ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮುದಾಯಕ್ಕೆ ಹರಡಿದೆ ಕೋವಿಡ್ ಸೋಂಕು: ಸಿದ್ದರಾಮಯ್ಯ ಎಚ್ಚರಿಕೆ!

|
Google Oneindia Kannada News

ಬೆಂಗಳೂರು, ಜೂ. 23: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನ ವೈರಸ್ ಸೋಂಕಿತರ ಸಂಖ್ಯೆ ಆತಂಕಕಾರಿ ರೀತಿಯಲ್ಲಿ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 9,721ಕ್ಕೆ ಏರಿಕೆಯಾಗಿದೆ. ಕೋವಿಡ್-19ಗೆ ಈವರೆಗೆ 150 ಜನರು ರಾಜ್ಯದಲ್ಲಿ ಬಲಿಯಾಗಿದ್ದಾರೆ. ಸತತ 3 ತಿಂಗಳುಗಳಿಂದ ಸುಮ್ಮನಿದ್ದ ರಾಜ್ಯ ಸರ್ಕಾರ ಪರಿಸ್ಥಿತಿ ಕೈಮೀರುತ್ತಿದ್ದಂತೆಯೆ ಇದೀಗ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್‌ ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಮುಂದಾಗಿದೆ.

ಆದರೆ ಇಂಥ ಸಂಕಷ್ಟದ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ಜನರು ದಂಗಾಗುವಂತೆ ದರ ನಿಗದಿ ಮಾಡಿವೆ. ಅದನ್ನು ಸರ್ಕಾರ ಒಪ್ಪಿಕೊಂಡಿರುವುದು ದುರ್ದೈವದ ಸಂಗತಿ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಸರ್ಕಾರದ ಹಲವು ವೈಫಲ್ಯಗಳನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

10-12 ಲಕ್ಷ ರೂ. ಬೇಕು

10-12 ಲಕ್ಷ ರೂ. ಬೇಕು

ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಕೊರೊನಾ ವೈರಸ್‌ ಸೋಂಕಿತರ ಚಿಕಿತ್ಸೆಗೆ ದರಗಳನ್ನು ನಿಗಧಿಪಡಿಸಿದೆ. ಪ್ರಸ್ತುತ ದರಗಳನ್ನು ನೋಡಿದರೆ ಮೇಲ್ಮಧ್ಯಮ ವರ್ಗಗಳಿಗೇ ಆಘಾತವಾಗುವಂತಿದೆ. ಕೋವಿಡ್ ಸೋಂಕು ಕುಟುಂಬದೊಳಕ್ಕೆ ವ್ಯಾಪಿಸಿದರೆ ಸಾಮಾನ್ಯವಾಗಿ ಕುಟುಂಬದ ಸದಸ್ಯರೆಲ್ಲರನ್ನು ಬಾಧಿಸುತ್ತದೆ. ಇಂತಹ ಪರಿಸ್ಥಿಯಲ್ಲಿ ಸರ್ಕಾರ ಇಂದು (ಜೂನ್ 23) ಖಾಸಗಿ ಆಸ್ಪತ್ರೆಗಳಲ್ಲಿಚಿಕಿತ್ಸೆಗೆ ದರ ನಿಗಧಿಪಡಿಸಿದೆ.

ಬಡವರಿಗೆ 10 ಸಾವಿರ ರೂಪಾಯಿ: ಸಿದ್ಧರಾಮಯ್ಯ ಹೇಳಿದ್ದೇನು?ಬಡವರಿಗೆ 10 ಸಾವಿರ ರೂಪಾಯಿ: ಸಿದ್ಧರಾಮಯ್ಯ ಹೇಳಿದ್ದೇನು?

