ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಾಹಿತ್ಯ ಸಮ್ಮೇಳನ: ಸಿದ್ದರಾಮಯ್ಯ ಉದ್ಘಾಟನಾ ಭಾಷಣ

By Mahesh
|
Google Oneindia Kannada News

ಹಾಸನ, ಫೆ.1: 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಫೆ.1ರಂದು ವಿದ್ಯುಕ್ತ ಚಾಲನೆ ಸಿಕ್ಕಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನ ಮುಖ್ಯ ವೇದಿಕೆಯಲ್ಲಿ ಜ್ಯೋತಿ ಬೆಳಗುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಭಾನುವಾರ ಮೂರು ದಿನಗಳ ನುಡಿಹಬ್ಬಕ್ಕೆ ನಾಂದಿ ಹಾಡಿದರು.

ಸಮ್ಮೇಳನದ ಉದ್ಘಾಟನೆಗೆ ಆಗಮಿಸುತ್ತಿದ್ದ ಸಿದ್ದರಾಮಯ್ಯ ಅವರಿದ್ದ ಹೆಲಿಕಾಪ್ಟರ್ ತಾಂತ್ರಿಕ ತೊಂದರೆ ಅನುಭವಿಸಿ ನುಡಿಹಬ್ಬಕ್ಕೆ ತಡವಾಗಿ ಆಗಮಿಸಿದರು. ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ನಾ.ಡಿಸೋಜ ಅವರನ್ನು ಪ್ರವೇಶ ದ್ವಾರದಲ್ಲಿ ಪೊಲೀಸ್ ಸಿಬ್ಬಂದಿ ತಡೆದಿದ್ದು, ಸಮ್ಮೇಳನ ನಡೆಸಲು ಹಣಕಾಸು ಕೊರತೆ ಇದೆ ಎಂದ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ನಡುವೆ ವೇದಿಕೆಯೇರಿದ ಸಿದ್ದರಾಮಯ್ಯ ಅವರು ಸಮ್ಮೇಳನ ಹೆಚ್ಚುವರಿಯಾಗಿ 1 ಕೋಟಿ ರು ಅನುದಾನ ಘೋಷಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಸಿದ್ದರಾಮಯ್ಯ ಅವರು ಮಾಡಿದ ಸುದೀರ್ಘ ಭಾಷಣದಲ್ಲಿ ಪ್ರಾದೇಶಿಕ ಭಾಷೆ ರಕ್ಷಣೆ, ಕನ್ನಡ ಭಾಷಾ ಮಾಧ್ಯಮ, ಶಿಕ್ಷಣ ವ್ಯಾಪರೀಕರಣದ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಸಿಎಂ ಭಾಷಣದ ಪೂರ್ಣ ಪಾಠ ಇಲ್ಲಿದೆ:

ಶ್ರೀ ಕ್ಷೇತ್ರ ಶ್ರವಣಬೆಳಗೊಳ ಶ್ರೀ ಜೈನಮಠದ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರೆ,

