ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ವರ್ಷಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಮಾಡಿದ್ದಾದರೂ ಏನು?: ಬಿಎಸ್‌ವೈ

By ಬಿಎಸ್ ಯಡಿಯೂರಪ್ಪ
|
Google Oneindia Kannada News

ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಮಾಡಿದ್ದಾದರೂ ಏನು? ಇಂಥ ಸರ್ಕಾರ ಏಕೆ ಬೇಕು? ಕೇಂದ್ರ ಸರ್ಕಾರದ ಯೋಜನೆಗಳನ್ನು ತನ್ನದೇ ಸಾಧನೆ ಎಂದು ಹೇಳಿಕೊಂಡ ಸಿದ್ದರಾಮಯ್ಯ ಸರ್ಕಾರ ಸುಳ್ಳು ಹೇಳುವುದರಲ್ಲಿ ನಂಬರ್ ಒನ್ ಸರ್ಕಾರ.

ಕಳೆದ ಐದು ವರ್ಷಗಳಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹತಾಶ ಸ್ಥಿತಿಯನ್ನು ಇದೇ ಸರ್ಕಾರ ಹುಟ್ಟಿ ಹಾಕಿತ್ತು ಎಂದರೆ ಇದು ಎಂಥ ಪ್ರಾಮಾಣಿಕ ಸರ್ಕಾರ? ಕೆಲವರ ತುಷ್ಟೀಕರಣ ಮಾಡುವುದು ಮತ್ತು ಹಲವರನ್ನು ಅಲಕ್ಷಿಸುವುದು ಈ ಸರ್ಕಾರದ ಐದು ವರ್ಷಗಳ ಸಾಧನೆಯಾಗಿತ್ತು. ಹಾಗಾದರೆ ಇದು ಸರ್ವ ಜನರ ಸುಖವನ್ನು ಬಯಸಿದ ಸರ್ಕಾರ ಎಂದು ಹೇಗೆ ನಂಬುವುದು?

ಬಿಜೆಪಿಗೆ ಏಕೆ ಮತಹಾಕಬಾರದು? ಸಿದ್ದು ನೀಡಿದ 5 ಕಾರಣಬಿಜೆಪಿಗೆ ಏಕೆ ಮತಹಾಕಬಾರದು? ಸಿದ್ದು ನೀಡಿದ 5 ಕಾರಣ

ಪ್ರಗತಿಪರವಾದ ಕರ್ನಾಟಕದಂಥಹಾ ಒಂದು ರಾಜ್ಯದಲ್ಲಿ ಒಬ್ಬ ಒಳ್ಳೆಯ ನಾಯಕ ಹಾಗೂ ಕಾರ್ಯಶೀಲ ಮುಖ್ಯಮಂತ್ರಿ ಎಂದೆನಿಸಬೇಕಾದರೆ ಏನೆಲ್ಲ ಮಾಡಬೇಕು?

Siddaramiah government did nothing in last five years : BS Yeddyurappa

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2013-18 ರನಡುವೆ ಮಾಡಿದ ಕೆಲಸ ಹಾಗೂ ನಿರ್ಧಾರಗಳ ಮೇಲೆ ಒಂದು ಪಕ್ಷಿನೋಟ ಬೀರಿದಾಗ ಈ ಪ್ರಶ್ನೆ ಉದ್ಭವಿಸುತ್ತದೆ. ಅತ್ಯಂತ ಕನಿಷ್ಠ ಮಾತುಗಳಲ್ಲಿ ಹೇಳಬಹುದಾದ್ದು ಏನು ಎಂದರೆ ರಾಜ್ಯದ ಜನರಿಗೆ ಮಾಡಬಹುದಾಗಿದ್ದ ಒಂದು ಅರ್ಥಪೂರ್ಣ ಸೇವೆಯ ಅವಕಾಶವನ್ನು ಮುಖ್ಯಮಂತ್ರಿ ಕಳೆದುಕೊಂಡರು.

2013 ರ ಮೇ ತಿಂಗಳಲ್ಲಿ ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡಾಗಲೇ ಅವರ ಸರ್ಕಾರದ ಕಾರ್ಯಶೀಲತೆ ಕಡಿಮೆ ಆಗುವುದು ಆರಂಭವಾಯಿತು. ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಅವರು ತಮ್ಮ ಅಪ್ರಾಮಾಣಿಕತೆಯನ್ನು ಪ್ರದರ್ಶಿಸಲು ತೊಡಗಿದರು. ಕೇಂದ್ರ ಸರ್ಕಾರ ಪ್ರಣೀತವಾದ ಸಾರ್ವಜನಿಕ ಆಹಾರ ಪೂರೈಕೆ ಯೋಜನೆಯಲ್ಲಿ ಕೊಡುವ ಅಕ್ಕಿ ವಿತರಣೆಯಲ್ಲಿ ಒಂದಿಷ್ಟು ಆಲಂಕಾರಿಕ ಬದಲಾವಣೆ ಮಾಡಿದ ಮುಖ್ಯಮಂತ್ರಿ ಅದು ತನ್ನದೇ ಕನಸಿನ ಕೂಸು ಎನ್ನುವಂತೆ ಹೇಳಿ ಅನಗತ್ಯವಾದ ಪ್ರಚಾರ ಪಡೆಯಲು ಯತ್ನಿಸಿದರು.

