ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಸಂಕಷ್ಟದಲ್ಲಿ ಮಲೆನಾಡು ಗ್ರಾಮೀಣ ಭಾಗದ ಮಕ್ಕಳ ಸಮಸ್ಯೆ ನೀಗಿಸಲು ಮುಂದಾದ ರಾಜ್ಯ ಸರ್ಕಾರ!

|
Google Oneindia Kannada News

ಬೆಂಗಳೂರು, ಜು. 13: ಕೊರೊನಾವೈರಸ್ ಜೊತೆಗೆ ಹೊಸ ಹೊಸ ಸಮಸ್ಯೆಗಳು ಶಿಕ್ಷಣ ಕ್ಷೇತ್ರವನ್ನು ಕಾಡುತ್ತಿವೆ. ಇದೀಗ ಸಾಂಪ್ರದಾಯಿಕ ಕಲಿಕಾ ವಿಧಾನಕ್ಕೆ ಕೋವಿಡ್ ತಡೆ ತಂದಿದ್ದು ಆನ್‌ಲೈನ್ ಶಿಕ್ಷಣ ಅನಿವಾರ್ಯವಾಗಿದೆ. ಇನ್ನೂ ಹಲವು ತಿಂಗಳುಗಳ ಕಾಲ ನೇರ ತರಗತಿಗಳು ನಡೆಸುವುದು ಸಾಧ್ಯವಿಲ್ಲ ಎಂದು ಈಗಾಗಲೇ ಶಿಕ್ಷಣ ಇಲಾಖೆ ತಿಳಿಸಿದೆ. ಹೀಗಾಗಿ ಆನ್‌ಲೈನ್ ಶಿಕ್ಷಣ ಅನಿವಾರ್ಯವಾಗಿದೆ. ಇದೆಲ್ಲದರ ಮಧ್ಯೆ ಮಳೆಯೂ ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕೆಗೆ ಅಡ್ಡಿಯಾಗಿದೆ. ಹೀಗಾಗಿ ಆ ಭಾಗದ ಮಕ್ಕಳ ಸಮಸ್ಯೆ ನೀಗಿಸಲು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮುಂದಾಗಿದ್ದಾರೆ.

ಗ್ರಾಮೀಣ ಭಾಗದ ಮಕ್ಕಳ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ ಬರೆದು ಮನವಿ ಮಾಡಿದ್ದರು. ಆದರೂ ಗ್ರಾಮೀಣ ಭಾಗದ ಮಕ್ಕಳ ಸಮಸ್ಯೆ ನೀಗಿರಲಿಲ್ಲ. ಇದೀಗ ಮತ್ತೊಂದು ಹಂತದ ಪ್ರಯತ್ನವನ್ನು ಸುರೇಶ್ ಕುಮಾರ್ ಮಾಡಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಅದರಲ್ಲಿಯೂ ಮಲೆನಾಡಿನ ಗ್ರಾಮೀಣ ಭಾಗದ ಮಕ್ಕಳ ಸಮಸ್ಯೆ ನೀಗುವ ಸಾಧ್ಯತೆಗಳು ಕಂಡು ಬಂದಿದೆ. ಅಷ್ಟಕ್ಕೂ ಆ ಮಕ್ಕಳ ಸಮಸ್ಯೆ ಏನು?

ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಸಮಸ್ಯೆ

ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಸಮಸ್ಯೆ

ನೇರ ತರಗತಿಗಳು ನಡೆಯುತ್ತಿಲ್ಲವಾದ್ದರಿಂದ ಬಹುತೇಕ ಎಲ್ಲ ಮಕ್ಕಳಿಗೆ ಆನ್‌ಲೈನ್ ಕಲಿಕೆ ಅನಿವಾರ್ಯವಾಗಿದೆ. ಈಗ ಮಳೆಗಾಲ ಇರುವುದರಿಂದ ಮಲೆನಾಡಿನ ಭಾಗದ ಮಕ್ಕಳಿಗೆ ನೆಟ್‌ವರ್ಕ್‌ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಹೀಗಾಗಿ ಮಕ್ಕಳು ಬೆಟ್ಟ-ಗುಡ್ಡಗಳನ್ನು ಹತ್ತಿ ನೆಟ್‌ವರ್ಕ್ ಹಿಡಿಯಬೇಕಾದ ಅನಿವಾರ್ಯತೆಯೂ ಇದೆ. ಅದು ಮಕ್ಕಳ ಭದ್ರತೆಯ ದೃಷ್ಟಿಯಿಂದ ಸುರಕ್ಷಿತವಲ್ಲ ಎಂದು ಪಾಲಕರು ಸರ್ಕಾರಕ್ಕೆ ಆಗಾಗ ಮನವರಿಕೆ ಮಾಡಿಕೊಳ್ಳುತ್ತಲೆ ಬಂದಿದ್ದಾರೆ. ಜೊತೆಗೆ ನೆಟ್‌ವರ್ಕ್‌ ಸಮಸ್ಯೆ ನೀಗಿಸುವಂತೆ ಸರ್ಕಾರಕ್ಕೆ ಮನವಿಯನ್ನೂ ಮಾಡಿಕೊಂಡಿದ್ದರು.