ಈ ಸಮ್ಮೇಳನಾಧ್ಯಕ್ಷರಾದ ಡಾ ಸಿದ್ಧಲಿಂಗಯ್ಯ ಅವರೆ,

ಭಾರತದ ಮಾಜಿ ಪ್ರಧಾನ ಮಂತ್ರಿಗಳೂ ಹಾಗೂ ಲೋಕಸಭಾ ಸದಸ್ಯರಾದ ಶ್ರೀ ಹೆಚ್. ಡಿ. ದೇವೇಗೌಡ ಅವರೆ,

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಅನಂತಕುಮಾರ್ ಅವರೆ,

ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಡಾ ಹೆಚ್. ಸಿ. ಮಹದೇವಪ್ಪ ಅವರೆ,

ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಉಮಾಶ್ರೀ ಅವರೆ,

ನನ್ನ ಸಚಿವ ಸಂಪುಟದ ಎಲ್ಲಾ ಸಹೋದ್ಯೋಗಿಗಳೆ,

ಸಂಸದ - ಶಾಸಕ ಮಿತ್ರರೆ,

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಪುಂಡಲೀಕ ಹಾಲಂಬಿ ಅವರೆ,

ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಡಾ ಎಸ್. ಎಲ್. ಭೈರಪ್ಪ ಅವರೆ,

ಕನ್ನಡ ಸಾರಸ್ವತಲೋಕದ ದಿಗ್ಗಜರೆ,

ವೇದಿಕೆಯ ಮೇಲಿನ ಎಲ್ಲಾ ಗಣ್ಯರೆ,

ನುಡಿ ಹಬ್ಬಕ್ಕೆ ಸಾಕ್ಷಿಯಾಗಲು ಆಗಮಿಸಿರುವ ಎಲ್ಲಾ ಸೋದರ-ಸೋದರಿಯರೆ,

ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಆಯೋಜಿಸಿರುವ ಎಂಬತ್ತೊಂದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲು ನನಗೆ ಅತ್ಯಂತ ಸಂತಸವಾಗುತ್ತಿದೆ.

ಈ ಅಕ್ಷರ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ನನಗೆ ಅಭಿಮಾನವನ್ನು ಉಂಟುಮಾಡಿದೆ. ಎಂಟು ಜ್ಞಾನಪೀಠ ಪ್ರಶಸ್ತಿ ಹಾಗೂ ಸರಸ್ವತಿ ಸಮ್ಮಾನದ ಗರಿ ಮೂಡಿಸಿಕೊಂಡ ಕನ್ನಡ ನಾಡು ಹೆಮ್ಮೆಯ ಬೀಡು. ಈ ಸಂದರ್ಭದಲ್ಲಿ ಸಂತಸದಿಂದ ಪಾಲ್ಗೊಳ್ಳುವ ಮೂಲಕ ನಾಡು-ನುಡಿಯ ಬಗ್ಗೆ ಅಭಿಮಾನ ತೋರಿಸುತ್ತಿರುವ ತಮ್ಮೆಲ್ಲರಿಗೂ ನನ್ನ ಶುಭ ಕಾಮನೆಗಳನ್ನು ಸಲ್ಲಿಸುತ್ತೇನೆ. ಇದೊಂದು ಚರಿತ್ರಾರ್ಹ ಸಮ್ಮೇಳನವಾಗಲಿ ಎಂದು ಮನದಾಳದಿಂದ ಹಾರೈಸುತ್ತೇನೆ. [ಸಮ್ಮೇಳನಕ್ಕೆ ತೆರಳುತ್ತಿದ್ದ ಸಿದ್ದು ಹೆಲಿಕಾಪ್ಟರ್ ನಲ್ಲಿ ದೋಷ ]

ಕನ್ನಡ ಸಾರಸ್ವತ ಲೋಕದ ಪ್ರತಿಭಾ ಸಂಪನ್ನರು, ಸರಳ-ಸಜ್ಜನಿಕೆಗೆ ಹೆಸರಾದ, ಕ್ರಾಂತಿಗೀತೆಗಳ ಮೂಲಕ ಮನೆಮಾತಾದ ಡಾ ಸಿದ್ಧಲಿಂಗಯ್ಯ ಅವರು ಈ ಸಮ್ಮೇಳನದ ಅಧ್ಯಕ್ಷರಾಗಿರುವುದು ಕನ್ನಡದ ಗೌರವ ಹೆಚ್ಚಿಸಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯಕ್ಕೆ ಶಕ್ತಿ ತುಂಬಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಅಭಿನಂದನಾರ್ಹರು. ಡಾ ಸಿದ್ಧಲಿಂಗಯ್ಯ ಅವರ ಸಮಾಜಮುಖಿ ಭಾಷಣ ಕೇಳಲು ನಾನು ಉತ್ಸುಕನಾಗಿದ್ದೇನೆ.

