• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿದ್ದರಾಮಯ್ಯ ಎಸೆದ ಬಾಂಬ್ 2019ರ ಚುನಾವಣೆಯ ತಂತ್ರವೇ?

|

ಬೆಂಗಳೂರು, ಸೆಪ್ಟೆಂಬರ್ 9: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಬಾಂಬ್ ಹಾಕಿದ್ದಾರೆ, ಒಂದು ಮಾತನ್ನಾಡಿ ತಳಮಳ ಸೃಷ್ಟಿಸಿದ್ದಾರೆ, ಕೊನೆಗೆ ಕುಟುಂಬದ ಜತೆ ರಜೆ ಕಳೆಯಲು ಯುರೋಪ್‌ಗೆ ಹಾರಿದ್ದಾರೆ.

ಐದು ವರ್ಷ ರಾಜ್ಯದಲ್ಲಿ ಪೂರ್ಣಾವಧಿ ಆಡಳಿತ ನೀಡಿದ್ದ ಸಿದ್ದರಾಮಯ್ಯ, ಒಂದು ಕಾಲದಲ್ಲಿ ತಾವು ಗುರುತಿಸಿಕೊಂಡು ಬೆಳೆದಿದ್ದ ಜೆಡಿಎಸ್‌ ಜತೆ ಕೈಜೋಡಿಸಿ ಕಾಂಗ್ರೆಸ್ ಸರ್ಕಾರ ರಚಿಸಿರುವ ಕಹಿ ಅವರಲ್ಲಿ ಇನ್ನೂ ಇದ್ದಂತಿದೆ.

ವಿಶ್ಲೇಷಣೆ : ಸಿದ್ದರಾಮಯ್ಯ ಯುರೋಪ್ ಪ್ರವಾಸದ ರಹಸ್ಯ ಬಟಾಬಯಲು!

ಆಗಸ್ಟ್ ಕೊನೆಯ ವಾರದಲ್ಲಿ ಸಿದ್ದರಾಮಯ್ಯ, ಜನರ ಆಶೀರ್ವಾದ ತಮ್ಮ ಮೇಲಿದೆ. ತಾವು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿಕೆ ನೀಡಿದ್ದರು. ಆದರೆ, ಅದು ಯಾವಾಗ ಎಂದು ವಿವರಿಸಲು ಅವರು ಮುಂದಾಗಿರಲಿಲ್ಲ. ತಾವು ಮುಖ್ಯಮಂತ್ರಿಯಾಗದಂತೆ ತಡೆಯಲು ರಾಜಕೀಯ ವೈರಿಗಳು ತಮ್ಮ ವಿರುದ್ಧ ಒಂದುಗೂಡಿವೆ ಎಂದು ಅವರು ಆರೋಪಿಸಿದ್ದರು.

ಕಾಲಚಕ್ರ ತಿರುಗುತ್ತಿರುತ್ತದೆ. ಮೇಲಿದ್ದವರು ಕೆಳಕ್ಕೆ ಬರಲೇಬೇಕು ಮತ್ತು ಕೆಳಗಿದ್ದವರು ಮೇಲೇರುತ್ತಾರೆ ಎಂದಿದ್ದ ಅವರು, ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯಾಗುವ ಸುಳಿವು ನೀಡಿದ್ದರು.

ಸಮನ್ವಯ ಸಮಿತಿ ಅಸ್ತು ಅಂದ್ರೆ ಸಿದ್ದರಾಮಯ್ಯ ಸಿಎಂ:ಶಿವಶಂಕರ ರೆಡ್ಡಿ

ಸಿದ್ದರಾಮಯ್ಯ ಅವರ ಆಪ್ತರಾದ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಅವರೂ, ಮೈತ್ರಿ ಪಕ್ಷಗಳು ಒಪ್ಪಿದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬಹುದು ಎನ್ನುವ ಮೂಲಕ ಈ ಹೊಗೆಯನ್ನು ದಟ್ಟವಾಗಿಸಿದ್ದಾರೆ. ಮತ್ತೊಬ್ಬ ಮುಖಂಡ ಚಲುವರಾಯಸ್ವಾಮಿ ಕೂಡ, ಸಿದ್ದರಾಮಯ್ಯ ಅವರನ್ನು ಏಕಾಂಗಿಯಾಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.

