ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪವಾಡದ ಅನುಭೂತಿ : ಸಾಯಿಬಾಬಾ ಪಾದದ ಬಳಿ ವಿಭೂತಿ!

By Prasad
|
Google Oneindia Kannada News

Superstition or miracle : Vibhuti at Saibaba feet in Koppal
ಕೊಪ್ಪಳ, ನ. 9 : ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ರಾಜ್ಯ ಸರಕಾರ ನಿರ್ಧರಿಸಿ, ವಿರೋಧಪಕ್ಷಗಳು ಹುಯಿಲೆಬ್ಬಿಸಿ, ಸಿದ್ದರಾಮಯ್ಯ ಸದ್ಯಕ್ಕೆ ಮಂಡನೆಯಿಂದ ಹಿಂದೆ ಸರಿದ ಸಂದರ್ಭದಲ್ಲಿಯೇ ಮೂಢನಂಬಿಕೆಗೆ ಪುಷ್ಟಿ ನೀಡುವಂಥ ಘಟನೆಯೊಂದು ಕೊಪ್ಪಳದಲ್ಲಿ ಜರುಗಿದೆ.

ಕೊಪ್ಪಳದ ಅಮೀನಾಪುರ ಗ್ರಾಮದಲ್ಲಿ ಶರಣಪ್ಪ ಎಂಬುವವರ ಮನೆಯಲ್ಲಿ ಪುಟಾಣಿ ಶಿರಡಿ ಸಾಯಿಬಾಬಾ ಅವರ ಪಾದದಿಂದ ವಿಭೂತಿ ಉದುರುತ್ತಿದೆ ಎಂಬ ಸುದ್ದಿ ಹಬ್ಬಿದ್ದು, ಸಾಯಿಬಾಬಾ ಭಕ್ತರು ಮುಗಿಬಿದ್ದು ವಿಸ್ಮಯದ ವೀಕ್ಷಣೆಗೆ ಸಾಲುಗಟ್ಟಿ ನಿಂತಿದ್ದಾರೆ. ಸಾಯಿಬಾಬಾ ಪಾದದ ಬಳಿ ಬಿದ್ದಿದ್ದ ವಿಭೂತಿಯನ್ನು ಭಕ್ತಿಯಿಂದ ಹಣೆಗೆ ಹಚ್ಚಿಕೊಳ್ಳುತ್ತಿದ್ದಾರೆ.

ಪುಟ್ಟಪರ್ತಿ ಸಾಯಿಬಾಬಾ ಅವರ ಪರಮ ಭಕ್ತರಾಗಿರುವ ಶರಣಪ್ಪ ಅವರ ಮಗ ವೀರೇಶ್ ಎಂಬುವವರು ಕೆಲ ವಾರಗಳ ಹಿಂದೆ ಪುಟ್ಟಪರ್ತಿಯಿಂದ ಶಿರಡಿ ಸಾಯಿಬಾಬಾ ಅವರ ಮೂರ್ತಿಯನ್ನು ಮನೆಗೆ ತಂದು ಪೂಜಿಸುತ್ತಿದ್ದರು. ಭಕ್ತಿಯಿಂದ ಪೂಜಿಸುತ್ತಿದ್ದ ಅವರಿಗೆ ಕೆಲ ದಿನಗಳಲ್ಲಿ ಅಚ್ಚರಿಯೊಂದು ಕಾದಿತ್ತು.

ಸಾಯಿಬಾಬಾ ಪಾದದಿಂದ ವಿಭೂತಿ ಉದುರಲು ಆರಂಭಿಸಿತಂತೆ. ಏನೋ ಪುಡಿ ಬಿದ್ದಿರಬಹುದು ಎಂದುಕೊಂಡರೆ ಮರುದಿನ ಮತ್ತೆ ಅಚ್ಚರಿ ಕಾದಿತ್ತು. ಅಲ್ಲಿ ಇನ್ನಷ್ಟು ವಿಭೂತಿ ಉದುರಿತ್ತು. ಆಗ ವೀರೇಶ್ ಆನಂದಕ್ಕೆ ಪಾರವೇ ಇರಲಿಲ್ಲ. ಸಾಕಷ್ಟು ಉದುರಿದ್ದ ವಿಭೂತಿಯನ್ನು ಡಬ್ಬಿಯಲ್ಲಿ ಕೂಡಿಟ್ಟರೂ ಮತ್ತೆ ಮತ್ತೆ ಉದುರುತ್ತಲೇ ಇದೆಯಂತೆ.

ಇಂಥ ಸುದ್ದಿ ಕಿವಿಗೆ ಬಿದ್ದ ಮೇಲೆ ಜನ ಕೇಳಬೇಕೆ? ಊರಿನ, ಸುತ್ತಲಿನ, ದೂರದೂರಿನ ಮಂದಿ ಬರುತ್ತಲೇ ಇದ್ದಾರೆ. ಆದರೆ, ಮಾಧ್ಯಮದವರು ಆ ಸ್ಥಳಕ್ಕೆ ತೆರಳಿದಾಗ ಸಾಯಿಬಾಬಾನ ವಿಗ್ರಹದ ಮೇಲೆ ಹಾಕಿದ ಹೂವನ್ನು ತೆಗೆದು ಪರೀಕ್ಷಿಸಲು ಮನೆಮಂದಿ ಒಪ್ಪಿಲ್ಲ. ಹಾಗೆಲ್ಲ, ದೇವರ ಪವಾಡವನ್ನು ಪರೀಕ್ಷಿಸಬಾರದು ಎಂದು ವಾದವನ್ನು ಮಂಡಿಸುತ್ತಾರೆ.