2013ರ ಪ್ರವಾಹದ ಬಗ್ಗೆ ಯಡಿಯೂರಪ್ಪ ಮನ ಕಲಕುವ ನೆನಪು2013ರ ಪ್ರವಾಹದ ಬಗ್ಗೆ ಯಡಿಯೂರಪ್ಪ ಮನ ಕಲಕುವ ನೆನಪು

ಬಿಪಿಎಲ್ ಕುಟುಂಬಗಳಿಗೆ ಈ ಯೋಜನೆಯಡಿ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ಭಾರಿ ಪ್ರಮಾಣದಲ್ಲಿ ಸಹಾಯಧನ ಕೊಡುತ್ತಿದೆ ಎಂಬ ನಿಜಸಂಗತಿಯನ್ನು ಅವರು ಕಡೆಗಣಿಸಿದರು. ಈ ಯೋಜನೆಯನ್ನು ತಾವು ಆರಂಭಿಸುವುದಕ್ಕಿಂತ ಮುಂಚೆ ಕೋಟಿಗಟ್ಟಲೆ ಕುಟುಂಬಗಳು ಹಸಿವಿನಿಂದ ಬಳಲುತ್ತಿದ್ದುವು ಎಂದು ಅವರು ನಿಜವಲ್ಲದ ಮಾತು ಆಡಿದರು.

Siddaramiah government did nothing in last five years : BS Yeddyurappa

ಕೇಂದ್ರ ಸರ್ಕಾರಿ ಪ್ರಾಯೋಜಿತ ಯೋಜನೆಗಳಾದ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಪೂರೈಸುವ 'ಉಜ್ವಲಾ' ಯೋಜನೆಗೆ, 'ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ' ಎಂದೂ ಹಾಗೂ ಎಲ್ ಇ.ಡಿ ಬಲ್ಬು ವಿತರಿಸುವ ಕೇಂದ್ರ ಸರ್ಕಾರದ 'ಉಜಾಲಾ' ಯೋಜನೆಗೆ 'ಹೊಸಬೆಳಕು' ಎಂದೂ ಇಂಥದೇ ಸುಳ್ಳು ಶೀರ್ಷಿಕೆಗಳನ್ನು ಅವರು ಕೊಟ್ಟು ಸುಳ್ಳು ಪ್ರಚಾರ ಗಿಟ್ಟಿಸಿಕೊಳ್ಳಲು ನೋಡಿದರು.

ಮುಖ್ಯಮಂತ್ರಿಯಾದ ಮೊದಲ ವರ್ಷವೇ ಅಂದರೆ 2014 ರಲ್ಲಿ ಅವರು ಲೋಕಸಭಾ ಚುನಾವಣೆ ಕಡೆಗೆ ಎಷ್ಟು ಗಮನ ಹರಿಸಿದರು ಆದರೆ ರಾಜ್ಯವನ್ನು ಮುತ್ತಿ ಕಾಡುತ್ತಿದ್ದ ಬರ ಪರಿಹಾರದ ಕಡೆಗೆ ಅವರ ಗಮನವೇ ಹರಿಯಲಿಲ್ಲ. ಬಿಜೆಪಿಯ ದೊಡ್ಡ ನಾಯಕನ ವಿರುದ್ಧ ವಿಷ ಕಾರುವುದರಲ್ಲಿ ನಿರತರಾಗಿದ್ದ ಅವರು ಕೇವಲ ಮತಗಳನ್ನು ಗಳಿಸುವುದಕ್ಕಾಗಿ ಅಸಂಸದೀಯ ಪದವೊಂದನ್ನು ಬಳಸಿದರು. ಅವರಿಗೆ ಚುನಾವಣಾ ಆಯೋಗವು ವಾಗ್ದಂಡನೆ ವಿಧಿಸಿದ ನಂತರವೇ ಅವರು ತಣ್ಣಗಾದರು ಎಂಬುದು ಬೇರೆ ವಿಷಯ. ಅಷ್ಟೆಲ್ಲ ಮಾಡಿದರೂ ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ಎದುರು ಸೋತಿತು.

ಅವರು ತಮ್ಮ ಮೊದಲ ಬಜೆಟ್ ನಲ್ಲಿ ಸಮಾಜದ ಕೆಲವು ವರ್ಗಗಳನ್ನು ಓಲೈಸುವ ಹಾಗೂ ಒಡೆದು ಆಳುವ ನೀತಿಯನ್ನು ಆರಂಭಿಸಿದರು. ಜನರನ್ನು ಸಶಕ್ತಗೊಳಿಸುವ ಬದಲು ಆಮಿಷ ಒಡ್ಡುವುದೇ ದೊಡ್ಡದು ಎನ್ನುವಂತೆ ಅವರು ಬಿಂಬಿಸಿದರು. ಮೂಢ ನಂಬಿಕೆ ನಿಷೇಧ ಕರಡು ಮಸೂದೆ ಅಭ್ಯಾಸ ಮಾಡಲು ಕೂಡ ಅವರಿಗೆ ವೇಳೆ ಇರಲಿಲ್ಲ. ಕರಡು ಮಸೂದೆಯಲ್ಲಿ ಅಂಧ ನಂಬಿಕೆಗಳನ್ನು ನಿಷೇಧಿಸುವ ಬದಲು ಹಿಂದೂ ನಂಬಿಕೆಗಳನ್ನು ನಿಷೇಧಿಸುವ ಕಡೆಗೇ ಸರ್ಕಾರಕ್ಕೆ ಹೆಚ್ಚು ಗಮನ ಇದ್ದುದರಿಂದ ಅದನ್ನು ಶೈತ್ಯಾಗಾರದಲ್ಲಿ ಇಡುವುದು ಅವರಿಗೆ ಅನಿವಾರ್ಯವಾಯಿತು. ಅದೇ ಕಾರಣಕ್ಕಾಗಿ ಆ ಉದ್ದೇಶಿತ ಮಸೂದೆಯನ್ನು ನಮ್ಮ ಪಕ್ಷ ಹಾಗೂ ಸಾರ್ವಜನಿಕರು ಬಲವಾಗಿ ವಿರೋಧಿಸಿದರು. ರಾಜ್ಯದಲ್ಲಿ ಸಮರ್ಪಕವಾಗಿ ಆಡಳಿತ ಮಾಡುವುದು ಒತ್ತಟ್ಟಿಗೆ ಇರಲಿ ತಮ್ಮ ಸಂಪುಟವನ್ನು ಪೂರ್ಣವಾಗಿ ರಚಿಸಲೂ ಅವರಿಗೆ ಆಗಲಿಲ್ಲ. ಅಂದರೆ ಅವರು ಅಷ್ಟು ಅಸಹಾಯಕರಾಗಿ ಹೋಗಿದ್ದರು.

