ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

OneIndia Impact Story: ಮಲೆನಾಡ ಮಕ್ಕಳ ಸಮಸ್ಯೆಗೆ ಸಚಿವ ಸುರೇಶ್ ಕುಮಾರ್ ಪರಿಹಾರ!

|
Google Oneindia Kannada News

ಬೆಂಗಳೂರು, ಜೂ. 21: ಕೊರೊನಾವೈರಸ್ ಕೇವಲ ಜೀವಕ್ಕೆ ಮಾತ್ರವಲ್ಲ ಜೀವನಕ್ಕೂ ಸಂಚಕಾರ ತಂದಿಟ್ಟಿದೆ. ಕೊರೊನಾ ವೈರಸ್ ಕಾರಣದಿಂದ ಕಳೆದ ಒಂದೂವರೆ ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆಗಳು ಕುಂಠಿತಗೊಂಡಿವೆ. ಈ ವರ್ಷವಂತೂ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಸಾಂಕೇತಿಕವಾಗಿ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಮಕ್ಕಳ ಕಲಿಕೆಯನ್ನೂ ನಿಲ್ಲಿಸುವಂತಿಲ್ಲ. ಹೀಗಾಗಿ ಆನ್‌ಲೈನ್ ಅಭ್ಯಾಸ ಅನಿವಾರ್ಯವಾಗಿದೆ.

ಈ ಸಂಕಷ್ಟದ ಸಂದರ್ಭದಲ್ಲಿ ಶಾಲಾ-ಕಾಲೇಜು ತರಗತಿಗಳು ಆನ್‌ಲೈನ್ ಮೂಲಕ ನಡೆಯುತ್ತಿರುವುದರಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಇಂಟರ್‌ನೆಟ್‌ ಸಮಸ್ಯೆಯಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿ ಸಮೂಹ ತೊಂದರೆಗೆ ಈಡಾಗಿದೆ. ಅದರಲ್ಲೂ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಮಲೆನಾಡ ಭಾಗದ ಮಕ್ಕಳ ಕಲಿಕೆಯ ಮೇಲೆ ಪರಿಣಾಮವಾಗುತ್ತಿದೆ. ಹೀಗಾಗಿ ಈ ಸಮಸ್ಯೆಯನ್ನು ಪರಿಹರಿಸಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಮುಂದಾಗಿದ್ದಾರೆ.

ಆನ್‌ಲೈನ್ ಕ್ಲಾಸ್; ಮಲೆನಾಡಲ್ಲಿ ದಿನ ಪ್ರಾಣ ಪಣಕ್ಕಿಡಬೇಕು ಮಕ್ಕಳು!ಆನ್‌ಲೈನ್ ಕ್ಲಾಸ್; ಮಲೆನಾಡಲ್ಲಿ ದಿನ ಪ್ರಾಣ ಪಣಕ್ಕಿಡಬೇಕು ಮಕ್ಕಳು!

ಮೊಬೈಲ್ ನೆಟ್‌ವರ್ಕ್ ಸಿಗದೇ ವಿದ್ಯಾರ್ಥಿನಿಯೊಬ್ಬಳು ಮೊಬೈಲ್ ಕಲಿಕಾ ಪ್ರಯತ್ನದಲ್ಲಿ ಗುಡ್ಡದ ಮೇಲೆ ಮಳೆ ಹನಿಯಲ್ಲಿ ಪುಸ್ತಕ ಮತ್ತು ಮೊಬೈಲ್ ಹಿಡಿದು ಹತಾಶಳಾಗಿ ಕುಳಿತಿದ್ದ ಫೋಟೊ ಸಹಿತ, ಜೊತೆಗೆ ಮಲೆನಾಡಿನ ಇತರ ಭಾಗಗಳಲ್ಲಿ ಅಂತಹುದೆ ಸಮಸ್ಯೆಗಳ ಕುರಿತು 'ಒನ್‌ಇಂಡಿಯಾ ಕನ್ನಡ'ದಲ್ಲಿ ವಿಸ್ತೃತ ವರದಿ ಪ್ರಕಟಿಸಲಾಗಿತ್ತು. ಅದನ್ನು ಗಮನಿಸಿರುವ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಮಲೆನಾಡಿನ ಮಕ್ಕಳ ಈ ಹೊಸ ಸಮಸ್ಯೆಗೆ ಸ್ಪಂದಿಸಿದ್ದಾರೆ.

