ಅಂದು ಬಳ್ಳಾರಿ ಪಾದಯಾತ್ರೆ, ಇಂದು 'ನವ ಕರ್ನಾಟಕ ನಿರ್ಮಾಣ' ಯಾತ್ರೆ!

Subscribe to Oneindia Kannada

ಬೆಂಗಳೂರು, ಡಿಸೆಂಬರ್ 13: 2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆ ಒಡೆದು ಕಾಂಗ್ರೆಸ್ ಅಧಿಕಾರಕ್ಕೇರಿತ್ತು. ಹೀಗೆ ಅಧಿಕಾರಕ್ಕೇರಿದ ಕಾಂಗ್ರೆಸ್ ಜಯದ ಹಿಂದೆ ಕೆಲಸ ಮಾಡಿದ್ದು ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಿಂದ ಬಳ್ಳಾರಿವರೆಗೆ ನಡೆದಿದ್ದ ಪಾದಯಾತ್ರೆ.

ಹೀಗೆ ಬಳ್ಳಾರಿ ಪಾದಯಾತ್ರೆಯ ಬಲದಲ್ಲಿ ಅಧಿಕಾರಕ್ಕೇರಿದ ಸಿದ್ದರಾಮಯ್ಯ ಇವತ್ತು ತಮ್ಮ ನಾಲ್ಕುವರೆ ವರ್ಷಗಳ ಅಧಿಕಾರವಧಿ ಪೂರೈಸಿದ್ದಾರೆ. ಜತೆಗೆ ಮತ್ತೆ ಕರ್ನಾಟಕ ಪ್ರವಾಸ ಹೊರಟಿದ್ದಾರೆ. ಅವರ ಮೂವತ್ತು ದಿನಗಳ ನವ ಕರ್ನಾಟಕ ನಿರ್ಮಾಣ ಯಾತ್ರೆಗೆ ಇಂದು ಬೀದರಿನ ಬಸವ ಕಲ್ಯಾಣದಲ್ಲಿ ಚಾಲನೆ ಸಿಕ್ಕಿದೆ.

ಬಳ್ಳಾರಿ ಯಾತ್ರೆ ಗುಂಗಲ್ಲಿ ಅಧಿಕಾರಕ್ಕೇರಿದ್ದ ಸಿದ್ದರಾಮಯ್ಯ ಈ ಬಾರಿ ಮತ್ತೆ ಮುಖ್ಯಮಂತ್ರಿಯಾಗುತ್ತಾರಾ ಎಂಬ ಸಹಜ ಪ್ರಶ್ನೆ ನವ ಕರ್ನಾಟಕ ನಿರ್ಮಾಣ ಯಾತ್ರೆ ಜತೆಗೇ ಹುಟ್ಟಿಕೊಂಡಿದೆ.

The Padayatra 2010 Bus Yatra Siddaramaiah Then And Now

ಭ್ರಷ್ಟಾಚಾರದ ವಿರುದ್ಧ 'ಬಳ್ಳಾರಿ ಪಾದಯಾತ್ರೆ'

ಅದು 2010; ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿತ್ತು. ಮುಖ್ಯಮಂತ್ರಿಯಾಗಿದ್ದವರು ಬಿಎಸ್ ಯಡಿಯೂರಪ್ಪ. ಮುಖ್ಯಮಂತ್ರಿ ಬಿಎಸ್ವೈ ಆದರೂ ಆಡಳಿತದ ಹಿಡಿತವೆಲ್ಲಾ ತಮ್ಮಲ್ಲೇ ಇಟ್ಟುಕೊಂಡಿದ್ದವರು ಬಳ್ಳಾರಿಯ ಗಣಿಧಣಿಗಳಾದ ಜನಾರ್ದನ್ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು.

ಬಳ್ಳಾರಿಯನ್ನು ತಮ್ಮ ಸ್ವಂತ ರಾಜ್ಯವೆಂಬಂತೆ ಆಳುತ್ತಿದ್ದ ಇವರು ಅದೊಂದು ದಿನ ರಾಜ್ಯ ವಿಧಾನಸಭೆಯಲ್ಲಿ 'ತಾಕತ್ತಿದ್ದರೆ ಬಳ್ಳಾರಿಗೆ ಬನ್ನಿ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದರು.

ವಿಧಾನಸಭೆಯಲ್ಲೇ ಬಳ್ಳಾರಿ ಗಣಿಧಣಿಗಳ ಸವಾಲು ಸ್ವೀಕರಿಸಿದ ಸಿದ್ದರಾಮಯ್ಯ ಭುಜತಟ್ಟಿ, "ನಾವು ಬಳ್ಳಾರಿಗೆ ಬಂದೇ ಬರುತ್ತೇವೆ. ನಡೆದುಕೊಂಡೇ ಬರುತ್ತೇವೆ. ತಾಕತ್ತಿದ್ದರೆ ತಡೆಯಿರಿ," ಎಂದ ಮರು ಸವಾಲು ಹಾಕಿದರು.

ಹೀಗೆ 2010ರ ಜುಲೈ 25ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ 'ಬಳ್ಳಾರಿ ಚಲೋ' ಪಾದಯಾತ್ರೆ ಆರಂಭವಾಯಿತು. 60 ವರ್ಷ ಮೀರಿದ ಹೆಚ್ಚಿನ ನಾಯಕರಿದ್ದರೂ ಉರಿಬಿಸಿಲಲ್ಲಿ ನಡೆದೇ ಕಾಂಗ್ರೆಸ್ ನಾಯಕರೆಲ್ಲರೂ ಬಳ್ಳಾರಿ ತಲುಪಿದರು.