Shravanabelagola sahitya sammelana

ನನ್ನ ಸಂಪುಟದ ಸಹೋದ್ಯೋಗಿ ಡಾ ಹೆಚ್.ಸಿ. ಮಹದೇವಪ್ಪ ಹಾಗೂ ಇಲ್ಲಿನ ಜನಪ್ರಿಯ ಶಾಸಕರ ನೇತೃತ್ವದ ಸಮ್ಮೇಳನ ಸ್ವಾಗತ ಸಮಿತಿಯು ಈ ವರ್ಷ ಈ ಸಮ್ಮೇಳನವನ್ನು ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಏರ್ಪಡಿಸಲು ಬಹುವಾಗಿ ಶ್ರಮಿಸಿದ್ದಾರೆ. ಅವರನ್ನೂ ಕೂಡ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.

ಕನ್ನಡ ಸಾಹಿತ್ಯ ಪರಿಷತ್ತು ನೂರರ ಹೊಸ್ತಿಲಿನಲ್ಲಿದೆ. ಇದೊಂದು ಐತಿಹಾಸಿಕ ಹಾಗೂ ಮಹತ್ವದ ಸಂದರ್ಭ. ಈ ಸಂದರ್ಭದಲ್ಲಿ ನೆನೆಯಲೇಬೇಕಾದ ವ್ಯಕ್ತಿಯೊಬ್ಬರಿದ್ದಾರೆ. ಅವರೇ ನಾಡಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರ್. ಅರಮನೆ ಗುರುಮನೆಗಳಲ್ಲಿದ್ದ ಸಾಹಿತ್ಯವನ್ನು ಜನಸಾಮಾನ್ಯರತ್ತ ತರುವ ಮಹೋದ್ದೇಶದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು.

ಪ್ರಭುವಾಗಿ ಪ್ರಜಾಪ್ರಭುತ್ವದ ಮಾದರಿಯಲ್ಲಿ ಆಡಳಿತವನ್ನು ನಡೆಸಿದ ಜನಪರ ಕಾಳಜಿಯ ಮಹಾರಾಜರು ನಾಲ್ವಡಿ ಕೃಷ್ಣರಾಜ ಒಡೆಯರ್. ಅವರ ಕಾಲದಲ್ಲಿ ಮೈಸೂರು ರಾಜ್ಯದಲ್ಲಿ ಆಗಿರುವ ಜನಪರ ಕಾಳಜಿಯ ಪ್ರಗತಿ ರಾಜ್ಯದ ಬದುಕನ್ನೇ ಬದಲಾಯಿಸಿದ ಬೆಳವಣಿಗೆ ಎಂದರೆ ಅತಿಶಯೋಕ್ತಿಯಲ್ಲ. ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವುದರ ಮೂಲಕ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿದರು. ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸುವುದರ ಮುಖೇನ ಆಡಳಿತದಲ್ಲಿ ಪ್ರಜಾಪ್ರಭುತ್ವದ ಆಶಯವನ್ನು ಅನುಷ್ಠಾನಗೊಳಿಸಿದರು. ಹಲವು ಕೈಗಾರಿಕೆಗಳನ್ನು ಸ್ಥಾಪಿಸಿ ಜನಸಾಮಾನ್ಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದರು. [ಭಾಷೆಗೆ ಆತಂಕ ತಂದಿರುವ ಆಂಗ್ಲ ಶಾಲೆಗಳು: ಸಿದ್ದಲಿಂಗಯ್ಯ]

ಎಲ್ಲಕ್ಕಿಂತ ಮಿಗಿಲಾಗಿ ಕೆರೆ ಕಟ್ಟೆ ಅಣೆಕಟ್ಟುಗಳನ್ನು ನಿರ್ಮಿಸಿ ರೈತಪರವಾದ ಅಭಿವೃದ್ಧಿಯನ್ನು ಸಾಧಿಸಿದರು. ಕನ್ನಂಬಾಡಿ ಜಲಾಶಯವನ್ನು ಕಟ್ಟಿಸುವುದಕ್ಕೆ ಅರಮನೆಯ ಆಭರಣಗಳನ್ನಷ್ಟೇ ಅಲ್ಲದೆ ಮಹಾರಾಣಿಯ ಮೈಮೇಲಿನ ಒಡವೆಗಳನ್ನೂ ಮುಂಬೈ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದು, ಅವರ ಜನಪರ ಕಾಳಜಿಯ ಬದ್ಧತೆಯನ್ನು ತೋರಿಸುತ್ತದೆ. ಇಂತಹ ನಾಡಪ್ರಭು ಸ್ಥಾಪಿಸಿದ ಸಂಸ್ಥೆಯೇ ನಮ್ಮ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತು.

