ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Bharat Jodo Yatra in Karnataka : ರಾಜ್ಯದಲ್ಲಿ ಸೆ. 30ರಿಂದ 22 ದಿನ ಕಾಂಗ್ರೆಸ್ ಯಾತ್ರೆಗೆ ಹೇಗೆಲ್ಲಾ ನಡೆದಿದೆ ಸಿದ್ಧತೆ?

|
Google Oneindia Kannada News

ಬೆಂಗಳೂರು, ಸೆ. 27: ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡಿರುವ ಭಾರತ್ ಜೋಡೋ ಯಾತ್ರೆ ಅಥವಾ ಭಾರತ ಐಕ್ಯತಾ ಯಾತ್ರೆ ಸೆಪ್ಟೆಂಬರ್ 30ರಂದು ಕರ್ನಾಟಕಕ್ಕೆ ಆಗಮಿಸಲಿದೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ನ ಈ ಪಾದಯಾತ್ರೆ ಕನ್ಯಾಕುಮಾರಿಯಿಂದ ಜಮ್ಮುವರೆಗೆ 3500 ಕಿಮೀ ಸಾಗಲಿದೆ. ಒಟ್ಟು 150 ದಿನಗಳ ಕಾಲ ನಡೆಯಲಿದೆ. ತಮಿಳುನಾಡಿನಲ್ಲಿ ಮೊದಲಿನ ನಾಲ್ಕು ದಿನ ಕ್ರಮಿಸಿದ ಪಾದಯಾತ್ರೆ ನಂತರ ಕೇರಳ ಪ್ರವೇಶಿಸಿತು. ಇವತ್ತು ಸೆಪ್ಟೆಂಬರ್ 27ರಂದು ಮಲಪ್ಪುರಂಗೆ ಬಂದಿದೆ.

ಸೆಪ್ಟೆಂಬರ್ 30ರಂದು ಚಾಮರಾಜನಗರ ತಲುಪಲಿದೆ. ಇಲ್ಲಿಂದ ಕಾಂಗ್ರೆಸ್ ಪಾದಯಾತ್ರೆ 22 ದಿನಗಳ ನಂತರ ರಾಯಚೂರು ತಲುಪಲಿದೆ. ಕಾಂಗ್ರೆಸ್ ಪಾಲಿಗೆ ಕರ್ನಾಟಕ ರಾಜ್ಯ ಬಹಳ ಮುಖ್ಯವೆನಿಸಿದೆ. ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳು ಹಾಗೂ ಆಡಳಿತವಿರೋಧಿ ಅಲೆಯನ್ನು ಉಪಯೋಗಿಸಿ ಅಧಿಕಾರಕ್ಕೆ ಬರುವ ಅವಕಾಶ ಕಾಂಗ್ರೆಸ್‌ಗೆ ಇದೆ. ಹೀಗಾಗಿ, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ಕರ್ನಾಟಕದಲ್ಲಿ ಬಹಳ ವ್ಯವಸ್ಥಿತವಾಗಿ ಹಾಗೂ ಜನರ ಗಮನ ಸೆಳೆಯುವ ರೀತಿಯಲ್ಲಿ ಆಯೋಜಿಸಲು ಗಮನ ಹರಿಸಲಾಗಿದೆ.

ಕೇರಳದಲ್ಲಿ ಭಾರತ್ ಜೋಡೋ ಯಾತ್ರೆ ವೇಳೆ ಹಿಜಾಬ್ ಧರಿಸಿದ ಬಾಲಕಿ ಜೊತೆ ರಾಹುಲ್ ಗಾಂಧಿ ಹೆಜ್ಜೆ ಹಾಕಿದ್ದು ಬಹಳ ವೈರಲ್ ಆಗಿತ್ತು. ಕರ್ನಾಟಕದಲ್ಲಿ ರಾಹುಲ್ ಅಂಥ ಪ್ರಯೋಗ ಮಾಡುವುದು ಅನುಮಾನ. ಆದರೆ, ಕೇರಳದ ಬೀದಿಯಲ್ಲಿ ಮಕ್ಕಳ ಜೊತೆ ರಾಹುಲ್ ಗಾಂಧಿ ಫುಟ್ಬಾಲ್ ಆಡಿದ್ದು, ಬಾಲಕಿಯೊಬ್ಬಳಿಗೆ ಚಪ್ಪಲಿ ಧರಿಸಲು ಸಹಾಯವಾಗಿದ್ದು, ದೋಣಿ ನಡೆಸಿದ್ದು ಇವೆಲ್ಲವೂ ಗಮನ ಸೆಳೆದಿವೆ. ಕರ್ನಾಟಕದಲ್ಲೂ ಇಂಥ ಪ್ರಯೋಗಗಳನ್ನು ಮಾಡಲು ಕಾಂಗ್ರೆಸ್ ಯೋಜಿಸಿದೆ.