ಕೋವಿಡ್ ಚಿಕಿತ್ಸೆಗೆ ಸರ್ಕಾರ ದಿನವೊಂದಕ್ಕೆ ನಿಗದಿ ಮಾಡಿರುವ ದರವನ್ನು ಜನತೆ ಭರಿಸಲು ಸಾಧ್ಯವಿಲ್ಲ. ಖಾಸಗಿ ದರ ನಿಗದಿ ನೋಡಿದರೆ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯಗಳು ಜೀವಂತವಾಗಿವೆಯೇ ಎಂಬ ಪ್ರಶ್ನೆ ಬರುತ್ತದೆ. ಜನರ ಬಗ್ಗೆ ಕಾಳಜಿ ಇರುವ ಸರ್ಕಾರವೊಂದು ಮಾಡುವ ಕೆಲಸವೇ ಇದು? ಒಂದು ಕುಟುಂಬದ ನಾಲ್ಕೈದು ಜನ ಸದಸ್ಯರು ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಉಂಟಾದರೆ ಎಲ್ಲಿಂದ 10-12 ಲಕ್ಷಕ್ಕೂ ಅಧಿಕ ಮೊತ್ತದ ಹಣ ತುಂಬಲು ಸಾಧ್ಯ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಉಚಿತ ಚಿಕಿತ್ಸೆ ಕೊಡಿ

ಉಚಿತ ಚಿಕಿತ್ಸೆ ಕೊಡಿ

ಹೀಗಾಗಿ ಎಲ್ಲ ಕೊರೊನಾ ವೈರಸ್ ಸೋಂಕಿತರಿಗೆ ರೋಗಿಗಳಿಗೆ ಎಲ್ಲ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಬೇಕು. ಜೊತೆಗೆ ಸ್ಟಾಂಡರ್ಡ್ ಟ್ರೀಟ್‍ಮೆಂಟ್ ಪ್ರೊಟೊಕಾಲ್ ಜಾರಿಗೆ ತರಬೇಕು ಎಂದು ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಸ್ಟಾಂಡರ್ಡ್ ಟ್ರೀಟ್‍ಮೆಂಟ್ ಪ್ರೊಟೊಕಾಲ್ ಜಾರಿಯಾಗುತ್ತಿರುವ ಬಗ್ಗೆ ನಿಗಾ ವಹಿಸಲು ಸಮಿತಿಯೊಂದನ್ನು ರಚನೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಲಾಕ್‌ಡೌನ್ ಅಗತ್ಯವಿರಲಿಲ್ಲ

ಲಾಕ್‌ಡೌನ್ ಅಗತ್ಯವಿರಲಿಲ್ಲ

ಕೇಂದ್ರ-ರಾಜ್ಯ ಸರ್ಕಾರಗಳ ಸರಣಿ ವೈಫಲ್ಯಗಳಿಂದಾಗಿ ಕೊರೋನಾ ತೀವ್ರವಾಗಿ ಹರಡುತ್ತಿದೆ. ಯಾವುದೇ ಪೂರ್ವ ಸಿದ್ಧತೆಗಳಿಲ್ಲದೆ ಪ್ರಧಾನಿ ಮೋದಿ ಅವರು ಕಳೆದ ಮಾರ್ಚ್ 24ರಂದು ಏಕಾಏಕಿ ಲಾಕ್‌ಡೌನ್ ಜಾರಿ ಮಾಡಿದ್ದರು. ಮಾರ್ಚ್ ತಿಂಗಳಲ್ಲಿ ಲಾಕ್‍ಡೌನ್ ಅಗತ್ಯವಿರಲಿಲ್ಲ. ಅವಿವೇಕಿತನದ ತೀರ್ಮಾನದಿಂದಾಗಿ ಕೋಟ್ಯಾಂತರ ಕಾರ್ಮಿಕರು, ಕುಶಲಕರ್ಮಿ ಸಮುದಾಯಗಳು, ರೈತಾಪಿ ಸಮುದಾಯಗಳು ಪಡಬಾರದ ಕಷ್ಟಪಟ್ಟರು.

