ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನ ಪರಿಷತ್‌ನಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಗುಟ್ಟು ರಟ್ಟು!

|
Google Oneindia Kannada News

ಬೆಂಗಳೂರು, ಜ. 29: ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಎಂಬುದು ರಾಜ್ಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಮೈತ್ರಿ ಸರ್ಕಾರದ ಪತನದ ಬಳಿಕ ಬಿಜೆಪಿ ನಾಯಕರ ಬಗ್ಗೆ ತೀವ್ರ ಆಕ್ರೋಶ ಹೊರಹಾಕುತ್ತಿದ್ದ ಜೆಡಿಎಸ್ ನಾಯಕರು, ಇದೀಗ ತಣ್ಣಗಾಗಿದ್ದಾರೆ. ಜೊತೆಗೆ ಮತ್ತೆ ಬಿಜೆಪಿ ಜೊತೆಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನದ ಬಳಿಕ ಸಿಎಂ ಯಡಿಯೂರಪ್ಪ ಅವರ ಮೇಲೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಅವಕಾಶ ಸಿಕ್ಕಾಗೆಲ್ಲ ವಾಗ್ದಾಳಿ ನಡೆಸುತ್ತಿದ್ದರು.

ಅದಕ್ಕೆ ಪರ್ಯಾಯ ಎಂಬಂತೆ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಸಿಎಂ ಯಡಿಯೂರಪ್ಪ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಲ್ಲಿ ಒಂದು ಹಂತದ ತಿಳುವಳಿಕೆ (understanding) ಇದೆ ಎಂಬ ಚರ್ಚೆಗಳು ನಡೆದಿದ್ದವು. ಅದಕ್ಕೆ ತಕ್ಕಂತೆ ಇಬ್ಬರೂ ನಾಯಕರು ವರ್ತನೆ ಮಾಡಿದ್ದೂ ಇದೆ.

ಆದರೆ ಇದೀಗ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ದಿಢೀರ್ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಕುತೂಹಲ ಮೂಡಿಸಿವೆ. ವಿಧಾನ ಪರಿಷತ್‌ನಲ್ಲಿ ಬಹುಮತವಿಲ್ಲದ ಬಿಜೆಪಿಯು ಜೆಡಿಎಸ್ ಬೆಂಬಲ ಪಡೆಯಲು ಮುಂದಾಗಿದೆ. ಹೀಗಾಗಿ ವಿಧಾನ ಪರಿಷತ್ ಸಭಾಪತಿ ಹಾಗೂ ಉಪಸಭಾಪತಿ ಸ್ಥಾನಗಳನ್ನು ಹಂಚಿಕೊಳ್ಳುವ ಮೂಲಕ, 15 ವರ್ಷಗಳ ಬಳಿಕ ಮತ್ತೊಮ್ಮೆ ಬಿಜೆಪಿ-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಅಷ್ಟಕ್ಕೂ ಈ ಬೆಳವಣಿಗೆ ಹಿಂದಿನ ಕಾರಣವಾದರೂ ಏನು? ಇಲ್ಲಿದೆ ಮಾಹಿತಿ.

ಬಿಜೆಪಿಗೆ ಜೆಡಿಎಸ್ ಬೆಂಬಲ

ಬಿಜೆಪಿಗೆ ಜೆಡಿಎಸ್ ಬೆಂಬಲ

ಮಹತ್ವದ ಬೆಳವಣಿಗೆಯಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಪ್ರಾಣೇಶ್ ಅವರು ವಿಧಾನ ಪರಿಷತ್ ಉಪ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಉಪ ಸಭಾಪತಿಯಾಗಿದ್ದ ಜೆಡಿಎಸ್ ಪಕ್ಷದ ಎಸ್‌.ಎಲ್‌. ಧರ್ಮೇಗೌಡ ಅವರ ಅಕಾಲಿನ ನಿಧನದಿಂದ ಚುನಾವಣೆ ನಡೆದಿದೆ. ಪರಿಷತ್ ಬಿಜೆಪಿ ಸದಸ್ಯ ಪ್ರಾಣೇಶ್ ಅವರು ಉಪ ಸಭಾಪತಿಯಾಗಲು ಜೆಡಿಎಸ್ ಬೆಂಬಲ ಬಿಜೆಪಿಗೆ ಅನಿವಾರ್ಯವಾಗಿತ್ತು.

ಮೈತ್ರಿ ಸರ್ಕಾರದ ಪತನದ ಬಳಿಕ ವಿಧಾನ ಪರಿಷತ್‌ನಲ್ಲಿಯೂ ಕಾಂಗ್ರೆಸ್ ಜೊತೆಗಿನ ಮೈತ್ರಿ ಮುರಿದುಕೊಳ್ಳುವ ಮೂಲಕ ಜೆಡಿಎಸ್ ಕುತೂಹಲ ಮೂಡಿಸಿದೆ. ಕೋಮುವಾದಿ ಪಕ್ಷ ಎನ್ನುತ್ತಲೇ ಮತ್ತೊಮ್ಮೆ ಬಿಜೆಪಿ ಜೊತೆಗೆ ಜೆಡಿಎಸ್ ಪಕ್ಷ ಹೊಂದಾಣಿಕೆ ಮಾಡಿಕೊಂಡಿದ್ದು, ಇದೀಗ ಕಾಂಗ್ರೆಸ್ ನಾಯಕರು ಜೆಡಿಎಸ್ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ.

