ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕನ್ನಡ ವಿವಿ ಉಳಿಸಿ' ಕರವೇ ಅಭಿಯಾನಕ್ಕೆ ನಾಡಿನ ಮಠಾಧೀಶರ ಬೆಂಬಲ

|
Google Oneindia Kannada News

ಬೆಂಗಳೂರು, ಡಿಸೆಂಬರ್ 25: ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡುವುದೂ ಸೇರಿದಂತೆ, ವಿಶ್ವವಿದ್ಯಾಲಯ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ 'ಭಿತ್ತಿ ಪತ್ರ' ಚಳವಳಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ನಾಡಿನ ವಿವಿಧ ಭಾಗದ ಮಠಾಧೀಶರು ಪಾಲ್ಗೊಂಡು ಸರ್ಕಾರದ ಉಪೇಕ್ಷೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಜಗದ್ಗುರು ತೋಂಟಾದಾರ್ಯ ಸಂಸ್ಥಾನಮಠ, ಯಡಿಯೂರು ಡಂಬಳ ಗದಗದ ಪೀಠಾಧ್ಯಕ್ಷರಾದ ಶ್ರೀ ತೋಂಟದ ಸಿದ್ಧರಾಮ ಸ್ವಾಮೀಜಿ ತಮ್ಮ ಹೇಳಿಕೆಯಲ್ಲಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯ ವಿಶಿಷ್ಠವಾದದ್ದು. ಅದು ಸಂಶೋಧನೆಗಳಿಗೆಂದೇ ತೆರೆಯಲಾದ ಜ್ಞಾನದೇಗುಲ. ಡಾ.ಚಂದ್ರಶೇಖರ ಕಂಬಾರರಾದಿಯಾಗಿ ನಾಡಿನ ಹಲವಾರು ವಿದ್ವಜ್ಜನರು ಈ ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸಿದ್ದಾರೆ.

'ಕರವೇ'ಯಿಂದ ಕನ್ನಡ ವಿವಿ ಉಳಿಸಿ ಅಭಿಯಾನ: ತಾತ್ಸಾರ ಧೋರಣೆ ಬಿಡುವಂತೆ ಸರ್ಕಾರಕ್ಕೆ ಒತ್ತಾಯ'ಕರವೇ'ಯಿಂದ ಕನ್ನಡ ವಿವಿ ಉಳಿಸಿ ಅಭಿಯಾನ: ತಾತ್ಸಾರ ಧೋರಣೆ ಬಿಡುವಂತೆ ಸರ್ಕಾರಕ್ಕೆ ಒತ್ತಾಯ

ಆದರೆ ಈ ವಿಶ್ವವಿದ್ಯಾಲಯಕ್ಕೆ ಈಗ ಅನುದಾನದ ಕೊರತೆ ಎದುರಾಗಿರುವ ವಿಷಾದನೀಯ. ಬೇರೆ ಬೇರೆ ಉದ್ದೇಶಗಳಿಗೆ ಸರ್ಕಾರದ ಬಳಿ ಹಣವಿದೆ, ಆದರೆ ಕನ್ನಡ ವಿಶ್ವವಿದ್ಯಾಲಯಕ್ಕೆ ಇಲ್ಲ ಎಂದರೆ ಇದು ಗಂಭೀರವಾದ ವಿಷಯ. ಕನ್ನಡ ಭಾಷೆ, ಸಂಸ್ಕೃತಿ ಅಧ್ಯಯನ ನಿರಂತರವಾಗಿ ನಡೆಯಬೇಕು, ಇದಕ್ಕಾಗಿ ಕನ್ನಡಕ್ಕೆಂದೇ ಇರುವ ಏಕೈಕ ವಿಶ್ವವಿದ್ಯಾಲಯಕ್ಕೆ ಅನುದಾನ ಕೊಟ್ಟು ಬೆಳೆಸಬೇಕಿರುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ತಿಳಿಸಿದ್ದಾರೆ.

ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು

ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು

ಚಿಂಚಣಿ ಸಿದ್ಧಸಂಸ್ಥಾನಮಠದ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು, ಕನ್ನಡಕ್ಕೊಂದು ಶುಭೋದಯವನ್ನು ತಂದುಕೊಟ್ಟ ವಿಜಯನಗರ ಸಾಮ್ರಾಜ್ಯದ ಹಂಪಿ ಪರಿಸರದಲ್ಲಿ ಕನ್ನಡ ವಿವಿ ಪ್ರಾರಂಭವಾಗಿದ್ದು, ಇದು ಕನ್ನಡದ ಅಸ್ಮಿತೆಯ ಪ್ರತೀಕವಾಗಿದೆ. ಇದೀಗ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ಅನುದಾನ ಸ್ಥಗಿತಗೊಳಿಸಿರುವುದು ತಪ್ಪು. ನಮ್ಮ ತಾಯಿ ಕನ್ನಡಮ್ಮ ನೊಂದುಕೊಂಡಿದ್ದಾಳೆ. #ಕನ್ನಡವಿವಿಉಳಿಸಿ ಹೋರಾಟ ಉಗ್ರರೂಪ ಪಡೆದುಕೊಳ್ಳುವುದಕ್ಕೆ ಮುನ್ನ ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ನಾವೆಲ್ಲರೂ ಕಂಕಣಬದ್ಧರಾಗಿರೋಣ

ನಾವೆಲ್ಲರೂ ಕಂಕಣಬದ್ಧರಾಗಿರೋಣ

ನಾಡು, ನುಡಿ, ಸಂಸ್ಕೃತಿ ಸಂರಕ್ಷಣೆಗಾಗಿ ಇರುವಂಥ ಸ್ವಾಯತ್ತ ಸಂಸ್ಥೆಗಳನ್ನು ಮುನ್ನಡೆಸುವ ಜವಾಬ್ದಾರಿ ಚುನಾಯಿತ ಸರ್ಕಾರದ್ದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ, ಸ್ಥಾನಮಾನ, ಗೌರವವನ್ನು ನೀಡಬೇಕಿದೆ ಎಂದು ಒತ್ತಾಯಿಸಿರುವ ಅಥಣಿಯ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಮಹಾಸ್ವಾಮಿಗಳು, ಕನ್ನಡ ವಿಶ್ವವಿದ್ಯಾಲಯದ ಶ್ರೇಯೋಭಿವೃದ್ಧಿ ಕನ್ನಡಿಗರ ಯಶೋಭಿವೃದ್ಧಿ. ಈ ಕಾರಣಕ್ಕಾಗಿ ನಾವೆಲ್ಲರೂ ಕಂಕಣಬದ್ಧರಾಗಿರೋಣ. ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿರುವ ಕನ್ನಡ ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳೋಣ ಎಂದು ಕರೆ ನೀಡಿದ್ದಾರೆ.

ಬೇಡವಾದ ಕಾರ್ಯಗಳಿಗೆ ಹಣ ವ್ಯರ್ಥ

ಬೇಡವಾದ ಕಾರ್ಯಗಳಿಗೆ ಹಣ ವ್ಯರ್ಥ

ಇಡೀ ಜಗತ್ತಿನಲ್ಲಿ ಕನ್ನಡಕ್ಕೆಂದೇ ಇರುವುದು ಒಂದೇ ವಿಶ್ವವಿದ್ಯಾಲಯ. ಕರ್ನಾಟಕ ರಕ್ಷಣಾ ವೇದಿಕೆ ಹಂಪಿ ವಿವಿಯನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ. ಕನ್ನಡದ ನೆಲದಲ್ಲಿ ಕನ್ನಡದ ವಿಶ್ವವಿದ್ಯಾಲಯಕ್ಕೆ ಅನುದಾನ ಕೊಡಿ ಎಂದು ಹೋರಾಟ ಮಾಡುವಂಥ ಪರಿಸ್ಥಿತಿ ಉದ್ಭವವಾಗಿರುವುದೇ ಅವಮಾನದ ಸಂಗತಿ ಎಂದು ಆಕ್ರೋಶ ತೋರಿರುವ ಕೂಡಲಸಂಗಮದ ಪಂಚಮಸಾಲಿ ಲಿಂಗಾಯಿತ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಸರ್ಕಾರ ಆಡಳಿತ ವ್ಯವಸ್ಥೆ ಚುರುಕುಗೊಳಿಸಬೇಕು, ಬೇಡವಾದ ಕಾರ್ಯಗಳಿಗೆ ವ್ಯರ್ಥವಾಗಿ ಹಣ ನೀಡುವ ಸರ್ಕಾರ ನಮ್ಮ ಹೆಮ್ಮೆಯಾಗಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸಂಸ್ಕೃತಿಯನ್ನು ಎತ್ತಿಹಿಡಿಯುವ ವಿಶ್ವವಿದ್ಯಾಲಯ

