ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತು ತಿಂಗಳುಗಳ ಬಳಿಕ ರಾಜ್ಯಾದ್ಯಂತ ಶಾಲೆಗಳು ಆರಂಭ!

|
Google Oneindia Kannada News

ಬೆಂಗಳೂರು, ಜ 01: 'ಕೊರೊನಾ ಓಡಿಸೋಣ, ನಮ್ಮ ಮಕ್ಕಳನ್ನು ಸುರಕ್ಷಿತ ವಾತಾವರಣದಲ್ಲಿ ಓದಿಸೋಣ' ಎಂಬ ಧ್ಯೇಯ ವಾಖ್ಯದೊಂದಿಗೆ ಬರೊಬ್ಬರಿ ಹತ್ತು ತಿಂಗಳುಗಳ ಬಳಿಕ ರಾಜ್ಯದಲ್ಲಿ ಶಾಲೆ-ಕಾಲೇಜುಗಳು ಮತ್ತೆ ಆರಂಭವಾಗಿವೆ. ಬ್ರಿಟನ್ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ಗೊಂದಲಗಳಿದ್ದವು. ಆದರೆ ರಾಜ್ಯ ಶಿಕ್ಷಣ ಇಲಾಖೆಯ ದಿಟ್ಟತನದ ನಿರ್ಧಾರದಿಂದ ಮಕ್ಕಳು ಮತ್ತೆ ಶಾಲೆಗೆ ಮರಳಿದ್ದಾರೆ. ಸುದೀರ್ಘ ಅವಧಿಯ ಬಳಿಕ ಶಾಲೆಗಳು ಆರಂಭವಾಗಿದ್ದರಿಂದ ರಾಜ್ಯದೆಲ್ಲೆಡೆ ಶಾಲಾ ಪರಿಸರದಲ್ಲಿ ಮಕ್ಕಳ ಕಲರವ ಕೇಳಿ ಬಂದಿದೆ. ಮಕ್ಕಳು ಮತ್ತು ಪೋಷಕರಲ್ಲಿ ಸಂಭ್ರಮ ಮನೆ ಮಾಡಿದೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಹೊರಡಿಸಿರುವ ಮಾರ್ಗಸೂಚಿಸಿಯನ್ವಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಶಾಲೆಗಳಿಗೆ ಸೂಚಿಸಲಾಗಿದೆ. ಅದರಂತೆ ಇಂದು (ಜ.01) ತರಗತಿಗಳು ಆರಂಭವಾಗಿವೆ. ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಹಲವು ಶಾಲೆಗಳಿಗೆ ಭೇಟಿ ನೀಡಿ ಶಾಲೆ ಆರಂಭದ ಕುರಿತು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಜಿಲ್ಲಾ ಮಟ್ಟದಲ್ಲಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಕೆಲವೆಡೆ ಶಾಸಕರು, ಜನಪ್ರತಿನಿಧಿಗಳು ಶಾಲಾ ಆರಂಭದ ಸಿದ್ಧತೆಯನ್ನು ಪರಿಶೀಲಿಸಿದರು.

