ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದ ಭವಿಷ್ಯಕ್ಕೆ ಮಾರಕವಾದ ಸುಪ್ರೀಂ ತೀರ್ಪು

By * ವಸಂತ್ ಶೆಟ್ಟಿ, ಬೆಂಗಳೂರು
|
Google Oneindia Kannada News

ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂಬ ತೀರ್ಪು ನೀಡಿದ ಸುಪ್ರೀಂಕೋರ್ಟ್ ನಿರ್ಣಯ ಕನ್ನಡ ಭಾಷೆಗೆ ಮಾರಕವಾಗಿದ್ದು, ಕನ್ನಡ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡಿದ್ದಂತಾಗಿದೆ. ಕನ್ನಡ ಮಾಧ್ಯಮದ ಚರ್ಚೆಗೆ ಈಗ ಹೊಸ ದಿಕ್ಕು, ಹೊಸ ಕನಸು ಬೇಕು.ಯಾವ ಮಾಧ್ಯಮದಲ್ಲಿ ಓದಬೇಕು ಅನ್ನುವುದು ಪಾಲಕರ ನಿರ್ಧರಿಸುವುದಾದರೆ ಜನರಿಂದ ಆಯ್ಕೆಯಾದ ಸರ್ಕಾರಕ್ಕೆ ಬೆಲೆ ಇಲ್ಲದ್ದಂತಾಗಿದೆ. ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನಾಗರಿಕ ಪತ್ರಕರ್ತ ವಸಂತ್ ಶೆಟ್ಟಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಕನ್ನಡ ಮಾಧ್ಯಮ ಕಡ್ಡಾಯ ಮಾಡುವ ಕರ್ನಾಟಕ ಸರ್ಕಾರದ ಭಾಷಾ ನೀತಿಯ ವಿವಾದದಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಿದ್ದು, ಊಹಿಸಿದಂತೆ ಕರ್ನಾಟಕ ಸರ್ಕಾರಕ್ಕೆ ಸೋಲಾಗಿದೆ. ಯಾವ ಮಾಧ್ಯಮದಲ್ಲಿ ಓದಬೇಕು ಅನ್ನುವುದು ಪಾಲಕರ ನಿರ್ಧಾರ ಅನ್ನುವ ಮೂಲಕ ಕೋರ್ಟ್ ಜನರಿಂದ ಆಯ್ಕೆಯಾದ ಸರ್ಕಾರ ಈ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ ಅನ್ನುವಂತಾಗಿದೆ. ಕೋರ್ಟಿನ ತೀರ್ಪು ಏನೇ ಬಂದಿರಲಿ, ಅದನ್ನು ಬದಿಗಿಟ್ಟು ನಿಜಕ್ಕೂ ಕನ್ನಡದ ಮಕ್ಕಳ ಕಲಿಕೆಯ ವಿಷಯದಲ್ಲಿ ಸರ್ಕಾರ ಎಲ್ಲಿ ಎಡವುತ್ತಿದೆ. ಖ್ಯಾತ ಪತ್ರಕರ್ತ, ಸಾಹಿತಿ ಜೋಗಿ ಅಲಿಯಾಸ್ ಗಿರೀಶ್ ರಾವ್ ಅವರು ತಮ್ಮ ಪ್ರತಿಕ್ರಿಯೆಯನ್ನು ಫೇಸ್ ಬುಕ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ.

ಪಾಲಕರು ಯಾಕೆ ಕನ್ನಡ ಮಾಧ್ಯಮದಿಂದ ದೂರವಾಗುತ್ತಿದ್ದಾರೆ, ಈಗಿರುವ ತಾಯ್ನುಡಿ ಕಲಿಕೆಯ ಬಗೆಗಿನ ನಿಲುವಲ್ಲೇ ಇರುವ ಉತ್ತರವಿರದ ಪ್ರಶ್ನೆಗಳೇನು, ಇದನ್ನು ನಿಜಕ್ಕೂ ಹೊಸತೊಂದು ರೀತಿಯಲ್ಲಿ ನೋಡಬೇಕಾದ ಅಗತ್ಯವೇನು ಅನ್ನುವ ದಿಕ್ಕಿನತ್ತ ಚರ್ಚೆ ಹೊರಳಬೇಕಿದೆ.