ಜೆಡಿಎಸ್‌ಗೆ ಸಭಾಪತಿ ಸ್ಥಾನ

ಜೆಡಿಎಸ್‌ಗೆ ಸಭಾಪತಿ ಸ್ಥಾನ

ಸಭಾಪತಿ ಸ್ಥಾನವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡುವ ಕುರಿತು ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿಯೇ ಮಾತುಕತೆಗಳಾಗಿವೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮಾತನಾಡಿದ್ದಾರೆ. ಜೊತೆಗೆ ಸಭಾಪತಿ ಸ್ಥಾನದ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಅವರ ಬಯೊಡೆಟಾವನ್ನೂ ಸಹ ಅಮಿತ್ ಶಾ ಅವರಿಗೆ ಕಳುಹಿಸಲಾಗಿದೆ. ಈ ಹೊಂದಾಣಿಕೆಯ ಹಿಂದೆ ದೊಡ್ಡ ರಾಜಕೀಯ ಲೆಕ್ಕಾಚಾರವಿದೆ.

ಕಾಂಗ್ರೆಸ್ ದೂರಿಡುವ ಉದ್ದೇಶ

ಕಾಂಗ್ರೆಸ್ ದೂರಿಡುವ ಉದ್ದೇಶ

ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಸಭಾಪತಿ ಸ್ಥಾನವನ್ನು ಕಾಂಗ್ರೆಸ್‌ ಪಕ್ಷಕ್ಕೆ ಜೆಡಿಎಸ್ ಬಿಟ್ಟುಕೊಟ್ಟಿತ್ತು. ಹಾಗೆ ಉಪ ಸಭಾಪತಿ ಸ್ಥಾನವನ್ನು ತಾನು ಪಡೆದುಕೊಂಡಿತ್ತು. ಬದಲಾದ ಸಮಯದಲ್ಲಿ ತನಗೇ ಸಭಾಪತಿ ಸ್ಥಾನ ಕೊಡಬೇಕೆಂಬ ಬೇಡಿಕೆಯನ್ನು ಕಾಂಗ್ರೆಸ್ ಒಪ್ಪದಿದ್ದಾಗ ಬಿಜೆಪಿ ಜೊತೆ ಕೈಜೋಡಿಸಲು ಜೆಡಿಎಸ್ ಮುಂದಾಗಿದೆ.

ಜೊತೆಗೆ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಬಿಜೆಪಿ ಹೈಕಮಾಂಡ್ ಉತ್ಸುಕವಾಗಿದೆ. ಅದಕ್ಕೆ ಕಾರಣ ಪ್ರಾದೇಶಿಕ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು, ರಾಷ್ಟ್ರೀಯ ಪಕ್ಷವನ್ನು ದೂರಿಡಲು ಬಿಜೆಪಿ ತೀರ್ಮಾನ ಮಾಡಿದೆ. ಹೀಗಾಗಿಯೇ ಸ್ವತಃ ಅಮಿತ್ ಶಾ ಅವರು ದೇವೇಗೌಡರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಪರಿಷತ್‌ನಲ್ಲಿ ಪಕ್ಷಗಳ ಸಂಖ್ಯಾಬಲ

ಪರಿಷತ್‌ನಲ್ಲಿ ಪಕ್ಷಗಳ ಸಂಖ್ಯಾಬಲ

ಸದ್ಯ ವಿಧಾನ ಪರಿಷತ್‌ನಲ್ಲಿ ಬಿಜೆಪಿಯ 31, ಕಾಂಗ್ರೆಸ್ ಪಕ್ಷದ 28, ಜೆಡಿಎಸ್‌ನ 13, ಸಭಾಪತಿ 1, ಪಕ್ಷೇತರ 1 ಹಾಗೂ ಒಂದು ಸ್ಥಾನ ಖಾಲಿಯಿದೆ. ಹೀಗಾಗಿ ಸಭಾಪತಿ ಸ್ಥಾನ ಅಥವಾ ಉಪ ಸಭಾಪತಿ ಸ್ಥಾನವನ್ನು ಪಡೆಯಲು ಬಿಜೆಪಿಗೆ ಜೆಡಿಎಸ್ ಬೆಂಬಲ ಬೇಕೆಬೇಕು. ಹೀಗಾಗಿ ವಿಧಾನ ಪರಿಷತ್‌ನ ಅತ್ಯಂತ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಅವರನ್ನು ಸಭಾಪತಿ ಮಾಡಲು ಬಿಜೆಪಿ ಒಪ್ಪಿಕೊಂಡಿದೆ.

ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಲ್ಲಿ ಮುಂದಿನ ವಾರವೇ ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ ಅವರು ವಿಧಾನ ಪರಿಷತ್ ಸಭಾಪತಿಯಾಗಿ ಆಯ್ಕೆಯಾಗಲಿದ್ದಾರೆ. ಮುಂದಿನ ಒಂದೂವರೆ ವರ್ಷಗಳ ಕಾಲ ಅವರು ಸಭಾಪತಿಯಾಗಿ ಮುಂದುವರೆಯಲಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಪಕ್ಷವನ್ನು ದೂರಿಡಲು ಹಾಗೂ ಪ್ರಾದೇಶಿಕ ಪಕ್ಷದೊಂದಿಗೆ ಕೈಜೋಡಿಸಲು ಬಿಜೆಪಿ ವರಿಷ್ಠರು ನಿರ್ಧಾರ ಮಾಡಿದ್ದಾರೆ.

English summary
Secret Behind Jds and Bjp alliance in Karnataka Legislative Council, Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X