ಹೊಸ ವರ್ಷದ ಮೊದಲ ದಿನವಾದ ಶುಕ್ರವಾರ 10 ಮತ್ತು 12ನೇ ತರಗತಿಗಳು ಮತ್ತು 6 ರಿಂದ 9ನೇ ತರಗತಿಗಳಿಗೆ ಪರಿಷ್ಕೃತ ವಿದ್ಯಾಗಮ ತರಗತಿಗಳ ಆರಂಭವಾದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಖುದ್ದಾಗಿ ಹಲವು ಶಾಲೆಗಳಿಗೆ ಭೇಟಿ ನೀಡಿದ್ದಾರೆ. ಆನೇಕಲ್ ತಾಲೂಕಿನ ಹೆನ್ನಾಗರ, ಹೆಬ್ಬಗೋಡಿ, ಚಂದಾಪುರ ಚತ್ರಖಾನೆ, ಅತ್ತಿಬೆಲೆ, ಸರ್ಜಾಪುರದ ಸರ್ಕಾರಿ ಪ್ರೌಢಶಾಲೆಗಳು ಮತ್ತು ಚಂದಾಪುರದ ಸ್ವಾಮಿ ವಿವೇಕಾನಂದ ಗ್ರಾಮಾಂತರ ಪ್ರೌಢಶಾಲೆ, ದೊಮ್ಮಸಂದ್ರದ ಸರಸ್ವತಿ ವಿದ್ಯಾನಿಕೇತನ ಶಾಲೆಗಳಿಗೆ ತಾವು ಭೇಟಿ ನೀಡಿದ್ದರು. ಶಾಲಾ ಪುನಾರಂಭದ ಕುರಿತು ಮಕ್ಕಳು ಮತ್ತು ಪೋಷಕರ ಅಭಿಪ್ರಾಯವನ್ನು ಇದೇ ಸಂದರ್ಭದಲ್ಲಿ ಸುರೇಶ್ ಕುಮಾರ್ ಅವರು ಆಲಿಸಿದರು.

ಹಾಜರಾತಿ ವಿವರ

ಹಾಜರಾತಿ ವಿವರ

ಶಾಲೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ಬಳಿಕ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿದರು. ಹೊಸ ವರ್ಷದ ಮೊದಲ ದಿನ ಶುಕ್ರವಾರ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಶಾಲೆಗಳು ಪ್ರಾರಂಭವಾಗಿವೆ. ರಾಜ್ಯದಲ್ಲಿರುವ 5,492 ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾಗಿರುವ 241,965 ವಿದ್ಯಾರ್ಥಿಗಳ ಪೈಕಿ ಇಂದು 78,794 (ಶೇ. 32.56) ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಹಾಗೆಯೇ 16,850 ಪ್ರೌಢಶಾಲೆಗಳಲ್ಲಿ 10ನೇ ತರಗತಿಗೆ ದಾಖಲಾಗಿರುವ ವಿದ್ಯಾರ್ಥಿಗಳ ಪೈಕಿ 9,27,472 ವಿದ್ಯಾರ್ಥಿಗಳು 3,80,264 (ಶೇ. 41) ಹಾಜರಾಗಿದ್ದಾರೆ. ಮಧ್ಯಾಹ್ನದ ಮೇಲೆ 6 ರಿಂದ 9ನೇ ತರಗತಿಗಳಿಗೆ ಸಂಬಂಧಿಸಿದಂತೆ ವಿದ್ಯಾಗಮ ತರಗತಿಗಳು ಪ್ರಾರಂಭವಾಗಿವೆ. ಇದರ ಅಂಕಿ-ಅಂಶಗಳು ಅಪ್‍ಡೇಟ್ ಆಗುತ್ತಿದ್ದು, ವಿವರಗಳು ಇನ್ನೂ ದೊರೆಯಬೇಕಿದೆ ಎಂದು ಮಾಧ್ಯಮ ಗೋಷ್ಠಿಯಲ್ಲಿ ಸುರೇಶ್ ಕುಮಾರ್ ಹೇಳಿದರು.

ಎಲ್ಲರ ಸಹಕಾರ

ಎಲ್ಲರ ಸಹಕಾರ

ಎಲ್ಲರ ಸಹಕಾರದಿಂದ ಶಾಲೆಗಳು ಆರಂಭವಾಗಿವೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತಗಳು, ಜನಪ್ರತಿನಿಧಿಗಳು ಎಲ್ಲರೂ ಒಗ್ಗಟ್ಟಾಗಿ ನಮ್ಮ ಮಕ್ಕಳ ಭವಿಷ್ಯಕ್ಕೆ ಒಂದು ರೀತಿಯ ಕಾಯಕಲ್ಪವನ್ನು ದೊರಕಿಸಿಕೊಟ್ಟಿದ್ದಾರೆ. ರಾಜ್ಯದ ಎಲ್ಲ ಜನಪ್ರತಿನಿಧಿಗಳು ಸಹಕರಿಸಿದ್ದಾರೆ ಎಂದು ಅವರು ಹೇಳಿದರು.