ಸಂಸ್ಕೃತಿಯನ್ನು ಎತ್ತಿಹಿಡಿಯುವ ವಿಶ್ವವಿದ್ಯಾಲಯ

ಬೆಳಗಾವಿಯ ಹುಕ್ಕೇರಿ ಹಿರೇಮಠದ ಶ್ರೀ ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಹೇಳಿಕೆಯಲ್ಲಿ, ಹಂಪಿ ಕನ್ನಡ ವಿಶ್ವವಿದ್ಯಾಲಯ ಉಳಿಯಬೇಕು ಬೆಳೆಯಬೇಕು ಎಂದರೆ ಸರ್ಕಾರ ಸಹಾಯಹಸ್ತವನ್ನು ಚಾಚಬೇಕು. ನಮ್ಮ ನುಡಿ ಕನ್ನಡ, ನಮ್ಮ ನಡೆ ಕರ್ನಾಟಕದ ಅಭಿವೃದ್ಧಿಗೆ ಎಂದು ಹೇಳುತ್ತ ಕುಳಿತರೆ ಸಾಲದು. ಕನ್ನಡಿಗರಿಗಾಗಿ ಉಳಿದಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ಕರ್ನಾಟಕದ ಸಂಸ್ಕೃತಿಯನ್ನು ಎತ್ತಿಹಿಡಿಯುವ ವಿಶ್ವವಿದ್ಯಾಲಯವಾಗಿದೆ.

ಕನ್ನಡದ ಉಳಿವಿಗಾಗಿ ಅನುದಾನ ನೀಡಿ

ಕನ್ನಡದ ಉಳಿವಿಗಾಗಿ ಅನುದಾನ ನೀಡಿ

ಸರ್ಕಾರ ಈ ವಿಚಾರದಲ್ಲಿ ಹಿಂದೇಟು ಹಾಕಲೇಬಾರದು. ನಿಮ್ಮಿಂದ ಕನ್ನಡಿಗರಿಗೆ ನ್ಯಾಯ ಸಿಗಬೇಕು ಎಂದರೆ ನೀವು ಈಗ ಮಾಡಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರಲ್ಲದೆ, ಹೆಚ್ಚು ಅನುದಾನವನ್ನು ಕನ್ನಡದ ಉಳಿವಿಗಾಗಿಯೇ ನೀಡಬೇಕು ಎಂಬುದು ನಮ್ಮ ಸದಾಶಯ. ಬಹುಶಃ ಕನ್ನಡದ ವಿಚಾರ ಬಂದಾಗ, ಅನ್ಯಾಯವಾದಾಗ ನಾನು ಕೆರಳುತ್ತೇನೆ, ಸರಿಯಾದಾಗ ನನ್ನ ಮನಸು ಅರಳುತ್ತದೆ. ಸರ್ಕಾರ ಇದರ ಬಗ್ಗೆ ಆಲೋಚನೆ ಮಾಡುತ್ತಲೇ ಕುಳಿತುಕೊಳ್ಳಲೇಬಾರದು. ಬೇಗ ಎಚ್ಚೆತ್ತು ವಿಶ್ವವಿದ್ಯಾಲಯಕ್ಕೆ ಹೆಚ್ಚು ಅನುದಾನವನ್ನು ನೀಡಿ ಎಂಬುದು ನಮ್ಮ ಒತ್ತಾಸೆ ಎಂದು ತಿಳಿಸಿದ್ದಾರೆ.