ಸಮಸ್ಯೆ ನೀಗಿಸಲು ಸಭೆ

ಸಮಸ್ಯೆ ನೀಗಿಸಲು ಸಭೆ

ಬದಲಾದ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕಾ ನಿರಂತರತೆಗೆ ಅನುಕೂಲವಾಗುವಂತೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ರಾಜ್ಯದ ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ.

ಈಗಾಗಲೇ ಐಟಿ-ಬಿಟಿ ಸಚಿವ ಡಾ. ಅಶ್ವಥ್ ನಾರಾಯಣ್ ಮತ್ತು ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರ ಸೂಚನೆಯಂತೆ ರಾಜ್ಯದಲ್ಲಿ ಮೊಬೈಲ್ ನೆಟ್‌ವರ್ಕ್ ಪೂರೈಕೆದಾರ ಕಂಪನಿಗಳೊಂದಿಗೆ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ ಅವರು ಚರ್ಚಿಸಿದ್ದಾರೆ. ಕಂಪನಿಗಳ ಮುಖ್ಯಸ್ಥರು ನೆಟ್‌ವರ್ಕ್‌ ಸುಧಾರಿಸುವ ಭರವಸೆ ಕೊಟ್ಟಿದ್ದಾರೆಂದು ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸರ್ಕಾರದ ಗಮನಕ್ಕೆ ತಂದಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಶಾಲೆಗಳ ಆರಂಭ ಯಾವಾಗ?

ಶಾಲೆಗಳ ಆರಂಭ ಯಾವಾಗ?

"ಪ್ರಸ್ತುತ ಮಳೆಗಾಲವಾದ್ದರಿಂದ ರಾಜ್ಯದ ಮಲೆನಾಡು ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಮಕ್ಕಳ ಪರ್ಯಾಯ ಬೋಧನಾ ಕ್ರಮಗಳಾದ ಆನ್‌ಲೈನ್ ಕಲಿಕೆ ಅಥವಾ ದೂರದರ್ಶನ ಚಂದನ ವಾಹಿನಿ ಪಾಠಗಳಿಗೆ ತೊಂದರೆಯಾಗಿದೆ. ಈ ಕುರಿತು ತ್ವರಿತವಾಗಿ ಗಮನ ಹರಿಸುವುದರ ಅಗತ್ಯವಿದೆ. ಮಕ್ಕಳ ಬೋಧನಾ ವಿಧಾನದ ಗುಣಮಟ್ಟವನ್ನು ಕಾಪಾಡಬೇಕಾಗಿದೆ" ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

"ಕೊರೋನಾ ಕಾಲಘಟ್ಟದಂತಹ ಪರಿಸ್ಥಿತಿಯಲ್ಲಿ ಭೌತಿಕ ಶಾಲಾ ತರಗತಿಗಳು ಆರಂಭವಾಗುತ್ತಿದೆ. ಹೀಗಾಗಿ ಪರ್ಯಾಯ ಬೋಧನಾ ಕ್ರಮಗಳು ಅನಿವಾರ್ಯವಾಗಿವೆ. ಎಲ್ಲ ಮಕ್ಕಳಿಗೂ ಉತ್ತಮ ಗುಣಮಟ್ಟದ ಬೋಧನೆ ದೊರಕಿಸಿಕೊಡುವ ನಿಟ್ಟಿನಲ್ಲಿ ನಾವು ಆನ್‌ಲೈನ್ ವ್ಯವಸ್ಥೆಯನ್ನೇ ನೆಚ್ಚಿಕೊಂಡಿರುವಂತಹ ಸಂದರ್ಭದಲ್ಲಿ ಮೊಬೈಲ್ ನೆಟ್‌ವರ್ಕ್‌ ಸರಿಪಡಿಸುವುದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಸರಿಯಾದ ಕಲಿಕೆ ಸಿಗಲಿದೆ" ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