ರಾಜಕೀಯ ಪ್ರತ್ಯೇಕತೆ

ರಾಜಕೀಯ ಪ್ರತ್ಯೇಕತೆ

ಸಮ್ಮಿಶ್ರ ಸರ್ಕಾರ ರಚನೆಯಾದ ಸಂದರ್ಭದಿಂದಲೂ ಸಿದ್ದರಾಮಯ್ಯ ಅವರಲ್ಲಿ ಅತೃಪ್ತಿಯಿದೆ. ಅವರು ಕಾಂಗ್ರೆಸ್ ಒಳಗೂ, ಜೆಡಿಎಸ್‌ನೊಂದಿಗೂ ಹೋರಾಟ ನಡೆಸುತ್ತಿದ್ದಾರೆ. ಕಾಂಗ್ರೆಸ್‌ಗೆ ಹೊಸಬರಾಗಿದ್ದ ಅವರಿಗೆ ಮುಖ್ಯಮಂತ್ರಿ ಪಟ್ಟ ನೀಡಲಾಗಿತ್ತು ಎಂಬ ಕಣ್ಣಿನಿಂದಲೇ ಹಳೆಯ ಕಾಂಗ್ರೆಸ್ಸಿಗರು ಅವರನ್ನು ನೋಡುತ್ತಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ ಅವರಂತಹ ನಾಯಕರು ಈ ರೇಸ್‌ನಲ್ಲಿ ಸೋಲು ಅನುಭವಿಸಿದ ಬೇಗುದಿಗೆ ಒಳಗಾಗಿದ್ದರು.

ಸಮ್ಮಿಶ್ರ ಸರ್ಕಾರಕ್ಕೆ ಇರುವ ಬೆದರಿಕೆ

ಸಮ್ಮಿಶ್ರ ಸರ್ಕಾರಕ್ಕೆ ಇರುವ ಬೆದರಿಕೆ

ಸಿದ್ದರಾಮಯ್ಯ ಅವರ ಪರವಾಗಿ ದೇವೇಗೌಡ ಅವರ ಕುಟುಂಬಕ್ಕೆ ಯಾವ ಒಲವೂ ಇಲ್ಲ. ತಾವು ಬೆಳೆಸಿದ ವ್ಯಕ್ತಿ ಪಕ್ಷವನ್ನು ತೊರೆದು ತಮಗೆ ವಂಚಿಸಿದ್ದಾರೆ ಎಂದು ದೇವೇಗೌಡ, ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊಂದಿದ್ದಾರೆ.

ಜತೆಗೆ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅವರಿಗೆ ಇರುವ ದೊಡ್ಡ ಬೆದರಿಕೆ ಸಿದ್ದರಾಮಯ್ಯ ಎಂದೂ ಅವರು ಪರಿಗಣಿಸಿದ್ದಾರೆ. 2013 ಮತ್ತು 2018ರ ಎರಡೂ ಸಂದರ್ಭಗಳಲ್ಲಿ ಸಿದ್ದರಾಮಯ್ಯ ಇದು ತಮ್ಮ ಕೊನೆಯ ಚುನಾವಣೆ ಎಂದು ಘೋಷಿಸಿದ್ದರು. 2018ರಲ್ಲಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಹೇಳಿಕೊಂಡಿದ್ದರು. ಆದರೆ, ದಿನ ಕಳೆದಂತೆ ಅವರು ರಾಜ್ಯದ ಅತಿ ಕ್ರಿಯಾಶೀಲ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ.

ಮತ್ತೆ ಮುಖ್ಯಮಂತ್ರಿಯಾಗುತ್ತೇನೆಂದು ಹೊಸ ಬಾಂಬ್ ಸಿಡಿಸಿದ ಸಿದ್ದರಾಮಯ್ಯ

ಹಲವು ಹೋರಾಟಗಳಲ್ಲಿ ಸಿದ್ದರಾಮಯ್ಯ

ಹಲವು ಹೋರಾಟಗಳಲ್ಲಿ ಸಿದ್ದರಾಮಯ್ಯ

ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದ ಸಿದ್ದರಾಮಯ್ಯ ತಳಮಳ ಸೃಷ್ಟಿಸುತ್ತಿರುವುದು ಇದು ಮೊದಲೇನಲ್ಲ. ಎರಡೂ ಪಕ್ಷಗಳ ಸಮನ್ವಯ ಸಮಿತಿಯ ಮುಖ್ಯಸ್ಥರಾಗಿರುವ ಅವರು, ಸಾಲಮನ್ನಾ ಮತ್ತು ಸಂಪೂರ್ಣ ಬಜೆಟ್ ಮಂಡನೆಯನ್ನು ವಿರೋಧಿಸಿದ್ದರು. ಆದರೆ, ಹೈಕಮಾಂಡ್‌ನ ಒತ್ತಡಕ್ಕೆ ಮಣಿದು ಅವರು ಸುಮ್ಮನಾದರು.

