ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಂಗಾಯತ ಅಭಿವೃದ್ಧಿ ನಿಗಮದ ಕುರಿತು ಸಿದ್ದರಾಮಯ್ಯ ಮಹತ್ವದ ಹೇಳಿಕೆ!

|
Google Oneindia Kannada News

ಬೆಂಗಳೂರು, ನ. 18: ಬಸವಕಲ್ಯಾಣ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಪ್ರಕಟಿಸಿದ ಮಹತ್ವದ ತೀರ್ಮಾನಗಳಿಂದ ಇದೀಗ ವಿವಾದ ಎದ್ದಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿನ ಮರಾಠ ಸಮುದಾಯದ ಮತಬ್ಯಾಂಕ್ ಗಮನದಲ್ಲಿಟ್ಟುಕೊಂಡು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಿಎಂ ಯಡಿಯೂರಪ್ಪ ಅವರು ಸೂಚಿಸಿದ್ದರು. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಆಗುತ್ತಿದ್ದಂತೆಯೆ ಲಿಂಗಾಯತ ಸಮುದಾಯ ಕೂಡ ನಿಗಮ-ಮಂಡಳಿ ರಚನೆಗೆ ಒತ್ತಾಯಿಸಿತ್ತು.

ಸ್ವಂತ ಸಮುದಾಯದ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ಅಭಿವೃದ್ಧಿಗೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೆ ಆದೇಶ ಮಾಡಿದ್ದರು. ಅದೂ ಕೂಡ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಇದೇ ಸಂದರ್ಭದಲ್ಲಿ ಲಿಂಗಾಯತ ಅಭಿವೃದ್ಧಿ ನಿಗಮದ ಸ್ಥಾಪನೆ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಅವರ ಅಭಿಪ್ರಾಯ ಏನು? ಬಿಜೆಪಿ ಸರ್ಕಾರದ ತೀರ್ಮಾನಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ!

ಪ್ರಜಾಪ್ರಭುತ್ವ ವಿರೋಧಿ ನಡೆ!

ಪ್ರಜಾಪ್ರಭುತ್ವ ವಿರೋಧಿ ನಡೆ!

ಯಾವುದೇ ವೈಜ್ಞಾನಿಕ ಅಧ್ಯಯನಗಳಿಲ್ಲದೆ ಜಾತಿ ಆಧಾರಿತ ನಿಗಮ-ಪ್ರಾಧಿಕಾರ ಸ್ಥಾಪನೆ ಸಮಾಜ ವಿರೋಧಿ ಮಾತ್ರವಲ್ಲ, ಪ್ರಜಾಪ್ರಭುತ್ವ ವಿರೋಧಿ ತೀರ್ಮಾನ ಕೂಡಾ ಹೌದು. ಚುನಾವಣೆಗಳನ್ನು ಸಾಧನೆಯ ಬಲದಿಂದ ಗೆಲ್ಲಲಾಗದ ರಾಜ್ಯದ ಮತಿಹೀನ ಬಿಜೆಪಿ ಸರ್ಕಾರ ಇಂತಹ ಅಗ್ಗದ ತಂತ್ರ-ಕುತಂತ್ರಗಳನ್ನು ಮಾಡಿ ಸಮಾಜವನ್ನು ಒಡೆಯಲು ಹೊರಟಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ಯಡಿಯೂರಪ್ಪ ಅವರ ತೀರ್ಮಾನವನ್ನು ಟೀಕಿಸಿದ್ದಾರೆ.

ಬಡತನದ ನಿರ್ಮೂಲನೆಯ ಕಾರ್ಯಕ್ರಮಗಳಿಗೆ ವೈಜ್ಞಾನಿಕವಾದ ಅಧ್ಯಯನ ಆಧಾರಿತವಾಗಬೇಕು.ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಡತನ ನಿರ್ಮೂಲನೆಯ ಪ್ರಾಮಾಣಿಕ ಕಾಳಜಿ ಹೊಂದಿದ್ದರೆ, ಈಗಾಗಲೇ ಅವರ ಮುಂದಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಒಪ್ಪಿಕೊಂಡು ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಲಿಂಗಾಯತ ಅಭಿವೃದ್ದಿ ನಿಗಮ

ಲಿಂಗಾಯತ ಅಭಿವೃದ್ದಿ ನಿಗಮ

ಲಿಂಗಾಯತ ಅಭಿವೃದ್ದಿ ನಿಗಮ ಸ್ಥಾಪನೆಗೆ ನಮ್ಮ ವಿರೋಧ ಇಲ್ಲ. ಬಡತನ ಎಂಬುದು ಜಾತಿ-ಧರ್ಮಗಳನ್ನು ಮೀರಿದ್ದು. ಕೇವಲ ತಳಸಮುದಾಯಗಳಲ್ಲಿ ಮಾತ್ರವಲ್ಲ ಮೇಲ್ಜಾತಿಗಳಲ್ಲಿಯೂ ಬಡವರಿದ್ದಾರೆ. ಎಲ್ಲ ಜಾತಿ-ಧರ್ಮಗಳ ಬಡವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ರೂಪಿಸುವ ಕಾರ್ಯಕ್ರಮಗಳನ್ನು ನಾನು ಸ್ವಾಗತಿಸುತ್ತೇನೆ. ಆದರೆ ಕೇವಲ ರಾಜಕೀಯ ಲಾಭಕ್ಕಾಗಿ ನಡೆಸುವ ಇಂತಹ ಕ್ಷುಲಕ ಬುದ್ದಿಯ ಕಸರತ್ತುಗಳನ್ನು ಉಗ್ರವಾಗಿ ಖಂಡಿಸುತ್ತೇನೆ.

