• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾದಿಂದ ಮೃತ ರೈತರ ಸಾಲಮನ್ನಾ ಯೋಜನೆ: ರೈತರಿಗೆ ನಿಜಕ್ಕೂ ಸಹಾಯವಾಗಲಿದೆಯಾ?

|
Google Oneindia Kannada News

ಬೆಂಗಳೂರು, ಜು. 21: ಕೊರೊನಾ ಸಂಕಷ್ಟದಲ್ಲಿ ನಲುಗಿ ಹೋಗಿದ್ದ ರಾಜ್ಯ ರೈತರಿಗೆ ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ನೆಮ್ಮದಿಯ ಸುದ್ದಿ ಕೊಟ್ಟಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ರಾಜ್ಯದ ರೈತರಿಗೆ ಕೊರೊನಾ ವೈರಸ್ ಮಹಾಮಾರಿಯಂತೆ ಕಾಡಿದೆ. ರೈತರ ಜೀವನ ಹಾಗೂ ಜೀವದೊಂದಿಗೆ ಕೋವಿಡ್ ಮಾಡಿರುವ ಅಘಾತ ಅಷ್ಟಿಷ್ಟಲ್ಲ. ಈ ವರ್ಷ ಹಾಗೂ ಕಳೆದ ವರ್ಷ ರೈತರು ಬೆಳೆದಿದ್ದ ತರಕಾರಿ, ಹಣ್ಣು ಹಾಗೂ ಹೂವಿಗೆ ಮಾರುಕಟ್ಟೆ ವ್ಯವಸ್ಥೆ ಆಗದೇ ತಾವು ಬೆಳೆದಿದ್ದ ಬೆಳೆಯನ್ನು ತಾವೇ ನಾಶ ಮಾಡಿದ್ದರು. ಸರ್ಕಾರ ಪರಿಹಾರ ಘೋಷಣೆ ಮಾಡಿತ್ತಾದರೂ ಅದು ಸಿಕ್ಕಿದ್ದು ಕೆಲವು ರೈತರಿಗೆ ಮಾತ್ರ ಎಂಬ ಆರೋಪಗಳಿವೆ.

ಇದೇ ಸಂದರ್ಭದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ರಾಜ್ಯದಲ್ಲಿ ಒಟ್ಟು ಸುಮಾರು 10 ಸಾವಿರಕ್ಕೂ ಹೆಚ್ಚು ರೈತರು ಜೀವ ಕಳೆದುಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಜೀವ ಕಳೆದುಕೊಂಡಿರುವ ರೈತ ಕುಟುಂಬಗಳ ಪರಿಸ್ಥಿತಿ ತೀರಾ ಚಿಂತಾಜನಕವಾಗಿದೆ. ಒಂದೆಡೆ ರೈತರ ಸಾವು, ಮತ್ತೊಂದೆಡೆ ಅವರ ಸಾಲದ ಹೊರೆ, ಕುಟುಂಬಸ್ಥರನ್ನು ಕಂಗಾಲು ಮಾಡಿದೆ. ಇದೇ ಸಂದರ್ಭದಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅಂತಹ ರೈತ ಕುಟುಂಬಗಳಿಗೆ ನೆಮ್ಮದಿ ತರುವಂತಹ ಘೋಷಣೆ ಮಾಡಿದ್ದಾರೆ.

ಆದರೆ ಸರ್ಕಾರ ಕೈಗೊಂಡಿರುವ ತೀರ್ಮಾನ ರೈತರ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂದು ರಾಜ್ಯದ ರೈತ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರ ರೈತರ ಕಣ್ಣೊರೆಸುವ ಕೆಲಸ ಮಾಡಬಾರದು, ರೈತರಿಗೆ ಸರ್ಕಾರದ ಈ ಯೋಜನೆಯಿಂದ ಎಷ್ಟು ಸಹಾಯವಾಗಬಹುದು ಎಂಬುದನ್ನು 'ಒನ್ಇಂಡಿಯಾ ಕನ್ನಡ'ದೊಂದಿಗೆ ರೈತರು ಹಂಚಿಕೊಂಡಿದ್ದಾರೆ. ಮುಂದಿದೆ ಮಾಹಿತಿ!

ಮೃತ ರೈತ ಕುಟುಂಗಳಿಗೆ ನೆಮ್ಮದಿ?

ಮೃತ ರೈತ ಕುಟುಂಗಳಿಗೆ ನೆಮ್ಮದಿ?

