ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲಾ ಶುಲ್ಕ: ಖಾಸಗಿ ಶಾಲೆಗಳ ಲಾಬಿಗೆ ಮಣಿಯಿತೇ ರಾಜ್ಯ ಬಿಜೆಪಿ ಸರ್ಕಾರ?

|
Google Oneindia Kannada News

ಬೆಂಗಳೂರು, ಜೂ. 15: ಇಂದಿನಿಂದ (ಜೂ. 15) ಶಾಲಾ ಮಕ್ಕಳ ದಾಖಲಾತಿ ಪ್ರಕ್ರಿಯೆ ಆರಂಭಿಸುವಂತೆ ರಾಜ್ಯ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ. ಆದರೆ ಶಾಲಾ ಶುಲ್ಕದ ವಿಚಾರವಾಗಿ ಯಾವುದೇ ವಿಚಾರವನ್ನು ಪ್ರಸ್ತಾಪ ಮಾಡಿಲ್ಲ. ಇದು ಶಾಲಾ ಆಡಳಿತ ಮಂಡಳಿಗಳು ಹಾಗೂ ಪೋಷಕರ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ. ಆದರೆ ಅದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಸರ್ಕಾರ ನಡೆದುಕೊಳ್ಳುತ್ತಿದೆ.

ಕಳೆದ ಒಂದೂವರೆ ವರ್ಷಗಳಿಂದ ಶಾಲೆಗಳಿಗೆ ಮಕ್ಕಳು ಹೋಗಿಲ್ಲ, ಆದರೂ ಶಾಲಾ ಶುಲ್ಕದೊಂದಿಗೆ ವಾಹನ ಶುಲ್ಕವನ್ನೂ ಖಾಸಗಿ ಶಿಕ್ಷಣ ಸಂಸ್ಥೆಗಳು ಭರಿಸಿಕೊಂಡಿವೆ. ಜೊತೆಗೆ ಕಳೆದ ವರ್ಷ ಶೇಕಡಾ 30ರಷ್ಟು ರಿಯಾಯತಿ ಕೊಟ್ಟಿದ್ದ ಸರ್ಕಾರ ಶೇಕಡಾ. 70 ರಷ್ಟು ಶುಲ್ಕ ಭರಿಸುವಂತೆ ಸೂಚಿಸಿತ್ತು. ಸರ್ಕಾರದ ಆ ಆದೇಶಕ್ಕೂ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಸೊಪ್ಪು ಹಾಕಿರಲಿಲ್ಲ. ಜೊತೆಗೆ ಈ ವರ್ಷ ಯಾವುದೇ ಕಾರಣಕ್ಕೂ ಶುಲ್ಕ ರಿಯಾಯತಿ ಸಾಧ್ಯವಿಲ್ಲ ಎಂದು ಈಗಾಗಲೇ ಶಾಲಾ ಆಡಳಿತ ಮಂಡಳಿಗಳು ಸ್ಪಷ್ಟಪಡಿಸಿವೆ.

ಈ ಎಲ್ಲ ವಿಚಾರಗಳ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಮಹತ್ವದ ಪತ್ರವನ್ನು ಬರೆದಿದ್ದಾರೆ. ಸರ್ಕಾರದ ಜವಾಬ್ದಾರಿಯನ್ನೂ ನೆನಪಿಸಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಅವರ ಆಗ್ರಹವೇನು? ಇಲ್ಲಿದೆ ಮಾಹಿತಿ...

 ಶುಲ್ಕ ತೆಗೆದುಕೊಂಡು ವೇತನ ಕೊಟ್ಟಿಲ್ಲ!

ಶುಲ್ಕ ತೆಗೆದುಕೊಂಡು ವೇತನ ಕೊಟ್ಟಿಲ್ಲ!

"ಶಾಲಾ ಶುಲ್ಕ ವಿಚಾರದಲ್ಲಿ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳ ನಡುವೆ ಉಂಟಾಗಿರುವ ಸಂಘರ್ಷವನ್ನು ತಕ್ಷಣ ನಿವಾರಿಸಬೇಕು," ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, "ಪೋಷಕರು ಪಾವತಿಸಬೇಕಾದ ರಿಯಾಯ್ತಿ ಶುಲ್ಕವನ್ನು ಸರ್ಕಾರವೇ ನಿರ್ಧರಿಸಬೇಕು. ಜೊತೆಗೆ ಸರ್ಕಾರದ ನಿರ್ಧಾರವನ್ನು ಕಟ್ಟುನಿಟ್ಟಾಗಿ ಜಾರಿ ಆಗುವಂತೆ ಕ್ರಮ ವಹಿಸಬೇಕು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ತಡೆ ಹಿಡಿದಿರುವ ಸಂಬಳ ನೀಡಬೇಕು," ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

 ಶಿಕ್ಷಕರು ಕೂಲಿ ಕೆಲಸ ಮಾಡುತ್ತಿದ್ದಾರೆ!