ಮಕ್ಕಳ ಬೌದ್ಧಿಕ ವಿಕಾಸಕ್ಕೆ ತಾಯ್ನುಡಿಯೇ ಸರಿ

ಮಕ್ಕಳ ಬೌದ್ಧಿಕ ವಿಕಾಸಕ್ಕೆ ತಾಯ್ನುಡಿಯೇ ಸರಿ

ಮಕ್ಕಳ ಬೌದ್ಧಿಕ ವಿಕಾಸಕ್ಕೆ ತಾಯ್ನುಡಿಯಲ್ಲೇ ಕಲಿಕೆಯಾಗಬೇಕು ಅನ್ನುವುದನ್ನು ಜಗತ್ತಿನ ವಿಜ್ಞಾನಿಗಳು, ಮನಶಾಸ್ತ್ರಜ್ಞರು, ಕಲಿಕೆ ತಜ್ಞರು, ವಿಶ್ವಸಂಸ್ಥೆ ಸೇರಿದಂತೆ ಸಾವಿರಾರು ಜನರು ಪ್ರತಿಪಾದಿಸುತ್ತಾರೆ. ವಿಶ್ವಸಂಸ್ಥೆಯಂತೂ ಈ ಮಾತನ್ನು 2007ರಲ್ಲೂ ಮತ್ತೆ ಪ್ರತಿಪಾದಿಸಿದೆ. ಇದು ಸರಿಯಾದದ್ದು ಅನ್ನುವ ಬಗ್ಗೆಯಾಗಲಿ, ಅದರ ಬಗ್ಗೆ ಸರ್ಕಾರಕ್ಕೆ ಬದ್ಧತೆ ಇರಬೇಕು ಅನ್ನುವ ಬಗ್ಗೆಯಾಗಲಿ ಎರಡು ಮಾತಿಲ್ಲ.

ಆದರೆ ಕರ್ನಾಟಕದಲ್ಲಿ ಸರ್ಕಾರ ಕನ್ನಡ ಮಾಧ್ಯಮವನ್ನೇ ಕಡ್ಡಾಯ ಮಾಡುತ್ತೇನೆ ಅನ್ನುವ ನೀತಿಯನ್ನು ಪೋಷಕರ ಆಯ್ಕೆ ಸ್ವಾತಂತ್ರ್ಯದ ಮೇಲೆ ಮಾಡಲಾಗುತ್ತಿರುವ ಹೇರಿಕೆಯೆಂದೇ ನೋಡಲಾಗುತ್ತಿದೆ. ಹೇರಿಕೆ ಎಂದರೇನು? ಜನರಿಗೆ ಇಷ್ಟವಿರದ ವಿಷಯವೊಂದನ್ನು ಒತ್ತಾಯದಿಂದ ಅವರ ಮೇಲೆ ಹೇರುವುದಲ್ಲವೇ? ಕಲಿಕೆಯ ವಿಷಯದಲ್ಲಿ ಪೋಷಕರಿಗೆ ಇಷ್ಟವಿಲ್ಲದಿದ್ದಾಗಲೂ ಅವರ ಮೇಲೆ ಕನ್ನಡ ಮಾಧ್ಯಮ ಕಡ್ಡಾಯ ಮಾಡುವುದು ಹೇರಿಕೆಗೆ ಸಮ ಅನ್ನುವ ನಿಲುವು ನ್ಯಾಯಾಲಯ ತಳೆದರೆ ಅದನ್ನು ವಿರೋಧಿಸುವ ಕ್ರಮ ಸಂವಿಧಾನ ವಿರೋಧಿಯಾಗಿಯೂ ಕಾಣುತ್ತೆ. ಹಾಗಿದ್ದರೆ ಸರ್ಕಾರ ಯಾಕೆ ಇಂತಹದೊಂದು ನಿಲುವು ತಳೆಯುತ್ತಿದೆ ಅಂದರೆ ಹೀಗೆ ಕಡ್ಡಾಯ ಮಾಡುವುದು ಕನ್ನಡ ಪರ ಅನ್ನುವ ದಟ್ಟವಾದ ಅಭಿಪ್ರಾಯ ಕಳೆದ ಐದಾರು ದಶಕಗಳಿಂದ ಕರ್ನಾಟಕದಲ್ಲಿರುವುದು ಕಾರಣ.