ಕೊರೊನಾ ವೈರಸ್‌ನಿಂದ ಮೃತಪಟ್ಟಿರುವ ರೈತಬ ಕುಟುಂಬಗಳಿಗೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ನೆಮ್ಮದಿಯ ಸುದ್ದಿ ಕೊಟ್ಟಿದ್ದಾರೆ. "ಕೊರೊನಾ ವೈರಸ್‌ನಿಂದ ರಾಜ್ಯದಲ್ಲಿ ಒಟ್ಟು 10187 ರೈತರು ಮರಣ ಹೊಂದಿದ್ದಾರೆ. ಹೀಗಾಗಿ ಆ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ. ಮೃತಪಟ್ಟಿರುವ ರೈತರು ಅಪೆಕ್ಸ್, ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್‌ಗಳಲ್ಲಿ ಸಾಲ ಪಡೆದಿದ್ದರು. ಹೀಗಾಗಿ ಕೋವಿಡ್‌ನಿಂದ ಮೃತಪಟ್ಟಿರುವ 10,187 ರೈತರು ಮಾಡಿದ್ದ 79.47 ಕೋಟಿ ರೂಪಾಯಿ ಸಾಲ ಮನ್ನಾ ಮಾಡಲು ಸರ್ಕಾರ ತೀರ್ಮಾನಿಸಿದೆ" ಎಂದು ಬೆಂಗಳೂರಿನಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

"ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಿಂತನೆ ನಡೆಸಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು" ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

ಮೂರರಿಂದ ನಾಲ್ಕು ದಿನದಲ್ಲಿ ತೀರ್ಮಾನ

"ಇನ್ನು ಮೂರರಿಂದ ನಾಲ್ಕು ದಿನಗಳಲ್ಲಿ ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿ ಸಭೆ ಸೇರಿ ತೀರ್ಮಾನವನ್ನು ತೆಗೆದುಕೊಳ್ಳಲಿದ್ದೇವೆ. ಕೋವಿಡ್ ಸಂಕಷ್ಟ ಕಾಲದಲ್ಲಿ ರೈತರ ಸಹಾಯಕ್ಕೆ ಬರಲು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ನಮ್ಮ ಸರ್ಕಾರವು ಸದಾ ಬದ್ಧವಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಇನ್ನು ಮುಂದೂ ಸಹ ಸಾಲ ಸೌಲಭ್ಯಗಳು ಸುಲಭವಾಗಿ ಸಿಗುವಂತೆ ಕ್ರಮವನ್ನು ಕೈಗೊಳ್ಳಲಾಗುತ್ತಿದೆ" ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ

ಇವರಿಗೆ ಸಿಗಲಿದೆ ಸಾಲಮನ್ನಾ ಸಹಾಯ!

ಇವರಿಗೆ ಸಿಗಲಿದೆ ಸಾಲಮನ್ನಾ ಸಹಾಯ!

"ಕಳೆದ ವರ್ಷ ಅಂದರೆ, 2020-21ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಅಲ್ಪಾವಧಿ, ಮಧ್ಯಮಾವಧಿ ಬೆಳೆ ಸಾಲ ನೀಡುವ ಗುರಿಯನ್ನು ಹೊಂದಲಾಗಿತ್ತು. ಈ ನಿಟ್ಟಿನಲ್ಲಿ ಗುರಿ ಮೀರಿ ಸಾಧನೆ ಮಾಡಿದ್ದು, 25.67 ಲಕ್ಷ ರೈತರಿಗೆ 17,108 ಕೋಟಿ ರೂಪಾಯಿ ಸಾಲ ನೀಡುವ ಮೂಲಕ ಶೇ. 114 ಗುರಿ ಸಾಧನೆಯನ್ನು ಮಾಡಲಾಗಿತ್ತು. ಈಗ 25.67 ಲಕ್ಷ ರೈತರಲ್ಲಿ ಕೋವಿಡ್ ನಿಂದ ಮೃತಪಟ್ಟಿರುವ 10,187 ರೈತರ 79.47 ಕೋಟಿ ರೂಪಾಯಿ ಸಾಲ ಮನ್ನಾ ಮಾಡುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಿಂತನೆಯನ್ನು ನಡೆಸಿದ್ದಾರೆ." ಎಂದು ಸಚಿವ ಸೋಮಶೇಖರ್ ತಿಳಿಸಿದ್ದಾರೆ.

ರಾಜ್ಯ ರೈತ ಸಂಘದ ಒತ್ತಾಯವೇನು?

ರಾಜ್ಯ ರೈತ ಸಂಘದ ಒತ್ತಾಯವೇನು?

