• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಶ್ರೀರಾಮುಲು ನಿಮ್ಮ ಪೂಜೆಯ ಫಲದಿಂದ ನಾನು ಮಂತ್ರಿಯಾದೆ'

|

ಬೆಂಗಳೂರು, ಸೆ. 26: ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರೊಂದಿಗಿನ ಒಡನಾಟವನ್ನು ಆರೋಗ್ಯ ಸಚಿವ ಶ್ರೀರಾಮುಲು ಅವರು ಹಂಚಿಕೊಂಡಿದ್ದಾರೆ.

ಸುರೇಶ್ ಅಣ್ಣ ಪಕ್ಷದ ಕಟ್ಟಾಳು ಮತ್ತು ಅನುಭವೀ ಸಂಸದೀಯ ಪಟು. ನಾನು ಸಂಸತ್ತಿಗೆ ಆಯ್ಕೆಯಾಗುವ ಹೊತ್ತಿಗೆ ಆಗಲೇ ಎರಡು ಬಾರಿ ಸಂಸತ್ತಿನ ಅನುಭವ ಹೊಂದಿದ್ದರು. ಮೂರನೇ ಅವಧಿಯಲ್ಲಿ ಸಂಸತ್ತಿನ ಕಾರ್ಯ ಕಲಾಪಗಳ ಬಗ್ಗೆ ಕರ್ನಾಟಕದ ಸಂಸದರನ್ನು ಒಟ್ಟುಗೂಡಿಸುವ ಜವಾಬ್ದಾರಿಯನ್ನು ಪಕ್ಷ ಅವರಿಗೆ ವಹಿಸಿತ್ತು. ಜೊತೆಗೆ ಹೌಸ್ ಕಮಿಟಿ ಅಧ್ಯಕ್ಷರಾಗಿ ಎಲ್ಲಾ ಸಚಿವರಿಗೆ ಮತ್ತು ಸಂಸದರಿಗೆ ಮನೆ ಹಂಚಿಕೆ ಮಾಡುವ ಜವಾಬ್ದಾರಿಯುತ ಸ್ಥಾನ ಕೂಡ ಅವರ ಹೆಗಲ ಮೇಲಿತ್ತು. ನಾನು ಐದು ವರ್ಷದ ಲೋಕಸಭೆ ಅವಧಿ ಪೂರ್ಣಗೊಳಿಸುವ ಒಂದು ವರ್ಷದ ಮೊದಲೇ ವಿಧಾನಸಭೆ ಚುನಾವಣೆಯತ್ತ ಮುಖ ಮಾಡಿದ್ದರಿಂದ ದೆಹಲಿಯನ್ನು ಬಿಡಬೇಕಾಯಿತು. ಅದಕ್ಕೂ ಮುಂಚೆ ದೆಹಲಿಯಲ್ಲಿದ್ದಾಗ ನಡೆದ ಘಟನೆಗಳ ಪೈಕಿ ಕೆಲ ಘಟನೆಗಳ ಬಗ್ಗೆ ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ ಎಂದು ಶ್ರೀರಾಮುಲು ಹೇಳಿದ್ದಾರೆ.

ದಿ. ಮಾಜಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರೊಂದಿಗಿನ ಒಟನಾಟದ ಬಹಳಷ್ಟು ಸಂಗತಿಗಳನ್ನು ಆರೋಗ್ಯ ಸಚಿವ ಶ್ರೀರಾಮುಲು ಅವರು ಹಂಚಿಕೊಂಡಿದ್ದಾರೆ. ಅವರ ನೆನಪುಗಳು ಅವರ ಮಾತಿನಲ್ಲಿಯೇ ಮುಂದಿವೆ.

ದೆಹಲಿಯಲ್ಲಿ ಸರ್ಕಾರಿ ನಿವಾಸ ಕೊಡಿಸಿದ್ದರು!

ದೆಹಲಿಯಲ್ಲಿ ಸರ್ಕಾರಿ ನಿವಾಸ ಕೊಡಿಸಿದ್ದರು!