Recommended Video

Darshan - Umapathy Pressmeet : ಎಲ್ಲದ್ದಕ್ಕೂ ಕಾರಣ ಉಮಾಪತಿ ಎಂದ ಅರುಣಾಕುಮಾರಿ! | Oneindia Kannada
ಗ್ರಂಥಾಲಯಗಳಲ್ಲಿ ಪಾಠದ ವ್ಯವಸ್ಥೆ?

ಗ್ರಂಥಾಲಯಗಳಲ್ಲಿ ಪಾಠದ ವ್ಯವಸ್ಥೆ?

"ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಆನ್‌ಲೈನ್ ಶಿಕ್ಷಣ ವಂಚಿತ ಮಕ್ಕಳಿಗೆ ಶಿಕ್ಷಣ ಒದಗಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು" ಎಂದು ಸಚಿವ ಸುರೇಶ್ ಕುಮಾರ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಲಹೆಗಾರ ಪ್ರಶಾಂತ್ ಪ್ರಕಾಶ್ ಮತ್ತು ರಾಜ್ಯ ಸರ್ಕಾರದ ಶೈಕ್ಷಣಿಕ ಸಲಹೆಗಾರ ಪ್ರೊ. ದೊರೆಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ಸುರೇಶ್ ಕುಮಾರ್ ತಿಳಿಸಿದ್ದಾರೆ. ರಾಜ್ಯದಲ್ಲಿರುವ 5,766 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಬಳಸಿಕೊಂಡು ಅಲ್ಲಿ ಯಂತ್ರ ಅಳವಡಿಸುವ ಮೂಲಕ ದೂರದರ್ಶನ ಹಾಗೂ ಮೊಬೈಲ್ ವಂಚಿತ ಮಕ್ಕಳಿಗೆ ಆನ್‌ಲೈನ್ ಕಲಿಕೆ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಚಿಂತನೆಯನ್ನು ಸರ್ಕಾರ ನಡೆಸಿದೆ.

"ಶಾಲೆಗಳಲ್ಲಿನ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಒದಗಿಸುವುದೂ ಸೇರಿದಂತೆ ಪರಿಣಾಮಕಾರಿ ಶಿಕ್ಷಣ ವ್ಯವಸ್ಥೆ ರೂಪಿಸುವ ಕುರಿತಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದ ಕೂಡಲೇ ಆರ್.ಡಿ.ಪಿ.ಆರ್. ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಶಿಕ್ಷಣ ಇಲಾಖೆಯ ಟಾಸ್ಕ್‌ಫೋರ್ಸ್‌ ಈ ಎಲ್ಲ ಅಂಶಗಳನ್ನು ಅವಲೋಕಿಸಿ ಪ್ರಾಯೋಗಿಕ ಕ್ರಮಗಳ ಕುರಿತಂತೆ ಕ್ರಿಯಾಯೋಜನೆ ರೂಪಿಸಲಿದೆ" ಎಂದು ಸುರೇಶ್ ಕುಮಾರ್ ತಿಳಿಸಿದರು.

ಒಟ್ಟಾರೆ ಈ ಎಲ್ಲ ಕ್ರಮಗಳು ಕೇವಲ ಚಿಂತನೆ ಅಥವಾ ಚರ್ಚೆಯ ರೂಪದಲ್ಲಿರದೇ ಆಚರಣೆಗೆ ಬರಬೇಕು. ಜೊತೆಗೆ ಮಲೆನಾಡು ಮಕ್ಕಳೂ ಸೇರಿದಂತೆ ಮೊಬೈಲ್ ಇಲ್ಲದ ಮಕ್ಕಳ ಕಲಿಕೆಗೂ ಸರ್ಕಾರ ಬದ್ದತೆಯಿಂದ ಗಮನ ಕೊಡಬೇಕು ಎಂದು ಮಕ್ಕಳ ಪಾಲಕರು ಆಗ್ರಹಿಸಿದ್ದಾರೆ.

English summary
State Government is working to solve the mobile network problem in rural areas of the malnad areas to improve the children's online education. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X