ಇಂತಹ ಅಭಿಪ್ರಾಯವನ್ನು ಕನ್ನಡದ ಬೌದ್ಧಿಕ ವಲಯ ರೂಪಿಸಿದೆ ಮತ್ತು ಪ್ರತಿ ಸರ್ಕಾರವೂ ಕನ್ನಡ ಪರ ಎಂದು ಕಾಣಿಸಿಕೊಳ್ಳಲು ಇಂತಹ ನಿಲುವೇ ಸರಿ ಅನ್ನುವ ಅಭಿಪ್ರಾಯಕ್ಕೆ ಬಂದಿದೆ. ಆದರೆ ಇದೊಂದು ಅರೆ ಬರೆ ಪರಿಹಾರ ಅನ್ನುವುದು ಸರ್ಕಾರಕ್ಕೂ ಮನವರಿಕೆಯಾಗುತ್ತಿಲ್ಲ. ಅವರಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ, ಹೊಂದಿರುವ ಸಾಹಿತಿಗಳಿಗೂ ಮನವರಿಕೆಯಾಗುತ್ತಿಲ್ಲ.

ಅರೆ ಬರೆ ಪರಿಹಾರದಿಂದ ಎದುರಿಸಲಾಗದು

ಅರೆ ಬರೆ ಪರಿಹಾರದಿಂದ ಎದುರಿಸಲಾಗದು

ಒಂದು ಕಡೆ ಜಾಗತೀಕರಣದ ಅಲೆ ಬೀಸಿದೆ. ಅದರ ಜೊತೆಯಲ್ಲೇ ಇಂಗ್ಲಿಷೇ ಪರಿಹಾರ ಅನ್ನುವ ಸುನಾಮಿಯೂ ಎದ್ದಿದೆ. ಇಂತಹ ಸವಾಲಿಗೆ ತೆರೆದುಕೊಂಡ ಇಂಗ್ಲಿಷೇತರ ದೇಶಗಳೆಲ್ಲವೂ ಇದನ್ನು ಎದುರಿಸಿದ್ದು ಒಂದೇ ಹಾದಿಯಲ್ಲಿ. ಅದು ತಮ್ಮ ತಮ್ಮ ನುಡಿಗಳಲ್ಲಿ ಎಲ್ಲ ಹಂತದ ಸಮಗ್ರ ಕಲಿಕಾ ವ್ಯವಸ್ಥೆ ಕಟ್ಟಿಕೊಳ್ಳುವ ಮೂಲಕ, ಇಸ್ರೇಲ್, ಕೋರಿಯಾ, ಜಪಾನ್, ಫ್ರಾನ್ಸ್, ಜರ್ಮನಿ, ಫಿನ್ ಲ್ಯಾಂಡ್ ಹೀಗೆ ಜಗತ್ತಿನ ಹಲವಾರು ಇಂಗ್ಲಿಷೇತರ ದೇಶಗಳು ಜಾಗತೀಕರಣ ಎದುರಿಸಲು ಸಜ್ಜಾಗುವಂತೆ ತಮ್ಮ ನುಡಿಯನ್ನು ತಯಾರು ಮಾಡಿಕೊಂಡಿದ್ದಾರೆ.