ವಿಶ್ಲೇಷಕರ ಪ್ರಕಾರ ಸಿದ್ದರಾಮಯ್ಯ ಅನೇಕ ವಿಚಾರಗಳಲ್ಲಿ ಯುದ್ಧರಂಗದ ಹೋರಾಟದಲ್ಲಿದ್ದಾರೆ. ಮೊದಲನೆಯದಾಗಿ ತಮ್ಮದೇ ಪ್ರಸ್ತುತತೆಯ ವಿಚಾರದಲ್ಲಿ. ಎರಡನೆಯದು, ಸೆಪ್ಟೆಂಬರ್ ಮೂರನೇ ವಾರದಲ್ಲಿ ನಡೆಯಬಹುದಾದ ಸಂಪುಟ ವಿಸ್ತರಣೆಯಲ್ಲಿ ತಮ್ಮ ಬೆಂಬಲಿಗ ಸಚಿವರಿಗೆ ಸೂಕ್ತ ಸ್ಥಾನಮಾನ ನೀಡುವುದನ್ನು ಅವರು ಬಯಸಿದ್ದಾರೆ.

ಕೊನೆಯ ಒಪ್ಪಂದದ ಅನ್ವಯ, ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳ ಏಳು ಶಾಸಕರು ಸಚಿವ ಸ್ಥಾನ ಪಡೆದುಕೊಳ್ಳಲಿದ್ದಾರೆ. ಜತೆಗೆ 2:1ರ ಅನುಪಾತದಡಿ 90 ಮಂಡಳಿ ಮತ್ತು ನಿಗಮಗಳ ಅಧ್ಯಕ್ಷರಾಗಿ ನೇಮಕವಾಗಲಿದ್ದಾರೆ.

ಸೂಕ್ತ ಸಮಯದಲ್ಲಿಯೇ ಬಾಂಬ್

ಸೂಕ್ತ ಸಮಯದಲ್ಲಿಯೇ ಬಾಂಬ್

ಸಿದ್ದರಾಮಯ್ಯ ಅವರು ಬಾಂಬ್ ಎಸೆಯುವ ಸಮಯವನ್ನು ಗಮನಿಸಬೇಕು. ಅದು ಯಾವಾಗಲೂ ಸಂಪುಟ ವಿಸ್ತರಣೆ, ಚುನಾವಣೆ ಅಥವಾ ತಾವು ಆರಂಭಿಸಿದ ಯಾವುದಾದರೂ ಯೋಜನೆ ಈಗಿನ ಸರ್ಕಾರದಿಂದ ಸ್ಥಗಿತಗೊಳ್ಳುತ್ತದೆ ಎಂಬ ಕಳವಳ ವ್ಯಕ್ತವಾದ ಸಂದರ್ಭಗಳಲ್ಲಿಯೇ ಬೀಳುತ್ತದೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಿ ಮತ್ತೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಎಲ್ಲ ವಿರೋಧ ಪಕ್ಷಗಳ ಜತೆ ಹೊಂದಾಣಿಕೆ ನಡೆಸುತ್ತಿದೆ. ಕರ್ನಾಟಕದಲ್ಲಿನ 28 ಸೀಟುಗಳು ಬಹು ಮಹತ್ವದ್ದಾಗಿದ್ದು, ಇಲ್ಲಿಯೂ ಜೆಡಿಎಸ್‌ ಜತೆ ಸ್ಥಾನಗಳನ್ನು ಹೊಂದಾಣಿಕೆ ಮಾಡಿಕೊಳ್ಳುವ ಒಪ್ಪಂದ ನಡೆದಿದೆ. ಆದರೆ, ಎಷ್ಟು ಸ್ಥಾನಗಳನ್ನು ಪರಸ್ಪರ ಬಿಟ್ಟುಕೊಡುವುದು ಎನ್ನುವುದು ತೀರ್ಮಾನ ಆಗಿಲ್ಲ. ಈ ಸಂದರ್ಭದಲ್ಲಿಯೇ ಸಿದ್ದರಾಮಯ್ಯ ನೀಡುತ್ತಿರುವ ಹೇಳಿಕೆಗಳು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಆತಂಕ ಮೂಡಿಸಿದೆ.