 ಮಲೆನಾಡಿನ ಮಕ್ಕಳಿಗೆ ಹೊಸ ಸಮಸ್ಯೆ!

ಮಲೆನಾಡಿನ ಮಕ್ಕಳಿಗೆ ಹೊಸ ಸಮಸ್ಯೆ!

ಮಲೆನಾಡಿನಲ್ಲಿ ಮಳೆಗಾಲ ಶುರುವಾಯಿತೆಂದರೆ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗಳು ಒಂದೆರಡಲ್ಲ. ಈ ವರ್ಷವೂ ಕಳೆದ ಶೈಕ್ಷಣಿಕ ಸಾಲಿನಂತೆ ಹೊಸ ಹೊಸ ಸಮಸ್ಯೆಗಳು ನಾಡಿನ ಮಕ್ಕಳಿಗೆ ಎದುರಾಗುತ್ತಿವೆ. ಅದರಲ್ಲೂ ಮಲೆನಾಡು ಪ್ರದೇಶದ ಗ್ರಾಮೀಣ ಭಾಗದ ಮಕ್ಕಳು ಮತ್ತೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಆಗಾಗ ಕಡಿತವಾಗುವ ವಿದ್ಯುತ್ ಸಂಪರ್ಕದ ಸಮಸ್ಯೆಯೊಂದಿಗೆ ಈಗ ಮೊಬೈಲ್ ನೆಟ್‌ವರ್ಕ್‌ ಕೂಡ ಸರಿಯಾಗಿ ಸಿಗದೇ ಮತ್ತೊಂದು ಹೊಸ ಸಮಸ್ಯೆ ಶುರುವಾಗಿದೆ. ಹೀಗಾಗಿ ಮಲೆನಾಡಿನ ಮಕ್ಕಳು ಮಳೆಯಲ್ಲಿಯೇ ಬೆಟ್ಟಗಳ ತುದಿಗೆ ಹೋಗಿ ಆನ್‌ಲೈನ್ ಪಾಠಗಳನ್ನು ಕಲಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

"ಗ್ರಾಮೀಣ ಪ್ರದೇಶದಲ್ಲಿ ನೆಟ್-ವರ್ಕ್ ದೊರೆಯದೇ ಗ್ರಾಮೀಣ ಪ್ರದೇಶದ ಮಕ್ಕಳು ಬೆಟ್ಟ ಗುಡ್ಡಗಳನ್ನು ಹತ್ತಿ ಕುಳಿತು ಆನ್-ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಮಳೆಗಾಲವಾದ್ದರಿಂದ ಬೆಟ್ಟದ ಮೇಲೆ ಕುಳಿತು ಪಾಠದಲ್ಲಿ ತೊಡಗಿಸಿಕೊಂಡ ಮಕ್ಕಳನ್ನು ಮಳೆಯಿಂದ ರಕ್ಷಿಸಲು ಪೋಷಕರು ಛತ್ರಿ ಹಿಡಿದು ಮಳೆಯಲ್ಲಿ ನಿಂತುಕೊಂಡ ಫೋಟೋಗಳು ಪತ್ರಿಕೆಗಳಲ್ಲಿ ಬಂದಿವೆ. ಹೀಗಾಗಿ ಈ ನೆಟ್‌ವರ್ಕ್ ಸಮಸ್ಯೆಗೆ ಕೊನೆ ಹಾಡಲು ನೆಟ್‌ವರ್ಕ್ ಆಪರೇಟರ್‌ಗಳ ಸಭೆ ನಡೆಸಿ ಪರಿಹಾರ ರೂಪಿಸಬೇಕು" ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಹೊಸ ಸಮಸ್ಯೆಯನ್ನು ವಿವರಿಸಿದ್ದಾರೆ.

 ಇನ್ಮುಂದೆ ಆನ್‌ಲೈನ್ ಕಲಿಕೆ ಅನಿವಾರ್ಯ!

ಇನ್ಮುಂದೆ ಆನ್‌ಲೈನ್ ಕಲಿಕೆ ಅನಿವಾರ್ಯ!

