• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಖ್ಯಮಂತ್ರಿ ಹುದ್ದೆಗೆ ರೇಸ್‌ನಲ್ಲಿ ಇದ್ದವರೆಷ್ಟು? ಕೊನೆಯಲ್ಲಿ ಉಳಿದವರು ಯಾರು? ಇಲ್ಲಿದೆ ಕುತೂಹಲಕಾರಿ ಮಾಹಿತಿ!

|
Google Oneindia Kannada News

ಬೆಂಗಳೂರು, ಜು. 26: ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಯೊಂದಿಗೆ ಆರಂಭವಾದ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಚರ್ಚೆ, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದರೊಂದಿಗೆ ಒಂದು ಹಂತಕ್ಕೆ ಬಂದು ನಿಂತಿದೆ. ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗಿದೆ. ಆದರೆ 'ಮುಂದಿನ ನಮ್ಮ ನಾಯಕ ಯಾರು?' ಎಂಬುದು ರಾಜ್ಯ ಬಿಜೆಪಿಯಲ್ಲಿ ಯಾರಿಗೂ ಗೊತ್ತಾಗುತ್ತಿಲ್ಲ.

   B S Yediyurappa ರಾಜೀನಾಮೆಗೆ ಕಾಯ್ತಿದ್ದವರಿಗೆ ಈಗ ಹಾಲು ಕುಡಿದಷ್ಟು ಸಂತೋಷ | Oneindia Kannada

   ಈ ಹಿಂದೆ ನಾಯಕತ್ವ ಬದಲಾವಣೆಯ ಮಾತು ಬಂದಾಗಲೂ ಇದೆ ಸ್ಥಿತಿ ಇತ್ತು. ಯಡಿಯೂರಪ್ಪ ನಂತರ ಯಾರು? ಎಂಬ ಪ್ರಶ್ನೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನು ಮಾತ್ರವಲ್ಲ, ವಿರೋಧ ಪಕ್ಷಗಳ ನಾಯಕರನ್ನೂ ಕಾಡಿದ್ದಿದೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಬಳಿಕ ಮುಂದಿನ ಸಾರಥಿ ಯಾರು? ಎಂಬುದಕ್ಕೆ ಉತ್ತರ ಎಂಬಂತೆ ಬಹಳಷ್ಟು ನಾಯಕರ ಹೆಸರುಗಳು ಮುನ್ನೆಲೆಗೆ ಬಂದಿದ್ದವು. ಜೊತೆಗೆ ಬಿಜೆಪಿ ಆಡಳಿತ ಹೊಂದಿದ್ದ ಇತರ ರಾಜ್ಯಗಳಲ್ಲಿ ಹೈಕಮಾಂಡ್ ಮಾಡಿದ್ದ ಪ್ರಯೋಗದಿಂದ ಯಾರೂ ಬೇಕಾದರೂ ನಾಯಕತ್ವ ವಹಿಸಿಕೊಳ್ಳಬಹುದು ಎಂಬ ಅತಿಯಾದ ಆತ್ಮವಿಶ್ವಾಸ ರಾಜ್ಯ ಬಿಜೆಪಿಯ ನಾಯಕರಲ್ಲಿ ಕಂಡು ಬಂದಿತ್ತು. ಆದರೆ ಅದು ಬದಲಾಗಲು ಬಹಳ ದಿನಗಳೇನು ಬೇಕಾಗಲಿಲ್ಲ.

   ಆರಂಭದಲ್ಲಿ ಸುಮಾರು 15 ಹೆಚ್ಚು ನಾಯಕರು ಸಿಎಂ ಹುದ್ದೆ ರೇಸ್‌ನಲ್ಲಿದ್ದರು. ಆದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವವರೆಗೆ ಮಾತ್ರ ಆ ಹೆಸರುಗಳು ಮುಂಚೂಣಿಯಲ್ಲಿದ್ದವು. ಯಡಿಯೂರಪ್ಪ ರಾಜೀನಾಮೆ ಕೊಟ್ಟ ಬಳಿಕ ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿದ್ದವರ ಸಂಖ್ಯೆ ದಿಢೀರ್ ಕುಸಿದಿದೆ. ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ನಡೆ ಅತ್ಯಂತ ನಿಗೂಢವಾವಾಗಿರುವುದೂ ಅದಕ್ಕೊಂದು ಕಾರಣ ಆಗಿರಬಹುದು. ಹೀಗಾಗಿ ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿದ್ದವರೆಲ್ಲರೂ ಈಗ ಸಚಿವ ಸ್ಥಾನ ಪಡೆಯಲು ಹೆಣಗಾಡುವಂತಾಗಿದೆ.