Several Civil Societies in Karnataka To Actively Support Bharat Jodo Yatra

ಸೋಲಿಗರು ಮೊದಲಾದವರ ಭೇಟಿ

ಉದಾಹರಣೆಗೆ, ಪಾದಯಾತ್ರೆಯ ವೇಳೆ ಚಾಮರಾಜನಗರದ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಕುಟುಂಬಗಳು, ಗುಂಡ್ಲುಪೇಟೆಯ ಸೋಲಿಗರು, ನಾಗಮಂಗಲದಲ್ಲಿ ನಿರುದ್ಯೋಗಿಗಳು, ಮಂಗಳಮುಖಿಯರು, ಸಿರಾದಲ್ಲಿ ವಾಣಿಜ್ಯ ಬೆಳೆಗಾರರು, ಸಣ್ಣ ಉದ್ಯಮಿಗಳು, ಚಿತ್ರದುರ್ಗದ ಮಹಿಳಾ ಕಾರ್ಯಕರ್ತರು, ನರೇಗಾ ಕಾರ್ಮಿಕರು ಹಾಗೂ ಆಯ್ದ ಇತರರ ಜೊತೆ ರಾಹುಲ್ ಗಾಂಧಿ ಅಲ್ಲಲ್ಲಿ ಸಂವಾದ, ಚರ್ಚೆ ನಡೆಸುವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಕಾಂಗ್ರೆಸ್‌ನ ಅದೃಷ್ಟಕ್ಕೆ ಭಾರತ್ ಜೋಡೋ ಯಾತ್ರೆಗೆ ಪಕ್ಷದ ಬೆಂಬಲಿಗರಷ್ಟೇ ಅಲ್ಲ ಹಲವು ನಾಗರಿಕ ಸಂಘಟನೆಗಳು ಕೈಜೋಡಿಸಲು ನಿರ್ಧರಿಸಿವೆ. ಮಾಜಿ ಐಎಎಸ್ ಅಧಿಕಾರಿ ಎಸ್ ಶಶಿಕಾಂತ್ ಸೆಂದಿಲ್ ಪ್ರಕಾರ 89 ಸಂಘಟನೆಗಳು ಭಾರತ್ ಜೋಡೋ ಯಾತ್ರೆಗೆ ಬೆಂಬಲ ನೀಡಿವೆ.

ಮೈಸೂರಿನಲ್ಲಿ ಸಮಾನ ಮನಸ್ಕರ ಜೊತೆ ರಾಹುಲ್ ಭೇಟಿ ಮಾಡಿ ಸಂವಾದ ನಡೆಸಲಿದ್ದಾರೆ. ದಲಿತ ಸಾಹಿತಿ ದೇವನೂರ ಮಹದೇವ ಈ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಕಾಂಗ್ರೆಸ್‌ನ ನಾಗರಿಕ ಸಮಾಜ ಸಮಿತಿ ಹಲವು ಸಂಘಟನೆಗಳನ್ನು ಯಾತ್ರೆಗಾಗಿ ಬೆಂಬಲ ಗಿಟ್ಟಿಸುವ ಕೆಲಸ ಮಾಡಿದೆ. ಯೋಗೇಂದ್ರ ಯಾದವ್, ಗಣೇಶ್ ದೇವಿ ಮೊದಲಾದ ಗಣ್ಯರು ಪಾದಯಾತ್ರೆಯ ನಡುವಿನ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಜೀಮ್ ಪ್ರೇಮ್‌ಜೀ ಯೂನಿವರ್ಸಿಟಿಯ ಪ್ರೊಫೆಸರ್, ಬೆಂಗಳೂರು ಕೃಷಿ ವಿವಿಯ ನಿವೃತ್ತಪ್ರೊಫೆಸರ್ ಸೇರಿದಂತೆ ಹಲವರು ಸಕ್ರಿಯವಾಗಿ ಈ ಯಾತ್ರೆಯಲ್ಲಿ ಜೋಡಿಸಿಕೊಳ್ಳುತ್ತಿದ್ದಾರೆ. ಕೃಷಿ ವಿವಿ ನಿವೃತ್ತ ಪ್ರೊಫೆಸರ್ ಪ್ರಕಾಶ್ ಕಮ್ಮರಡಿ ಅವರು ಸಮಾಜವಾದಿ ವೇದಿಕೆ ಅಡಿಯಲ್ಲಿ 100 ಸಂಘಟನೆಗಳನ್ನು ಸೇರಿಸಿದ್ದಾರೆ. ರಾಹುಲ್ ಗಾಂಧಿ ತಮ್ಮ ಪಾದಯಾತ್ರೆ ವೇಳೆ ಇಂಥ ಕೆಲ ಸಂಘಟನೆಗಳ ಜೊತೆ ಸಂವಾದ ನಡೆಸಲಿದ್ದಾರೆ.

ನಾಗರಿಕ ಸಮಾಜದ ಬೆಂಬಲ

ಇನ್ನು, ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರೊಫೆಸರ್ ನಾರಾಯಣ ಎ ಅವರೂ ಯಾತ್ರೆಯಲ್ಲಿ ಪರೋಕ್ಷವಾಗಿ ನೆರವಾಗುತ್ತಿರುವುದು ತಿಳಿದುಬಂದಿದೆ. ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ ಪಕ್ಷದ ಚುನಾವಣಾ ಕಾರ್ಯಕ್ರಮವಾದರೂ ಅದಕ್ಕೆ ಬೆಂಬಲ ನೀಡುವ ಅಗತ್ಯತೆ ಇದೆ ಎಂದು ಪ್ರೊ| ನಾರಾಯಣ ಹೇಳುತ್ತಾರೆ.