"ಈಗಷ್ಟೇ ಅಲ್ಲ ಮುಂದಿನ ದಿನಗಳಲ್ಲಿಯೂ ಆನ್‌ಲೈನ್ ಶಿಕ್ಷಣ ಅನಿವಾರ್ಯವಾಗಬಹುದು" ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ. "ಇಂದಿನ ಸಂದರ್ಭವನ್ನು ಗಮನಿಸಿದರೆ ಈ ಕೋವಿಡ್ ಕಾಲಘಟ್ಟದಲ್ಲಿ ಆನ್‌ಲೈನ್‌ ತರಗತಿಗಳೇ ಸಾಮಾನ್ಯವಾಗಬಹುದಾಗಿದೆ. ಕೋವಿಡ್ ಪೂರ್ವದ ಸಹಜ ಸಾಮಾಜಿಕ ಸ್ಥಿತಿಗತಿಗಳು ಸದ್ಯಕ್ಕೆ ಹಿಂದಿರುಗಲು ಸಾಧ್ಯವಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಈ ಹೊಸ ಸ್ಥಿತಿಗೆ ಹೊಂದಿಕೊಳ್ಳದೇ ಅನ್ಯದಾರಿಯಿಲ್ಲವಾದ್ದರಿಂದ ನಾವು ಇಂಟರ್‌ನೆಟ್‌ ನೆಟ್‌ವರ್ಕ್‌ ಸಮಸ್ಯೆಯನ್ನು ಪರಿಹರಿಸಿಕೊಳ್ಳಲೇಬೇಕಿದೆ" ಎಂದು ಸುರೇಶ್ ಕುಮಾರ್ ಅವರು ಸಿಎಂ ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

"ತರಗತಿ ಕಲಿಕೆ ಮರೀಚಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ಆನ್-ಲೈನ್ ಬೋಧನೆ ಅನಿವಾರ್ಯವಾಗಿದೆ. ತರಗತಿಗಳಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕಾದ ಮಕ್ಕಳು ಅಂತರ್ಜಾಲದ ಮೊರೆಹೋಗಬೇಕಾಗಿದೆ. ಶಿಕ್ಷಣ ಇಲಾಖೆ ತಂತ್ರಜ್ಞಾನಾಧಾರಿತವಾದ ಶಿಕ್ಷಣ ವ್ಯವಸ್ಥೆಗೆ ನಿಯಂತ್ರಣವನ್ನು ಕಲ್ಪಿಸುವ ನೀತಿಯನ್ನು ಹೊರತಂದಿದ್ದರೂ ಸಹ ಮಕ್ಕಳ ಕಲಿಕೆಗೆ ಪರ್ಯಾಯ ಬೋಧನೆ ಅವಶ್ಯಕವೂ ಆಗಿದೆ." ಎಂದು ಸುರೇಶ್ ಕುಮಾರ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದಾರೆ.

 ಹೊಸ ಪರಿಸ್ಥಿತಿ-ಹೊಸ ಸಮಸ್ಯೆ!

ಹೊಸ ಪರಿಸ್ಥಿತಿ-ಹೊಸ ಸಮಸ್ಯೆ!

"ಕಲಿಕೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳುವುದು ಅನಿವಾರ್ಯ ಆಗಿರುವುದರಿಂದ, ಶಾಲೆಗಳು ತಮ್ಮದೇ ಸಂಪನ್ಮೂಲಗಳ ಆಧಾರದಲ್ಲಿ ಆನ್‌ಲೈನ್ ಕಲಿಕೆಯನ್ನು ನಡೆಸಲು ಇಲಾಖೆ ಅನುಮತಿ ನೀಡಿದೆ. ಮೊಬೈಲ್ ವಾಟ್ಸಾಪ್ ಗ್ರೂಪ್‌ಗಳ ಮೂಲಕವೂ ಸರ್ಕಾರಿ ಶಾಲೆಗಳ ಶಿಕ್ಷಕರು ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸುತ್ತಿದ್ದಾರೆ. ಜೊತೆಗೆ ನಮ್ಮದೇ ಯು-ಟ್ಯೂಬ್ ಚಾನೆಲ್‌ಗಳ ಮೂಲಕವೂ ದೂರದರ್ಶನದ ಚಂದನವಾಹಿನಿಯ ಮೂಲಕವೂ ಪಾಠ ಪ್ರವಚನಗಳು ಮುಂದುವರೆಯಲಿರುವುದರಿಂದ ಹೊಸ ಸ್ಥಿತಿಗೆ ಹೊಂದಿಕೊಳ್ಳಲೇಬೇಕಿದೆ" ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿವರಿಸಿದ್ದಾರೆ.