ಪಾದಯಾತ್ರೆಯ 20ನೇ ದಿನ ಅಂದರೆ ಆಗಸ್ಟ್ 8ರಂದು ಬಳ್ಳಾರಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದ ಬೃಹತ್ ಸಮಾವೇಶದ ಮೂಲಕ ಕಾಂಗ್ರೆಸ್ ನಾಯಕರು ಗಣಿಧಣಿಗಳು ಹಾಗೂ ಬಿಜೆಪಿ ಸರಕಾರದ ವಿರುದ್ಧ ಅಬ್ಬರಿಸಿದರು.

"ಬಿಜೆಪಿ ಸರಕಾರ ಕಿತ್ತೊಗೆಯಲು ಕ್ಷಣಗಣನೆ ಆರಂಭವಾಗಿದೆ... ಸದ್ಯದಲ್ಲೇ ವಿಧಾನ ಸೌಧದಲ್ಲಿ ಕಾಂಗ್ರೆಸ್ ಧ್ವಜ ಹಾರಿಸುತ್ತೇವೆ... ಪ್ರಾಕೃತಿಕ ಸಂಪತ್ತನ್ನು ದೋಚಲು ಬಿಡುವುದಿಲ್ಲ... ರೆಡ್ಡಿಗಳೇ ಇನ್ನು ನಿಮ್ಮ ಆಟ ನಡೆಯುವುದಿಲ್ಲ..." ಎಂದೆಲ್ಲಾ ರೆಡ್ಡಿ ಸಹೋದರರು ಹಾಗೂ ಬಿಜಪಿ ವಿರುದ್ಧ ಕಾಂಗ್ರೆಸ್ ನಾಯಕರು ಅಬ್ಬರಿಸಿದರು.

ಅದಾಗಿ 2013ರಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ಪಾದಯಾತ್ರೆ ಸಾಗಿದ ದಾರಿಯುದ್ಧಕ್ಕೂ ಕಾಂಗ್ರೆಸ್ ಬಾವುಟ ಹಾರಾಡಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆಯ ಮೂಸೆಯಿಂದ ಹೊರ ಬಂದು ಮುಖ್ಯಮಂತ್ರಿ ಗದ್ದುಗೆ ಏರಿದರು. ಇವೆಲ್ಲಾ ಇವತ್ತಿಗೆ ಇತಿಹಾಸ.

ಇಂದು 'ನವ ಕರ್ನಾಟಕ ನಿರ್ಮಾಣಕ್ಕಾಗಿ' ರಾಜ್ಯ ಪ್ರವಾಸ

ಹೀಗೆ ರೆಡ್ಡಿ ಸಹೋದರರ ಭ್ರಷ್ಟಾಚಾರದ ವಿರುದ್ಧ ಬಳ್ಳಾರಿ ಪಾದಯಾತ್ರೆ ನಡೆಸಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಸದ್ಯ ತಮ್ಮ ಅಧಿಕಾರಾವಧಿಯ ನಾಲ್ಕುವರೆ ವರ್ಷಗಳನ್ನು ಪೂರೈಸಿದ್ದಾರೆ.

ಈ ಬಾರಿ ತಮ್ಮ ಸರಕಾರದ ಸಾಧನೆಗಳನ್ನು ರಾಜ್ಯದಾದ್ಯಂತ ಮನೆ ಮನೆಗೆ ತಲುಪಿಸಲು ಸಿದ್ದರಾಮಯ್ಯ 'ನವ ಕರ್ನಾಟಕ ನಿರ್ಮಾಣ ಯಾತ್ರೆ' ಆರಂಭಿಸಿದ್ದಾರೆ. ಡಿಸೆಂಬರ್ 13ರಿಂದ ಜನವರಿ 13ರವರೆಗೆ ನಡೆಯಲಿರುವ ಈ 32 ದಿನಗಳ ಯಾತ್ರೆಗೆ ಇಂದು ಬೀದರ್ ನ ಬಸವ ಕಲ್ಯಾಣದಲ್ಲಿ ಚಾಲನೆ ನೀಡಲಾಗಿದೆ.

ಈ ಬಾರಿ ಒಂದೇ ವ್ಯತ್ಯಾಸ ಏನೆಂದರೆ ಅವರು ಬಸ್ ಮೂಲಕ ಯಾತ್ರೆ ಹೊರಟಿದ್ದಾರೆ.

ದೇಶದಾದ್ಯಂತ ಬೀಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅಲೆ, ಹೇಗಾದರೂ ಅಧಿಕಾರಕ್ಕೇರಬೇಕು ಎಂದು ಕಾಯುತ್ತಿರುವ ಬಿಜೆಪಿಯ ಪ್ರಯತ್ನಗಳು ನಡುವೆ ಸಿದ್ದರಾಮಯ್ಯನವರು ತಮ್ಮ ಯಾತ್ರೆಯ ಭಲದಿಂದ ಮತ್ತೆ ಅಧಿಕಾರಕ್ಕೇರುತ್ತಾರಾ ಎಂಬ ಪ್ರಶ್ನೆ ಸದ್ಯ ಉಳಿದುಕೊಂಡಿದೆ. ಇದಕ್ಕೆ ಉತ್ತರ ದೊರೆಯಬೇಕಾದರೆ 2018ರ ಮೇವರಗೆ ಕಾಯಲೇಬೇಕು. ಬೇರೆ ದಾರಿ ಇಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Then 'Ballary Chalo' padayatra (2010), now 'NavaKarnatakaNiramana' yatra (2017). The 2010 padayatra brouht him to power. What will happen now?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