ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪತ್ರಿಕೆ ಪ್ರಮಾಣೀಕೃತ ಪ್ರತಿ ನೀಡುವ ವಿಚಾರ: ರಾಜ್ಯ ಸರ್ಕಾರಕ್ಕೆ ಮುಖಭಂಗ

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಏ.26. ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ (ಎಪಿಪಿ) ಹುದ್ದೆ ನೇಮಕಕ್ಕೆ 2013ರಲ್ಲಿ ನಡೆದ ಪರೀಕ್ಷೆಯ ಉತ್ತರ ಪತ್ರಿಕೆ ಪ್ರಮಾಣಿಕೃತ ಪ್ರತಿ ಒದಗಿಸಬೇಕೆಂದು ರಾಜ್ಯ ಮಾಹಿತಿ ಆಯೋಗ ನೀಡಿದ್ದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಇದರಿಂದಾಗಿ ಸರ್ಕಾರಕ್ಕೆ ಕಾನೂನು ಹೋರಾಟದಲ್ಲಿ ತೀವ್ರ ಮುಖಭಂಗವಾಗಿದೆ.

ರಾಜ್ಯ ಸಹಾಯಕ ಸರ್ಕಾರಿ ಪ್ಲೀಡರ್ ಮತ್ತು ಸಹಾಯಕ ಸರ್ಕಾರಿ ಅಭಿಯೋಜಕರ ನೇಮಕ ಸಮಿತಿಯ ಸದಸ್ಯ ಕಾರ್ಯದರ್ಶಿ ಮತ್ತು ರಾಜ್ಯ ಅಭಿಯೋಜನಾ ಇಲಾಖೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಕೃಷ್ಣ ಭಟ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.

ಕೋರ್ಟ್ ಆದೇಶದಲ್ಲೇನಿದೆ?

ನ್ಯಾಯಪೀಠ ತನ್ನ ಆದೇಶದಲ್ಲಿ ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(ಎಚ್) ಪ್ರಕಾರ, ಮಾಹಿತಿ ಹಕ್ಕು ಕಾಯ್ದೆಯಡಿ ಕೋರುವ ಮಾಹಿತಿಗಳು ತನಿಖೆಗೆ ಅಡ್ಡಿ ಉಂಟಾಗುತ್ತದೆ ಎಂಬ ಆತಂಕ ಮೂಡಿಸಿದಾಗ ಮಾತ್ರ ಮಾಹಿತಿ ಒದಗಿಸದೇ ಇರಬಹುದು. ಆದರೆ, ಈ ಪ್ರಕರಣದಲ್ಲಿ ವಿಜಯ್ ಕುಮಾರ್ ಸೇರಿ ಎಲ್ಲಾ ಅಭ್ಯರ್ಥಿಗಳ ಮೂಲ ಉತ್ತರ ಪತ್ರಿಕೆಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಿರುವಾಗ ಉತ್ತರ ಪತ್ರಿಕೆಗಳ ನಕಲು ಪ್ರತಿಯನ್ನು ಪ್ರಮಾಣೀಕರಿಸಿ ನೀಡಿದರೆ ತನಿಖೆಯಲ್ಲಿ ಮಧ್ಯಪ್ರವೇಶ ಮಾಡಿದಂತಾಗುವುದಿಲ್ಲ ಎಂದು ಹೇಳಿದೆ.

Set back for state government: HC uphold the decision of Karntaka information commission

ಅಲ್ಲದೆ, ವಿಜಯ್ ಕುಮಾರ್ ತಮ್ಮ ಉತ್ತರ ಪತ್ರಿಕೆಯನ್ನು ಮಾತ್ರ ಕೇಳಿದ್ದಾರೆ. ಇತರೆ ಯಾವುದೇ ಅಭ್ಯರ್ಥಿಯ ಉತ್ತರ ಪತ್ರಿಕೆಯನ್ನು ಕೇಳಿಲ್ಲ. ಹಾಗಾಗಿ ಮಾಹಿತಿ ಹಕ್ಕು ಆಯೋಗದ ಆದೇಶ ಸೂಕ್ತವಾಗಿದ್ದು, ಅದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಸರ್ಕಾರದ ಆಕ್ಷೇಪವೇನು?