ಗೋಕಾಕ್ ಚಳವಳಿ ಮಾದರಿ ಹೋರಾಟದ ಅಗತ್ಯವಿದೆ

ಗೋಕಾಕ್ ಚಳವಳಿ ಮಾದರಿ ಹೋರಾಟದ ಅಗತ್ಯವಿದೆ

#ಕನ್ನಡವಿವಿಉಳಿಸಿ ಚಳವಳಿಯನ್ನು ಬೆಂಬಲಿಸಿ, ಭಿತ್ತಿಪತ್ರ ಚಳವಳಿಯಲ್ಲಿ ಪಾಲ್ಗೊಂಡ ಮಾಜಿ ಶಾಸಕ ವೈ.ಎಸ್.ವಿ.ದತ್ತ, ಕನ್ನಡ ವಿಶ್ವವಿದ್ಯಾಲಯ ಕನ್ನಡದ ಸಂಸ್ಕೃತಿ, ಇತಿಹಾಸ, ಪರಂಪರೆ, ಸಾಹಿತ್ಯ ಇವುಗಳನ್ನು ಉಳಿಸಿ ಬೆಳೆಸುವ ಪ್ರಾತಿನಿಧಿಕ ಸಂಸ್ಥೆ. ನಮ್ಮ ಅಸ್ಮಿತೆಯ ಪ್ರತೀಕ. ಇಂತಹ ಸಂಸ್ಥೆಗೆ ಸರ್ಕಾರ ಅನುದಾನ ನೀಡುವುದಕ್ಕೆ ಹಿಂದೆಮುಂದೆ ನೋಡುವುದೆಂದರೆ ಅಂತಹ ಸರ್ಕಾರ ಕನ್ನಡ ವಿರೋಧಿ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡುವುದಕ್ಕೆ ಅಡ್ಡಿಯಿಲ್ಲ, ಆದೇ ಕನ್ನಡಕ್ಕೆ ಮಾತ್ರ ಅಡ್ಡಿ. ಇದು ಅರ್ಥವಾಗುತ್ತಿಲ್ಲ. ೮೦ರ ದಶಕದ ಗೋಕಾಕ್ ಮಾದರಿ ಚಳವಳಿಗೆ ನಾವು ಮುಂದಾಗಲೇಬೇಕಾಗಿದೆ. ಕರವೇ ತೆಗೆದುಕೊಂಡಿರುವ, ನೀವು ಮತ್ತು ನಾವು ಮಾಡುತ್ತಿರುವ ಅಭಿಯಾನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಅವರು ತಿಳಿಸಿದ್ದಾರೆ.

ಕನ್ನಡಕ್ಕೆ ಎಸಗುವ ಬಹುದೊಡ್ಡ ದ್ರೋಹ

ಕನ್ನಡಕ್ಕೆ ಎಸಗುವ ಬಹುದೊಡ್ಡ ದ್ರೋಹ

ಹೆಸರಾಂತ ಚಲನಚಿತ್ರ ನಿರ್ದೇಶಕ ಜಯತೀರ್ಥ ಭಿತ್ತಿಪತ್ರ ಚಳವಳಿಯಲ್ಲಿ ಪಾಲ್ಗೊಂಡು, ಕನ್ನಡ ಸಂಸ್ಕೃತಿ, ಭಾಷೆ, ಸೊಗಡು, ಬದುಕು, ಸಾಹಿತ್ಯ ಇತ್ಯಾದಿಗಳ ಬಗ್ಗೆ ಅಧ್ಯಯನ ಮಾಡಲಿಕ್ಕೆ ಅಂತಾನೇ ಇರುವಂತಹ ಹಂಪಿ ವಿಶ್ವವಿದ್ಯಾನಿಲಯ ಕಾಪಾಡಿಕೊಳ್ಳಬೇಕಾದ್ದು ಕನ್ನಡಿಗರ ಮತ್ತು ಕರ್ನಾಟಕ ಸರ್ಕಾರದ ಜವಾಬ್ದಾರಿ. ಇಂತಹ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ತಡೆ ಹಿಡಿದು ಅದನ್ನು ಪೋಷಿಸದೆ ಕ್ರಮೇಣ ನಶಿಸಲು ಸರಕಾರಗಳು ಕಾರಣವಾಗಿವೆ. ಕನ್ನಡದ ಬೇರಿನ ವಿಷಯವನ್ನು ಮುಂದಿನ ಪೀಳಿಗೆಗೆ ದಾಟಿಸಲಿಲ್ಲ ಅಂತಂದರೆ ಅದು ಕನ್ನಡಕ್ಕೆ ಎಸಗುವ ಬಹುದೊಡ್ಡ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡದ ನರನಾಡಿಗಳಿಗೇ ಬೆಂಬಲ ಎಂದರ್ಥ

