• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಎಂ ಯಡಿಯೂರಪ್ಪರಿಗೆ ಅಭಯ ಹಸ್ತ ಚಾಚಿದ ಸಿದ್ದರಾಮಯ್ಯ!

|

ಬೆಂಗಳೂರು, ಆ. 29: ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಹೋಂ ಕ್ವಾರಂಟೈನ್‌ನಲ್ಲಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈಗ ಹೋಂ ಕ್ವಾರಂಟೈನ್ ಅವಧಿಯನ್ನೂ ಪೂರೈಸಿದ್ದು ಇಂದಿನಿಂದ, ಪೂರ್ಣಪ್ರಮಾಣವಾಗಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಮಹತ್ವದ ಮಾತನ್ನಾಡಿರುವ ಸಿದ್ದರಾಮಯ್ಯ ಅವರು, ಸಿಎಂ ಯಡಿಯೂರಪ್ಪ ಅವರಿಗೆ ಪರೋಕ್ಷ ಅಭಯ ಹಸ್ತ ಚಾಚಿದ್ದಾರೆ. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗುತ್ತದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆ ಪರೋಕ್ಷವಾಗಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಲ ಕೊಡುವಂತಿದೆ.

ಇಸ್ಕೊಂಡು ಈರಭದ್ರನಂತಾದ ಕೇಂದ್ರ ಸರ್ಕಾರ: ಎಚ್‌ಡಿಕೆ

ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಪುಲಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇನ್ನೆರಡು ದಿನಗಳಲ್ಲಿ ಕಾವಲ್ ಭೈರಸಂದ್ರದಲ್ಲಿನ ಅಖಂಡ ಶ್ರೀನಿವಾಸಮೂರ್ತಿ ಅವರ ನಿವಾಸಕ್ಕೆ ಭೇಟಿ ಕೊಡುವುದಾಗಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರ ರಾಜ್ಯ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಕೇಂದ್ರದಲ್ಲಿ ಕೆಟ್ಟ ಸರ್ಕಾರವಿದೆ, ರಾಜ್ಯದಲ್ಲಿ ಹೇಡಿ ಸರ್ಕಾರವಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಆರ್ಥಿಕ ಅಭಿವೃದ್ಧಿಗೆ ತೀವ್ರ ಹಿನ್ನಡೆ

ಆರ್ಥಿಕ ಅಭಿವೃದ್ಧಿಗೆ ತೀವ್ರ ಹಿನ್ನಡೆ

ಕೇಂದ್ರ ಸರ್ಕಾರದ ನೀತಿಗಳಿಂದಾಗಿ ರಾಜ್ಯ ದಿವಾಳಿ ಅಂಚಿಗೆ ಬಂದು ನಿಂತಿದೆ. ಜಿ.ಡಿ.ಪಿ ನೆಲಕಚ್ಚಿದೆ, ನಿರುದ್ಯೋಗ ಪ್ರಮಾಣ ಏರಿಕೆಯಾಗಿದೆ. ಹೀಗಿರುವಾಗ ಮತ್ತೆ ರಾಜ್ಯ ಸರ್ಕಾರ ಸಂಬಳ ನೀಡಲು ಸಾಲ ಪಡೆದುಕೊಂಡರೆ ಅಭಿವೃದ್ಧಿ ಕಾರ್ಯಗಳು ಆಗುವುದಿಲ್ಲ. ನಮ್ಮ ಆಡಳಿತಾವಧಿಯಲ್ಲಿ ಆರ್ಥಿಕ ಶಿಸ್ತು ಅತ್ಯುತ್ತಮವಾಗಿ ನಿರ್ವಹಣೆಯಾಗಿತ್ತು. ಸಾಲದ ಪ್ರಮಾಣ ಜಿ.ಡಿ.ಪಿ 25% ಗಿಂತಲೂ ಕಡಿಮೆಯಿತ್ತು. ಈಗ ಸಾಲ ಅನಿಯಂತ್ರಿತವಾಗಿ ಜಾಸ್ತಿಯಾಗುವುದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿ, ಅಭಿವೃದ್ಧಿಯಲ್ಲಿ 10 ವರ್ಷಗಳಷ್ಟು ಹಿಂದಕ್ಕೆ ಹೋಗಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ಕೊಟ್ಟಿದ್ದಾರೆ.

