ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ಸಹೋದ್ಯೋಗಿಗಳ ಬೆಂಬಲಕ್ಕೆ ಸದಾ ಸಿದ್ದ ಸಿದ್ದರಾಮಯ್ಯ

By Manjunatha
|
Google Oneindia Kannada News

ಬೆಂಗಳೂರು, ಮಾರ್ಚ್‌ 19: ಇಂದು ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ವರದಿಯನ್ನು ಸಚಿವ ಸಂಪುಟ ಒಪ್ಪಿಕೊಂಡಿದೆ. ಭಾರಿ ಚರ್ಚೆ ಮತ್ತು ಪರ ವಿರೋಧ ನಿಲುವುಗಳ ನಡುವೆಯೂ ಸಚಿವ ಸಂಪುಟ ಸಭೆಯು ವರದಿಯನ್ನು ಅಂಗೀಕಾರ ಮಾಡಿ ಕೇಂದ್ರದ ಶಿಫಾರಸ್ಸಿಗೆ ಕಳುಹಿಸಲಿದೆ.

ವರದಿ ಅಂಗೀಕಾರಕ್ಕೆ ಕಾಂಗ್ರೆಸ್‌ನಲ್ಲೇ ಇದ್ದ ವಿರೋಧದ ಧನಿಗಳನ್ನು ಸಿದ್ದರಾಮಯ್ಯ ಅವರು ಜಾಣ್ಮೆಯಿಂದ ಹತ್ತಿಕ್ಕಿ 'ಆಲ್ ಇಸ್ ವೆಲ್' ವಾತಾವರಣ ನಿರ್ಮಾಣ ಮಾಡಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಭಾರಿ ವಿರೋಧ ಸೂಚಿಸಿದ್ದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ ಅವರು ಕೂಡಾ ತಮ್ಮ ವಾಲ್ಯೂಮ್ ತಗ್ಗಿಸಿದ್ದು ಸಭೆಯ ಬಳಿಕ ಗೋಚರವಾಯಿತು.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು : ಸಚಿವ ಸಂಪುಟದ ನಿರ್ಣಯಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು : ಸಚಿವ ಸಂಪುಟದ ನಿರ್ಣಯ

ಈ ಹಿಂದೆ ಕೆಪಿಎಂಇ ಕಾಯ್ದೆ ಜಾರಿಗೆ ಸಂಬಂಧಿಸಿದ ವಿಚಾರದಲ್ಲಿ ತೋರಿದ್ದ ಬದ್ಧತೆಯನ್ನೇ ಸಿದ್ದರಾಮಯ್ಯ ಅವರು ಈ ವಿಚಾರದಲ್ಲಿಯೂ ತೋರಿದರು. ಅಂದು ಕೆಪಿಎಂಇ ಜಾರಿ ಕುರಿತು ಖಾಸಗಿ ಆಸ್ಪತ್ರೆ ವೈದ್ಯರು ತೀವ್ರ ಪ್ರತಿಭಟನೆ ಮಾಡಿದರೂ ಸಹ, ವಿರೋಧ ಪಕ್ಷಗಳು ಅವಕಾಶ ಬಳಸಿಕೊಂಡು ಸರ್ಕಾರದ ವಿರುದ್ಧ ಮುಗಿಬಿದ್ದರೂ ಸಹ ಸಿದ್ದರಾಮಯ್ಯ ಅವರು ತಮ್ಮ ಸಂಪುಟದ ಸಚಿವ ರಮೇಶ್‌ ಕುಮಾರ್ ಅವರ ಬೆನ್ನಿಗೆ ನಿಂತು ಕೆಪಿಎಂಇ ಕಾಯ್ದೆ ಮಂಡಿಸುವಂತೆ ಮಾಡಿದರು.