ನೋಟ್‍ಬ್ಯಾನ್ ಮತ್ತು ಜಿ.ಎಸ್.ಟಿಗಳ ಅಸಮರ್ಪಕ ಅನುಷ್ಠಾನಗಳಿಂದಾಗಿ ಲಕ್ವಾ ಹೊಡೆದಂತಾಗಿದ್ದ ದೇಶದ ಆರ್ಥಿಕತೆಗೆ ಲಾಕ್‍ಡೌನ್‍ನಿಂದಾಗಿ ಉತ್ಪಾದಕ ವಲಯಗಳು ಇದ್ಧ ಬದ್ಧ ಚೈತನ್ಯವನ್ನು ಕಳೆದುಕೊಂಡಿವೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸಮುದಾಯಕ್ಕೆ ಹರಡಿದೆ

ಸಮುದಾಯಕ್ಕೆ ಹರಡಿದೆ

ಪ್ರಸ್ತುತ ಕೊರೋನಾ ಸೋಂಕು ಸಮುದಾಯದ ಸೋಂಕಾಗಿ ವ್ಯಾಪಿಸಿಕೊಂಡಿದೆ. ಸರಿಯಾದ ತಪಾಸಣೆಗಳು ನಡೆಯುತ್ತಿಲ್ಲ. ಬಹುಶಃ ರಾಜ್ಯದಲ್ಲಿ ಅಸಂಖ್ಯಾತ ಪ್ರಕರಣಗಳಿರಬಹುದು. ಪತ್ತೆಯಾಗಬೇಕಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಜನರ ದುಡಿಮೆಯ ಅವಕಾಶಗಳೆಲ್ಲ ಮುಚ್ಚಿ ಹೋಗಿವೆ. ಅಸಂಖ್ಯಾತ ಕಾರ್ಮಿಕರು/ನೌಕರರನ್ನು ಕಾರ್ಖಾನೆ ಮತ್ತು ಕಂಪೆನಿಗಳು ಕೆಲಸದಿಂದ ತೆಗೆದು ಹಾಕಿವೆ. ಜನರ ಬಳಿ ಹಣವಿಲ್ಲ.

ಹಣ ಮಾಡಿಕೊಳ್ಳಲು ಅವಕಾಶ

ಹಣ ಮಾಡಿಕೊಳ್ಳಲು ಅವಕಾಶ

ಖಾಸಗಿ ಆಸ್ಪತ್ರೆಗಳು ಹಣ ಮಾಡಿಕೊಳ್ಳಲು ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ. ಸರ್ಕಾರದ ಅಧಿಸೂಚನೆಯಂತೆ ಇಬ್ಬರು-ಮೂರು ಜನರು ವಾರ್ಡ್‍ಗಳನ್ನು ಹಂಚಿಕೊಂಡು ಚಿಕಿತ್ಸೆ ಪಡೆದರೆ ಅವರಿಗೆ ಮೇಲಿನ ದರಗಳ ಜೊತೆಗೆ ಶೇ.25 ರವರೆಗೆ ಹೆಚ್ಚಿನ ದರಗಳನ್ನು ನಿಗದಿ ಮಾಡಲು ಅವಕಾಶವಿದೆ.

ಜೊತೆಗೆ ಸರ್ಕಾರ ನಿಗಧಿಪಡಿಸಿರುವ ದರಗಳು ವಿಮಾ ಪ್ಯಾಕೇಜುಗಳಿಗೆ ಅನ್ವಯಿಸುವುದಿಲ್ಲವೆಂದು ಹೇಳಲಾಗಿದೆ. ಆಸ್ಪತ್ರೆಗಳಲ್ಲಿ ಸೂಟ್‌ಗಳನ್ನು ಪಡೆದರೆ ಅದಕ್ಕೆ ಮಿತಿ ಇಲ್ಲದಷ್ಟು ವೆಚ್ಚ ವಸೂಲಿ ಮಾಡಬಹುದಾಗಿ ತಿಳಿಸಲಾಗಿದೆ. ಜನತೆಗೆ ಒಂದು ಕಡೆ ಹಣ ಹೊಂದಿಸುವ ಸಮಸ್ಯೆ ಆದರೆ ಮತ್ತೊಂದು ಕಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಚಿಕಿತ್ಸೆ ನೀಡಲು ಜಾಗವೇ ಇಲ್ಲದೆ ತುಂಬಿ ಹೋಗಿವೆ ಎಂಬ ಮಾಹಿತಿ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವೆಂಟಿಲೇಟರ್‌ಗಳು