ರಾಜ್ಯದ ಹಿತದೃಷ್ಟಿಯಿಂದ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ರಾಜ್ಯಗಳಿಗೆ ನೀವೇ ಸಾಲ ತೆಗೆದುಕೊಳ್ಳಿ ಎಂದು ಹೇಳುವುದೇ ವಿಪರ್ಯಾಸ. ರಾಜ್ಯಗಳ ಬಗ್ಗೆ ಕಾಳಜಿಯೇ ಇಲ್ಲದಿರುವ ಅತ್ಯಂತ ಕೆಟ್ಟ ಸರ್ಕಾರ ಕೇಂದ್ರದಲ್ಲಿದ್ದರೆ, ಅದನ್ನು ಪ್ರಶ್ನಿಸುವ ಧೈರ್ಯವಿಲ್ಲದ ಹೇಡಿ ಸರ್ಕಾರ ರಾಜ್ಯದಲ್ಲಿದೆ. ಬಿಜೆಪಿಯೇತರ ರಾಜ್ಯ ಸರ್ಕಾರಗಳು ಕೇಂದ್ರದ ಈ ನೀತಿಯನ್ನು ವಿರೋಧ ಮಾಡಿವೆ. ಆದರೆ ನಿರ್ಮಲಾ ಸೀತಾರಾಮನ್ ಅವರು ಇದನ್ನು ದೇವರ ಆಟ ಎಂದು ಕೈಚೆಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.

ಹೇಡಿ ಸರ್ಕಾರ ಎಡವಿದೆ

ಹೇಡಿ ಸರ್ಕಾರ ಎಡವಿದೆ

ಕೇಂದ್ರದಲ್ಲಿ ಕೆಟ್ಟ ಸರ್ಕಾರವಿದೆ. ರಾಜ್ಯದಲ್ಲಿ ಹೇಡಿ ಸರ್ಕಾರವಿದೆ. ಇಂಥ ಪರಿಸ್ಥಿತಿಯಲ್ಲಿ ಈ ವರ್ಷವೂ ಪ್ರವಾಹ ಬಂದಿದ್ದು 56 ತಾಲೂಕುಗಳ 1000 ಹಳ್ಳಿಗಳು ಪ್ರವಾಹದಿಂದ ಬಾಧಿಸಲ್ಪಟ್ಟಿದೆ. ಸುಮಾರು 1 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ, ಮನೆಗಳು ಕುಸಿದುಬಿದ್ದಿವೆ. ಜಾನುವಾರುಗಳು ಸಾವಿಗೀಡಾಗಿವೆ. ರಾಜ್ಯ ಸರ್ಕಾರವೇ ಸುಮಾರು 4 ಸಾವಿರ ಕೋಟಿ ನಷ್ಟವಾಗಿದೆ ಎಂದಿದೆ. ಈ ಹಿಂದೆಯೂ ಸರಿಯಾಗಿ ಪರಿಹಾರ ಕೊಟ್ಟಿಲ್ಲ. 35,000 ಕೋಟಿ ಪರಿಹಾರ ಕೇಳಿದ್ದರೆ ಬರೀ 1800 ಕೋಟಿ ಪರಿಹಾರ ನೀಡಲಾಗಿದೆ. ಇನ್ನು ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಟ್ಟಿಲ್ಲ, ಹಳ್ಳಿಗಳ ಸ್ಥಳಾಂತರವಾಗಿಲ್ಲ, ಶಾಲೆಗಳ ಪುನರ್ ನಿರ್ಮಾಣ ಕಾರ್ಯವೂ ಆಗಿಲ್ಲ, ಮತ್ತೆ ಈ ವರ್ಷವೂ ಪ್ರವಾಹ ಬಂದಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಚಿವ ಅಶೋಕ್ ಮೇಲೆ ವಾಗ್ದಾಳಿ