ಕಲಿಕೆಯಾದರೂ ಅತ್ಯುತ್ತಮ ಗುಣಮಟ್ಟದಲ್ಲಿದೆಯೇ

ಕಲಿಕೆಯಾದರೂ ಅತ್ಯುತ್ತಮ ಗುಣಮಟ್ಟದಲ್ಲಿದೆಯೇ

ಆದರೆ ನಮ್ಮಲ್ಲಿ ಏನಾಗಿದೆ? ಹತ್ತನೇ ಕ್ಲಾಸಿನವರೆಗೆ ಕನ್ನಡ ಮಾಧ್ಯಮದ ಶಾಲೆಗಳನ್ನು ಸರ್ಕಾರ ತೆರೆಯಿತು ಆದರೆ ಬದುಕನ್ನು ಕಟ್ಟಿಕೊಳ್ಳುವ ವಿದ್ಯೆಗಳನ್ನು ರೂಪಿಸುವ ಹತ್ತನೇ ಕ್ಲಾಸಿನ ಆಚೆಗಿನ ಹಂತದಲ್ಲಿ ಕನ್ನಡವನ್ನು ನೆಲೆ ನಿಲ್ಲಿಸುವ ಕೆಲಸಕ್ಕೆ ಗಮನವನ್ನೇ ಕೊಡಲಿಲ್ಲ. ಕನ್ನಡದಲ್ಲಿ ಇಂಜಿನಿಯರಿಂಗ್, ಮೆಡಿಕಲ್, ಮ್ಯಾನೆಜಮೆಂಟ್ ತರದ ಯಾವ ವಿದ್ಯೆಗಳು ಹುಟ್ಟಲಿಲ್ಲ. ಹೋಗಲಿ, ಇರುವ ಹತ್ತನೇ ಕ್ಲಾಸಿನವರೆಗಿನ ಕಲಿಕೆಯಾದರೂ ಅತ್ಯುತ್ತಮ ಗುಣಮಟ್ಟದಲ್ಲಿದೆಯೇ ಎಂದು ನೋಡಿದರೆ ಅಲ್ಲೂ ನಿರಾಶೆ ತುಂಬಿದೆ. ಪ್ರತಿ ವರ್ಷದ ಅಸರ್ ವರದಿಯಲ್ಲೂ ಮೂರನೆ ಕ್ಲಾಸಿನ ಮಕ್ಕಳಲ್ಲಿ ಹೆಚ್ಚಿನವರಿಗೆ ಒಂದನೇ ಕ್ಲಾಸಿನ ಪಾಠ ಓದಲು ಬರಲ್ಲ ಅನ್ನುವಂತಹ ಸಮಸ್ಯೆಗಳು ವರದಿಯಾಗುತ್ತಿದೆ. ಇದು ಖಾಸಗಿ ಶಾಲೆಗಳಲ್ಲೂ ಭಿನ್ನವಾಗೇನು ಇಲ್ಲ ಆದರೆ ಖಾಸಗಿ ಶಾಲೆಗಳ ಪ್ರಚಾರದ ಅಬ್ಬರದ ಮುಂದೆ ಅದನ್ನು ಮಾಡದ ಸರ್ಕಾರಿ ಶಾಲೆಗಳು ಮಂಕಾಗಿವೆ.

ಕಲಿಕೆಯ ಗುಣಮಟ್ಟ ಸುಧಾರಿಸಲು ಸಾಧ್ಯವಿದೆ

ಕಲಿಕೆಯ ಗುಣಮಟ್ಟ ಸುಧಾರಿಸಲು ಸಾಧ್ಯವಿದೆ

ಕಲಿಕೆಯ ಗುಣಮಟ್ಟ ಸುಧಾರಿಸಲು, ಶಿಕ್ಷಕರ ತರಬೇತಿಯ ಗುಣಮಟ್ಟ ಮೇಲೆರಿಸಲು ಹೆಚ್ಚಿನ ಗಮನವೇ ಹರಿಯದೇ ಇದ್ದಾಗ, ಅಂತಹುದೇ ಸಮಸ್ಯೆ ಹೊಂದಿದ್ದರೂ ಚೆನ್ನಾಗಿ ಪ್ರಚಾರ ಮಾಡಿಕೊಳ್ಳುವ ಖಾಸಗಿ ಶಾಲೆಗಳತ್ತ ಪೋಷಕರು ಮಾರು ಹೋಗುವುದನ್ನು ತಪ್ಪಿಸಲು ಹೇಗಾದೀತು? ಇದೆಲ್ಲವೂ ಸರ್ಕಾರಕ್ಕೆ ದಿಕ್ಕು ತೋರಿಸುವ ನಮ್ಮ ಸಾಹಿತಿಗಳ ಗಮನಕ್ಕೆ ಯಾಕೆ ಬರುತ್ತಿಲ್ಲ? ಶಾಲೆಗಳಲ್ಲಿನ ಕಲಿಕೆಯ ಗುಣಮಟ್ಟದ ಸುಧಾರಣೆ ಬಗ್ಗೆ ಅವರೆಲ್ಲಿ ದನಿ ಎತ್ತಿದ್ದಾರೆ? ಕನ್ನಡದಲ್ಲಿ ಉನ್ನತ ಶಿಕ್ಷಣ ತರುವತ್ತ ಒಂದು ಕಾಲ ಬದ್ಧ ಯೋಜನೆ ರೂಪಿಸುವ ಒತ್ತಾಸೆ ಸರ್ಕಾರಕ್ಕೆ ತರಲು ಆಗಿದೆಯೇ? ಬಹು ನುಡಿಗಳ ಭಾರತದಲ್ಲಿ ತಾಯ್ನುಡಿಯಲ್ಲಿ ಉನ್ನತ ಶಿಕ್ಷಣ ರೂಪಿಸುವುದು ರಾಜಕೀಯವಾಗಿ, ಸಂವಿಧಾನಾತ್ಮಕವಾಗಿ ಸವಾಲಿನ ಕೆಲಸವಿರಬಹುದು,