ಅವರ ಒತ್ತಾಸೆಯ ಫಲವಾಗಿ 1915ರ ಮೇ 5 ರಂದು ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾಯಿತು. ಈಗಿನ ಬೆಂಗಳೂರು ಕೋಟೆ ಪ್ರೌಢ ಶಾಲಾ ಆವರಣದಲ್ಲಿ ಸಭೆ ಸೇರಿ ಶ್ರೀ ಹೆಚ್. ವಿ. ನಂಜುಂಡಯ್ಯ ಅವರನ್ನು ಪರಿಷತ್ತಿನ ಪ್ರಥಮ ಅಧ್ಯಕ್ಷರನ್ನಾಗಿ ಮಾಡಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಸಮ್ಮೇಳನ ನಡೆಯಿತು. ಅಂದೇ ಸಾಹಿತ್ಯ ಪರಿಷತ್ತಿನ ಉದಯವೂ ಆಯಿತು.

ಸಾಹಿತ್ಯ ಪರಿಷತ್ತು ಬೆಳೆದು ಬಂದ ನಡೆಯನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಅದು ಸರಳ ರೇಖೆಯ ದಾರಿಯಲ್ಲಿ ನಡೆದದ್ದಲ್ಲ. ಸಂಘರ್ಷಾತ್ಮಕ ವಕ್ರ ರೇಖೆಗಳ ರೀತಿಯಲ್ಲಿ ನಡೆದ ಮಹಾಯಾನ. ಇಲ್ಲಿ ವರ್ಗ-ವರ್ಣಗಳ ಅಧಿಪತ್ಯ ಹೆಚ್ಚಾಗಿ ಕೆಲವು ಕಾಲಘಟ್ಟಗಳಲ್ಲಿ ಸಾಹಿತ್ಯ ಪರಿಷತ್ತು ಎಂದರೆ ಕೆಲವರ ಸ್ವತ್ತಾಗಿದ್ದೂ ಉಂಟು. ಮಹಾ ಚುನಾವಣೆಗಳು ನಡೆದಂತೆ ಪ್ರಾಬಲ್ಯದ ಹಿಡಿತದಿಂದ ಬಿಡಿಸಿ ಕೊಂಡು ಜನಪರ ನಡೆಯ ಹೆಜ್ಜೆ ಹಾಕಿದ್ದೂ ಉಂಟು.

ಈ ಏಳುಬೀಳುಗಳ ಜೊತೆಯಲ್ಲೇ ಆದ ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ ಸಂಘರ್ಷಗಳಲ್ಲಿ ತಾನೂ ಮುಖಾಮುಖಿಯಾಗುತ್ತಾ ಒಂದು ದಿಕ್ಕು-ದೆಸೆಯನ್ನು ಕಂಡುಕೊಂಡದ್ದೂ ಉಂಟು. ಎಪ್ಪತ್ತು-ಎಂಭತ್ತರ ದಶಕದಲ್ಲಿ ಕರ್ನಾಟಕದಲ್ಲಾದ ಚಳುವಳಿಗಳ ಜೊತೆಯಲ್ಲಿ ಪರಿಷತ್ತು ಸಹಯೋಗ ಮತ್ತು ಸಂಘರ್ಷ ಈ ಎರಡೂ ಬಗೆಯ ಮುಖಾಮುಖಿತ್ವದಲ್ಲಿ ಪಾಲ್ಗೊಂಡಿರುವುದು ಚಾರಿತ್ರಿಕ ವಿದ್ಯಮಾನವೇ ಸರಿ.