Several Civil Societies in Karnataka To Actively Support Bharat Jodo Yatra

"ಹೋರಾಟ ಮಾಡುವ ಹಕ್ಕನ್ನು ನೀವು ಮರಳಿ ಪಡೆಯುತ್ತೀರಿ. ಧ್ವನಿ ಎತ್ತಿದ್ದಕ್ಕಾಗಿ ಹಲವರು ಜೈಲು ಸೇರಿರುವ ಹಿನ್ನೆಲೆಯಲ್ಲಿ ಈ ಪ್ರತಿಹೋರಾಟ ಅಗತ್ಯವಾಗಿದೆ... ಇಂಥ ಚಟುವಟಿಕೆಯನ್ನು ರಾಜಕೀಯ ಪಕ್ಷ ನಡೆಸಬೇಕೆಂದು ಜನರು ಕಾಯುವಂತಾಗಬಾರದು. ನಾಗರಿಕರೇ ಮುಂದೆ ಬರಬೇಕು. ಯಾರಾದರೂ ಕೂಡ ಈ ಹೋರಾಟ ಮುನ್ನಡೆಸುತ್ತಿದ್ದರೆ, ಅವರಿಗೆ ಬೆಂಬಲ ನೀಡುವ ಕೆಲಸ ಮಾಡಬೇಕು. ಹಾಗಂತ, ರಾಜಕೀಯ ಪಕ್ಷವೊಂದರ ಈ ಕಾರ್ಯಕ್ರಮವನ್ನು ಬೆಂಬಲಿಸಿದಾಕ್ಷಣ ಆ ಪಕ್ಷಕ್ಕೆ ಬೆಂಬಲ ಕೊಟ್ಟಂತೆ ಅಲ್ಲ," ಎಂದು ಪ್ರೊಫೆಸರ್ ಎ ನಾರಾಯಣ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ನಿವೃತ್ತ ಕೃಷಿ ಪ್ರೊಫೆಸರ್ ಪ್ರಕಾಶ್ ಕಮ್ಮರಡಿ ಕೂಡ ಇದೇ ಅನಿಸಿಕೆ ಅನುಮೋದಿಸಿದ್ದಾರೆ. "ದೇಶವನ್ನು ಬಾಧಿಸುತ್ತಿರುವ ಸಮಸ್ಯೆಗಳನ್ನು ಎದುರಿಸಲು ರಾಜಕೀಯ ಪಕ್ಷವೊಂದರಿಂದ ಮಾತ್ರವಲ್ಲ, ನಾಗರಿಕ ಸಮಾಜವೂ ಎದುರುಗೊಳ್ಳಬೇಕು," ಎಂದವರು ಹೇಳಿದ್ದಾರೆ.

ಯಾತ್ರೆ ಎಲ್ಲೆಲ್ಲಿ?

ಕರ್ನಾಟಕದಲ್ಲಿ ಚಾಮರಾಜನಗರದಿಂದ ಯಾತ್ರೆ ಸಾಗಲಿದೆ. ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಭಾರತ ಐಕ್ಯತಾ ಯಾತ್ರೆ ಹೋಗಲಿದೆ. ಅಲ್ಲಿಂದ ಅದು ತೆಲಂಗಾಣ ಪ್ರವೇಶ ಮಾಡುತ್ತದೆ. ಒಟ್ಟು 12 ರಾಜ್ಯಗಳಲ್ಲಿ ರಾಹುಲ್ ಗಾಂಧಿ ಕಾಲಿಡುತ್ತಿದ್ದಾರೆ.

ಒಂದು ವೇಳೆ 150 ದಿನಗಳ ಈ ಭಾರತ್ ಜೋಡೋ ಯಾತ್ರೆ ಯಶಸ್ವಿಯಾದಲ್ಲಿ ಮುಂದಿನ ವರ್ಷ 2023ರಲ್ಲಿ ಇಂಥದ್ದೇ ರೀತಿಯ ಇನ್ನೊಂದು ಪಾದಯಾತ್ರೆಯನ್ನು ಗುಜರಾತ್ ರಾಜ್ಯದಿಂದ ಆರಂಭಿಸಲು ಕಾಂಗ್ರೆಸ್ ನಿರ್ಧರಿಸಿರುವುದು ಗೊತ್ತಾಗಿದೆ. 2024ಕ್ಕೆ ಲೋಕಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇಂಥದ್ದೊಂದು ಮಹಾ ಪ್ಲಾನ್ ಮಾಡಿದೆ.

(ಒನ್ಇಂಡಿಯಾ ಸುದ್ದಿ)

English summary
Many civil societies have decided to support Congress's Bharat Jodo Yatra led by Rahul Gandhi. The padayatra will begin in Karnataka on September 30th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X