ಶಿಕ್ಷಕರು ಕೂಲಿ ಕೆಲಸ ಮಾಡುತ್ತಿದ್ದಾರೆ!

ಖಾಸಗಿ ಶಾಲಾ ಆಡಳಿತ ಮಂಡಳಿಗಳು ಬ್ಯಾಂಕ್‌ಳಿಗೆ ಪಾವತಿಸಬೇಕಾದ ಕೊರೊನಾ ಕಾಲದ ಅವಧಿಯಲ್ಲಿನ ಸಾಲದ ಮೇಲಿನ ಬಡ್ಡಿ ಮುಂತಾದ ವಿಚಾರಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಖಾಸಗಿ ಶಾಲೆಗಳಿಗೆ ಆಗಿರುವ ಹೊರೆಯನ್ನು ತಗ್ಗಿಸಲು ಸಾಧ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.

"ಕೊರೊನಾ ಕಾರಣದಿಂದಾಗಿ ಕಳೆದ ವರ್ಷದಿಂದ ಮಕ್ಕಳು ಶಾಲೆಗಳಿಗೆ ಹೋಗಲು ಸಾಧ್ಯವಾಗಲೇ ಇಲ್ಲ. ತರಗತಿಗಳು ನಡೆಯಲಿಲ್ಲವೆಂದು ಖಾಸಗಿ ಶಾಲೆ-ಕಾಲೇಜುಗಳು ಶಿಕ್ಷಕರಿಗೆ ಸಂಬಳವನ್ನು ನೀಡಿಲ್ಲ. ಸಂಬಳವಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಶಿಕ್ಷಕರು ನರೇಗಾ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅನೇಕರು ಹಣ್ಣು ತರಕಾರಿ ವ್ಯಾಪಾರಿಗಳಾಗಿದ್ದಾರೆ," ಎಂದು ಶಿಕ್ಷಕರ ಸಂಕಷ್ಟಗಳನ್ನು ಸಿದ್ದರಾಮಯ್ಯ ಅವರು ಸರ್ಕಾರದ ಗಮನಕ್ಕೆ ತಂದಿದ್ದಾರೆ.

 ಸರ್ಕಾರದ ಆದೇಶಕ್ಕೆ ಕಿಮ್ಮತ್ತಿಲ್ಲ!

ಸರ್ಕಾರದ ಆದೇಶಕ್ಕೆ ಕಿಮ್ಮತ್ತಿಲ್ಲ!

"ಇಂಥ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆ-ಕಾಲೇಜುಗಳು ವಿದ್ಯಾರ್ಥಿಗಳ ಶುಲ್ಕದಲ್ಲಿ ವಿನಾಯಿತಿ ನೀಡಬೇಕೆಂದು ಪೋಷಕರು ಒತ್ತಾಯ ಮಾಡುತ್ತಿದ್ದಾರೆ. ಪೋಷಕರ ಒತ್ತಾಯಕ್ಕೆ ಮಣಿದ ಸರ್ಕಾರ ಕಳೆದ ವರ್ಷ ಬೋಧನಾ ಶುಲ್ಕದಲ್ಲಿ ಶೇ 30 ರಷ್ಟು ವಿನಾಯ್ತಿ ನೀಡಿ ಶೇ 70 ರಷ್ಟು ಶುಲ್ಕ ಕಟ್ಟಬೇಕೆಂದು ಆದೇಶ ಹೊರಡಿಸಿತ್ತು. ಆದರೆ ಈ ಆದೇಶ ಜಾರಿಗೆ ಬರಲಿಲ್ಲ," ಎಂದು ಸರ್ಕಾರದ ನಿರ್ಲಕ್ಷವನ್ನು ಸಿದ್ದರಾಮಯ್ಯ ವಿವರಿಸಿದ್ದಾರೆ.

"ಶಾಲೆಗಳ ವಿಚಾರದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪುರ್ಣವಾಗಿ ನಿಷ್ಕ್ರಿಯವಾಗಿದೆ. ಶಾಲಾ ಮಕ್ಕಳ ವಾಹನ ಶುಲ್ಕ ಸೇರಿ ಇತರೆ ಶುಲ್ಕವನ್ನೂ ಕಟ್ಟಿಸಿಕೊಳ್ಳಲಾಗಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ನಿಷ್ಕ್ರಿಯವಾಗಿರುವುದು ಲಾಬಿಗೆ ಮಣಿದಿದೆ ಎಂಬುದು ಗೊತ್ತಾಗುತ್ತದೆ. ಸರ್ಕಾರದ ಆದೇಶಕ್ಕೆ ಕಿಮ್ಮತ್ತು ಕೊಡದ ಖಾಸಗಿ ಶಿಕ್ಷಣ ಸಂಸ್ಥೆಗಳ ಕುರಿತು ಯಾವ ಕ್ರಮ ವಹಿಸಲಾಗಿದೆ? ಪೂರ್ತಿ ಶುಲ್ಕವನ್ನು ಕಟ್ಟಲಾಗದ ಮಕ್ಕಳಿಗೆ ಮುಂದಿನ ತರಗತಿಗಳಿಗೆ ಪ್ರವೇಶ ನೀಡದೆ ಶೋಷಿಸುತ್ತಿರುವ ಶಾಲೆಗಳ ವಿಚಾರದಲ್ಲಿ ಯಾವ ಕ್ರಮ ವಹಿಸಲಾಗಿದೆ? ಎಂಬುದನ್ನು ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು," ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Recommended Video