ಪರಿಷತ್ತನ್ನು ಕೆಲವು ಸಾಹಿತಿಗಳು ಬಹಿಷ್ಕರಿಸಿದ ಕಾಲಘಟ್ಟವೂ ಒಂದಿತ್ತು. ಕೊನೆಗೆ ಕಾಲ ಕಳೆದಂತೆ ಅದೇ ಸಾಹಿತಿಗಳು ಪರಿಷತ್ತಿನ ಒಳಬಂದು ಪರಿಷತ್ತಿನ ಭಾಗವೇ ಆಗಿ ಪರಿಷತ್ತಿನ ಚಟುವಟಿಕೆಗಳನ್ನು ಹೆಚ್ಚು ಪ್ರಜಾಸತ್ತಾತ್ಮಕಗೊಳಿಸಿದ್ದೂ ಉಂಟು. ಇಂದು ಪರಿಷತ್ತು ತನ್ನ ಮೂಲ ಆಶಯವಾದ ಸ್ವಾಯತ್ತತೆಯನ್ನು ಉಳಿಸಿಕೊಂಡು ಕನ್ನಡದ ಸಾಂಸ್ಕೃತಿಕ ಲೋಕವನ್ನು ಜವಾಬ್ದಾರಿಯಿಂದ ನಡೆಸುವ ಒಂದು ಸಾಕ್ಷಿ ಪ್ರಜ್ಞೆಯ ರೀತಿಯೊಳಗೆ ಬೆಳೆದಿದೆ. ಬೆಳೆಯುತ್ತಿದೆ ಹಾಗೂ ಬೆಳಗುತ್ತಿದೆ. [ಹಾಸನ : ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಬಸ್ ವ್ಯವಸ್ಥೆ]

ಸಾಮಾಜಿಕ ನ್ಯಾಯ, ಪ್ರಾದೇಶಿಕ ಪ್ರಾತಿನಿಧ್ಯ ಇವುಗಳನ್ನು ಗೌರವಿಸಿದಂತೆ ನಾಡಿನ ಎಲ್ಲಾ ವರ್ಗಮೂಲಗಳನ್ನೂ ತನ್ನ ಕ್ರಿಯಾ ಚಟುವಟಿಕೆಯ ಭಾಗವಾಗಿಸಿಕೊಂಡಿದೆ. ಸಾಹಿತ್ಯ ಪರಿಷತ್ತಿನಲ್ಲಿ ನಡೆಯುವ ಸಮ್ಮೇಳನಗಳು ಇತ್ತೀಚಿನ ದಿನಗಳಲ್ಲಿ ಕೇವಲ ಸಾಹಿತ್ಯಿಕ ವಿಚಾರಗೋಷ್ಠಿಗಳನ್ನು ನಡೆಸುವ ಸಮ್ಮೇಳನಗಳಾಗಿ ಉಳಿದಿಲ್ಲ. ಕೃಷಿ, ವಿಜ್ಞಾನ, ರಾಜಕೀಯ, ಶಿಕ್ಷಣ, ನಾಡು-ನುಡಿಗೆ ಸಂಬಂಧಿಸಿದ ಸಮಸ್ಯೆಗಳು, ನೆಲಜಲದ ಸಮಸ್ಯೆ, ನಿರುದ್ಯೋಗ ಸಮಸ್ಯೆ..... ಹೀಗೆ ಕನ್ನಡ ಬದುಕಿಗೆ ಸಂಬಂಧಿಸಿದ ಎಲ್ಲಾ ಆಯಾಮಗಳನ್ನು ಹಾಗೂ ಆತಂಕಗಳನ್ನು ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಚರ್ಚಿಸಲಾಗುತ್ತಿದೆ.