Siddaramiah government did nothing in last five years : BS Yeddyurappa

ಅವರ ಸಂಪುಟದ ಸಚಿವರ ಅಸಾಮರ್ಥ್ಯ ಎರಡನೇ ವರ್ಷದಲ್ಲಿಯೇ ಬಯಲಾಗುತ್ತ ಬಂತು. ಏಕೆಂದರೆ ಒಬ್ಬರೂ ತಮ್ಮ ಇಲಾಖೆಯ ಸಾಧನೆಯೇನು ಎಂಬುದನ್ನು ಬಿಂಬಿಸಲು ಸಮರ್ಥರಾಗಲಿಲ್ಲ. ಕುಡಿಯುವ ನೀರಿನ ಕೊರತೆಯಿಂದ ಬಳಲುತ್ತಿದ್ದ ಜಿಲ್ಲೆಗಳು ನೀರಿಗಾಗಿ ಹಾಹಾಕಾರ ಎಬ್ಬಿಸಿದಾಗ ಸರ್ಕಾರ ಆ ಜಿಲ್ಲೆಗಳಿಗೆ ನೇತ್ರಾವತಿ ನದಿಯಿಂದ ನೀರು ಪೂರೈಸುವ ಕುರಿತು ದೃಢ ನಿರ್ಧಾರ ತೆಗೆದುಕೊಳ್ಳಲು ಶಕ್ತವಾಗಲಿಲ್ಲ. ಕೇಂದ್ರ ಸರ್ಕಾರವು ಡಾ.ಕಸ್ತೂರಿ ರಂಗನ್ ವರದಿ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಕೇಳಿದಾಗಲೂ ಸರ್ಕಾರದಲ್ಲಿ ಇದ್ದವರಿಗೆ ಹೇಳಲು ಆಸಕ್ತಿ ಅಥವಾ ಸಮಯ ಎರಡೂ ಇರಲಿಲ್ಲ.

ಮೂರನೇ ವರ್ಷಕ್ಕೆ ಕಾಲು ಇರಿಸಿದಾಗಲೂ ಸರ್ಕಾರ ತನ್ನ ಅಸ್ತಿತ್ವವನ್ನು ಸಾಬೀತು ಮಾಡಲು ಸಫಲವಾಗಲಿಲ್ಲ. ಮುಖ್ಯಮಂತ್ರಿಗಳು ಪ್ರಚಾರ ಪಡೆದುದು ಯಾವುದೇ ಪ್ರಶಂಸಾರ್ಹ ಕೆಲಸ ಮಾಡಿ ಅಲ್ಲ, ಬದಲಿಗೆ ಸಾರ್ವಜನಿಕ ಸಮಾರಂಭಗಳಲ್ಲಿ ನಿದ್ದೆ ಮಾಡಿದ್ದರಿಂದ! ಅವರ ಸಂಪುಟದ ಸಚಿವರು ತಾವೇನು ಕಡಿಮೆ ಎಂದು ಅವರೂ ಬಹಿರಂಗ ಸಭೆಗಳಲ್ಲಿ ನಿದ್ದೆ ಹೊಡೆಯಲು ಆರಂಭಿಸಿದರು. ಮುಖ್ಯಮಂತ್ರಿಗಳನ್ನು ಬದಲಿಸಬೇಕು ಎಂಬ ಬೇಡಿಕೆ ಆಡಳಿತ ಪಕ್ಷದ ವೇದಿಕೆಯಲ್ಲಿಯೇ ವ್ಯಕ್ತವಾಗಿ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡತೊಡಗಿತು. ಅವರು ತಮ್ಮ ಪಕ್ಷದ ನಾಯಕರ ಜೊತೆಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಯತ್ನಿಸುತ್ತಿದ್ದಾಗಲೇ ಅವರ ವಿರುದ್ಧ ಅರ್ಕಾವತಿ ಬಡಾವಣೆಯ ಭೂ ಹಗರಣದ ವಿವಾದ ಕೇಳಿ ಬಂತು. ವಿಚಾರ ಲೋಕಾಯುಕ್ತದ ವರೆಗೆ ಹೋಯಿತು. ನಂತರ ಅದರ ವಿಚಾರಣೆಗಾಗಿ ಕೆಂಪಯ್ಯ ಆಯೋಗದ ರಚನೆಯಾಯಿತು.