ಸಚಿವ ಅಶೋಕ್ ಮೇಲೆ ವಾಗ್ದಾಳಿ

ಸಿಎಂ ಯಡಿಯೂರಪ್ಪ ಅವರು ಹೆಲಿಕಾಪ್ಟರ್ ಮೂಲಕ ಸರ್ವೇ ಮಾಡಿದರು. ಆದರೆ ಸರ್ಕಾರದ ಬೇರೆ ಮಂತ್ರಿಗಳು ಜನರ ಬಳಿಗೆ ಹೋಗಿ ಅವರ ಕಷ್ಟ ಆಲಿಸಬೇಕೋ ಬೇಡವೋ? ಕಂದಾಯ ಸಚಿವ ಅಶೋಕ್ ಅವರು ಕೇಂದ್ರದಿಂದ ಪರಿಹಾರ ಕೇಳಿದ್ದೇವೆ. ಅವರ ತಂಡ ಬಂದು ಸರ್ವೇ ಮಾಡಿ ಪರಿಹಾರ ನೀಡುತ್ತದೆ ಎನ್ನುತ್ತಾರೆ. ಆದರೆ ಅಧಿಕಾರಗಳ ಮಾತೇ ಬೇರೆ. ಇವರು ಕೇಂದ್ರ ವಿತ್ತ ಸಚಿವರನ್ನು ಭೇಟಿ ಮಾಡಿ ಮನವಿ ಕೊಟ್ಟು, ಪ್ರಧಾನಿಗಳ ಮನವೊಲಿಕೆ ಮಾಡಿ ಪರಿಹಾರದ ಹಣ ಸಿಗುವವರೆಗೂ ಹಿಡಿದ ಕಾರ್ಯದಿಂದ ಹಿಂದೆ ಸರಿಯಬಾರದು. ನಮ್ಮ ಸರ್ಕಾರವಿದ್ದಾಗ ಪದೇ ಪದೇ ಪ್ರಧಾನಿಗಳನ್ನು ಭೇಟಿ ಮಾಡಿ ಮನವಿ ಕೊಟ್ಟು ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದೆವು, ಆದರೆ ಇವರು ಪ್ರಧಾನಿಗಳನ್ನು ಭೇಟಿ ಮಾಡಲು ಹೆದರುತ್ತಾರೆ, ಇದೊಂದು ಮಹಾ ಪುಕ್ಕಲು, ಹೇಡಿ ಸರ್ಕಾರ.

ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವುದರಲ್ಲಿ ಈ ಸರ್ಕಾರ ಎಡವಿದೆ. ತಕ್ಷಣ ಪ್ರವಾಹ ಪೀಡಿತ ಪ್ರದೇಶಗಳ ಸರ್ವೇ ನಡೆಸಿ, ನಷ್ಟದ ಪ್ರಮಾಣದ ರಿಪೋರ್ಟ್ ತರಿಸಿಕೊಂಡು ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡುತ್ತೇನೆ. ಈ ವಿಚಾರವನ್ನು ಅಧಿವೇಶನದಲ್ಲಿ ಪ್ರಶ್ನಿಸಿದರೆ ಸರಿಯಾಗಿ ಉತ್ತರ ನೀಡಲ್ಲ. ಕಳೆದ ಬಾರಿ ಹೀಗೇ ಆಯಿತು. ನಾನು ಸರ್ಕಾರವನ್ನು ಪ್ರಶ್ನಿಸಿದರೆ ನನ್ನ ಮಾತನ್ನು ಕೇಳಿಸಿಕೊಳ್ಳಲು ಸರ್ಕಾರ ಸಿದ್ಧವಿರಲಿಲ್ಲ. ಈ ಬಾರಿಯ ಅಧಿವೇಶನದಲ್ಲೂ ಈ ವಿಚಾರವನ್ನು ಪ್ರಶ್ನಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ವಿವಾದ ಮಾಡಿಕೊಂಡಿದ್ದು ತಪ್ಪು