ಕನ್ನಡದ ನರನಾಡಿಗಳಿಗೇ ಬೆಂಬಲ ಎಂದರ್ಥ

ಹಿರಿಯ ಪತ್ರಕರ್ತ, ಚಲನಚಿತ್ರ ನಿರ್ದೇಶಕ ಎನ್.ಎಸ್.ಶಂಕರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಹಂಪಿ ಕನ್ನಡ ವಿವಿ ವಿಶ್ವವಿದ್ಯಾಲಯ ಸ್ಥಾಪನೆಯಾದಾಗ ಇದು ಕನ್ನಡದಲ್ಲಿ ಕೇವಲ ಜ್ಞಾನ ಪ್ರಸಾರವಲ್ಲ, ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಜ್ಞಾನಸೃಷ್ಟಿ ಮಾಡುವ ಉನ್ನತ ಗುರಿಯೊಂದಿಗೆ ಕೆಲಸ ಆರಂಭಿಸಿತ್ತು. ಕನ್ನಡ ವಿವಿಗೆ ಬೆಂಬಲವೆಂದರೆ ಕನ್ನಡದ ನರನಾಡಿಗಳಿಗೇ ಬೆಂಬಲ ಎಂದರ್ಥ. ಸರ್ಕಾರ ಯಾವ ಸಬೂಬನ್ನೂ ನೀಡದೆ ವಿವಿಗೆ ಬೇಕಾದ ಅನುದಾನ ನೀಡುವ ಮೂಲಕ ಇಲ್ಲಿರುವುದು ಕನ್ನಡಿಗರ ಸರ್ಕಾರ ಎಂದು ಸಾಧಿಸಿ ತೋರಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ ಈ ನಾಡಿನ ಹೆಮ್ಮೆ

ಹಂಪಿ ಕನ್ನಡ ವಿಶ್ವವಿದ್ಯಾಲಯ ಈ ನಾಡಿನ ಹೆಮ್ಮೆ

ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಆರ್.ಭಾಸ್ಕರ್ ಪ್ರಸಾದ್, ಮರಾಠ ಅಭಿವೃದ್ಧಿ ನಿಗಮಕ್ಕೆ ಹಣ ಇದೆ. ಕನ್ನಡ ವಿವಿಗೆ ಇಲ್ಲ. ತೆಲುಗು, ತಮಿಳು ಅಭಿವೃದ್ಧಿ ನಿಗಮವನ್ನೂ ಮಾಡ್ತೀವಿ ಎನ್ನುವ ಸರ್ಕಾರದ ಬಳಿ ಕನ್ನಡ ವಿವಿಗೆ ನೀಡಲು ಹಣ ಇಲ್ಲ. ಇದು ಇವತ್ತಿನ ಸರ್ಕಾರದ ಮನಸ್ಥಿತಿ ಮತ್ತು ಕನ್ನಡ ನಾಡಿನ ಪರಿಸ್ಥಿತಿ. ಹಂಪಿ ಕನ್ನಡ ವಿಶ್ವವಿದ್ಯಾಲಯ ಈ ನಾಡಿನ ಹೆಮ್ಮೆ. ಆದಿವಾಸಿ, ಅಲೆಮಾರಿ, ಬುಡಕಟ್ಟು ಸಮುದಾಯಗಳ ಆಪ್ತ ಬಂಧು. ಜನ ಬೀದಿಗಿಳಿದು ಧ್ವನಿ ಎತ್ತುವ ಮೊದಲು ಸರ್ಕಾರ ಹಂಪಿ ವಿವಿಗೆ ನೀಡಬೇಕಾದ ಅನುದಾನವನ್ನು ಈ ಕೂಡಲೇ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳ ಧ್ವನಿಗೆ ಮತ್ತಷ್ಟು ಶಕ್ತಿ ತುಂಬಬೇಕು