Siddaramiah government did nothing in last five years : BS Yeddyurappa

ಹಿಂದುಳಿದ ಮತ್ತು ದುರ್ಬಲ ವರ್ಗಗಳ ಪರಮ ಸಂರಕ್ಷಕ ತಾವು ಎಂದು ಕೊಚ್ಚಿಕೊಳ್ಳುವ ಸಿದ್ದರಾಮಯ್ಯ ಅವರು ತೀವ್ರ ಮುಜುಗರಕ್ಕೆ ಒಳಗಾಗುವಂಥ ಒಂದು ಸನ್ನಿವೇಶ ನಿರ್ಮಾಣವಾಯಿತು. ಅವರ ಸಂಪುಟದ ಸಮಾಜ ಕಲ್ಯಾಣ ಸಚಿವರು ಪರಿಶಿಷ್ಟ ಜಾತಿ ಹಾಗೂ ವರ್ಗದ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗಾಗಿ ತಲೆದಿಂಬು, ಹಾಸಿಗೆ ಮತ್ತು ಬೆಡ್ ಶೀಟುಗಳನ್ನು ಕೇವಲ ಕಾಗದದಲ್ಲಿ ಖರೀದಿ ಮಾಡಿದ ಹಗರಣ ಬಯಲಿಗೆ ಬಂತು. ಮಾಧ್ಯಮದಲ್ಲಿ ಈ ಸುದ್ದಿ ಹೆಚ್ಚು ಹೆಚ್ಚು ಚರ್ಚೆಯಾದಂತೆ ಮತ್ತು ಸರ್ಕಾರ ಉತ್ತರ ಕೊಡಬೇಕು ಎಂದು ಬಿಜೆಪಿ ಒತ್ತಾಯಿಸಲು ಆರಂಭಿಸಿದಂತೆ ಸಂಬಂಧ ಪಟ್ಟ ಸಚಿವರು ರಕ್ಷಣಾತ್ಮಕವಾಗಿ ವರ್ತಿಸಿದರೆ ಮುಖ್ಯಮಂತ್ರಿಗಳು ಮೌನಕ್ಕೆ ಮೊರೆ ಹೋದರು.

ಸಿದ್ದರಾಮಯ್ಯನವರು ಆಡಳಿತದ ಮೇಲೆ ನಿಧಾನವಾಗಿ ನಿಯಂತ್ರಣ ಕಳೆದುಕೊಳ್ಳಲು ಆರಂಭಿಸಿದಂತೆ ಧಾರವಾಡದಂಥ ಪ್ರಶಾಂತ ನಗರದಲ್ಲಿ ಪ್ರಸಿದ್ಧ ವಿದ್ವಾಂಸ ಪ್ರೊ.ಎಂ.ಎಂ.ಕಲಬುರ್ಗಿ ಅವರ ಹತ್ಯೆಯಾಯಿತು. ಇವೊತ್ತಿನ ವರೆಗೆ ಅವರ ಹತ್ಯೆ ಮಾಡಿದ ಆರೋಪಿಗಳು ಯಾರು ಎಂದು ಗೊತ್ತಾಗಿಲ್ಲ.

ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತ ಬ್ಯಾಂಕು ಎಂದು ಭ್ರಮಿಸಿದ ಸಮುದಾಯಗಳ ತುಷ್ಟೀಕರಣಕ್ಕಾಗಿ ಅನೇಕ ಭಾಗ್ಯಗಳನ್ನು ಪ್ರಕಟಿಸಿದರೂ ಸಿದ್ದರಾಮಯ್ಯ ಸರ್ಕಾರದ ಪತನದ ಕ್ಷಣಗಣನೆ 2016 ರಲ್ಲಿಯೇ ಆರಂಭವಾಯಿತು ಎನ್ನಬೇಕು. ಭ್ರಷ್ಟಾಚಾರವನ್ನು ನಿಯಂತ್ರಿಸಲು ಅತ್ಯಂತ ಸಮರ್ಥವಾಗಿ ಕೆಲಸ ಮಾಡುತ್ತಿದ್ದ ಲೋಕಾಯುಕ್ತ ಸಂಸ್ಥೆಯನ್ನೂ ಹೆಚ್ಚೂ ಕಡಿಮೆ ಮುಚ್ಚಿ ಹಾಕಿದ್ದರಿಂದ ಸಿದ್ದರಾಮಯ್ಯ ಅವರು ಜನರ ವಿಶ್ವಾಸವನ್ನು ಕಳೆದುಕೊಂಡರು. ಆದರೆ, ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಭ್ರಷ್ಟಾಚಾರದ ವಿರುದ್ಧ ತಮ್ಮದು ಧರ್ಮಯುದ್ಧ ಎಂದು ಪಾದಯಾತ್ರೆ ಮಾಡಿದ್ದ ವ್ಯಕ್ತಿ ಮಾಡಿದ ಕೆಲಸ ಇದು! ಅವರು ಅಷ್ಟಕ್ಕೇ ಸಮಾಧಾನಗೊಳ್ಳಲಿಲ್ಲ. ಭ್ರಷ್ಟಾಚಾರ ವಿರೋಧಿ ದಳ (ಎ.ಸಿ.ಬಿ)ವನ್ನು ತೆರೆದು ಲೋಕಾಯುಕ್ತ ಪೊಲೀಸ್ ಬಳಿ ಇದ್ದ, ಭಷ್ಟರ ವಿರುದ್ಧ ಮೊಕದ್ದಮೆ ಹೂಡುವ, ಅಧಿಕಾರವನ್ನು ಕಿತ್ತುಕೊಂಡು ಎ.ಸಿ.ಬಿ ಕೈಗೆ ಕೊಟ್ಟರು. ಈಗ ಎ.ಸಿ.ಬಿಯು ಸರ್ಕಾರದ ಒಂದು ವಿಸ್ತರಿತ ಹಸ್ತ ಎನ್ನುವಂತೆ ಆಗಿದೆ.