ಆದರೆ ಅಸಾಧ್ಯವೇನಲ್ಲ. ಅಂತಹದೊಂದು ಪ್ರಯತ್ನ ಮಾಡಿ, ಅದನ್ನು ಚೆನ್ನಾಗಿ ಕಟ್ಟಿ ಜನರ ಮುಂದಿರಿಸಿದರೆ, ಅದನ್ನು ಬಳಸಿಕೊಂಡು ಮಕ್ಕಳು ಬೆರಗಾಗುವಂತಹ ಸಂಶೋಧನಗಳನ್ನ ಮಾಡಬಲ್ಲರು, ಬದುಕು ಕಟ್ಟಿಕೊಳ್ಳಬಲ್ಲರು ಅನ್ನುವ ಆತ್ಮ ವಿಶ್ವಾಸ ಕಟ್ಟಿಕೊಡುವ ಕೆಲಸವಾದರೆ ಪೋಷಕರೇಕೆ ಇಂಗ್ಲಿಷಿನ ಹಿಂದೆ ಓಡುತ್ತಾರೆ?

ಒಂದು ಹೊಸ ಕನಸು ಬೇಕು

ಒಂದು ಹೊಸ ಕನಸು ಬೇಕು

ಇವತ್ತು ಇಂಗ್ಲಿಷಿನ ಹಿಂದೆ ಓಡುವ ಪೋಷಕರ ಮಕ್ಕಳೆಲ್ಲ ಜೀವನದಲ್ಲಿ ಮೇಲೆ ಬಂದೇ ಬರುತ್ತಾರೆ ಅನ್ನುವ ಸ್ಥಿತಿಯೇನು ಇಲ್ಲ, ಆದರೆ ಕನ್ನಡದಲ್ಲಿ ಇದು ಸಾಧ್ಯವಾಗುತ್ತೆ ಅನ್ನುವ ನಂಬಿಕೆ ಬಿತ್ತುವ ಕೆಲಸ ಯಾರು ಮಾಡಬೇಕಿದೆ? ಅಂತಹ ನಂಬಿಕೆ ಹುಟ್ಟಲು ಕನ್ನಡದಲ್ಲಿ ಆಗಬೇಕಿರುವ ಕೆಲಸ ಏನು ಅನ್ನುವ ದೂರದರ್ಶಿತ್ವ ಸರ್ಕಾರಕ್ಕಿದೆಯೇ? ಜಾಗತೀಕರಣ ಎದುರಿಸಲು ನಮ್ಮ ನುಡಿ ಸಿದ್ಧವಾಗಬೇಕು. ಅದಕ್ಕೆ ಕನ್ನಡದ ನುಡಿಯರಿಮೆಯಲ್ಲಿ ಹತ್ತಾರು ಕೆಲಸವಾಗಬೇಕಿದೆ, ಕನ್ನಡದಲ್ಲಿ ಉನ್ನತ ಕಲಿಕೆ ತರುವತ್ತ ಇನ್ನು ಹತ್ತಾರು ಕೆಲಸವಾಗಬೇಕಿದೆ.