ವಿದ್ಯಾರ್ಥಿಗಳ ಧ್ವನಿಗೆ ಮತ್ತಷ್ಟು ಶಕ್ತಿ ತುಂಬಬೇಕು

ಶಾಲೆ ಕಾಲೇಜು ವಿಶ್ವವಿದ್ಯಾಲಯಗಳು ಜ್ಞಾನದ ಉತ್ಪಾದನೆ ಮತ್ತು ಹಂಚಿಕೆಯ ಕೇಂದ್ರಗಳು. ಇವು ನುಡಿಯ ಗುಡಿಗಳೂ ಹೌದು. ವಿವಿಗಳಲ್ಲಿ ವ್ಯಾಸಂಗ ಮತ್ತು ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ಫೆಲೋಶಿಪ್ - ಸ್ಕಾಲರ್ ಶಿಪ್‌ಗಳ ಅನುದಾನ ಹಿಂಪಡೆದು ಕನ್ನಡ ವಿದ್ಯಾರ್ಥಿಗಳ ಶಿಕ್ಷಣದ ಬೇರು ತಪ್ಪಿಸಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಡಾ.ವಡ್ಡಗೆರೆ ನಾಗರಾಜಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಗ್ರಾಮೀಣ ಬಡ ಕುಟುಂಬಗಳ ಕನ್ನಡ ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳು ಕಳೆದ ಎರಡು ವಾರಗಳಿಂದ ಸರ್ಕಾರವು ತಮಗೆ ಫೆಲೋಶಿಪ್ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತ, ತಮ್ಮ ನೋವಿನ ಪಾಡನ್ನು ಹಂಚಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಧ್ವನಿಗೆ ಮತ್ತಷ್ಟು ಶಕ್ತಿ ತುಂಬಬೇಕಿರುವುದು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಹೋರಾಟಕ್ಕೆ ನಮ್ಮ ಸಂಘಟನೆ ಸಜ್ಜು

ಮುಂದಿನ ಹೋರಾಟಕ್ಕೆ ನಮ್ಮ ಸಂಘಟನೆ ಸಜ್ಜು

ಕನ್ನಡ ವಿವಿ ಉಳಿಸಿ ಕರವೇ ಅಭಿಯಾನವನ್ನು ಅಲೆಮಾರಿ ಬುಡಕಟ್ಟು ಮಹಾಸಭಾದ ಬೆಂಬಲಿಸಿದ್ದು, ಮಹಾಸಭಾದ ಕಾರ್ಯಾಧ್ಯಕ್ಷ ವೆಂಕಟರಮಣಯ್ಯ, ಸರ್ಕಾರವು ಈ ಕೂಡಲೇ ನಮ್ಮ ಕನ್ನಡದ ಏಕೈಕ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಕೂಡಲೇ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಸಾವಿರಾರು ವರುಷಗಳ ಇತಿಹಾಸವುಳ್ಳ ನಮ್ಮ ಕನ್ನಡ ಭಾಷೆಗೆ ಅದರದೇ ಆದ ಪಾರಂಪರಿಕ ಚಾರಿತ್ರ್ಯವಿದ್ದು ಅದನ್ನು ಪ್ರಪಂಚದ ಎಲ್ಲೆಡೆಗೆ ಪಸರಿಸಲು ನಮ್ಮ ಕನ್ನಡ ವಿಶ್ವವಿದ್ಯಾಲಯವನ್ನು ಉಳಿಸಿಕೊಡಲು ಮತ್ತು ಅನುದಾನವನ್ನು ಬಿಡುಗಡೆ ಮಾಡಲು ಈ ಕೂಡಲೇ ನಮ್ಮ ಸಂಘಟನೆಯು ಸರ್ಕಾರವನ್ನು ಒತ್ತಾಯಿಸುತ್ತದೆ. ತಪ್ಪಿದಲ್ಲಿ ಮುಂದಿನ ಹೋರಾಟಕ್ಕೆ ನಮ್ಮ ಸಂಘಟನೆಯು ಕರವೇ ಸಂಘಟನೆಯ ಜತೆಯಲ್ಲಿ ಸದಾ ನಿಲ್ಲುತ್ತದೆ ಎಂದು ಅವರು ತಿಳಿಸಿದ್ದಾರೆ.