Siddaramaiah stands in support of his cabinet ministers

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿಯೂ ಸಹ ಬಿಜೆಪಿಯವರು, ಹಲವು ಮಠಾಧೀಶರು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದರೂ ಸಹ ಸಿದ್ದರಾಮಯ್ಯ ತಮ್ಮ ಸಚಿವರ ಬೆನ್ನಿಗೆ ನಿಂತರು, ಲಿಂಗಾಯತ ಪ್ರತ್ಯೇಕ ಧರ್ಮ ವರದಿ ಅಂಗೀಕಾರ ಮಾಡಿ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನ-ಮಾನ ಕೊಡಿಸುವ ಪ್ರಯತ್ನ ಮಾಡುವ ಜೊತೆ-ಜೊತೆಗೆ ಈ ಹೋರಾಟದ ಮುಂಚೂಣಿಯಲ್ಲಿದ್ದ ತಮ್ಮ ಸಂಪುಟದ ಇಬ್ಬರು ಸಚಿವರ ( ಎಂಬಿ ಪಾಟೀಲ ಹಾಗೂ ವಿನಯ್‌ ಕುಲಕರ್ಣಿ) ಘನತೆಯನ್ನು ಎತ್ತಿ ಹಿಡಿದರು. ಅವರಿಬ್ಬರನ್ನು ಶಾಶ್ವತವಾಗಿ ಲಿಂತಾಯತ ಸಮುದಾಯದ ರಾಜಕೀಯ ನಾಯಕರನ್ನಾಗಿ ಮಾಡುವಲ್ಲಿಯೂ ಅವರು ಸಫಲರಾದರು.

ಕೆಪಿಎಂಇ ಕಾಯ್ದೆ ಬೆಳಗಾವಿ ವಿಧಾನಸಭೆಯಲ್ಲಿ ಮಂಡನೆಯಾದ ಬಳಿಕ ರಮೇಶ್‌ ಕುಮಾರ್ ಅವರು ಹೇಳಿದ್ದ ಮಾತು ಇಲ್ಲಿ ಸ್ಮರಣಾರ್ಹ 'ಸಿದ್ದರಾಮಯ್ಯ ಅವರು ನನಗೆ ಅಭಯ ನೀಡಿದ್ದರು, ಒಳ್ಳೆಯ ಕಾರ್ಯ ಮಾಡುತ್ತಿದ್ದೀಯ, ಅದನ್ನು ಬಿಡುವುದು ಬೇಡ ಏನಾದರೂ ಆಗಲಿ ಕಾಯ್ದೆ ಮಂಡಿಸೋಣ ಎಂದಿದ್ದರು. ಅದರಂತೆ ಎಲ್ಲಾ ಟೀಕೆಗಳನ್ನು, ಪ್ರತಿಭಟನೆಗಳನ್ನು ಸಹಿಸಿ ಕಾಯ್ದೆ ಮಂಡಿಸಲು ಅನುವು ಮಾಡಿಕೊಟ್ಟರು'.

ಲಿಂಗಾಯತ ಪ್ರತ್ಯೇಕ ಧರ್ಮ: ಯಾರು, ಏನು ಹೇಳಿದರು?ಲಿಂಗಾಯತ ಪ್ರತ್ಯೇಕ ಧರ್ಮ: ಯಾರು, ಏನು ಹೇಳಿದರು?

ಕೆಪಿಎಂಇ ಕಾಯ್ದೆ ಹಾಗೂ ಲಿಂಗಾಯತ ಧರ್ಮ ವಿವಾದ, ಸಿದ್ದರಾಮಯ್ಯ ಅವರು ತಮ್ಮ ಸಂಪುಟದ ಸಚಿವರಿಗೆ ನೀಡುವ ಬೆಂಬಲಕ್ಕೆ ಅತ್ಯುತ್ತಮ ಉದಾಹರಣೆ. ಪರ ಪಕ್ಷದಿಂದ ವಲಸೆ ಬಂದರೂ ಕೂಡಾ ಅತ್ಯಲ್ಪ ಸಮಯದಲ್ಲಿಯೇ ಮೂಲ ಕಾಂಗ್ರೆಸ್ಸಿಗರ ವಿಶ್ವಾಸವನ್ನೂ ಸಿದ್ದರಾಮಯ್ಯ ಗಳಿಸಿರುವುದಕ್ಕೆ ಕಾರಣ ಇದೇ. ತಮ್ಮ ಶಾಸಕ, ಸಚಿವರ ಬೆಂಬಲಕ್ಕೆ ಸದಾ ನಿಲ್ಲುವ ಗುಣವನ್ನು ಕಾಂಗ್ರೆಸ್ಸಿಗರು ಹೊಗಳಿಕೊಳ್ಳುತ್ತಾರೆ.

