ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯಾನಕ ಕೊರೊನಾ ಡೆಲ್ಟಾ ಪ್ಲಸ್ ವೈರಸ್ ತಡೆಯುವುದು ಹೇಗೆ?: ಮೋದಿಗೆ ಸಿದ್ದರಾಮಯ್ಯ ಸಲಹೆ!

|
Google Oneindia Kannada News

ಬೆಂಗಳೂರು, ಜೂ. 24: ಕೊರೊನಾ ಎರಡನೇ ಅಲೆ ಮುಗಿಯಿತು ಎಂದುಕೊಳ್ಳುತ್ತಿರುವುಗಾಲೇ ಡೆಲ್ಟಾ ಪ್ಲಸ್ ಎಂಬ ಇನ್ನಷ್ಟು ಉಗ್ರತೆ ಇರುವ ಕೊರೊನಾ ರೂಪಾಂತರಿ ವೈರಸ್ ದೇಶದಲ್ಲಿ ಮತ್ತೆ ವೇಗವಾಗಿ ಹರಡುವ ಭೀತಿ ಸೃಷ್ಟಿಯಾಗಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು, 'ಕೋವಿನ್ ಗ್ಲೋಬಲ್ ಕಾನ್‍ಕ್ಲೇವ್' ನಡೆಸಲು ಮುಂದಾಗಿದ್ದಾರೆ. ಕೊರೊನಾ ವೈರಸ್ ಎಂಬುದು ಸ್ಥಳೀಯ ಸಮಸ್ಯೆ ಅಲ್ಲ. ಅದು ಅಂತಾರಾಷ್ಟ್ರೀಯ ಸಮಸ್ಯೆಯಾಗಿದ್ದು, ಈ ಸಂಕಷ್ಟದಿಂದ ಯಾವುದೋ ಒಂದು ದೇಶ ಮಾತ್ರ ಸೆಣಸಿ ಗೆಲ್ಲುವುದು ಅಸಾಧ್ಯ.

ಇದೇ ಸಂದರ್ಭದಲ್ಲಿ ಕೊರೊನಾ ಡೆಲ್ಟಾ ಪ್ಲಸ್ ವೈರಸ್ ಆತಂಕದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹರಿಹಾಯ್ದಿದ್ದಾರೆ. ಜೊತೆಗೆ ಈ ಕೊರೊನಾ ಸಂಕಷ್ಟದಿಂದ ಹೇಗೆ ಹೊರಗೆ ಬರಬಹುದು ಎಂಬುದಕ್ಕೆ ಹಲವು ಮಹತ್ವದ ಸಲಹೆಗಳನ್ನು ಕೊಟ್ಟಿದ್ದಾರೆ. ಕೊರೊನಾ ಸಮಸ್ಯೆಯಿಂದ ಹೊರಗೆ ಬರದಿದ್ದರೆ ಮುಂದೆ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಜನ ಸಾಮಾನ್ಯರು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಟ್ಟಿರುವ ಸಲಹೆಗಳು ಏನು? ಅಷ್ಟಕ್ಕೂ ಸಿದ್ದರಾಮಯ್ಯ ಅವರ ಮಾತಿಗೆ ಅಷ್ಟೊಂದು ಮಹತ್ವ ಬಂದಿದ್ದಾದರೂ ಯಾಕೆ? ಮುಂದಿದೆ ಮಾಹಿತಿ!

ಪಶ್ಚಾತ್ತಾಪವಿಲ್ಲದ ಮನುಷ್ಯ ಮೋದಿ!

ಪಶ್ಚಾತ್ತಾಪವಿಲ್ಲದ ಮನುಷ್ಯ ಮೋದಿ!

"ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 30 ರಂದು ‘ಕೋವಿನ್ ಗ್ಲೋಬಲ್ ಕಾನ್‍ಕ್ಲೇವ್' ನಡೆಸಲು ಉದ್ದೇಶಿಸಿದ್ದಾರೆಂಬ ಮಾಹಿತಿ ಇದೆ. ಈ ಸಮಾವೇಶದಲ್ಲಿ ಭಾರತವು ಕೊರೊನಾ ವೈರಸ್‌ನ್ನು ಎದುರಿಸಿದ ರೀತಿಗಳನ್ನು ತಿಳಿಸುವುದಾಗಿ ಮೋದಿ ಹೇಳಿದ್ದಾರೆ. ಇದಂತೂ ಅತ್ಯಂತ ನಾಚಿಕೆಗೇಡಿನ ಮತ್ತು ಅಸೂಕ್ಷ್ಮವಾದ ವಿಷಯ. ಕಳೆದ ಮಾರ್ಚ್ ತಿಂಗಳಿಂದ ದೇಶದಲ್ಲಿ ಏನೇನಾಯಿತು ಎಂದು ಜನರು ಮರೆತು ಬಿಟ್ಟಿದ್ದಾರೆಯೆ? ಹೃದಯವಿರುವ ಮನುಷ್ಯನಿಗೆ ಭೀಕರ ಪಶ್ಚಾತ್ತಾಪ, ಪಾಪಪ್ರಜ್ಞೆಗಳು ಕಾಡಬೇಕಾಗಿತ್ತು. ಅದರ ಬದಲಾಗಿ ಕೊರೊನಾ ವೈರಸ್‌ ಮೇಲೆ ವಿಜಯ ಸಾಧಿಸಿ ಬಿಟ್ಟಿದ್ದೇವೆ ಎಂಬಂತೆ ವಿಶ್ವದ ಜನರಿಗೆ ತಿಳಿಸಲು ಹೊರಟಿರುವುದನ್ನು ಏನೆನ್ನಬೇಕು? ಇದನ್ನು ನೋಡಿದರೆ ನಮ್ಮ ಪ್ರಧಾನಮಂತ್ರಿಗಳ ಹೃದಯದಲ್ಲಿ ಒಬ್ಬ ಮನುಷ್ಯನಿದ್ದಾನೆ ಎನ್ನಿಸುತ್ತದೆಯೆ?" ಎಂದು ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ.

ಲಸಿಕೆ ಮೇಲಿನ ಪೆಟೆಂಟ್ ತೆಗೆಯಿರಿ!

ಲಸಿಕೆ ಮೇಲಿನ ಪೆಟೆಂಟ್ ತೆಗೆಯಿರಿ!

ಕೊರೊನಾ ವೈರಸ್ ಲಸಿಕೆ ಕುರಿತಂತೆ ಮತ್ತೊಂದು ಮಹತ್ವದ ಸಲಹೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ. "ಪ್ರಧಾನಿ ಮೋದಿ ಅವರು ತಮ್ಮ ಸಾಧನೆಗಳ ಜಾಗತಿಕ ಸಮಾವೇಶ ನಡೆಸುವುದು ಬೇಕಿಲ್ಲ. ಅದರ ಬದಲು ವಿಶ್ವದ ನಾಯಕರುಗಳನ್ನು ಒತ್ತಾಯಿಸಿ ಕೊರೋನ ಲಸಿಕೆಯ ಮೇಲಿನ ಪೇಟೆಂಟ್‌ಗಳನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಬೇಕು." ಎಂದು ಆಗ್ರಹಿಸಿದ್ದಾರೆ.

"ಇಡೀ ವಿಶ್ವದ ಜನ ಸಮುದಾಯಗಳ ಆರೋಗ್ಯವು ತುರ್ತುಪರಿಸ್ಥಿತಿಯಲ್ಲಿದೆ. ಇಂತಹ ಸಂದಿಗ್ದ ಪರಿಸ್ಥಿತಿಯ ನಿರ್ವಹಣೆಯನ್ನು ಆಯಾ ದೇಶಗಳಿಗೆ ಬಿಡುವುದು ಹಾಗೂ ಔಷಧ ಕಂಪೆನಿಗಳ ಲೂಟಿಗೆ ಅವಕಾಶ ಮಾಡಿಕೊಡುವುದು ಅತ್ಯಂತ ಅಪಾಯಕಾರಿಯಾದ ಸಂಗತಿ ಎಂದು ಸಮಾವೇಶದಲ್ಲಿ ಮೋದಿ ಅವರು ತಿಳಿಸಬೇಕು."

"ಜಾಗತಿಕ ಸಮಸ್ಯೆಗೆ ಜಾಗತಿಕ ಪರಿಹಾರಗಳೆ ಬೇಕಾಗುತ್ತವೆ. ಅದರ ಹೊರತು ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳಲಾಗದು. ಆದ್ದರಿಂದ ವಿಶ್ವ ಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳು ಕ್ರಿಯಾಶೀಲಗೊಂಡು ಸದ್ಯದ ತುರ್ತುಪರಿಸ್ಥಿತಿಯನ್ನು ನಿಭಾಯಿಸುವ ಸಾಮೂಹಿಕ ಪ್ರಯತ್ನಗಳಾಗಬೇಕೆಂದು ಒತ್ತಾಯಿಸಬೇಕು. ಯಾಕೆಂದರೆ ವಿಶ್ವದ ಯಾವುದೋ ಭಾಗದಲ್ಲಿ ರೂಪಾಂತರಗೊಂಡ ವೈರಸ್ಸು ಬೆಂಕಿಯಂತೆ ಜಗತ್ತನ್ನು ಆವರಿಸಿ ಬಿಡಬಹುದು. ಹಾಗಾಗಿ ವಿವೇಕವುಳ್ಳ, ವೈಜ್ಞಾನಿಕ ಮನೋಭಾವವುಳ್ಳ ಮನುಷ್ಯರು ಒತ್ತಾಯಿಸಬೇಕಾದ ಕ್ರಮಗಳಿವು." ಎಂದು ಸಿದ್ದರಾಮಯ್ಯ ಅವರು ಸಲಹೆ ನೀಡಿದ್ದಾರೆ.