ಗಡಿಭಾಗದಲ್ಲಿ ಕನ್ನಡ ಮತ್ತು ಮರಾಠಿಗರ ನಡುವೆ ಆಗಾಗ ಸಂಘರ್ಷ ನಡೆದರೂ ರಾಜ್ಯದಾದ್ಯಂತ ಕನ್ನಡಿಗರು ಮತ್ತು ಮರಾಠಿಗರು ಪರಸ್ಪರ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಈಗ ಮರಾಠ ಅಭಿವೃದ್ದಿ ಪ್ರಾಧಿಕಾರವನ್ನು ಘೋಷಿಸಿ ಅನಗತ್ಯವಾಗಿ ಕನ್ನಡಿಗರನ್ನು ಕೆರಳಿಸುವ ಮೂರ್ಖತನವನ್ನು ರಾಜ್ಯಸರ್ಕಾರ ಮಾಡಿದೆ. ಇದರಿಂದಾಗಿ ರಾಜ್ಯದ ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟಾದಲ್ಲಿ ಅದಕ್ಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಹೊಣೆಯಾಗುತ್ತಾರೆ.

ಬಿಜೆಪಿ ಸರ್ಕಾರದ ಗಿಮಿಕ್

ಬಿಜೆಪಿ ಸರ್ಕಾರದ ಗಿಮಿಕ್

ನಾನು ಮುಖ್ಯಮಂತ್ರಿಯಾಗಿ ಅನುಷ್ಠಾನಗೊಳಿಸಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್ ಮೊದಲಾದ ಯಾವ ಕಾರ್ಯಕ್ರಮವೂ ನಿರ್ದಿಷ್ಠ ಜಾತಿ-ಧರ್ಮಕ್ಕೆ ಸೀಮಿತವಾದುದಲ್ಲ. ಇವೆಲ್ಲವೂ ಸರ್ವಾಜನಾಂಗದ ಬಡವರ ಕಲ್ಯಾಣ ಕಾರ್ಯಕ್ರಮಗಳು. ರಾಜಕೀಯ ದ್ವೇಷದಿಂದ ಈ ಕಾರ್ಯಕ್ರಮಗಳನ್ನು ನಿರ್ಲಕ್ಷಿಸುತ್ತಿರುವ ರಾಜ್ಯದ ಬಿಜೆಪಿ ಸರ್ಕಾರ ಬಜೆಟ್ ಬೆಂಬಲ ಇಲ್ಲದ ಯೋಜನೆಗಳನ್ನು ಘೋಷಿಸುವ ಗಿಮಿಕ್ ಮಾಡುತ್ತಿದೆ.

ತುಘಲಕ್ ನಿರ್ಧಾರ

ತುಘಲಕ್ ನಿರ್ಧಾರ

ಮೀಸಲಾತಿ, ಸಾಮಾಜಿಕ ನ್ಯಾಯದ ಬಗ್ಗೆ ನಾವು ಮಾತನಾಡಿದಾಗ ನಮ್ಮನ್ನು ಜಾತಿವಾದಿಗಳೆಂದು ಟೀಕಿಸುವ, ಹಂಗಿಸುವ ಬಿಜೆಪಿ ಈಗ ಮಾಡುತ್ತಿರುವುದೇನು? ಜಾತಿ-ಜಾತಿ ನಡುವೆ ಮಾತ್ರವಲ್ಲ ಭಾಷೆ-ಭಾಷೆ ನಡುವೆ ಕೂಡಾ ಜಗಳ ಹುಟ್ಟುಹಾಕುತ್ತಿದೆ. ಇಂತಹ ತುಘಲಕ್ ನಿರ್ಧಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ.

ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಗ್ಯತೆ ಇಲ್ಲ. ವೃದ್ಧಾಪ್ಯವೇತನ,ವಿಧವಾ ವೇತನ, ಅಂಗವಿಕಲ ವೇತನಕ್ಕೆ ದುಡ್ಡಿಲ್ಲ, ಅತಿವೃಷ್ಟಿಯಿಂದ ಕಷ್ಟನಷ್ಟಕ್ಕೀಡಾಗಿರುವ ಜನ ಬೀದಿಯಲ್ಲಿದ್ದಾರೆ, ಕೋರೊನಾ ಸೋಂಕಿನಿಂದ ಜನ ಸಾಯುತ್ತಿದ್ದಾರೆ. ಇವೆಲ್ಲಕ್ಕೂ ಸರ್ಕಾರದ ಬಳಿ ಹಣ ಇಲ್ಲ, ಜಾತಿ ನಿಗಮ-ಪ್ರಾಧಿಕಾರಕ್ಕೆ ನೂರಾರು ಕೋಟಿ ಎಲ್ಲಿಂದ ಬಂತು? ಎಂದು ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ.

English summary
Leader of the Opposition Siddaramaiah has made a significant statement on the establishment of Lingayat Development Corporation. Siddaramaiah has made it clear that we are not opposed to the establishment of Lingayata Development Corporation. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X