ಆದರೆ ಸರ್ಕಾರದ ನಿರ್ಧಾರದ ಕುರಿತು 'ಒನ್‌ಇಂಡಿಯಾ ಕನ್ನಡ'ದೊಂದಿಗೆ ಮಾತನಾಡಿರುವ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಅವರು, "ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಆದರೆ ಕೇವಲ ತಲಾ 1 ಲಕ್ಷ ರೂ. ಕೊಡುವುದರಿಂದ ರೈತರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ಕೊರೊನಾದಿಂದ ಮೃತಪಟ್ಟಿರುವ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಈಗಾಗಲೇ ಆ ಕುಟುಂಬ ಆಸ್ಪತ್ರೆತೆಗ ಲಕ್ಷಾಂತರ ರೂಪಾಯಿ ವ್ಯಯಿಸಿದ್ದಾರೆ. ಹೀಗಾಗಿ ಈಗ ಸರ್ಕಾರ ಕೇವಲ 1 ಲಕ್ಷ ರೂ. ಸಾಲಮನ್ನಾ ಮಾಡುವುದರಿಂದ ಸಹಾಯವಾಗುವುದಿಲ್ಲ. ಕೊರೊನಾದಿಂದ ಮೃತಪಟ್ಟಿರುವ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದರೊಂದಿಗೆ ತಲಾ 5 ಲಕ್ಷ ರೂ. ಪರಿಹಾರವನ್ನೂ ಕೊಡಬೇಕು. ಹಾಗೆ ಮಾಡಿದಲ್ಲಿ ಸರ್ಕಾರ ಸಹಾಯ ಮಾಡಿದಂತಾಗುತ್ತದೆ. ಇಲ್ಲದಿದ್ದರೆ ಮೃಥಪಟ್ಟಿರುವ ರೈತರಿಗೆ ಸಹಾಯ ಮಾಡಿದಂತೆ ಆಗುವುದಿಲ್ಲ" ಎಂದಿದ್ದಾರೆ.

ರೈತ ನಾಯಕರ ಆಗ್ರಹದಲ್ಲಿ ಸತ್ಯವಿದೆ

ರೈತ ನಾಯಕರ ಆಗ್ರಹದಲ್ಲಿ ಸತ್ಯವಿದೆ

ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಅವರ ಒತ್ತಾಯದಲ್ಲಿಯೂ ಅರ್ಥವಿದೆ. ಯಾಕೆಂದರೆ ಕೇವಲ ಒಂದು ಲಕ್ಷ ರೂ. ಸಾಲಮನ್ನಾ ಮಾಡುವುದರಿಂದ ನಿಜಕ್ಕೂ ರೈತರಿಗೆ ಸಹಾಯವಾಗುವುದಿಲ್ಲ. ಹೀಗಾಗಿ ಸಂಪೂರ್ಣ ಸಾಲಮನ್ನಾ ಜೊತೆಗೆ ಆ ಕುಟುಂಬದ ನಿರ್ವಹಣೆಗೆ 5 ಲಕ್ಷ ರೂ. ಪರಿಹಾರ ಕೊಡುವುದು ಸರ್ಕಾರದ ಅತ್ಯುತ್ತಮ ನಿರ್ಧಾರವಾಗಲಿದೆ. ಅಷ್ಟಕ್ಕೂ ರಾಜ್ಯದ ಎಲ್ಲ ಜಿಲ್ಲೆಗಳ ರೈತರಿಗೆ ಈ ಸಹಾಯ ಸಿಗುತ್ತಿಲ್ಲ. ರಾಜ್ಯದ 30 ಜಿಲ್ಲೆಗಳ ಪೈಕಿ 19 ಜಿಲ್ಲೆಗಳ ರೈತರಿಗೆ ಈ ಯೋಜನೆಯಿಂದ ಸಹಾಯವಾಗಲಿದೆ ಎಂದು ಸರ್ಕಾರದ ಮಾಹಿತಿ ಹೇಳುತ್ತಿದೆ.

  Rahul Gandhi's Tweet, ಭಾರತ ಚೀನಾ ಗಡಿಯಲ್ಲಿ ಏನು ನಡೆಯುತ್ತಿದೆ | Oneindia Kannada
  ಯಾವ ಜಿಲ್ಲೆಗೆ ಎಷ್ಟು ಸಾಲಮನ್ನಾ?

  ಯಾವ ಜಿಲ್ಲೆಗೆ ಎಷ್ಟು ಸಾಲಮನ್ನಾ?