ನಾನು ಲೋಕಸಭೆಗೆ ಆಯ್ಕೆಯಾದಾಗ ಬಿ ಡಿ ಮಾರ್ಗ್ ನಲ್ಲಿರುವ ನರ್ಮದಾ ಅಪಾರ್ಟ್‌ಮೆಂಟ್ ನಲ್ಲಿ ವಾಸ್ತವ್ಯಕ್ಕೆ ಮನೆ ಮಂಜೂರಾಗಿತ್ತು. ಎರಡು ವರ್ಷ ಅಲ್ಲೇ ವಾಸವಿದ್ದೆ. ಈ ಮಧ್ಯೆ ಅಣ್ಣನವರು ಹೌಸಿಂಗ್ ಕಮಿಟಿ ಅಧ್ಯಕ್ಷರಾಗಿದ್ದರಿಂದ ನರ್ಮದಾ ಮನೆ ಬಿಟ್ಟು, ಫಿರೋಜ್ ಶಾ ರಸ್ತೆಯಲ್ಲಿರುವ 12A, ಮನೆಗೆ ಶಿಫ್ಟ್ ಮಾಡಲು ವಿನಂತಿಸಿಕೊಂಡೆ. ಕೂಡಲೇ ಅವರು ನಿಮಗೆ ಬಂಗಲೆ ಪಡೆಯುವ ಅವಕಾಶ ಇದೆ ತಗೊಳ್ಳಿ ಅಂತ ಹೇಳಿದ್ದಲ್ಲದೇ, ಸ್ವತಃ ಆರು ಮನೆಗಳನ್ನು ನೋಡಲು ಹೇಳಿದರು. ಕೊನೆಗೆ ನಾನು ಆಯ್ಕೆ ಮಾಡಿದ ಮನೆಯನ್ನೇ ಮಂಜೂರು ಮಾಡಿಕೊಟ್ಟರು. ಆಗಾಗ ಭೇಟಿಯಾದಾಗ ಮನೆಗೆ ಬೇಕಾದ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಿ ಎಂದು ನೆನಪಿಸುತ್ತಿದ್ದರು.

ಶಾರ್ಟ್ ಸರ್ಕ್ಯೂಟ್‌ನಿಂದಾಗಿದ್ದ ಸಂಕಷ್ಟ!

ಶಾರ್ಟ್ ಸರ್ಕ್ಯೂಟ್‌ನಿಂದಾಗಿದ್ದ ಸಂಕಷ್ಟ!

ಫಿರೋಜ್ ಶಾ ಮನೆಗೆ ಹೋದ 1 ವರ್ಷದ ನಂತರ 2017 ಡಿಸೆಂಬರ್ 19 ರಂದು ಬೆಳಗಿನ ಜಾವ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡ ಬೆಂಕಿ ನಾನು ಮಲಗುವ ಕೋಣೆಯನ್ನು ಸಂಪೂರ್ಣವಾಗಿ ಸುಟ್ಟು ಕರಕಲಾಗಿಸಿತ್ತು. ವಾಸಕ್ಕೆ ಯೋಗ್ಯವಲ್ಲದ ಸ್ಥಿತಿಗೆ ಕೋಣೆ ತಲುಪಿತ್ತು. ಈ ವಿಷಯ ತಿಳಿದ ಕೂಡಲೇ ನನ್ನೆಲ್ಲಾ ಸಂಸದ ಸಹೋದ್ಯೋಗಿಗಳು ಮನೆಗೆ ಭೇಟಿ ನೀಡಿದ್ದರು.

ಸುದ್ದಿ ತಿಳಿದ ಕೂಡಲೇ ಮನೆಗೆ ಬಂದ ಅಣ್ಣನವರು, ಕೊನೆಯವರೆಗೆ ಇದ್ದು ನಮ್ಮೆಲ್ಲ ಬೇಕು ಬೇಡಗಳ ಬಗ್ಗೆ ವಿಚಾರಿಸಿದ ಬಳಿಕ ಅದೇ ರೋಡ್ ನಲ್ಲಿದ್ದ ತಮ್ಮ ಮನೆಗೆ ನನ್ನನ್ನು ಕರೆದುಕೊಂಡು ಹೋದರು. ಆಗ ಚಳಿಗಾಲದ ಅಧಿವೇಶನ ಕೂಡ ನಡೆಯುತಿತ್ತು. ನಮ್ಮ ಮನೆಯಿಂದ ಹೋಗುವಾಗ ಮನೆ ತುಂಬಾ ನೀರು ಚೆಲ್ಲಿದ್ದರಿಂದ ಜಾರಿ ಬಿದ್ದ ಪರಿಣಾಮ ಅಣ್ಣನವರ ಸೊಂಟಕ್ಕೆ ಪೆಟ್ಟು ಬಿದ್ದಿತ್ತು. ಆ ಪೆಟ್ಟಿನ ಬಗ್ಗೆ ನನ್ನನ್ನು ಭೇಟಿಯಾದಾಗಲೆಲ್ಲ ನೆನಪಿಸಿಕೊಳ್ಳುತ್ತಿದ್ದರು.