ಕೇವಲ ಸಾಹಿತಿಗಳು ಮಾತ್ರವಲ್ಲದೆ, ಬದುಕಿನ ಜ್ಞಾನ ಶಾಖೆಗಳ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಈ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತಮ್ಮ ತಮ್ಮ ವಿಚಾರಧಾರೆಯನ್ನು ಜನತೆಗೆ ಹಂಚುತ್ತಿದ್ದಾರೆ. ಸಮ್ಮೇಳನಗಳನ್ನು ಜಾತ್ರೆ ಎಂದು ಕರೆಯುವ ಜನರೂ ಇದ್ದಾರೆ. ಹೌದು. ಇದೊಂದು ನಿಜವಾದ ಅರ್ಥದಲ್ಲಿ ಜಾತ್ರೆಯೇ. ಜಾತ್ರೆ ಎಂಬುದು ಕೀಳ್ಗಳೆದು ನೋಡಬೇಕಾದ ಆಚರಣೆಯಲ್ಲ.

Siddaramaiah
ಸರ್ವ ಜನಾಂಗದ ಮಹೋನ್ನತ ಹಬ್ಬ: ಸರ್ವ ಜನಾಂಗಗಳೂ ಸಹಭಾಗಿತ್ವವನ್ನು ಪಡೆದುಕೊಂಡಂತೆ ಆಚರಿಸುವ ಒಂದು ಮಹೋನ್ನತ ಹಬ್ಬ. ಸಾಹಿತ್ಯ ಪರಿಷತ್ತಿನ ಸಮ್ಮೇಳನ ಸರ್ವ ಜನಾಂಗಗಳ ಪಾಲ್ಗೊಳ್ಳುವಿಕೆಯ ಜಾತ್ರೆಯಾಗಿದ್ದರೆ, ಅದು ಸಂಭ್ರಮಿಸಬೇಕಾದ ವಿಚಾರ. ಇದು ಅಕ್ಷರ ಜಾತ್ರೆ. ಇದು ನಾಡ ಬದುಕಿನ ವಿಚಾರಗಳನ್ನು ಕುರಿತು ಚರ್ಚಿಸುವ ನುಡಿ ಜಾತ್ರೆ. ಈ ಜಾತ್ರೆಯಲ್ಲಿ ಅಖಂಡ ಕರ್ನಾಟಕದ ಜನ ಮನಸ್ಸುಗಳು ಪಾಲ್ಗೊಳ್ಳುತ್ತವೆ ಎಂಬುದು ಹೆಮ್ಮೆಯ ವಿಚಾರ.

ಇನ್ನು ಸರ್ಕಾರ ಮತ್ತು ಪರಿಷತ್ತಿಗೆ ಸಂಬಂಧಪಟ್ಟ ಸಹಭಾಗಿತ್ವದ ವಿಚಾರವನ್ನು ಕುರಿತು ಎರಡು ಮಾತು ಹೇಳಲೇಬೇಕು. ನಾಡಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಭುವಾಗಿ ಈ ಪರಿಷತ್ತನ್ನು ಸ್ಥಾಪಿಸಿದರೂ ಅದಕ್ಕೆ ಸ್ವಾಯತ್ತತೆಯನ್ನು ನೀಡಿ ಗೌರವಿಸಿದ್ದರು. ಪ್ರಜಾಪ್ರಭುತ್ವದ ಸಂದರ್ಭದಲ್ಲಿಯೂ ಪ್ರತಿಯೊಂದು ಸರ್ಕಾರಗಳೂ ಅದರ ಸ್ವಾಯತ್ತತೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ.