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಲೋಕಸಭೆ ಚುನಾವಣೆವರೆಗಾದರೂ ಉಳಿಯುತ್ತಾ?

ಲೋಕಸಭೆ ಚುನಾವಣೆವರೆಗಾದರೂ ಉಳಿಯುತ್ತಾ?

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಸ್ಥಾನ ಬಂದಿದ್ದರೂ ಮುಖ್ಯಮಂತ್ರಿ ಸ್ಥಾನ ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾದ ಜೆಡಿಎಸ್, 2019ರ ಲೋಕಸಭೆ ಚುನಾವಣೆಯವರೆಗಾದರೂ ಸರ್ಕಾರವನ್ನು ಉಳಿಸಿಕೊಳ್ಳಬೇಕು ಎಂಬ ಪ್ರಯತ್ನದಲ್ಲಿದೆ. ಅದಕ್ಕೆ ಇಂತಹ ಹೇಳಿಕೆಗಳನ್ನು ಸಹಿಸಿಕೊಳ್ಳುವುದು ಅನಿವಾರ್ಯ

2019ರ ಲೋಕಸಭೆ ಚುನಾವಣೆಯ ಸ್ಪರ್ಧೆ ಮತ್ತು ಸೀಟು ಹಂಚಿಕೆ ಮಾತುಕತೆಗಳಲ್ಲಿ ಸಿದ್ದರಾಮಯ್ಯ ಅವರನ್ನೂ ಒಳಗೊಳ್ಳಬೇಕಾಗುತ್ತದೆ ಎನ್ನುವುದನ್ನು ಈ ಹೇಳಿಕೆಗಳು ಸೂಚಿಸುತ್ತಿವೆ. ಸಿದ್ದರಾಮಯ್ಯ ಅವರ ಅಭಿಪ್ರಾಯಗಳು ವೈಯಕ್ತಿಕ ಎಂದು ಕಾಂಗ್ರೆಸ್ ಪ್ರತಿಪಾದಿಸಿದರೂ ಅದು ತೀವ್ರ ಚೌಕಾಸಿ ನಡೆಸುವ ಅನಿವಾರ್ಯತೆಗೆ ಇಳಿದಿದೆ.

ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ

ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ

ಸಿದ್ದರಾಮಯ್ಯ ಅವರು ದೇವೇಗೌಡ ಮತ್ತು ಅವರ ಮಕ್ಕಳ ವಿರುದ್ಧ ಕತ್ತಿ ಬೀಸುತ್ತಲೇ ಇದ್ದಾರೆ ಎಂಬ ಅರಿವಿನೊಂದಿಗೇ ಜೆಡಿಎಸ್ ಮುಂದಿಡುತ್ತಿರುವ ಎಲ್ಲ ಬೇಡಿಕೆಗಳನ್ನು ಕಾಂಗ್ರೆಸ್ ಪೂರೈಸುತ್ತಿದೆ.

28 ಸೀಟುಗಳ ಪೈಕಿ 10 ಸೀಟುಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಕಾಂಗ್ರೆಸ್ ಉದ್ದೇಶಿಸಿದೆ. ಆದರೆ ಜೆಡಿಎಸ್, 14 ಸೀಟುಗಳಾದರೂ ಬೇಕು ಎಂದು ಪಟ್ಟುಹಿಡಿದಿದೆ. ಕಾಂಗ್ರೆಸ್‌ ಈ ಚೌಕಾಸಿಯಲ್ಲಿ ಗೆಲ್ಲುವುದು ಮತ್ತು ಜೆಡಿಎಸ್‌ಗೆ ಕಡಿಮೆ ಸೀಟುಗಳು ಸಿಗುವಂತೆ ಮಾಡುವುದು ಮುಖ್ಯವಾಗಿದೆ. ಹೀಗಾಗಿ ಸಿದ್ದರಾಮಯ್ಯ ಮತ್ತು ಅವರ ಹೇಳಿಕೆಗಳು ಅದಕ್ಕೆ ಮುಖ್ಯವಾಗಿದೆ. ಇಂತಹ ಹೇಳಿಕೆಗಳನ್ನು ನೀಡುವಂತೆ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸ್ವತಃ ಅಧಿಕಾರ ನೀಡಿದೆ ಎಂಬಂತಹ ಮಾತುಗಳೂ ಕೇಳಿಬರುತ್ತಿವೆ.