Siddaramiah government did nothing in last five years : BS Yeddyurappa

ಅವರ ಆಡಳಿತದ ಇನ್ನೊಂದು ಕಪ್ಪುಚುಕ್ಕೆ ಎಂದರೆ ದ್ವಿತೀಯ ಪಿ.ಯು ಪರೀಕ್ಷೆಯ ರಸಾಯನ ವಿಜ್ಞಾನ ಪ್ರಶ್ನೆ ಪತ್ರಿಕೆ ಒಂದಲ್ಲ ಎರಡು ಸಾರಿ ಬಹಿರಂಗವಾದುದು. ಇಂಥ ಒಂದು ಭಾರಿ ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಕಿರಿಯ ಸಹೋದ್ಯೋಗಿಯಾದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಿಗೆ ಮಾರ್ಗದರ್ಶನ ಮಾಡಲೂ ಸಿದ್ದರಾಮಯ್ಯ ಅವರಿಗೆ ಸಮಯ ಇರಲಿಲ್ಲ. ಆದರೆ, ಅದೇ ಸಮಯದಲ್ಲಿ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಿಂದ ತಮ್ಮ ಖಾಸಗಿ ವೈದ್ಯಕೀಯ ವ್ಯವಹಾರ ನಡೆಸಲು ಯತ್ನಿಸಿದ ಮಗನ ಬೆಂಬಲಕ್ಕೆ ನಿಲ್ಲಲು ಅವರಿಗೆ ವೇಳೆಯ ಕೊರತೆ ಇರಲಿಲ್ಲ.

ಸರ್ಕಾರಿ ಆಸ್ಪತ್ರೆಯ ಜಾಗದಲ್ಲಿ ಖಾಸಗಿ ವೈದ್ಯಕೀಯ ವ್ಯಾಪಾರ ನಡೆಸಲು ನಡೆದ ಯತ್ನವನ್ನು ಸಾರ್ವಜನಿಕರು ತೀವ್ರವಾಗಿ ವಿರೋಧಿಸುವವರೆಗೆ ಸಿದ್ದರಾಮಯ್ಯ ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗಲಿಲ್ಲ. ಅಂತಿಮವಾಗಿ ಅವರ ಮಗ ಆ ಕಂಪೆನಿಯ ನಿರ್ದೇಶಕ ಹುದ್ದೆಗೆ ರಾಜೀನಾಮೆ ಕೊಡಬೇಕಾಯಿತು. ಈಗ ಅವರ ಅದೇ ಮಗ ಜನರ ಪ್ರತಿನಿಧಿಯಾಗಲು ಬೆವರು ಸುರಿಸುತ್ತಿದ್ದಾರೆ.

ಬೆಲೆಬಾಳುವ ಉಡುಗೊರೆಗಳನ್ನು ಸ್ವೀಕರಿಸುವ ಸಿದ್ದರಾಮಯ್ಯ ಅವರ ಖಯಾಲಿ ಹ್ಯುಬ್ಲೊ ಕೈಗಡಿಯಾರವನ್ನು ಧರಿಸುವ ಮೂಲಕ ಬೆಳಕಿಗೆ ಬಂತು. ಈ ಕೈಗಡಿಯಾರ ಹೇಗೆ ಬಂತು ಎಂಬ ಬಗೆಗೆ ಅವರು ಖಚಿತಪಡಿಸಲು ಆಗಲಿಲ್ಲ. ತೀವ್ರ ಮುಖಭಂಗಕ್ಕೆ ಒಳಗಾದ ಮುಖ್ಯಮಂತ್ರಿ ಕೊನೆಗೆ ಅದನ್ನು ಸರ್ಕಾರದ ವಶಕ್ಕೆ ಒಪ್ಪಿಸಿದರು.