ಮೊಬೈಲ್ ನೆಟ್‌ವರ್ಕ್ ಸಿಗದೇ ಮಕ್ಕಳು ಮೊಬೈಲ್ ಕಲಿಕಾ ಪ್ರಯತ್ನದಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುವ ಗುಡ್ಡದ ಮೇಲೆ ಮಳೆ ಹನಿಯಲ್ಲಿ ಪುಸ್ತಕ ಮತ್ತು ಮೊಬೈಲ್ ಹಿಡಿದು ಹತಾಶರಾಗಿ ಕುಳಿತ ದೃಶ್ಯವನ್ನು ಸುರೇಶ್ ಕುಮಾರ್ ಉಲ್ಲೇಖಿಸಿದ್ದಾರೆ. ಅಂತಹ ಪ್ರಸಂಗಗಳನ್ನು ಉಲ್ಲೇಖಿಸಿ 'ಒನ್‌ಇಂಡಿಯಾ ಕನ್ನಡ' ವಿಶೇಷ ವರದಿಯನ್ನು ಪ್ರಕಟಿಸಿತ್ತು.

Recommended Video

ಶಿವಮೊಗ್ಗ ಏರ್ಪೋರ್ಟ್ ನಕ್ಷೆ ನೋಡಿ ಕೋಪಗೊಂಡ Congress | Yeddyurappa | Oneindia Kannada
 ಸರ್ಕಾರದಿಂದ ಸೂಚನೆ!

ಸರ್ಕಾರದಿಂದ ಸೂಚನೆ!

ಅದನ್ನು ಉಲ್ಲೇಖಿಸಿರುವ ಸಚಿವ ಸುರೇಶ್ ಕುಮಾರ್ ಅವರು, "ಆನ್‌ಲೈನ್ ಶಿಕ್ಷಣ ಅನಿವಾ‌ರ್ಯವಾಗುತ್ತಿರುವ ಈ ದಿನಮಾನಗಳಲ್ಲಿ ವಿಶೇಷ ನೀತಿನಿರೂಪಣೆ ಮಾಡಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲ ನೆಟ್-ವರ್ಕ್ ಆಪರೇಟರ್‌ಗಳ ಸಭೆಯನ್ನು ಶೀಘ್ರವೇ ಆಯೋಜಿಸಿ ಸಮರೋಪಾದಿಯಲ್ಲಿ ನೆಟ್‌ವರ್ಕ್ ಸಮಸ್ಯೆಯನ್ನು ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು" ಪತ್ರದಲ್ಲಿ ತಿಳಿಸಿದ್ದಾರೆ. "ಈ ಸಮಸ್ಯೆ ಪರಿಹಾರವಾದರೆ ನಮ್ಮ ವಿದ್ಯಾರ್ಥಿಗಳ ಭವಿಷ್ಯ ಕಾಯುವ ಸರ್ಕಾರದ ಜವಾಬ್ದಾರಿಯ ನಿರ್ವಹಣೆ ಪರಿಣಾಮಕಾರಿಯಾಗಲಿದೆ" ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಮಲೆನಾಡಿನ ಮಕ್ಕಳ ಸಮಸ್ಯೆಯನ್ನು 'ಒನ್ಇಂಡಿಯಾ ಕನ್ನಡ'ದಲ್ಲಿ ಎಳೆಎಳೆಯಾಗಿ ವಿವರಿಸಲಾಗಿತ್ತು. ಕೊರೊನಾ ಜೊತೆಗೆ ಆ ಮಕ್ಕಳು ಎದುರಿಸುತ್ತಿರುವ ಹೊಸ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲಾಗಿತ್ತು. ಇದೀಗ ನೆಟ್‌ವರ್ಕ್‌ ಸಮಸ್ಯೆ ಪರಿಹರಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸರ್ಕಾರದ ಗಮನ ಸೆಳೆದಿದ್ದಾರೆ. ತಕ್ಷಣವೇ ಮೆಲೆನಾಡ ಮಕ್ಕಳ ಹೊಸ ಸಮಸ್ಯೆ ಪರಿಹಾರವಾಗಲಿದೆ ಎಂಬ ಭರವಸೆಯಲ್ಲಿ 'ಒನ್‌ಇಂಡಿಯಾ ಕನ್ನಡ'ವಿದೆ!

English summary
Education Minister Suresh Kumar has written a letter to CM Yediyurappa to instruct the network providers to rectify the mobile network that is hindering online learning of Malenadu region children. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X