ಸರ್ಕಾರಿ ವಕೀಲರು, ಎಪಿಪಿ ಮತ್ತು ಎಜಿಪಿ ನೇಮಕದಲ್ಲಿನ ಅಕ್ರಮ ಸಂಬಂಧ ಕ್ರಿಮಿನಲ್ ಪ್ರಕರಣದ ದಾಖಲಾಗಿದೆ. ಆ ಕುರಿತು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದು, ತನಿಖಾಧಿಕಾರಿಗಳು ಮೂಲ ಉತ್ತರ ಪತ್ರಿಕೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ತನಿಖೆ ಬಾಕಿಯಿರುವಾಗ ಅಭ್ಯರ್ಥಿಯ ಉತ್ತರ ಪತ್ರಿಕೆಯ ಪ್ರಮಾಣೀಕೃತ ಪ್ರತಿಯನ್ನು ಆರ್‌ಟಿಐ ಕಾಯ್ದೆಯಡಿ ಒದಗಿಸಿದರೆ ತನಿಖೆಯಲ್ಲಿ ಮಧ್ಯಪ್ರವೇಶ ಮಾಡಿದಂತಾಗುತ್ತದೆ ಎಂದು ಹೇಳಿದ್ದರು.

ತನಿಖೆಯಲ್ಲಿ ಹಸ್ತಕ್ಷೇಪ ಮಾಡುವಂತಹ ಆತಂಕವಿದ್ದಾಗ ಆರ್‌ಟಿಐ ಕಾಯ್ದೆಯಡಿ ಮಾಹಿತಿ ಒದಗಿಸುವುದಕ್ಕೆ ವಿನಾಯ್ತಿ ಇದೆ. ಹಾಗಾಗಿ ಮಾಹಿತಿ ಹಕ್ಕು ಆಯೋಗದ ಆದೇಶ ರದ್ದುಪಡಿಸುವಂತೆ ಕೋರಿದ್ದರು.

ಪ್ರಕರಣದ ಹಿನ್ನೆಲೆ:

ಜಿ.ವಿಜಯ್ ಕುಮಾರ್ 2013ರ ಆ.31 ಮತ್ತು ಸೆ.1ರಂದು ನಡೆದ ಎಪಿಪಿ ಮತ್ತು ಎಜಿಪಿ ನೇಮಕದ ಮುಖ್ಯ ಪರೀಕ್ಷೆ ಬರೆದಿದ್ದರು. ಈ ಉತ್ತರ ಪತ್ರಿಕೆಯ ನಕಲು ಪ್ರಮಾಣಿಕೃತ ಪ್ರತಿ ಒದಗಿಸುವಂತೆ ಕೋರಿ ಮಾಹಿತಿ ಹಕ್ಕು ಆಯೋಗದಡಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಕಾರ್ಯದರ್ಶಿಯ ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿರಸ್ಕರಿಸಿದ್ದರು. ಅರ್ಜಿದಾರರು ಮಾಹಿತಿ ಹಕ್ಕು ಆಯೋಗದ ಮುಂದೆ ಮೊದಲನೇ ಮೇಲ್ಮನವಿ ಸಲ್ಲಿಸಿದ್ದರು. ಅದೂ ಸಹ ತಿರಸ್ಕಾರಗೊಂಡ ಕಾರಣ ಆಯೋಗದ ಮುಂದೆ ಎರಡನೇ ಮೇಲ್ಮನವಿ ಸಲ್ಲಿಸಿದ್ದರು.

ಆ ಅರ್ಜಿ ಪುರಸ್ಕರಿಸಿದ್ದ ಆಯೋಗ, ವಿಜಯ್ ಕುಮಾರ್‌ಗೆ ಉತ್ತರ ಪತ್ರಿಕೆಯನ್ನು ಒಂದು ಗಂಟೆ ಪರಿವೀಕ್ಷಿಸಲು ಉಚಿತವಾಗಿ ಅವಕಾಶ ಮಾಡಿಕೊಡಬೇಕು, ಜೊತೆಗೆ ಪ್ರಮಾಣೀಕೃತ ಪ್ರತಿ ನೀಡಬೇಕು ಎಂದು ಎಪಿಪಿ ಮತ್ತು ಎಜಿಪಿ ನೇಮಕಾತಿ ಸಮಿತಿಗೆ ೨೦೧೬ರ ಜೂ.೩೧ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಸಮಿತಿ ಮತ್ತು ಅಭಿಯೋಜನಾ ಇಲಾಖೆಗೆ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದವು.

English summary
Set back for state government: HC uphold the decision of Karntaka information commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X