ತಮ್ಮ ಸರ್ಕಾರದ ಇಬ್ಬರು ಮಂತ್ರಿಗಳನ್ನು ಸಮರ್ಥಿಸಿಕೊಳ್ಳಲು ಮುಖ್ಯಮಂತ್ರಿ ಸಾಕಷ್ಟು ಹೆಣಗಿದರು. ಅದರಲ್ಲಿ ಒಬ್ಬರು ಎಚ್.ವೈ.ಮೇಟಿ ಇನ್ನೊಬ್ಬರು ಕೆ.ಜೆ.ಜಾರ್ಜ್‌. ಮೇಟಿಯವರು ಇದ್ದರು ಎನ್ನಲಾದ ಅಶ್ಲೀಲ ಸಿ.ಡಿ ಬಹಿರಂಗವಾಗಿ ಕಾಂಗ್ರೆಸ್‌ ಪಕ್ಷ ತೀವ್ರ ಮುಜುಗರಕ್ಕೆ ಈಡಾದರೆ ಕೊಡಗು ಮೂಲದ ಪೊಲೀಸ್‌ ಅಧಿಕಾರಿ ಎಂ.ಕೆ.ಗಣಪತಿಯವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ಮುಂಚೆ ಬರೆದು ಇಟ್ಟಿದ್ದ ಮರಣಪತ್ರದಲ್ಲಿ ಆಗಿನ ಗೃಹಸಚಿವ ಕೆ.ಜೆ.ಜಾರ್ಜ್‌ ಅವರ ಹೆಸರನ್ನು ಉಲ್ಲೇಖಿಸಿದ್ದರು. ಈ ಪತ್ರ ಪೊಲೀಸ್‌ ಇಲಾಖೆಯಲ್ಲಿನ ರಾಜಕೀಯ ಹಸ್ತಕ್ಷೇಪವನ್ನು ಬಯಲಿಗೆ ತಂದಿತು. ಅಂತಿಮವಾಗಿ ಇಬ್ಬರೂ ಸಂಪುಟ ದರ್ಜೆ ಸಚಿವರು ರಾಜೀನಾಮೆ ಕೊಡಬೇಕಾಗಿ ಬಂತು.

ಆದರೆ, ಜಾರ್ಜ್ ಅವರನ್ನು ಮರಳಿ ಸಂಪುಟಕ್ಕೆ ತರಲು ಸಿದ್ದರಾಮಯ್ಯ ಎಷ್ಟು ಪಟ್ಟು ಹಿಡಿದಿದ್ದರು ಎಂದರೆ ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳುವ ವರೆಗೆ ಆ ಖಾತೆಯನ್ನು ತುಂಬಿಕೊಂಡಿರಲಿಲ್ಲ ಹಾಗೂ ಜಾರ್ಜ್ ಅವರನ್ನು ಖುಲಾಸೆ ಮಾಡಿ ಕಣ್ಣು ಒರೆಸುವ ತನಿಖೆಯ ರೀತಿಯಲ್ಲಿ ಸಿ.ಐ.ಡಿ ಯಿಂದ ಒಂದು ವರದಿ ತರಿಸಿಕೊಂಡರು. ಆದರೆ, ಜಾರ್ಜ್ ಅವರು ಸಂಪುಟಕ್ಕೆ ರಾಜೀನಾಮೆ ಕೊಡಲು ಮೊದಲು ಸಿದ್ಧರಿರಲಿಲ್ಲ. ನ್ಯಾಯಾಲಯವು ಅವರ ವಿರುದ್ಧ ಎಫ್. ಐ.ಆರ್ ದಾಖಲಿಸಬೇಕು ಎಂದು ನಿರ್ದೇಶನ ನೀಡಿದ ನಂತರವೇ ಅವರು ರಾಜೀನಾಮೆ ಕೊಟ್ಟರು.

Siddaramiah government did nothing in last five years : BS Yeddyurappa

2013 ರಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರ ಬಂದ ಲಾಗಾಯ್ತಿನಿಂದಲೂ ಗೃಹ ಇಲಾಖೆಯು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಕಾನೂನು ಭಂಗ ಮಾಡುವ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು ಮಾಡಲು ಹಿಂದೇಟು ಹಾಕುತ್ತಿದೆ. ಈ ಸರ್ಕಾರದಲ್ಲಿ ಹತ್ತಾರು ಹಿಂದೂ ಯುವಕರ ಮೇಲೆ ಹಲ್ಲೆಯಾಯಿತು ಅಥವಾ ಅವರ ಹತ್ಯೆಯಾಯಿತು. ರುದ್ರೇಶ್ ಎಂಬ ಹಿಂದೂ ಕಾರ್ಯಕರ್ತರೊಬ್ಬರನ್ನು ಬೆಂಗಳೂರಿನಲ್ಲಿ ನಡು ಬೀದಿಯಲ್ಲಿ ಹಾಡ ಹಗಲೇ ಕೊಲೆ ಮಾಡಲಾಯಿತು. ಆದರೆ, ಈ ಘೋರ ಘಟನೆ ಕುರಿತು ನೊಂದವರಿಗೆ ನ್ಯಾಯ ಒದಗಿಸುವುದು ಒತ್ತಟ್ಟಿಗೆ ಇರಲಿ ಸರ್ಕಾರಕ್ಕೆ ಕನಿಷ್ಠ ಪಶ್ಚಾತ್ತಾಪವೂ ಇರಲಿಲ್ಲ.

ಆತ್ಮಹತ್ಯೆ ಮಾಡಿಕೊಂಡ ಐ.ಎ.ಎಸ್‌ ಅಧಿಕಾರಿ ಡಿ.ಕೆ.ರವಿ ಅವರ ಕುಟುಂಬ ವರ್ಗಕ್ಕೆ ನ್ಯಾಯ ಒದಗಿಸಲೂ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ರವಿ ಅವರ ಮೃತ ದೇಹವನ್ನು ನೋಡಿದ ಕೂಡಲೇ ಒಬ್ಬ ಹಿರಿಯ ಪೊಲೀಸ್‌ ಅಧಿಕಾರಿ ಇದು ಆತ್ಮಹತ್ಯೆ ಎಂದು ಘೋಷಿಸಿ ಬಿಟ್ಟರು. ಆದರೆ, ಅವರ ಸಾವಿನ ಕುರಿತು ಯಾವುದೇ ತನಿಖೆ ನಡೆಯುವುದಕ್ಕಿಂತ ಮುಂಚೆಯೇ ಬಂದ ತೀರ್ಮಾನ ಇದು. ತೀವ್ರ ಒತ್ತಡದ ನಂತರ ಮುಖ್ಯಮಂತ್ರಿಯವರು ಮೊದಲು ಸಿ.ಐ.ಡಿ ಯಿಂದ ತನಿಖೆ ಮಾಡಿಸಿದರು. ಸಾಕಷ್ಟು ಸಮಯದ ನಂತರ ಅವರು ಅದನ್ನು ಸಿಬಿಐಗೆ ವಹಿಸಿದರು.

ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿಯೂ ಅವರು ಹೀಗೆಯೇ ನಡೆದುಕೊಂಡರು. ಇದು ಗೃಹ ಇಲಾಖೆಯ ಕಾರ್ಯವೈಖರಿಯ ಕಥೆ. ಕಳೆದ ಐದು ವರ್ಷಗಳಲ್ಲಿ ಮೂವರು ಗೃಹ ಸಚಿವರನ್ನು ಹಾಗೂ ಒಬ್ಬ 'ಸೂಪರ್' ಗೃಹ ಸಚಿವರನ್ನು ಕಂಡ ಇಲಾಖೆಯ ಕಥೆ ಇದು. ಪತ್ರಕರ್ತೆ ಹಾಗೂ ಹೋರಾಟಗಾರ್ತಿಯಾಗಿದ್ದ ಗೌರಿ ಲಂಕೇಶ್ ಹತ್ಯೆಯ ತನಿಖೆಯನ್ನು ಈ ಇಲಾಖೆ ಇನ್ನೂ ಮಾಡುತ್ತಿದೆ.

ಜಾರ್ಜ್ ಅವರು ಬೆಂಗಳೂರು ಅಭಿವೃದ್ಧಿ ಸಚಿವರಾಗುತ್ತಿದ್ದಂತೆಯೇ ಬೆಂಗಳೂರಿನ ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲು ಸೇತುವೆ ವರೆಗೆ 1,791 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ 6.7 ಕಿಲೋ ಮೀಟರ್ ಉಕ್ಕಿನ ಸೇತುವೆಯ ಹಗರಣ ಅವರನ್ನು ಸುತ್ತಿಕೊಂಡಿತು. ಉಕ್ಕಿನ ಸೇತುವೆ ನಿರ್ಮಾಣದ ಹಾದಿಯುದ್ದಕ್ಕೂ ಬೆಳೆದು ನಿಂತಿರುವ ನೂರಾರು ಮರಗಳನ್ನು ಕತ್ತರಿಸುವ ಈ ದುರುದ್ದೇಶದ ಯೋಜನೆಯ ವಿರುದ್ಧ ಬೆಂಗಳೂರು ನಗರ ಮತ್ತು ಬಿಜೆಪಿ ಬಂಡು ಎದ್ದುವು. ಪ್ರತಿಭಟನೆ ಎಷ್ಟು ಜೋರಾಯಿತು ಎಂದರೆ ಸರ್ಕಾರ ಅಂತಿಮವಾಗಿ ಆ ಯೋಜನೆಯ ಕೈ ಬಿಡಬೇಕಾಯಿತು. ಅದನ್ನು ಸಮರ್ಥಿಸಿಕೊಳ್ಳಲು ಅದಕ್ಕೆ ಆಗಲೇ ಇಲ್ಲ.

2017 ರಲ್ಲಿ, ಇನ್ನೇನು ಮುಂದಿನ ವರ್ಷ ಚುನಾವಣೆ ಎದುರಿಸಬೇಕು ಎಂದುಕೊಂಡ ಸಿದ್ದರಾಮಯ್ಯ ಅವರು ದಲಿತ ನಾಯಕ ಡಾ.ಜಿ.ಪರಮೇಶ್ವರ್ ಅವರನ್ನು ಸಂಪುಟದಿಂದ ತೆಗೆದು ಹಾಕಿ ಅವರನ್ನು ಕೇವಲ ಪಕ್ಷದ ಅಧ್ಯಕ್ಷ ಹುದ್ದೆಗೆ ಸೀಮಿತಗೊಳಿಸಿದರು.

ಬೆಂಗಳೂರಿನ ಅಭಿವೃದ್ಧಿಗೆ ತಾನು ಏನೆಲ್ಲ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಅಂಕಿ ಅಂಶಗಳನ್ನು ಹೇಳುವಾಗಲೇ ಬೆಂಗಳೂರಿನ ಅತಿ ದೊಡ್ಡ ಬೆಳ್ಳಂದೂರು ಕೆರೆಗೆ ಬೆಂಕಿ ಬಿತ್ತು. ಕೆರೆಗೆ ವಿಷಪೂರಿತ ತ್ಯಾಜ್ಯ ಸೇರಿಕೊಂಡುದರ ಫಲ ಇದು. ಮಳೆ ಬಂದಾಗಲೆಲ್ಲ ಒಳಚರಂಡಿಗಳು ಕಟ್ಟಿಕೊಂಡು ಅವುಗಳ ಮುಚ್ಚಳ ತೆರೆದುಕೊಂಡು ಮತ್ತು ತುಂಬಿ ಹರಿಯುವ ದೊಡ್ಡ ಚರಂಡಿಗಳಲ್ಲಿ ಕೊಚ್ಚಿಕೊಂಡು ಹೋಗಿ 15ಕ್ಕಿಂತ ಹೆಚ್ಚು ಜನರು ಸತ್ತು ಹೋದರು. ರಸ್ತೆಗಳಲ್ಲಿ ಬಿದ್ದ ಗುಂಡಿಗಳು ಕೂಡ ಮರಣ ಕೂಪಗಳಾಗಿ ಪರಿಣಮಿಸಿದುವು.