ಸಾಹಿತ್ಯ ಪರಿಷತ್ತು ಎಲ್ಲಾದರೂ ತಪ್ಪು ಹೆಜ್ಜೆಗಳನ್ನಿಟ್ಟಿದ್ದರೆ ಆಳುವ ಪ್ರಭುತ್ವವಾಗಲಿ ಇಂದಿನ ಪ್ರಜಾಪ್ರಭುತ್ವವಾಗಲಿ ಕಾರಣವಲ್ಲ. ಅದರ ಆಡಳಿತದ ನಿರ್ವಹಣೆಯನ್ನು ಹೊತ್ತ ವ್ಯಕ್ತಿಗಳ - ಸಮಿತಿಗಳ ತಪ್ಪು ನಿರ್ಧಾರದಿಂದಾಗಿ ಆ ತರಹದ ನಡೆಗಳು ಜರುಗಿರಬಹುದು. ಆದರೆ, ಅಂತಹ ಸಂದರ್ಭದಲ್ಲಿ ಅದನ್ನು ಸರಿದಾರಿಯಲ್ಲಿ ನಡೆಸುವ ಕಾರ್ಯವನ್ನು ಸರ್ಕಾರ ಮತ್ತು ಸಾರ್ವಜನಿಕರು ಒಟ್ಟುಗೂಡಿದಂತೆ ಮಾಡಲಾಗಿರುವುದನ್ನು ಗೌರವದಿಂದ ನೋಡಬೇಕಾದ ಸಂಗತಿ.

ಕರ್ನಾಟಕದಲ್ಲಿ ಯಾವುದೇ ಆಡಳಿತ ಬಂದರೂ ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆಗೆ ಎಂದೂ ಕಂಟಕ ಬಂದಿಲ್ಲ. ಮುಂದೆಯೂ ಬರುವುದಿಲ್ಲ ಎಂಬ ವಿಶ್ವಾಸ ನನ್ನಲ್ಲಿದೆ. ಅದು ಇಡೀ ಕನ್ನಡಿಗರ ಕನ್ನಡ ಬದುಕಿನ ಸಾಕ್ಷಿಪ್ರಜ್ಞೆಯ ಪ್ರತೀಕವೆಂಬುದನ್ನು ಪ್ರತಿಯೊಬ್ಬ ಕನ್ನಡಿಗನೂ ವಿನಯದಿಂದ ಗೌರವಿಸಬೇಕು. ಅದು ಹಾಗೆಯೇ ಪ್ರಜಾಸತ್ತಾತ್ಮಕ ದೃಷ್ಟಿಯಲ್ಲಿ ನಡೆದುಕೊಂಡು ಹೋಗಲು ಸಹಕರಿಸಬೇಕು.

ನಮ್ಮ ಹಿಂದಿನ ಸರ್ಕಾರಗಳು ಈ ಕಾರ್ಯವನ್ನು ಅಲ್ಪ-ಸ್ವಲ್ಪ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಸರಿದೂಗಿಸಿಕೊಂಡು ಬಂದಿದ್ದಾರೆ. ಅನುದಾನ ಕೊಡುವುದರಲ್ಲಿ ಹೆಚ್ಚು ಕಡಿಮೆ ಆಗಿರಬಹುದು. ಆಡಳಿತದೊಳಗೆ ಮಾತ್ರ ಎಂದೂ ಮೂಗು ತೂರಿಸಿಲ್ಲ ಎಂಬುದು ಮುಖ್ಯ ವಿಚಾರ. ನಮ್ಮ ಸರ್ಕಾರವೂ ಈ ವಿಚಾರದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಪರಂಪರೆಯನ್ನು ಗೌರವಿಸಿ ಹಿಂದೆಂದಿಗಿಂತಲೂ ಹೆಚ್ಚಿನ ಅನುದಾನವನ್ನು ನೀಡಿ ಸಹಕರಿಸುತ್ತಿದ್ದೇವೆ. ಸಾಂಸ್ಕೃತಿಕ ಲೋಕ ಆರೋಗ್ಯಕರವಾಗಿದ್ದರೆ ಪ್ರಜಾಸತ್ತೆ ಉಳಿಯುತ್ತದೆ ಬೆಳೆಯುತ್ತದೆ ಎಂಬುದನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

English summary
The three day Kannada Sahitya Sammelana inaugurated by CM of Karnataka Siddaramaiah on Feb.1. Eminent Kannada writer and poet Siddalingaiah is the President for 81st Kannada Sahitya Sammelana, Shravanabelagola, Hassan. Here is highlights of Siddaramaiah's speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X