ನನ್ನನ್ನು ಬಿಟ್ಟು ಉಪಾಹಾರ ಸೇವಿಸುತ್ತಿರಲಿಲ್ಲ!

ನನ್ನನ್ನು ಬಿಟ್ಟು ಉಪಾಹಾರ ಸೇವಿಸುತ್ತಿರಲಿಲ್ಲ!

ನಾನು ವಿಧಾನಸಭೆಗೆ ಸ್ಪರ್ಧಿಸಿ ಗೆದ್ದ ಬಳಿಕವೂ ದೆಹಲಿ ಓಡಾಟ ಇರುತ್ತಿತ್ತು. ಮಾಜಿ ಮಂತ್ರಿಯಾಗಿದ್ದ ಕಾರಣ ಕರ್ನಾಟಕ ಭವನದಲ್ಲಿ ವಾಸ್ತವ್ಯ ವ್ಯವಸ್ಥೆ ಇದ್ದರೂ, ನಾನು ಅಲ್ಲಿಗೆ ಹೋಗುತ್ತಿದ್ದದ್ದು ತೀರಾ ಕಡಿಮೆ. ಬದಲಿಗೆ ಅಣ್ಣ ನನಗಾಗಿ ಮೀಸಲಿಟ್ಟಿದ್ದ ತಾವು ವಾಸವಿದ್ದ ಸೌತ್ ಅವೆನ್ಯೂ ರಸ್ತೆಯ ಈಗಿನ ನಿವಾಸದಲ್ಲಿನ ಒಂದು ವಿಶಾಲವಾದ ರೂಂನಲ್ಲಿ ಉಳಿದುಕೊಳ್ಳುತ್ತಿದ್ದೆ.

ನಾನು ಲಿಂಗ ಪೂಜೆ ಮತ್ತು ಸಾಲಿಗ್ರಾಮ ಪೂಜೆ ಮಾಡುವ ಕಾರಣ ಅವರು ನಮ್ಮ ಮನೆಯಲ್ಲಿಯೇ ಪೂಜೆ ಮಾಡಿ ನಮಗೂ ಅದೃಷ್ಟ ಒಲಿಯಲಿ ಎಂದು ತಮಾಷೆ ಮಾಡುತ್ತಿದ್ದರು. ಪೂಜೆ ಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತಿತ್ತು. ಆದರೂ ಅಣ್ಣನವರು ಬೆಳಗಿನ ಉಪಾಹಾರವನ್ನು ನನ್ನನ್ನು ಬಿಟ್ಟು ಸೇವಿಸುತ್ತಿರಲಿಲ್ಲ. ಹೌಸಿಂಗ್ ಕಮಿಟಿ ಅಧ್ಯಕ್ಷ ಆಗಿದ್ದರೂ ಪೂಜೆ ಕಾರ್ಯ ಮುಗಿಸಿಯೇ ತೆರಳುತ್ತಿದ್ದರು. ನಾನು ಹಿರಿಯ ಸಂಸದ ಅನ್ನುವ ಅಹಂಕಾರವಾಗಲಿ, ದರ್ಪವಾಗಲಿ ಅವರಲ್ಲಿ ಕಾಣಿಸಲೇ ಇಲ್ಲ.

  China - Pakistan ಒಟ್ಟಿಗೆ ಬಂದ್ರು ನಾವ್ Ready to Fight | Oneindia Kannada
  ರಾಮುಲು ಪೂಜೆಯ ಫಲ ನಾನು ಮಂತ್ರಿಯಾದೆ