  ಯಾವ ಜಿಲ್ಲೆಯ ಡಿಸಿಸಿ ಬ್ಯಾಂಕ್ ಗಳಲ್ಲಿ ಎಷ್ಟು ರೈತರು, ಎಷ್ಟು ಸಾಲ ಮನ್ನಾ ಎಂಬ ಮಾಹಿತಿ ಈ ಕೆಳಗಿನಂತಿದೆ. ಈ ಮಾಹಿತಿಯನ್ನು ರಾಜ್ಯ ಸಹಕಾರಿ ಇಲಾಖೆಯೆ ಕೊಟ್ಟಿದೆ.

  1. ಬಾಗಲಕೋಟೆ - 672 ರೈತರ 5,42,26,261 ರೂಪಾಯಿ ಸಾಲ

  2. ಬೆಳಗಾವಿ - 3334 ರೈತರ 23,84,51,700 ರೂಪಾಯಿ ಸಾಲ

  3. ಬಳ್ಳಾರಿ - 357 ರೈತರ 3,65,98,411 ರೂಪಾಯಿ ಸಾಲ

  4. ಬೆಂಗಳೂರು - 381 ರೈತರ 2,36,72,500 ರೂಪಾಯಿ ಸಾಲ

  5. ಬೀದರ್ - 824 ರೈತರ 54768271 ರೂಪಾಯಿ ಸಾಲ

  6. ಚಿಕ್ಕಮಗಳೂರು - 113 ರೈತರ 2,03,86,020 ರೂಪಾಯಿ ಸಾಲ

  7. ಚಿತ್ರದುರ್ಗ - 156 ರೈತರ 1,63,71,000 ರುಪಾಯಿ ಸಾಲ

  8. ದಾವಣಗೆರೆ - 402 ರೈತರ 2,66,22,071 ರುಪಾಯಿ ಸಾಲ

  9. ಹಾಸನ - 454 ರೈತರ 2,86,42,000 ರುಪಾಯಿ ಸಾಲ

  10. ಕಲಬುರಗಿ - 224 ರೈತರ 87,38,776.43 ರೂಪಾಯಿ ಸಾಲ

  11. ಕೆನರಾ ಶಿರಸಿ (ಉತ್ತರ ಕನ್ನಡ)- 186 ರೈತರ 1,70,98,364 ರೂಪಾಯಿ ಸಾಲ

  12. ಕೆಸಿಸಿ ಬ್ಯಾಂಕ್ ಧಾರವಾಡ - 376 ರೈತರ 2,07,10,455 ರೂಪಾಯಿ ಸಾಲ

  13. ಕೊಡಗು - 113 ರೈತರ 1,82,99,040 ರೂಪಾಯಿ ಸಾಲ

  14. ಕೋಲಾರ - 147 ರೈತರ 2,54,09,639 ರೂಪಾಯಿ ಸಾಲ

  15. ಮಂಡ್ಯ - 410 ರೈತರ 2,73,28,268 ರೂಪಾಯಿ ಸಾಲ

  16. ಮೈಸೂರು - 281 ರೈತರ 3,13,99,000 ರೂಪಾಯಿ ಸಾಲ

  17. ರಾಯಚೂರು- 237 ರೈತರ 1,92,03,700 ರೂಪಾಯಿ ಸಾಲ

  18. ಶಿವಮೊಗ್ಗ - 307 ರೈತರ 3,27,01,000 ರೂಪಾಯಿ ಸಾಲ

  19. ದಕ್ಷಿಣ ಕನ್ನಡ - 152 ರೈತರ 2,40,63,450 ರೂಪಾಯಿ ಸಾಲ

  20. ತುಮಕೂರು - 307 ರೈತರ 1,87,22,000 ರೂಪಾಯಿ ಸಾಲ

  21. ವಿಜಯಪುರ - 754 ರೈತರ 5,13,40,000 ರೂಪಾಯಿ ಸಾಲ

  ಒಟ್ಟಾರೆಯಾಗಿ 10187 ರೈತರ 79,47,51,926.43 ರೂಪಾಯಿ ಸಾಲ ಮನ್ನಾ ಪ್ರಕ್ರಿಯೆಗೆ ಪಟ್ಟಿ ಸಿದ್ಧವಾಗಿದೆ.

  English summary
  Co-operation Minister S.T. Somashekar said the government would soon announce a waiver of Rs. 79.47 crore in farm loans borrowed by 10,187 farmers in Karnataka who succumbed to COVID-19. Know more.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X