Sanchari Vijay ಸ್ನೇಹಕ್ಕೆ ಬೆಲೆಕೊಟ್ಟ ರಘು | Oneindia Kannada
 ಬಸ್‌ ಶುಲ್ಕವನ್ನೂ ವಸೂಲಿ ಮಾಡಿದ್ದಾರೆ

ಬಸ್‌ ಶುಲ್ಕವನ್ನೂ ವಸೂಲಿ ಮಾಡಿದ್ದಾರೆ

ಜುಲೈ 1 ರಿಂದ ಶೈಕ್ಷಣಿಕ ವರ್ಷದ ತರಗತಿಗಳನ್ನು ಆರಂಭಿಸಲು ಹಾಗೂ ದಿನಾಂಕ 15-6-2021 ರಿಂದಲೇ ದಾಖಲಾತಿ ಪ್ರಕ್ರಿಯೆ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಆದರೆ, ಶುಲ್ಕ ವಸೂಲಿ ಬಗ್ಗೆ ಇಲಾಖೆ ಯಾವುದೇ ಸ್ಪಷ್ಟ ಸೂಚನೆ ನೀಡಿಲ್ಲ. ಹೀಗಾಗಿ ಕಳೆದ ವರ್ಷದಂತೆಯೇ ಈ ಶೈಕ್ಷಣಿಕ ವರ್ಷದಲ್ಲೂ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳ ನಡುವೆ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ.

"ಕಳೆದ ವರ್ಷ ಶಾಲೆಗೆ ಮಕ್ಕಳು ಕಾಲಿಡಲು ಸಾಧ್ಯವಾಗದಿದ್ದರೂ ಬಸ್ ಶುಲ್ಕವನ್ನೂ ವಸೂಲಿ ಮಾಡಿದ ಶಾಲೆಗಳೂ ಇವೆ. ಈ ವರ್ಷವೂ ಇದೇ ಪರಿಸ್ಥಿತಿ ಮುಂದುವರೆದಿದೆ. ಸಾಲದ್ದಕ್ಕೆ ಸರ್ಕಾರ ಶೇ 30 ರಷ್ಟು ಶುಲ್ಕ ಕಡಿತ ಮಾಡಿದ್ದು ಹಿಂದಿನ ವರ್ಷಕ್ಕೆ ಮಾತ್ರ, ಈ ವರ್ಷ ಸರ್ಕಾರವೇ ಪೂರ್ಣ ಶುಲ್ಕ ವಸೂಲಿ ಮಾಡಲು ಒಪ್ಪಿಗೆ ಕೊಟ್ಟಿದೆ ಎಂದು ಆಡಳಿತ ಮಂಡಳಿಗಳು ಪೋಷಕರಿಗೆ ಹೇಳುತ್ತಿವೆ," ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒತ್ತಡವನ್ನು ಸಿದ್ದರಾಮಯ್ಯ ಅವರು ಸರ್ಕಾರದ ಗಮನಕ್ಕೆ ತಂದಿದ್ದಾರೆ.

"ಹೀಗಾಗಿ ತಕ್ಷಣ ಸರ್ಕಾರ ಈ ವಿಚಾರದಲ್ಲಿ ತನ್ನ ನಿಲುವು ಏನು ಎನ್ನುವುದನ್ನು ಸ್ಪಷ್ಟಪಡಿಸಬೇಕು ಮತ್ತು ಶುಲ್ಕದ ಪ್ರಮಾಣವನ್ನು ಸರ್ಕಾರವೇ ನಿರ್ಧರಿಸಿ ತನ್ನ ನಿರ್ಧಾರ ಕಟ್ಟುನಿಟ್ಟಾಗಿ ಜಾರಿ ಆಗುವಂತೆ ಕ್ರಮ ವಹಿಸಬೇಕು," ಎಂದು ಸಿದ್ದರಾಮಯ್ಯ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

English summary
Leader of Opposition Siddaramaiah written letter to Chief Minister B S Yediyurappa to alleviate the school fees conflict and other problems of parents. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X