ಆದರೆ ಕೆಲವೊಮ್ಮೆ ಇದೇ ಗುಣದಿಂದ ಟೀಕೆಗಳಿಗೂ ಗುರಿಯಾದದ್ದಿದೆ. ಬೆಂಬಲಕ್ಕೆ ನಿಲ್ಲುವ ಭರದಲ್ಲಿ ರಾಜಕೀಯವಾಗಿ ಒಪ್ಪಿತವಲ್ಲದ ಕಾರ್ಯಗಳನ್ನೂ ಆಡಿರುವ ಉದಾಹರಣೆಗಳೂ ಇವೆ. ಇತ್ತೀಚೆಗೆ ನಡೆದ ಘಟನೆಯನ್ನೇ ಉಲ್ಲೇಖಿಸುವುದಾದರೆ ಹಾಸನ ಉಸ್ತುವಾರಿ ಸಚಿವ ಕೆ.ಮಂಜು ಅವರ ಮಾತಿಗೆ ಬೆಲೆ ಕೊಡುವ ಭರದಲ್ಲಿ ನಿಷ್ಠಾವಂತ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿ ಆದೇಶ ಮಾಡಿದ್ದರು. ಆದರೆ ರೋಹಿಣಿ ಸಿಂಧೂರಿ ಅವರು ವರ್ಗಾವಣೆ ಆದೇಶ ಪ್ರಶ್ನಿಸಿ ಸಿಎಟಿ ಮೊರೆ ಹೋದ ಕಾರಣ ವರ್ಗಾವಣೆ ಆದೇಶಕ್ಕೆ ತಡೆ ಬಿದ್ದು, ಸರ್ಕಾರ ಮುಜುಗರ ಅನುಭವಿಸುವಂತಾಯಿತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕೆ.ಜೆ.ಜಾರ್ಜ್‌ ಅವರ ವಿಷಯದಲ್ಲಿಯೂ ಇದೇ ರೀತಿ ಆಗಿತ್ತು. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್‌ ಅವರನ್ನು ಸಾಕಷ್ಟು ವಹಿಸಿಕೊಂಡೇ ಸಿದ್ದರಾಮಯ್ಯ ಮಾತನಾಡಿದ್ದರು. ವಿಪರೀತ ಒತ್ತಡ ಬಂದ ನಂತರ ಗೃಹ ಸಚಿವ ಸ್ಥಾನಕ್ಕೆ ರಾಜಿನಾಮೆ ಪಡೆದರಾದರೂ ಮತ್ತೆ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿದರು. ಆದರೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಜಾರ್ಜ್‌ ಅವರ ಮೇಲೆ ಸಿಬಿಐ ಎಫ್‌ಐಆರ್ ದಾಖಲಿಸಿದೆ.

ಎನ್.ಎ.ಹ್ಯಾರಿಸ್ ಪ್ರಕರಣದಲ್ಲೂ ಇದು ಮರುಕಳಿಸಿತು. ನಲಪಾಡ್ ವಿದ್ವತ್‌ ಮೇಲೆ ಹಲ್ಲೆ ಮಾಡಿದ್ದನ್ನು ಕಠಿಣ ಶಬ್ದಗಳಿಂದ ಟೀಕಿಸಿದ ಸಿದ್ದರಾಮಯ್ಯ ಅವರು ಹ್ಯಾರಿಸ್‌ ಅವರ ರಾಜಿನಾಮೆ ಪಡೆಯಲು ಸುತಾರಂ ಒಪ್ಪಲಿಲ್ಲ. ಆದರೆ ಸಂಪೂರ್ಣ ಅಪ್ಪಿಕೊಳ್ಳಲೂ ಇಲ್ಲ, ಹ್ಯಾರಿಸ್ ಕ್ಷೇತ್ರ ಶಾಂತಿನಗರಕ್ಕೆ ಹೋದಾಗ ಜಾಣ್ಮೆಯಿಂದಲೇ ಹ್ಯಾರಿಸ್ ಅವರ ಜೊತೆಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ತಪ್ಪಿಸಿಕೊಂಡರು.

ಒಟ್ಟಾರೆ ಕಾಂಗ್ರೆಸ್‌ನಲ್ಲಿನ ಒಳಜಗಳನ್ನು, ತಮ್ಮ ವಿರುದ್ಧ ಕೇಳಿ ಬಂದ ಟೀಕೆಗಳನ್ನು ಜಾಣ್ಮೆಯಿಂದ ಹತ್ತಿಕ್ಕಿದ ಸಿದ್ದರಾಮಯ್ಯ ಅವರು, ಮೂಲ ಕಾಂಗ್ರೆಸ್ಸಿಗರ ವಿಶ್ವಾಸವನ್ನೂ ಗಳಿಸಿ ನಾಯಕರಾಗಿ ಬೆಳೆದಿದ್ದಾರೆ.

English summary
CM Siddaramaiah always stands in support of his cabinet ministers. in past he stand with Health minister Ramesh Kumar while his KPME bill is under trouble. Now he supports MB Patil and Vinay Kulkarni in Lingayata separate religion issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X