   ಬಹಳಷ್ಟು ನಿಗೂಢ ಅರ್ಥ ಒಳಗೊಂಡಿದೆಯಾ ಯಡಿಯೂರಪ್ಪ ಕೊಟ್ಟಿರುವ 'ಎರಡು ಸಾಲಿನ ರಾಜೀನಾಮೆ ಪತ್ರ'?ಬಹಳಷ್ಟು ನಿಗೂಢ ಅರ್ಥ ಒಳಗೊಂಡಿದೆಯಾ ಯಡಿಯೂರಪ್ಪ ಕೊಟ್ಟಿರುವ 'ಎರಡು ಸಾಲಿನ ರಾಜೀನಾಮೆ ಪತ್ರ'?

   ಈ ಎಲ್ಲ ಕಾರಣಗಳಿಂದ ಇದೀಗ ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳ ಸಂಖ್ಯೆ ಈಗ ಹದಿನೈದರಿಂದ ನಾಲ್ಕಕ್ಕೆ ಕುಸಿದಿದೆ. ಬಹುತೇಕವಾಗಿ ಇಷ್ಟೊಂದು ಪ್ರಮಾಣದಲ್ಲಿ ಬೇರಾವುದೇ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು ಕಾಣಿಸಿಕೊಂಡಿರಲಿಕ್ಕಿಲ್ಲ. ಈಗ ಸಿಎಂ ಹುದ್ದೆ ರೇಸ್‌ನಲ್ಲಿ ಉಳಿದಿರುವರು ಯಾರು? ಅವರಲ್ಲಿ ನೂತನ ಮುಖ್ಯಮಂತ್ರಿ ಎಂದು ಹೈಕಮಾಂಡ್ ನಿಗದಿ ಮಾಡಿರುವುದು ಯಾರನ್ನು? ಮುಂದಿದೆ ಮಾಹಿತಿ!

   ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ

   ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ

   ಶಾಸಕರ ಅಭಿಪ್ರಾಯ ಕೇಳಿ ಮುಂದಿನ ಮುಖ್ಯಮಂತ್ರಿ ನೇಮಕ ಮಾಡುವುದಾಗಿ ಬಿಜೆಪಿ ದೆಹಲಿ ಮೂಲಗಳು ಹೇಳುತ್ತಿವೆ. ಆದರೆ ಸ್ವತಃ ಹೈಕಮಾಂಡ್ ಮುಂದಿನ ಮುಖ್ಯಮಂತ್ರಿಯನ್ನು ತಾನೇ ಮುಂದಾಗಿ ನೇಮಕ ಮಾಡಲಿದೆ ಎಂಬುದು ಬಿಜೆಪಿ ನಾಯಕರಿಂದ ಹಿಡಿದು ಸಾಮಾನ್ಯ ಜನರಿಗೂ ಗೊತ್ತಿದೆ. ಇದು ಕೂಡ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳ ಸಂಖ್ಯೆ ಕಡಿಮೆಯಾಗಲು ಒಂದು ಕಾರಣ.

   ಮುಖ್ಯಮಂತ್ರಿ ಹುದ್ದೆ ಏನಿದ್ದರೂ ಲಿಂಗಾಯತ ಸಮುದಾಯದವರಿಗೆ ಮೀಸಲು ಎಂಬ ಚರ್ಚೆಯೊಂದಿಗೆ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆಯ ಚರ್ಚೆ ಶುರುವಾಗಿತ್ತು. ಹೀಗಾಗಿ ಆರಂಭದಲ್ಲಿ ಸಿಎಂ ಸ್ಥಾನಕ್ಕೆ ಲಿಂಗಾಯತ ಸಮುದಾಯದ ಬಿಜೆಪಿ ನಾಯಕರ ಹೆಸರುಗಳು ಮಾತ್ರ ಕೇಳಿ ಬಂದಿದ್ದವು. ಅದರಲ್ಲಿಯೂ ಲಿಂಗಾಯತ ಸಮುದಾಯದ ಶಾಸಕರೆ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಹೇಳಿಕೆ ಕೊಡಲು ಆರಂಭಿಸಿದ್ದರು.

   ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಂತೂ ಯಡಿಯೂರಪ್ಪ ವಿರುದ್ಧ ಸಮರ ಸಾರಿದ್ದರು. ಅವರೇ ಮೊದಲಿಗರಾಗಿ ಯಡಿಯೂರಪ್ಪ ಬದಲಾವಣೆಗೆ ಆಗ್ರಹಿಸಿದ್ದರು. ಜೊತೆಗೆ ಪ್ರಧಾನಿ ಮೋದಿ ಅವರು ಭ್ರಷ್ಟಾಚಾರದ ಆರೋಪದಲ್ಲಿ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುತ್ತಾರೆ. ಮೋದಿ ಅವರಿಗೂ ಯಡಿಯೂರಪ್ಪ ಸಾಕಾಗಿ ಹೋಗಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅಲ್ಲಿಂದ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಚರ್ಚೆ ಶುರುವಾಯ್ತು. ಜೊತೆಗೆ ಈ ಮುಂದಿರುವ ಎಲ್ಲರ ಹೆಸರುಗಳು ಮುಂದಿನ ಸಿಎಂ ಎಂದು ಕೇಳಿ ಬಂದವು.

   ಆರಂಭದಲ್ಲಿ ಸಿಎಂ ಹುದ್ದೆ ರೇಸ್‌ನಲ್ಲಿದ್ದವರು

   ಆರಂಭದಲ್ಲಿ ಸಿಎಂ ಹುದ್ದೆ ರೇಸ್‌ನಲ್ಲಿದ್ದವರು

   ನಾಯಕತ್ವ ಬದಲಾವಣೆ ಚರ್ಚೆ ಶುರುವಾದಾಗ ಸಹಜವಾಗಿಯೇ ಬಹಳಷ್ಟು ನಾಯಕರ ಹೆಸರುಗಳು ಮುನ್ನೆಲೆಗೆ ಬಂದಿದ್ದವು. ಆರಂಭದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಅವರ ಹೆಸರುಗಳು ಕೇಳಿ ಬಂದಿದ್ದವು.

   ಜೊತೆಗೆ ಸಚಿವರಾದ ಲಕ್ಷ್ಮಣ ಸವದಿ, ಮುರುಗೇಶ್ ನಿರಾಣಿ, ಡಾ. ಅಶ್ವಥ್ ನಾರಾಯಣ, ಬಸವರಾಜ್ ಬೊಮ್ಮಾಯಿ, ಗೋವಿಂದ ಕಾರಜೋಳ, ಅರವಿಂದ್ ಲಿಂಬಾವಳಿ, ಜಗದೀಶ್ ಶೆಟ್ಟರ್ ಹಾಗೂ ಬಿ. ಶ್ರೀರಾಮುಲು ಅವರು ಹೆಸರುಗಳು ಕೇಳಿ ಬಂದಿದ್ದವು. ಜೊತೆಗೆ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ ಹೆಸರು ಮೊದಲಿನಿಂದಲೂ ಮುಂಚೂಣಿಯಲ್ಲಿತ್ತು.

   ಅವರೊಂದಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಹಾಗೂ ಸಂಸದ ಶಿವಕುಮಾರ್ ಉದಾಸಿ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬಂದಿದ್ದವು. ಒಟ್ಟಾರೆಯಾಗಿ 16 ಪ್ರಮುಖರ ಹೆಸರುಗಳು ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿದ್ದವು. ಇದೀಗ ಆ ಸಂಖ್ಯೆ ನಾಲ್ಕಕ್ಕೆ ಬಂದು ನಿಂತಿವೆ. ಅವು ಮುಂದಿನಂತಿವೆ.

   ಅಂತಿಮವಾಗಿ ರೇಸ್‌ನಲ್ಲಿ ಉಳಿದವರು!

   ಅಂತಿಮವಾಗಿ ರೇಸ್‌ನಲ್ಲಿ ಉಳಿದವರು!

   ಇದೀಗ ಮುಖ್ಯಮಂತ್ರಿ ಹುದ್ದೆಗೆ ನಾಲ್ಕು ಹೆಸರುಗಳಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಬಂದಿದೆ. ಲಿಂಗಾಯತ ಅಥವಾ ಬ್ರಾಹ್ಮಣ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆ ಕೊಡಲು ಹೈಕಮಾಂಡ್ ತೀರ್ಮಾನ ಮಾಡಿದೆ ಎನ್ನಲಾಗಿದೆ.

   ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆ ಕೊಟ್ಟಲ್ಲಿ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಅಥವಾ ಬೀಳಗಿ ಕ್ಷೇತ್ರದ ಶಾಸಕ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರಲ್ಲೊಬ್ಬರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡುವುದು ಖಚಿತವಾಗಿದೆ.

   ಇನ್ನು ಬ್ರಾಹ್ಮಣ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆಯನ್ನು ಕೊಡಲು ನಿಶ್ಚಯ ಮಾಡಿದಲ್ಲಿ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ ಅಥವಾ ಮಾಜಿ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರಲ್ಲಿ ಒಬ್ಬರನ್ನು ಸಿಎಂ ಸ್ಥಾನಕ್ಕೆ ನಿಗದಿ ಮಾಡಲು ಹೈಕಮಾಂಡ್ ತೀರ್ಮಾನ ಮಾಡಿದೆ ಎನ್ನಲಾಗುತ್ತಿದೆ.

   ಪ್ರಲ್ಹಾದ್ ಜೋಶಿ ಅವರನ್ನು ಕೇಂದ್ರ ಸಂಪುಟದಲ್ಲಿ ಉಳಿಸಿಕೊಳ್ಳಲು ಪ್ರಧಾನಿ ಮೋದಿ ಅಂತಿಮ ತೀರ್ಮಾನ ಮಾಡಿದಲ್ಲಿ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರನ್ನು ಮುಖ್ಯಮಂತ್ರಿ ಮಾಡಲು ಹೈಕಮಾಂಡ್ ತೀರ್ಮಾನ ಮಾಡಿದೆ ಎಂಬ ಮಾಹಿತಿ ಬಂದಿದೆ. ಈ ಮಧ್ಯೆ ಮುಂದಿನ ಮುಖ್ಯಮಂತ್ರಿ ಯಾರು? ಎಂಬುದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಒಳಗಾಗಿದೆ. ಏನದು ಟ್ರೋಲ್?

   ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್!

   ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್!

   ಒಂದೊಂದು ಮಾಧ್ಯಮ ಒಬ್ಬೊಬ್ಬರ ಹೆಸರನ್ನು ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದೆ.

   ಈ ಮಾಧ್ಯಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಮುಖ್ಯಮಂತ್ರಿ ಎಂದು, ಆ ಮಾಧ್ಯಮದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಎಂದು, ಮತ್ತೊಂದರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಎಂದು. ಹಾಗೆಯೆ ಉಳಿದವುಗಳಲ್ಲಿ ಸಚಿವ ಸಿ.ಪಿ. ಯೋಗೇಶ್ವರ್, ಅರವಿಂದ್ ಬೆಲ್ಲದ್ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ನಡೆಸಿದ್ದಾರೆ ಎಂದಿದೆ.

   ಆಯಾ ಮಾಧ್ಯಮಗಳ ಕಚೇರಿಯಲ್ಲಿಯೇ ನೂತನ ಮುಖ್ಯಮಂತ್ರಿಗಳಿಗೆ ಪ್ರಮಾಣ ವಚನ ಸ್ವೀಕಾರದ ವ್ಯವಸ್ಥೆ ಮಾಡಲಾಗಿದೆ ಎಂಬ ಮೆಸೇಜ್ ವೈರಲ್ ಆಗಿದೆ. ಮೇಲ್ನೋಟಕ್ಕೆ ಮಾಧ್ಯಮವನ್ನು ಟಾರ್ಗೆಟ್ ಮಾಡಿದಂತೆ ಈ ಸಂದೇಶ ಕಾಣುತ್ತಿದೆ. ಆದರೆ ಆಳದಲ್ಲಿ ಸದ್ಯದ ಬಿಜೆಪಿಯ ಅತಂತ್ರ ಸ್ಥಿತಿಯನ್ನು ಯಾರೊ ಅನಾಮಿಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎಂಬ ಚರ್ಚೆ ನಡೆದಿದೆ.

   English summary
   Who is in the race for the post of Chief Minister? The remaining leaders in the race for the post of Chief Minister of Karnataka. Interesting info here.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X