Recommended Video

ಅನಾರೋಗ್ಯದಿಂದ ರಜನಿ ಆಸ್ಪತ್ರೆಗೆ ದಾಖಲು!! | Oneindia Kannada
ವಿಶ್ವವಿದ್ಯಾಲಯ ಕನ್ನಡಿಗರ ಅಸ್ಮಿತೆ

ವಿಶ್ವವಿದ್ಯಾಲಯ ಕನ್ನಡಿಗರ ಅಸ್ಮಿತೆ

ಸಾಮಾಜಿಕ ಕಾರ್ಯಕರ್ತ ಕೊಟ್ರೇಶ್ ಕೊಟ್ಟೂರು ತಮ್ಮ ಹೇಳಿಕೆಯಲ್ಲಿ, ಕನ್ನಡ ವಿಶ್ವವಿದ್ಯಾಲಯ ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾದದ್ದು. ಇಲ್ಲಿ "ವಿದ್ಯೆಯನ್ನು ಬೋಧಿಸುವುದಲ್ಲ, ವಿದ್ಯೆಯನ್ನು ಸೃಷ್ಟಿಸುವುದು" ಎನ್ನುವ ಧ್ಯೇಯವಾಕ್ಯದೊಂದಿಗೆ ಸಂಶೋಧನೆಯನ್ನೇ ಮೂಲ ಪಠ್ಯವನ್ನಾಗಿಸಿಕೊಂಡು ಸಂಶೋಧನಾ ಕ್ಷೇತ್ರದಲ್ಲಿ ತನ್ನದೇಯಾದ ಛಾಪನ್ನು ಒತ್ತಿದೆ. ಕನ್ನಡದ ಮಹತ್ತರ ಸಂಶೋಧನಾ ಕೃತಿಗಳ ಕೊಡುಗೆಯ ಕೀರ್ತಿ ಸಲ್ಲಬೇಕಾದರೆ ಅದು ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಲೇಬೇಕು. ಕನ್ನಡ ಭಾಷೆಯನ್ನೇ ಆಡಳಿತ ಭಾಷೆಯನ್ನಾಗಿಸಿಕೊಂಡಿರುವ ಸರ್ಕಾರ, ಕನ್ನಡ ವಿಶ್ವವಿದ್ಯಾಲಯದಕ್ಕೆ ಯಾವುದೇ ಕಾರಣವನ್ನೂ ಹೇಳದೇ, ಪೂರಕವಾದ ಅನುದಾನ ನೀಡಿ, ಸಹಕರಿಸಲೇಬೇಕು. ಕನ್ನಡ ವಿಶ್ವವಿದ್ಯಾಲಯ ಬರೀ ವಿಶ್ವವಿದ್ಯಾಲಯವಲ್ಲ, ಅದು ಕನ್ನಡಿಗರ ಅಸ್ಮಿತೆ ಮತ್ತು ವರ್ತಮಾನ ಎನ್ನುವುದನ್ನು ಕನ್ನಡಿಗರಾರೂ ಮರೆಯಬಾರದು ಎಂದು ತಿಳಿಸಿದ್ದಾರೆ.

English summary
The Karnataka Rakshana Vedike has been campaign to address a number of issues facing the university, including grants to Hampi Kannada University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X