ಒಂದು ಸಣ್ಣ ಮಳೆ ಬಿದ್ದರೂ ಸಾಕು ಬೆಂಗಳೂರಿನ ಮೂಲಸೌಕರ್ಯ ಎಷ್ಟು ದುರ್ಬಲವಾಗಿದೆ ಎಂಬುದು ಬಯಲಿಗೆ ಬಂದು ಬಿಡುತ್ತಿತ್ತು. ನಗರವನ್ನು ಸುಂದರಗೊಳಿಸುವ ನೆಪದಲ್ಲಿ ಪಾದಚಾರಿ ರಸ್ತೆಗಳು ಮಾಯವಾಗುತ್ತಿವೆ ಹಾಗೂ ರಸ್ತೆಗಳನ್ನು ನಿತ್ಯವೂ ಅಗೆಯಲಾಗುತ್ತಿದೆ. ಸರ್ಕಾರದ ಆಡಳಿತದಲ್ಲಿ ಯಾವುದೇ ಪಾರದರ್ಶಕತೆ ಇಲ್ಲವಾದ ಕಾರಣ ಸಾರ್ವಜನಿಕರಿಗೆ ಏನಾಗುತ್ತಿದೆ ಎಂದು ತಿಳಿಯುತ್ತಿಲ್ಲ. ಬಹುಶಃ ಅದಕ್ಕಾಗಿಯೇ ಒಂದು ಸ್ವತಂತ್ರ ಸಂಸ್ಥೆಯು ಭ್ರಷ್ಟಾಚಾರದಲ್ಲಿ ಕರ್ನಾಟಕವು ನಂಬರ್ ಒನ್ ಸ್ಥಾನದಲ್ಲಿ ಇದೆ ಎಂದು ಹೇಳಿರುವುದು ವೃಥಾ ಇರಲಿಕ್ಕಿಲ್ಲ.

ಅಂತಿಮವಾಗಿ 2018 ಬಂದಾಗ ಮುಖ್ಯಮಂತ್ರಿಗಳು ಕಣಕ್ಕೆ ಇಳಿದರು. ಕೆಲಸ ಮಾಡಲು ಅಲ್ಲ. ತಮ್ಮದು ನಂಬರ್ ಒನ್ ಸರ್ಕಾರ ಹಾಗೂ ತಾವು ಅತ್ಯುತ್ತಮ ಮುಖ್ಯಮಂತ್ರಿ ಎಂದು ಇಡೀ ರಾಜ್ಯದಲ್ಲಿ ಅವರೇ ಜಾಹೀರಾತು ಹಾಕಿಸಿದರು. 2017ರಲ್ಲಿ, ಬಂಡವಾಳ ಹೂಡಿಕೆಯನ್ನು ಕೈಗೂಡಿಸಿಕೊಳ್ಳುವಲ್ಲಿ, ಶೇ 73 ರಷ್ಟು ಕುಸಿತವಾಯಿತು. ಆದರೂ, ಬಂಡವಾಳ ಆಕರ್ಷಿಸುವಲ್ಲಿ ತಮ್ಮದು ನಂಬರ್ ಒನ್ ಸರ್ಕಾರ ಎಂದು ಮುಖ್ಯಮಂತ್ರಿ ಜಾಹೀರಾತುಗಳಲ್ಲಿ ಕೊಚ್ಚಿಕೊಂಡರು. ಕೇವಲ ಕಾಗದದ ಮೇಲೆ ಬಂಡವಾಳ ಹೂಡಿದರೆ ಏನು ಪ್ರಯೋಜನ?

ಈ ನಡುವೆ ಚುನಾವಣೆ ಘೋಷಣೆ ಆಗುವುದಕ್ಕಿಂತ ಕೆಲವೇ ತಿಂಗಳು ಮುಂಚೆ ತಮ್ಮ ವಿಭಜಕ ರಾಜಕೀಯದ ಮೂಲಕ ಹಿಂದೂಗಳ ಸಂಖ್ಯೆಯನ್ನು ಕಡಿಮೆ ಮಾಡಲು ಅವರು ನಿರತರಾದರು. ಜಾಣ ಹಾಗೂ ಜವಾಬ್ದಾರಿಯುತ ಕರ್ನಾಟಕದ ಜನರು ಕಾಂಗ್ರೆಸ್ಸಿಗೆ ಮತ್ತೆ ಮತ ಹಾಕುವ ತಪ್ಪನ್ನು ಏಕೆ ಮಾಡಬೇಕು?

- ಬಿ.ಎಸ್.ಯಡಿಯೂರಪ್ಪ, ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ.

English summary
BJP state president BS Yeddyurappa asks what Siddaraiamah government did in last five years. Most of the Siddaramiah's cabinet ministers involved in corruption. No development done in last five years. Siddaramiah divide people in the name of religions and caste for votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X