ಮತ್ತೆ ಸೋತ ಸಿದ್ದರಾಮಯ್ಯ

ಮತ್ತೆ ಸೋತ ಸಿದ್ದರಾಮಯ್ಯ

ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದ ಸಿದ್ದಾರಾಮಯ್ಯ, ಮೈಸೂರು ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಗಳಿಸಿಕೊಡುವಲ್ಲಿಯೂ ವಿಫಲರಾಗಿದ್ದರು. ಈ ಭಾಗದಲ್ಲಿ ಅತ್ಯಂತ ದುರ್ಬಲ ಪಕ್ಷ ಎನಿಸಿಕೊಂಡಿರುವ ಬಿಜೆಪಿ 65ರಲ್ಲಿ 22 ಸೀಟುಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ 19, ಜೆಡಿಎಸ್ 18 ಸ್ಥಾನಗಳನ್ನು ಗೆದ್ದರೆ, ಬಿಎಸ್‌ಪಿ ಒಂದು ಮತ್ತು ಪಕ್ಷೇತರರು ಒಂದು ಸ್ಥಾನ ಗೆದ್ದಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲವಿಲ್ಲದೆ ಗೆದ್ದು ತೋರಿಸಿ ಸಂದೇಶ ರವಾನಿಸಲು ಕಠಿಣ ಪ್ರಯತ್ನ ಪಟ್ಟಿದ್ದ ಸಿದ್ದರಾಮಯ್ಯ ಅವರಿಗೆ ಮೈಸೂರಿನಲ್ಲಿ ಮಾತ್ರವಲ್ಲ, ಚಾಮರಾಜ ಮತ್ತು ಕೃಷ್ಣರಾಜಗಳಲ್ಲಿಯೂ ಸೋಲು ಎದುರಾಗಿದೆ.

ಜೆಡಿಎಸ್‌ಗೆ ದೊರೆತ ಬಲ

ಜೆಡಿಎಸ್‌ಗೆ ದೊರೆತ ಬಲ

ಈ ಸೋಲು ಮುಂಬರುವ ಲೋಕಸಭೆ ಚುನಾವಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ. ಜೆಡಿಎಸ್ ಬೆಂಬಲ ಇಲ್ಲದೆ ಕಾಂಗ್ರೆಸ್ ದೊಡ್ಡ ಗೆಲುವು ಪಡೆಯುವುದು ಕಷ್ಟ ಎಂಬುದು ಸ್ಥಳೀಯ ಚುನಾವಣೆಗಳಲ್ಲಿ ದೃಢಪಟ್ಟಿದೆ. ಹೀಗಾಗಿ 2019ರ ಚುನಾವಣೆಯ ಸೀಟು ಹಂಚಿಕೆ ವಿಚಾರದಲ್ಲಿ ಬೇಡಿಕೆ ಇರಿಸಲು ಜೆಡಿಎಸ್‌ಗೆ ಬಲ ದೊರೆತಂತಾಗಿದೆ. ಕಾಂಗ್ರೆಸ್ ಪ್ರಬಲವಾಗಿರುವ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಸಿಂಹಪಾಲನ್ನು ಕೇಳುವ ಸಾಧ್ಯತೆ ಇದೆ.

ಮುಂಬರುವ ದಿನಗಳು ಇನ್ನಷ್ಟು ಆಸಕ್ತಿಕರವಾಗಿವೆ. ಈ ಸಮರಗಳು ಮುಂದುವರಿಯುವ ಬಗ್ಗೆ ಯಾವುದೇ ಅನುಮಾನವಿಲ್ಲ. ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್, ಜೆಡಿಎಸ್‌ಅನ್ನು ನಿಯಂತ್ರಿಸುತ್ತದೆಯೇ ಅಥವಾ ಅದರ ಉಲ್ಟಾ ಆಗುತ್ತದೆಯೇ? ರಾಜ್ಯದಲ್ಲಿ ಬಿಜೆಪಿಗೆ ಸವಾಲು ಹಾಕಲು ಈ ಎರಡೂ ಪಕ್ಷಗಳು ಜತೆಯಾಗಿಯೇ ಇರಬೇಕಾಗುತ್ತದೆ ಎನ್ನುವುದಂತೂ ಸತ್ಯ.

English summary
Siddaramaiah dropped a bombshell on coalition government's future. His statement made a big thing as the congress and JDS bargaining for 2019 Lok Sabha election seat distribution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X