ಸರ್ಕಾರದ ಗಮನ ಆ ಕಡೆ ಹರಿಯಲಿ

ಸರ್ಕಾರದ ಗಮನ ಆ ಕಡೆ ಹರಿಯಲಿ

ಸರ್ಕಾರದ ಗಮನ ಆ ಕಡೆ ಹರಿಯಲಿ. ತನ್ನ ಕೈಯಲ್ಲಿರುವ, ತನ್ನ ಅನುದಾನದಲ್ಲಿ ನಡೆಯುತ್ತಿರುವ ಶಾಲೆಯಲ್ಲಿ ತಾನು ಭಾಷಾ ನೀತಿ ರೂಪಿಸುತ್ತೇನೆ, ಅಲ್ಲಿ ಕನ್ನಡದಲ್ಲೇ ಅತ್ಯುತ್ತಮ ಕಲಿಕೆ ಕೊಡುತ್ತೇನೆ ಅನ್ನುವ ಬದ್ಧತೆ ಸರ್ಕಾರ ತೋರಲಿ. ಅದು ಬಿಟ್ಟು, ಎಲ್ಲ ಶಾಲೆಗಳಲ್ಲೂ ಕನ್ನಡ ಮಾಧ್ಯಮ ಕಡ್ಡಾಯ ಮಾಡುತ್ತೇನೆ ಅಂತ ಹೊರಟರೆ ಈಗಿರುವ ವ್ಯವಸ್ಥೆಯಲ್ಲಿ ನ್ಯಾಯಾಲಯದಲ್ಲಿ ಅದಕ್ಕೆ ಗೆಲುವಾಗುವುದು ಕಷ್ಟದ ವಿಚಾರವೇ ಸರಿ. ಐಐಎಮ್, ಐಐಟಿ ತರದ ಜಗತ್ತೇ ಬೆರಗಾಗುವಂತಹ ಸರ್ಕಾರಿ ಕಲಿಕೆಯ ವ್ಯವಸ್ಥೆ ಕಟ್ಟಲಾಗುವಾಗ ಕನ್ನಡದಲ್ಲಿ ಇಂತಹ ಕಲಿಕೆಯ ವ್ಯವಸ್ಥೆಯನ್ನು ಯಾಕೆ ಕಟ್ಟಲಾಗಲ್ಲ? ತಾಯ್ನುಡಿಯಲ್ಲಿ ಒಳ್ಳೆಯ ಕಲಿಕೆ ಕಟ್ಟುವ ದೊಡ್ಡ ಕನಸು ಸರ್ಕಾರಕ್ಕಿರಲಿ, ಈ ಕನಸಿಗೆ ಕೈ ಜೋಡಿಸುವ ಖಾಸಗಿ ಸಂಸ್ಥಗಳಿಗೂ ಸರ್ಕಾರ ತನ್ನ ಬೆಂಬಲ ನೀಡಲಿ.

ಇಂತಹದೊಂದು ಯಶೋಗಾಥೆಯ ಮೂಲಕ ಮಾತ್ರವೇ ಯಾವುದೇ ಒತ್ತಾಯವಿಲ್ಲದೇ ಪೋಷಕರನ್ನು ಕನ್ನಡ ಮಾಧ್ಯಮದತ್ತ ಸೆಳೆಯಬಹುದು. ಕೋರ್ಟಿನ ನಿಲುವು ಏನೇ ಆಗಿರಲಿ, ಸರ್ಕಾರ ಇಂತಹದೊಂದು ವಿಶನ್ ಇಟ್ಟುಕೊಂಡು ಕೆಲಸಕ್ಕೆ ನಿಂತರೆ ಕನ್ನಡ ಮಾಧ್ಯಮದಲ್ಲೇ ಅತ್ಯುತ್ತಮ ವ್ಯವಸ್ಥೆ ಕಟ್ಟಿಕೊಳ್ಳುವ ಕೆಲಸವಾಗಬಹುದು ಮತ್ತು ಈ ವಿವಾದಕ್ಕೆ ಒಂದು ತಾರ್ಕಿಕ ಪರಿಹಾರ ಸಿಗಬಹುದು

English summary
Govt should support and encourage private players to invest in reforming Kannada medium education. If we don't get this right, we'll have a generation of future Kannadigas who will have no good read/write knowledge of Kannada. Suicidal! reports citizen journalist Vasanth Shetty
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X