ವೆಂಟಿಲೇಟರ್‌ಗಳು

ರಾಜ್ಯ ಸರ್ಕಾರ ಕೇಂದ್ರಕ್ಕೆ 35,000 ವೆಂಟಿಲೇಟರ್‌ಗಳ ಬೇಡಿಕೆ ಇಟ್ಟಿತ್ತು, ಆದರೆ ಕೇಂದ್ರವು ಕೇವಲ 90 ವೆಂಟಿಲೇಟರ್‌ಗಳನ್ನು ಮಾತ್ರ ಸರಬರಾಜು ಮಾಡಿದೆ ಎಂಬ ಮಾಹಿತಿ ಇದೆ. ರಾಜ್ಯ ಸರ್ಕಾರವು ವೆಂಟಿಲೇಟರ್ ಉತ್ಪಾದಿಸಿಕೊಡುವಂತೆ ಕಂಪೆನಿಗಳನ್ನು ಇತ್ತೀಚೆಗೆ ಕೋರಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಮನಗರ ಮತ್ತು ಗುಲ್ಬರ್ಗ ಜಿಲ್ಲೆಗಳಿಗೆ ಸರಬರಾಜು ಮಾಡಲಾಗಿದ್ದ ಔಷಧಿ ಕಳಪೆ ಗುಣಮಟ್ಟದ್ದಾಗಿವೆ ಎಂದು ವರದಿಯಾಗಿದೆ. ಪಿ.ಪಿ.ಇ ಕಿಟ್ ಮತ್ತು ಇನ್ನಿತರೆ ವೈದ್ಯಕೀಯ ಸಲಕರಣೆಗಳ ಕುರಿತು ವೈದ್ಯರೆ ಅನೇಕ ಕಡೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಚಿಕಿತ್ಸೆಯ ಅವ್ಯವಸ್ಥೆ ಕುರಿತಂತೆ ರೋಗಿಯೊಬ್ಬರು ಮಾಡಿರುವ ವರದಿ ಗಾಬರಿ ಹುಟ್ಟಿಸುವಂತಿದೆ. ಇದನ್ನೆಲ್ಲ ನೋಡಿದರೆ ಸರ್ಕಾರ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಪರಿಸ್ಥಿತಿ ಮಾತ್ರ ದಿನದಿಂದ ದಿನಕ್ಕೆ ವಿಷಮಿಸುತ್ತಿದೆ.

ಪ್ರೊಟೋಕಾಲ್ ಯಾಕೆ ಬೇಕು?

ಪ್ರೊಟೋಕಾಲ್ ಯಾಕೆ ಬೇಕು?

ಸಂಕಷ್ಟದಿಂದ ಕಂಗೆಟ್ಟ ಜನ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡು ಅರಾಜಕ ವಾತಾವರಣ ನಿರ್ಮಾಣವಾಗುವುದರ ಬದಲು ಸರ್ಕಾರ ತನ್ನ ಪುಕ್ಕಲುತನದ ನೀತಿಯನ್ನು ಮತ್ತು ಖಾಸಗಿ ಆಸ್ಪತ್ರೆಗಳ ಲಾಬಿಯನ್ನು ಮೆಟ್ಟಿ ನಿಂತು ಪರಿಸ್ಥಿಯನ್ನು ನಿಗ್ರಹಿಸಬೇಕಾಗಿದೆ.