  ರಾಮುಲು ಪೂಜೆಯ ಫಲ ನಾನು ಮಂತ್ರಿಯಾದೆ

  17ನೇ ಲೋಕಸಭೆಗೆ ಮತ್ತೆ ಮರು ಆಯ್ಕೆಯಾದಾಗ, ಮಂತ್ರಿಯಾಗಿ ಕೆಲಸ ನಿರ್ವಹಿಸಬೇಕು, ದೇಶ ಸೇವೆ ಮಾಡಬೇಕು ಅನ್ನುವ ಕನಸು ಕಂಡಿದ್ದರು. ಅದರಂತೆ ಅವರು ಮಂತ್ರಿಯಾಗಿ ಆಯ್ಕೆಯಾದಾಗ ಎಲ್ಲರಿಗಿಂತ ನಾನು ಹೆಚ್ಚು ಸಂತೋಷ ಪಟ್ಟಿದ್ದೆ. ಅಲ್ಲದೇ ಅಣ್ಣನವರಿಗೆ ನೀವು ಮಂತ್ರಿಯಾಗಿದ್ದೀರಿ ಅಂತ ಕರೆ ಬಂದಿದ್ದೆ ತಡ, 'ರಾಮುಲು ನಿಮ್ಮ ಪೂಜೆಯ ಫಲ ನಾನು ಮಂತ್ರಿಯಾದೆ' ಎಂದು ಹೇಳಿ ಸಂಭ್ರಮಿಸಿದ್ದರು. ಎರಡನೇ ಅವಧಿಯ ಮೋದಿಜಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋದಾಗ ದೆಹಲಿಯ ಅಣ್ಣನವರ ಮನೆಯಲ್ಲಿಯೇ ವಾಸ್ತವ್ಯ ಹೂಡಿದ್ದೆ.

  "ಅಣ್ಣ, ನನಗೆ ಇಷ್ಟೆಲ್ಲ ಸಹಕಾರ ಮತ್ತು ಸಹಾಯ ಮಾಡಿದ ನೀವು ಇಂದು ನಮ್ಮನ್ನು ಬಿಟ್ಟು ಅಗಲಿದ್ದೀರಿ. ನಿಮ್ಮ ಕನಸುಗಳನ್ನು ಅರ್ಧಕ್ಕೆ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದೀರಿ. ನಿಮ್ಮಿಂದ ಇಡೀ ರಾಜ್ಯಕ್ಕೆ ಸಾಕಷ್ಟು ಅನುಕೂಲವಾಗಿದೆ. ಎಲೆ ಮರೆ ಕಾಯಿಯಂತೆ ನೀವು‌ ಮಾಡುತ್ತಿದ್ದ ಸೇವೆ, ನಿಮ್ಮನ್ನು ಕಳೆದುಕೊಂಡ ಮೇಲೆ ಜಗತ್ತಿಗೆ ತಿಳಿಯುತ್ತಿದೆ. ಕೊರೊನಾ ಎಂಬ ವಿಧಿಯ ಆಟ ನಿಮ್ಮ ಎಷ್ಟೋ ಜನಪರ ಕನಸುಗಳನ್ನು ನನಸಾಗಲು ಬಿಡಲಿಲ್ಲ. ನೀವಿಲ್ಲದ ಈ ಶೂನ್ಯ ವಾತಾವರಣ ನಮ್ಮೆಲ್ಲರನ್ನು ಕೊನೆಯವರೆಗೂ‌ ಕಾಡಲಿದೆ. ನಿಮ್ಮ ಅಗಲಿಕೆ ಅಕ್ಕನವರಿಗೆ, ಮಕ್ಕಳಿಗೆ ಮತ್ತು ಅಳಿಯಂದಿರಿಗೆ ಎಂದಿಗೂ ತುಂಬಲಾರದ ನಷ್ಟ. ಅವರೆಲ್ಲರಿಗೆ ಈ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ".

  ನಿಮ್ಮ ಸರಳತೆ, ಸಜ್ಜನಿಕೆ, ಸಹೋದರತ್ವ, ಜನಸೇವೆಯ ತುಡಿತ ನಮ್ಮೆಲ್ಲರ ಪಾಲಿಗೆ ಯಾವತ್ತಿಗೂ ಮಾದರಿ.

  ಮತ್ತೆ ಹುಟ್ಟಿ ಬನ್ನಿ ಅಣ್ಣ.

  ಇಂತಿ, ನಿಮ್ಮ ಸಹೋದರ

  ಬಿ ಶ್ರೀರಾಮುಲು ಎಂದು ತಮ್ಮ ಮಾತು ಮುಗಿಸಿದ್ದಾರೆ.

  English summary
  Health Minister Shriramulu shared his words about Union Minister Suresh Angadi who died recently.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X