ಖಾಸಗಿಯವರಿಗೆ ಎಷ್ಟು ಲಸಿಕೆ ಕೊಟ್ಟಿದ್ದೀರಿ?

ಖಾಸಗಿಯವರಿಗೆ ಎಷ್ಟು ಲಸಿಕೆ ಕೊಟ್ಟಿದ್ದೀರಿ?

"ಕೊರೊನಾ ವೈರಸ್ ಹೊಸ ಹೊಸ ತಳಿಗಳಾಗಿ ಅತ್ಯಂತ ವೇಗವಾಗಿ ರೂಪಾಂತರ ಹೊಂದುತ್ತಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರಗಳು ವ್ಯಾಪಕವಾಗಿ ಮತ್ತು ಉಚಿತವಾಗಿ ಜನರಿಗೆ ಲಸಿಕೆ ನೀಡಬೇಕು. ಈಗ ರಾಜ್ಯಗಳ ಬಳಿ 2.5 ಕೋಟಿ ಡೋಸ್ ಲಸಿಕೆಗಳಿವೆ ಎಂದು ಹೇಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ಬಳಿ ಎಷ್ಟಿವೆ ಎಂದು ಹೇಳುತ್ತಿಲ್ಲ. ಲಸಿಕೆ ಉತ್ಪಾದಕ ಕಂಪೆನಿಗಳು ಪ್ರತಿ ದಿನ ಸರ್ಕಾರಕ್ಕೆ ಮತ್ತು ಖಾಸಗಿಯವರಿಗೆ ನೀಡಿದ ಲಸಿಕೆಗಳ ಕುರಿತು ಪ್ರಕಟಣೆಗಳನ್ನು ಹೊರಡಿಸಬೇಕು" ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

"ಮೂರನೆ ಅಲೆಯ ಕುರಿತು ತಜ್ಞರು ಮಾಡಿರುವ ಶಿಫಾರಸ್ಸುಗಳಂತೆ, ಖಾಸಗಿ ಆಸ್ಪತ್ರೆಗಳು ಕಂಪೆನಿಗಳಿಂದ ಲಸಿಕೆಗಳನ್ನು ಸ್ವೀಕರಿಸಿ ಗರಿಷ್ಠ 10 ದಿನಗಳ ಕಾಲ ಮಾತ್ರ ದಾಸ್ತಾನಿರಿಸಿಕೊಳ್ಳಬೇಕೆಂಬ ಕುರಿತು ಆದೇಶ ಹೊರಡಿಸುವಂತೆ ತಿಳಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತಾಗಿ ಮಾಡಬೇಕಾದ ಕೆಲಸ ಇದು" ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ವಿಮಾನ ನಿರ್ಬಂಧಿಸಿ!

ಅಂತಾರಾಷ್ಟ್ರೀಯ ವಿಮಾನ ನಿರ್ಬಂಧಿಸಿ!

"ದೇಶದ ಶೇಕಡಾ 80 ರಷ್ಟು ಜನರಿಗೆ ಲಸಿಕೆ ನೀಡುವವರೆಗೆ ಅಂತರರಾಷ್ಟ್ರೀಯ ವಿಮಾನಗಳನ್ನು ನಿರ್ಬಂಧಿಸಬೇಕು" ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ. "ಜೊತೆಗೆ ದೇಶದ ಯಾವ ಯಾವ ಸ್ಥಳಗಳಲ್ಲಿ ಕೊರೊನಾ ವೈರಸ್‌ನ ಡೆಲ್ಟಾ ಪ್ಲಸ್ ಸೋಂಕು ಪತ್ತೆಯಾಗಿದೆಯೊ ಆ ಸ್ಥಳಗಳ ಕುರಿತು ತೀವ್ರ ನಿಗಾ ವಹಿಸಬೇಕು. ಆ ಸೋಂಕು ಇತರರಿಗೆ ಹರಡದಂತೆ ನೋಡಿಕೊಳ್ಳಬೇಕು" ಎಂದಿದ್ದಾರೆ.

"ದೇಶದ ಸಮಸ್ತ ಜನರಿಗೆ ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಲಸಿಕೆ ಹಾಕುವಷ್ಟು ಪ್ರಮಾಣದಲ್ಲಿ ಉತ್ಪಾದಿಸಲು ಲಸಿಕೆಗಳ ಮೇಲಿನ ಪೇಟೆಂಟ್‌ಗಳನ್ನು ಮೊದಲು ಕಿತ್ತು ಹಾಕಬೇಕು" ಎಂದು ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರನ್ನು ಆಗ್ರಹಿಸಿದ್ದಾರೆ.