ಕೇಂದ್ರ-ರಾಜ್ಯ ಸರ್ಕಾರ ವೈಫಲ್ಯಗಳಿಂದಾಗಿ ಕೊರೋನಾ ಹರಡಿರುವುದರಿಂದ, ಕೊರೋನಾ ಸಂಬಂಧಿತ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಬೇಕು. ಎಲ್ಲಾ ಆಸ್ಪತ್ರೆಗಳಿಗೆ ಸ್ಟಾಂಡರ್ಡ್ ಟ್ರೀಟ್‍ಮೆಂಟ್ ಪ್ರೊಟೊಕಾಲ್ ನಿಗಧಿಪಡಿಸಬೇಕು.

ಚಿಕಿತ್ಸೆಗೆ ಸ್ಟಾಂಡರ್ಡ್ ಟ್ರೀಟ್‍ಮೆಂಟ್ ಪ್ರೊಟೊಕಾಲ್ ಯಾಕೆ ಬೇಕೆಂದರೆ ಹಣ ಇರುವವರು ಮಾತ್ರ ವೆಂಟಿಲೇಟರ್ ಸೌಲಭ್ಯ ಪಡೆಯುತ್ತಾರೆ. ಬದುಕುವ ಶಕ್ತಿ ಇದ್ದು ಹಣ ಇಲ್ಲದೇ ವೆಂಟಿಲೇಟರ್ ಸೌಲಭ್ಯ ಪಡೆಯಲಾಗದೆ ಬಡ, ಮಧ್ಯಮ ವರ್ಗದ ರೋಗಿಗಳು ಮರಣ ಹೊಂದಿದರೆ ಸರ್ಕಾರ ಕೊಲೆಗಡುಗನ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಕೊರೋನಾದ ಭೀತಿಯನ್ನು ಇನ್ನಷ್ಟು ಹೆಚ್ಚಿಸಿ ಹಣದ ದಂಧೆಗೆ ಅನೇಕರು ಇಳಿಯಬಹುದು ಎಂದು ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.

ತಜ್ಞರ ಸಮಿತಿ ನೇಮಿಸಿ

ತಜ್ಞರ ಸಮಿತಿ ನೇಮಿಸಿ

ಈ ಎಲ್ಲಾ ಸಮಸ್ಯೆಗಳು ತಪ್ಪಬೇಕೆಂದರೆ ಸರ್ಕಾರ ತುರ್ತಾಗಿ ಉಚಿತ ಚಿಕಿತ್ಸೆಯನ್ನು ನೀಡುವ ಬಗ್ಗೆ ಘೋಷಿಸಬೇಕು ಮತ್ತು ಚಿಕಿತ್ಸೆ ನೀಡಲು ಸ್ಟಾಂಡರ್ಡ್ ಟ್ರೀಟ್‍ಮೆಂಟ್ ಪ್ರೊಟೊಕಾಲ್‌ನ್ನು ಕೂಡಲೇ ನಿಗಧಿಪಡಿಸಬೇಕು.

ಚಿಕಿತ್ಸೆಯ ಶಿಷ್ಠಾಚಾರ ಸರಿಯಾಗಿ ಪಾಲನೆಯಗುತ್ತಿದೆಯೇ ಎಂಬುದನ್ನು ನಿರಂತರವಾಗಿ ಪರಿಶೀಲಿಸಲು ಸರ್ಕಾರ ತಜ್ಞರ ಸಮಿತಿಯನ್ನು ನೇಮಿಸಬೇಕು ಹಾಗೂ ಜನ ಸಾಮಾನ್ಯರು ಆತಂಕವಿಲ್ಲದೆ ಚಿಕಿತ್ಸೆ ತಡೆಯುವಂಥ ನಿರ್ಭೀತ ವಾತಾವರಣ ಸೃಷ್ಟಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

English summary
Opposition leader Siddaramaiah has accused the government of failing to manage the coronavirus virus situation in state
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X