ಅಕ್ಟೋಬರ್ 15 ಬಾಬಾ ಪುಣ್ಯತಿಥಿ : ಅಂದ ಹಾಗೆ, 20ನೇ ಶತಮಾನದಲ್ಲಿ ಮಹಾರಾಷ್ಟ್ರದ ಶಿರಡಿಯಲ್ಲಿ ಬದುಕಿ, ಬಡಜನರ ಬಾಳಿನ ಬೆಳಕಾಗಿದ್ದ ಸಂತ ಸಾಯಿಬಾಬಾ ಅವರ ಪುಣ್ಯತಿಥಿ ಅಕ್ಟೋಬರ್ 15. ಸಾಯಿಬಾಬಾ ಅವರ ಹುಟ್ಟಿನ ದಿನಾಂಕ ಸಿಕ್ಕಿಲ್ಲವಾದರೂ ಅವರು ಬದುಕಿಗೆ ವಿದಾಯ ಹೇಳಿದ್ದು 1918ರ ಅಕ್ಟೋಬರ್ 15ರಂದು. ಅವರ ಪುಣ್ಯತಿಥಿ ಹತ್ತಿರ ಬರುತ್ತಿದ್ದಂತೆಯೆ ಪವಾಡ ಹುಟ್ಟುಪಡೆದಿದೆ.

ಕೆಲ ವರ್ಷಗಳ ಹಿಂದೆ ಇಂಥದೇ ಒಂದು ವಿಸ್ಮಯ ಬೆಂಗಳೂರಿನ ಗುಟ್ಟಹಳ್ಳಿಯಲ್ಲಿ ನಡೆದಿತ್ತು. ಯಾವತ್ತೂ ತೆರೆದೇ ಇದ್ದ ಶಿರಡಿ ಸಾಯಿಬಾಬಾ ಕಣ್ಣು ಅಂದೊಂದಿನ ಮುಚ್ಚಿತ್ತು. ಹೀಗೆಯೇ ಬಾಬಾ ಭಕ್ತಾದಿಗಳು ಎದ್ದುಬಿದ್ದು ಈ ದೃಶ್ಯವನ್ನು ಕಂಡು ಪರವಶರಾಗಿದ್ದರು. ನಂತರ ತಿಳಿದುಬಂದಿದ್ದೇನೆಂದರೆ, ಬಾಬಾ ಮೂರ್ತಿ ಇದ್ದ ಮನೆ ವಿವಾದದಲ್ಲಿ ಸಿಲುಕಿತ್ತು. ಕೋರ್ಟಿನ ಮೆಟ್ಟಿಲೇರಿತ್ತು. ಆ ಪ್ರಕರಣದ ದಿಕ್ಕುತಪ್ಪಿಸುವ ಉದ್ದೇಶದಿಂದ ಪವಾಡ ಸೃಷ್ಟಿಸಲಾಗಿತ್ತು.

ಯಾವ ರೀತಿ ಇಂಥ ನಂಬಿಕೆಗಳಿಗೆ ಅಥವಾ ಮೂಢನಂಬಿಕೆಗಳಿಗೆ ಸರಕಾರ ನಿಷೇಧ ಹೇರಲು ಸಾಧ್ಯ? ಹಲವಾರು ವರ್ಷಗಳ ಹಿಂದೆ ಗಣೇಶ ಹಾಲು ಕುಡಿದ ವಿಸ್ಮಯ ಜನರನ್ನು ಮರಳು ಮಾಡಿತ್ತು. ನಂತರ ಪುಟ್ಟಪರ್ತಿ ಸಾಯಿಬಾಬಾ ತೀರಿಕೊಂಡ ಮರುದಿನ ವಿಸ್ಮಯಕಾರಿ ಬೆಳಕು ಬಿದ್ದು ಅಚ್ಚರಿ ಮೂಡಿಸಿತ್ತು. ನಾಯಿ ಹೊಟ್ಟೆಯಲ್ಲಿ ಬೆಕ್ಕು ಹುಟ್ಟುವುದು, ಮಗು ಬೆಂಕಿ ಉಗುಳುವುದು ಎಲ್ಲವೂ ನಂಬಿಕೆ ಮತ್ತು ಮೂಢನಂಬಿಕೆಯ ಚರ್ಚೆಗೆ ಗ್ರಾಸವಾಗಿವೆ.

English summary
The news of vibhuti falling from the feet of Shiradi Saibaba has mesmerized people of Koppal. The incident has happened at a point when state govt is contemplating to bring anti-superstition law. Do you call it miracle or handiwork of some people?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X