"ಸರ್ಕಾರ ಕಾರ್ಪೊರೇಟ್ ಕಂಪೆನಿಗಳ ಓಲೈಕೆ ಮನಸ್ಥಿತಿಯಿಂದ ಹೊರಬಂದು, ಅವುಗಳ ಮೇಲೆ ಪ್ರಬಲ ಹಿಡಿತ ಸಾಧಿಸಬೇಕು. ಕೊರೋನ ಲಸಿಕೆಗಳನ್ನು ‘ಜೆನೆರಿಕ್ ಡ್ರಗ್'ಗಳ ವ್ಯಾಪ್ತಿಗೆ ತಂದು ಸರ್ಕಾರಗಳೆ ಉತ್ಪಾದನೆ ಮತ್ತು ವಿತರಣೆಗಳನ್ನು ನಿಯಂತ್ರಿಸಬೇಕು. ಹೀಗಾದರೆ ಗರಿಷ್ಠ 50 ರೂಪಾಯಿಗಳಿಗೆ ಲಸಿಕೆ ದೊರೆಯುತ್ತದೆ" ಎಂದು ಮತ್ತೊಂದು ಮಹತ್ವದ ಸಲಹೆಯನ್ನು ಸಿದ್ದರಾಮಯ್ಯ ಅವರು ಪ್ರಧಾನಿ ಅವರಿಗೆ ಕೊಟ್ಟಿದ್ದಾರೆ.

Recommended Video

ISRO ಮುಂದಿನ ಮಹತ್ವದ ಯೋಜನೆಗೆ ವಿಶ್ವ ಸಂಸ್ಥೆಯ ಬೆಂಬಲ | Oneindia Kannada
ಬಾಂಗ್ಲಾಕ್ಕಿಂತ ಕಡೆಯಾಗುತ್ತಿದೆ ಭಾರತದ!

ಬಾಂಗ್ಲಾಕ್ಕಿಂತ ಕಡೆಯಾಗುತ್ತಿದೆ ಭಾರತದ!

"ಇವುಗಳ ಜೊತೆಗೆ ಜಗತ್ತಿನ ಅನೇಕ ದೇಶಗಳು ತೆಗೆದುಕೊಂಡಿರುವ ಆರ್ಥಿಕ ಪುನಶ್ಚೇತನದ ಪ್ಯಾಕೇಜ್‌ಗಳನ್ನು ಘೋಷಿಸಬೇಕು. ಈ ಸಲಹೆಗಳನ್ನು ಪ್ರಧಾನಿ ಮೋದಿ ಅವರಿಗೆ ತಿಳಿಸಿ ಅತ್ಯಂತ ತುರ್ತಾಗಿ ಮನುಷ್ಯ ಪರವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯದ ಸಂಸದರು ಪ್ರಧಾನಿ ಮೋದಿ ಅವರ ಮೇಲೆ ಒತ್ತಡ ಹಾಕಬೇಕು. ರಾಜ್ಯದ ಮುಖ್ಯಮಂತ್ರಿಗಳೂ ಕೂಡ ಈ ಕುರಿತು ಪ್ರಧಾನಿ ಅವರನ್ನು ಒತ್ತಾಯಿಸಬೇಕು" ಎಂದು ಆಗ್ರಹಿಸಿದ್ದಾರೆ.

"ಪ್ರತಿಯೊಬ್ಬರಿಗೂ ಲಸಿಕೆ, ಹೊಟ್ಟೆಗೆ ಅನ್ನ, ಒಂದಿಷ್ಟು ಆರ್ಥಿಕ ನೆರವು, ಉಚಿತ ಚಿಕಿತ್ಸೆ ನೀಡದಿದ್ದರೆ ಭಾರತ ವಿಶ್ವ ಗುರುವಾಗುವುದಿರಲಿ ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕ ಮತ್ತಿತರ ಸರೀಕ ದೇಶಗಳ ಎದುರು ತಲೆ ಎತ್ತಿ ನಿಲ್ಲುವಂತೆ ಮಾಡಲಾಗದು. ಈ ತಿಳಿವಳಿಕೆಯನ್ನು ಪ್ರಧಾನಿ ಮೋದಿ ಅವರಿಗೆ ತಿಳಿಸಬೇಕೆಂದು ನಮ್ಮ ರಾಜ್ಯದಿಂದ ಆಯ್ಕೆಯಾದ ಸಂಸದರು ಹಾಗೂ ರಾಜ್ಯದ ಬಿಜೆಪಿ ಸರ್ಕಾರವನ್ನು ಒತ್ತಾಯಿಸುತ್ತೇನೆ" ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

English summary
Opposition leader Siddaramaiah has given many important suggestions to Prime Minister Narendra Modi on how to get out of hardship on the corona delta virus. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X