ ಮಾಡಲಾಗುತ್ತಿದೆ ಎಂದರು.

ಅಭ್ಯರ್ಥಿಗಳ ಹೆಸರು ಕೇಂದ್ರಕ್ಕೆ
ಕೋರ್ ಕಮಿಟಿ ಅಭ್ಯರ್ಥಿಗಳ ಹೆಸರನ್ನು ಕೇಂದ್ರಕ್ಕೆ ಕಳುಹಿಸಿದ ಬಳಿಕ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾಯಕತ್ವ ಹಾಗೂ ಸಂಪುಟ ರಚನೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಇದು ಕಾರ್ಯಕರ್ತರಿಗೆ ಸಂಬಂಧಿಸಿದ ವಿಚಾರವಲ್ಲ.

ಕೇಂದ್ರದ ನಾಯಕರ ಜತೆ ಯಡಿಯೂರಪ್ಪ ಮಾತುಕತೆ
ಕೇಂದ್ರದ ನಾಯಕರ ಜತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಕೇಂದ್ರೀಯ ಸಚಿವರು ಕೆಲವು ಸೂಚನೆಗಳನ್ನು ನೀಡಿದ್ದಾರೆ. ಅದನ್ನು ಗಮನಿಸಿ ಯಡಿಯೂರಪ್ಪ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ.

ಸಂಪುಟ ವಿಸ್ತರಣೆ ವಿಳಂಬದ ಹಿಂದೆ ಯಾವುದೇ ಉದ್ದೇಶವಿಲ್ಲ
ಸಂಪುಟ ವಿಸ್ತರಣೆ ವಿಳಂಬದ ಹಿಂದೆ ಯಾವುದೇ ಉದ್ದೇಶ ಇಲ್ಲ, ಸಾಮಾಜಿಕ, ಭೌಗೋಳಿಕ ನ್ಯಾಯ ಎಲ್ಲವನ್ನೂ ಗಮನಿಸಿ ಮಾಡಬೇಕಾಗುತ್ತದೆ. ಪಕ್ಷ ಮತ್ತು ಸರ್ಕಾರ ಒಟ್ಟಿಗೆ ಕೂತು ಚರ್ಚೆ ಮಾಡಿ ಮಾಡುತ್ತೇವೆ. ನಾವೇ ಮಾಡುತ್ತೇವೆ. ರಾಜ್ಯ ಬಿಜೆಪಿ ಉಸ್ತುವಾರ ಡಿಸೆಂಬರ್ 5 ರಂದು ಬೆಳಗಾವಿಗೆ ಬರುತ್ತಾರೆ. ಯತ್ನಾಳ್ ಹೇಳಿಕೆಗಳು ಪಕ್ಷದ ಆಂತರಿಕ ವಿಚಾರ, ಅದರ ಬಗ್ಗೆ ಚರ್ಚೆ ನಡೆದಿದೆ. ಸೂಕ್ತವಾದ ನಿರ್ಧಾರ ಪಕ್ಷ ತೆಗೆದುಕೊಳ್ಳುತ್ತದೆ.