ಕುಂಬಳ ಬೆಳೆದು ಲಾಭ ಕಂಡ ಮಾಗಡಿಯ ಗಂಗಣ್ಣ!

By: ಬಿಎಂ ಲವಕುಮಾರ್
Subscribe to Oneindia Kannada

ಮಾಗಡಿ, ಆಗಸ್ಟ್ 20: ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಂಡ ಎಂಬ ಮಾತಿನಂತೆ ಬಹಳಷ್ಟು ರೈತರು ತಾವು ಹಿಂದೆ ಏನು ಬೆಳೆ ಬೆಳೆಯುತ್ತಿದ್ದೆವೋ ಅದನ್ನೇ ಬೆಳೆಯಲು ಮುಂದಾಗಿ, ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಆಗ್ನೇಸ್ ಕಾಲೇಜು ವಿದ್ಯಾರ್ಥಿನಿಯರಿಂದ ಭತ್ತದ ನಾಟಿ

ಇದನ್ನು ತಪ್ಪಿಸಬೇಕಾದರೆ ಆಯಾಯ ಸಂದರ್ಭಕ್ಕೆ ತಕ್ಕಂತೆ ಯಾವ ಬೆಳೆ ಬೆಳೆದರೆ ಅನುಕೂಲವಾಗಬಹುದು ಎಂಬುದನ್ನು ಅರಿತು ಅದನ್ನು ಬೆಳೆದು ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಲು ಮುಂದಾಗಬೇಕು ಎಂಬುದನ್ನು ಗುಡ್ಡಹಳ್ಳಿ ಗ್ರಾಮದ ಪ್ರಗತಿ ಪರ ರೈತ ಗಂಗಣ್ಣ ತೋರಿಸಿಕೊಟ್ಟಿದ್ದಾರೆ.

ತಮಿಳುನಾಡಿನ ಕುಂಬಳಕಾಯಿಯನ್ನು ಅಲ್ಪಾವಧಿ ಬೆಳೆಯಾಗಿ ಬೆಳೆದು ಲಾಭ ಕಾಣುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಇವರು ಬೆಳೆದ ಕುಂಬಳ ಕಾಯಿ ಸುಮಾರು ಮೂವತ್ತರಿಂದ ನಲವತ್ತು ಕೆಜಿಯಷ್ಟು ತೂಗುವ ಮೂಲಕ ಉತ್ತಮ ಇಳುವರಿ ನೀಡುತ್ತಿದೆ.

ಕೋವನ್ ಮತ್ತು ಕಾಂಗಯಮ್ ಬೆಳೆ

ಕೋವನ್ ಮತ್ತು ಕಾಂಗಯಮ್ ಬೆಳೆ

ತಮಿಳುನಾಡಿನಲ್ಲಿ ಬೆಳೆಯುತ್ತಿದ್ದ ಸಿಹಿ ಕುಂಬಳಕಾಯಿ ಕೋವನ್ ಮತ್ತು ಬೂದು ಕುಂಬಳಕಾಯಿ ಕಾಂಗಯಮ್ ಎಂಬ ಎರಡು ತಳಿಗಳ ಬಗ್ಗೆ ತಿಳಿದುಕೊಂಡಿದ್ದ ಗಂಗಣ್ಣ ಅವರು ಅಲ್ಲಿಗೆ ತೆರಳಿ ಅದರ ಕೃಷಿ ಬಗ್ಗೆ ತಿಳಿದುಕೊಂಡು ಬಿತ್ತನೆ ಬೀಜ ತಂದು ತಮ್ಮ ಜಮೀನಿನಲ್ಲಿ ಕೃಷಿ ಮಾಡಲು ಮುಂದಾದರು.

ಕುಂಬಳಕಾಯಿ ಬೆಳೆ ಬೆಳೆಯುತ್ತೇನೆಂದು ಹೊರಟ ಗಂಗಣ್ಣ ಅವರ ನಿರ್ಧಾರ ಕೆಲವರಿಗೆ ಆಶ್ಚರ್ಯವಾಗಿ ಕಂಡಿತಲ್ಲದೆ, ಇದೆಲ್ಲ ಇಲ್ಲಿ ಮಾಡಲು ಸಾಧ್ಯನಾ ಎಂದು ಸುತ್ತಮುತ್ತಲಿನವರು ಮಾತನಾಡಿಕೊಂಡಿದ್ದರು.

ಕೃಷಿ ತುಡಿತ

ಕೃಷಿ ತುಡಿತ

ಕೃಷಿಯಲ್ಲಿ ಸದಾ ಏನಾದರೊಂದು ಮಾಡಬೇಕೆಂಬ ತುಡಿತದಲ್ಲಿದ್ದ ಗಂಗಣ್ಣ ಅವರು ಕುಂಬಳಕಾಯಿ ಕೋವನ್ ಮತ್ತು ಬೂದು ಕುಂಬಳಕಾಯಿ ಕಾಂಗಯಮ್ ಎರಡು ಬೀಜವನ್ನು ಬಿತ್ತಿ ಕೃಷಿ ಆರಂಭಿಸಿಯೇ ಬಿಟ್ಟರು. ಇದು ಅಲ್ಪಾವಧಿ ಬೆಳೆಯಾದ್ದರಿಂದ ನೋಡಿಯೇ ಬಿಡೋಣ ಎಂದು ಕೃಷಿ ಕ್ರಮಗಳನ್ನು ಚಾಚೂ ತಪ್ಪದೆ ಮಾಡಿದರು.