ವಿವಾದ ಮಾಡಿಕೊಂಡಿದ್ದು ತಪ್ಪು

ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ರಾಜ್ಯ ಸರ್ಕಾರ ಬೇಗನೆ ಒಂದು ನಿರ್ಧಾರ ತೆಗೆದುಕೊಂಡಿದ್ದರೆ ಇಂದು ರಾಯಣ್ಣ ವರ್ಸಸ್ ಶಿವಾಜಿ, ಕನ್ನಡಿಗರು ವರ್ಸಸ್ ಮರಾಠಿಗರು ಎಂಬ ಪರಿಸ್ಥಿತಿಯೇ ನಿರ್ಮಾಣವಾಗುತ್ತಿರಲಿಲ್ಲ. ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿಯವರಿಗೆ 2 ಬಾರಿ ಕರೆ ಮಾಡಿ ಮಾತನಾಡಿದ್ದೇನೆ.

ರಾಯಣ್ಣನ ವಿಚಾರವನ್ನು ವಿವಾದ ಮಾಡಿಕೊಳ್ಳುವುದೇ ದೊಡ್ಡ ತಪ್ಪು, ರಾಯಣ್ಣನವರು ಚೆನ್ನಮ್ಮನ ಸಂಸ್ಥಾನದಲ್ಲಿ ಸೈನಿಕನಾಗಿ ಬ್ರಿಟೀಷರ ವಿರುದ್ಧ ಹೋರಾಡಿ ಗಲ್ಲಿಗೇರಿದವರು. ರಾಯಣ್ಣ ಇಂದಿನ ಯುವ ಜನರಿಗೆ ಸ್ಫೂರ್ತಿಯ ಸೆಲೆ, ಅಂಥವರ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಹಿಂದೆಮುಂದೆ ನೋಡಬಾರದಾಗಿತ್ತು. ನಿನ್ನೆ ಸರ್ಕಾರ ಮಾಡಿದ ಕೆಲಸವನ್ನು ಮೊದಲೇ ಮಾಡಿದ್ದರೆ ಬೆಳಗಾವಿಯಲ್ಲಿ ವಿವಾದ ಇಷ್ಟು ದೊಡ್ಡದಾಗುತ್ತಿರಲಿಲ್ಲ ಎಂದರು.

ಶಿವಾಜಿಯೂ ಸ್ವತಂತ್ರ ಹೋರಾಟಗಾರ ಎಂಬುದರಲ್ಲಿ ಎರಡು ಮಾತಿಲ್ಲ, ಶಿವಾಜಿಯವರಂತೆ ರಾಯಣ್ಣ ಕೂಡ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು. ಇಬ್ಬರೂ ಗೌರವಕ್ಕೆ ಅರ್ಹರು, ಅಂತಹ ಮಹಾನ್ ವ್ಯಕ್ತಿಗಳ ಮಧ್ಯೆ ಸಂಘರ್ಷ ಉಂಟಾಗಲು ಸರ್ಕಾರ ಅವಕಾಶ ಮಾಡಿಕೊಡಬಾರದು. ಈ ಹೋರಾಟದಲ್ಲಿ ಕನ್ನಡಿಗರ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಲಾಗಿದೆ, ಅದನ್ನು ತಕ್ಷಣ ವಾಪಸು ಪಡೆಯಬೇಕು ಎಂದು ಆಗ್ರಹಿಸುತ್ತೇನೆ ಎಂದರು.

ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

ಡಿ.ಜೆ. ಹಳ್ಳಿ ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿಯೇ ಇದೆ. ಈಗಲೇ ಯಾರನ್ನೂ ಅಪರಾಧಿಗಳು ಅಂತಲೋ ಅಥವಾ ಅಮಾಯಕರು ಅಂತಲೋ ನಿರ್ಧರಿಸಲು ಸಾಧ್ಯವಿಲ್ಲ. ನಮ್ಮ ಪಕ್ಷದ ಶಾಸಕರಾದ ಜಮೀರ್ ಅಹ್ಮದ್ ಅವರು ಗಲಭೆಯ ಆರೋಪಿಗಳನ್ನು ಅಮಾಯಕರು ಎಂದಿಲ್ಲ. ಗಲಭೆಯಲ್ಲಿ ಮೃತಪಟ್ಟ ಕುಟುಂಬದ ಸದಸ್ಯರು ತೀರ ಬಡವರು ಎನ್ನುವ ಕಾರಣಕ್ಕಾಗಿ ಪರಿಹಾರ ನೀಡಿದ್ದೇನೆ ಎಂದು ಹೇಳಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ವಿಚಾರದಲ್ಲಿ ನಮ್ಮ ತಕರಾರಿಲ್ಲ. ಈ ವಿಷಯದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ.

ತನಿಖಾ ಸಂಸ್ಥೆಯ ವರದಿ ಬರುವ ಮುಂಚೆಯೇ ಗೃಹ ಸಚಿವರು ಯಾರನ್ನೂ ಅಪರಾಧಿ ಎಂದು ಪರಿಗಣಿಸುವುದು ಸರಿಯಲ್ಲ. ತನಿಖೆಯಾಗಿ ಅಪರಾಧಿಗಳನ್ನು ಪತ್ತೆ ಹಚ್ಚಿದ ನಂತರ ಅಂಥವರಿಗೆ ಕಠಿಣ ಶಿಕ್ಷೆ ನೀಡಲಿ. ಈ ಘಟನೆಯನ್ನು ನಾನು ಖಂಡಿಸುತ್ತೇನೆ, ಶೀಘ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆದು ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.

 ಯಡಿಯೂರಪ್ಪರಿಗೆ ಸಿದ್ದರಾಮಯ್ಯ ಅಭಯ

ಯಡಿಯೂರಪ್ಪರಿಗೆ ಸಿದ್ದರಾಮಯ್ಯ ಅಭಯ

ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಮಧ್ಯಂತರ ಸರ್ಕಾರ ಬರಲಿದೆ ಎಂಬುದು ಸುಳ್ಳು. ನಾವಂತೂ ಸರ್ಕಾರ ತೆಗೆಯುವ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಭಯ ನೀಡಿದ್ದಾರೆ. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಯಡಿಯೂರಪ್ಪ ಅವರ ಸರ್ಕಾರವನ್ನು ನಾವು ಅಸ್ತಿರಗೊಳಿಸುವುದಿಲ್ಲ. ಅವರ ಪಕ್ಷದವರೇ ಸರ್ಕಾರ ಉರುಳಿಸಿದರೇ ನಾವು ಏನು ಮಾಡೋದಕ್ಕೂ ಆಗುವುದಿಲ್ಲ ಎಂದಿದ್ದಾರೆ. ಹಾಗೆ ಹೇಳಿಕೆ ಕೊಡುವ ಮೂಲಕ ವಿರೋಧ ಪಕ್ಷದವರು ಯಡಿಯೂರಪ್ಪ ಅವರ ಸರ್ಕಾರವನ್ನು ಕೆಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿ ಸರ್ಕಾರ ಅಸ್ತಿರವಾದರೆ ಅಥವಾ ಬಿಜೆಪಿ ಸರ್ಕಾರ ಬಿದ್ದರೆ ಅದು ಬಿಜೆಪಿಯವರಿಂದಲೇ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

English summary
Siddaramaiah said he has completed the Home Quarantine period and will take part in activities from now onwards. Siddaramaiah has spoken about many current issues. Here is the complete information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X