ಗಂಗಣ್ಣನವರ ಕೃಷಿ ತಂತ್ರ

ಗಂಗಣ್ಣನವರ ಕೃಷಿ ತಂತ್ರ

ಮೊದಲಿಗೆ ಬಿತ್ತನೆ ಮಾಡಿದ ವಾರಕ್ಕೆ 2 ದಿನ ಎಂಬಂತೆ ನೀರು ಹಾಯಿಸಿ ಬೆಳೆ ಬಂದ ಮೇಲೆ ತಿಂಗಳಿಗೆ 2 ರಿಂದ ಮೂರು ಭಾರಿ ನೀರು ಹಾಕಿದರು. ಕಾಯಿ ಬಿಟ್ಟು ಅದು ಬಲಿತಾದ ಮೇಲೆ ಹೆಚ್ಚಿಗೆ ನೀರು ಹಾಕುವುದನ್ನು ನಿಲ್ಲಿಸಿದರು. ಇನ್ನು ನೆಲದಲ್ಲೇ ಹರಡಿ ಬೆಳೆದು ಕಾಯಿ ಬೆಳೆಯುವುದರಿಂದ ಕೀಟಗಳಿಂದ ರಕ್ಷಣೆ ಮಾಡಲು ಒಂದೆರಡು ಬಾರಿ ರಾಸಾಯನಿಕ ಸಿಂಪಡಿಸಿದರು.

ಲಾಭದ ನಿರೀಕ್ಷೆಯಲ್ಲಿ ಗಂಗಣ್ಣ

ಲಾಭದ ನಿರೀಕ್ಷೆಯಲ್ಲಿ ಗಂಗಣ್ಣ

ದಿನಕಳೆದಂತೆ ಕುಂಬಳಕಾಯಿ ಬೃಹತ್ ಗಾತ್ರದಲ್ಲಿ ಬೆಳೆದನ್ನು ನೋಡಿ ಅಚ್ಚರಿಗೊಂಡರು. ಸದ್ಯ ಮಾರುಕಟ್ಟೆಯಲ್ಲಿ ಕೆಜಿಗೆ 15ರಿಂದ 20 ರೂ. ದರ ಇರುವುದರಿಂದ ಖರ್ಚು ಕಳೆದು ಲಾಭದ ನಿರೀಕ್ಷೆಯಲ್ಲಿ ರೈತ ಗಂಗಣ್ಣ ಇದ್ದಾರೆ.

ಕಾಲಕ್ಕೆ ತಕ್ಕಂತೆ ಹಲವು ಬೆಳೆ

ಕಾಲಕ್ಕೆ ತಕ್ಕಂತೆ ಹಲವು ಬೆಳೆ

"ಕೋವನ್ ತಳಿ ಬಿತ್ತನೆ ಬೀಜಕ್ಕೆ ಕೆಜಿಗೆ 1600 ರೂ. ಬೆಲೆಯಿದೆ. ಕಾಂಗಯಮ್‍ಗೆ 3 ಸಾವಿರದ ವರೆಗೂ ಬೆಲೆಯಿದ್ದು ಒಂದು ಎಕರೆಗೆ ಒಂದು ಕೆಜಿ ಬಿತ್ತನೆ ಬೀಜ ಸಾಕಾಗುತ್ತದೆ. ಹತ್ತು ಸಾವಿರ ಖರ್ಚು ಮಾಡಿದರೆ ಒಂದಷ್ಟು ಆದಾಯ ಪಡೆಯಬಹುದು," ಎನ್ನುವುದು ಗಂಗಣ್ಣ ಅವರ ಅಭಿಪ್ರಾಯವಾಗಿದೆ.

ರೈತರು ಒಂದೇ ಬೆಳೆಗೆ ಜೋತು ಬಿದ್ದು ನಷ್ಟ ಅನುಭವಿಸುತ್ತಿರುವ ಈ ಕಾಲದಲ್ಲಿ ಕಾಲಕ್ಕೆ ತಕ್ಕಂತೆ ಹಲವು ಬೆಳೆಗಳನ್ನು ಬೆಳೆದು ಲಾಭ ಕಂಡುಕೊಳ್ಳುವುದು ಕೂಡ ಜಾಣತನ ಎಂಬುದನ್ನು ರೈತ ಗಂಗಣ್ಣ ತೋರಿಸಿಕೊಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Magadi's farmer Ganganna has succeeded in pumpkin farming. He grown Pumpkin as a short-term crop and grown Pumpkins are weighing thirty to forty kg.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