ಮಕ್ಕಳು ಮಾಸ್ಕ್ ಹಾಕಿಕೊಂಡು, ಪೋಷಕರ ಅನುಮತಿ ಪತ್ರದೊಂದಿಗೆ ಶಾಲೆಗೆ ಹಾಜರಾಗಿದ್ದಾರೆ. ರಾಜ್ಯದ ಬಹುತೇಕ ಎಲ್ಲ ಶಾಲೆಗಳಲ್ಲಿ ಮಕ್ಕಳನ್ನು ಬರಮಾಡಿಕೊಳ್ಳಲು ಊರವರು, ಶಾಲಾಭಿವೃದ್ಧಿ ಸಮಿತಿಗಳವರು ಮಾವು, ತೆಂಗಿನ ಗರಿ, ಬಾಳೆಕಂಬಗಳೊಂದಿಗೆ ತಳಿರು ತೋರಣ ಕಟ್ಟಿದ್ದು ವಿಶೇಷವಾಗಿತ್ತು. ರಂಗೋಲಿ ಬಿಡಿಸಲಾಗಿತ್ತು. ಇಂದು ರಾಜ್ಯದ ಹಬ್ಬದ ವಾತಾವರಣ ಮೂಡಿತ್ತು. ಹಳ್ಳಿಗಳಲ್ಲಿ ಮನೆಮನೆಗಳಲ್ಲಿ ಹೊಸ ವರ್ಷದ ಈ ದಿನ ಹಬ್ಬದ ವಾತಾವರಣವನ್ನೇ ಸೃಷ್ಟಿಸಿತ್ತು. ಬೆಳ್ಳಂಬೆಳಗ್ಗೆಯೇ ಮಕ್ಕಳನ್ನು ಎಬ್ಬಿಸಿ ಶಾಲೆಗೆ ಹೋಗಲು ತಯಾರಿ ನಡೆಸಿದ ಪೋಷಕರು ಮಕ್ಕಳಿಗೆ ಲಘು ಉಪಹಾರ ಮತ್ತು ಬಿಸಿ ನೀರಿನ ಬಾಟಲಿಯೊಂದಿಗೆ ಶಾಲೆಗೆ ಕಳಿಸಿದ್ದರು ಎಂದು ಸುರೇಶ್ ಕುಮಾರ್ ಅವರು ಹೇಳಿದರು.

ಶಿಕ್ಷಕರ ಕಣ್ಗಾವಲು

ಶಿಕ್ಷಕರ ಕಣ್ಗಾವಲು

10ನೇ ತರಗತಿ ಮತ್ತು ದ್ವಿತೀಯ ಪಿಯು ತರಗತಿಗಳು ಬೆಳಗ್ಗೆ ಆರಂಭವಾದರೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನದ ಪಾಳಿಗಳಲ್ಲಿ 6ರಿಂದ 9ನೇ ತರಗತಿಗಳ ವಿದ್ಯಾಗಮ ತರಗತಿಗಳು ಶಾಲಾವರಣದಲ್ಲಿ ಪುಟ್ಟಪುಟ್ಟ ತಂಡಗಳಲ್ಲಿ ಮಾರ್ಗದರ್ಶಿ ಶಿಕ್ಷಕರ ಕಣ್ಗಾವಲಿನಲ್ಲಿ ಆರಂಭಗೊಂಡವು. ಹಲವಾರು ಕಡೆಗಳಲ್ಲಿ ಕೆಲವು ಮಕ್ಕಳು ತಮ್ಮದೇ ಆದ ಸ್ಯಾನಿಟೈಜ್ ಬಾಟಲಿಗಳನ್ನು ಜೊತೆಗಿಟ್ಟುಕೊಂಡಿದ್ದು ಕಂಡು ಬಂತು. ಮಾಸ್ಕ್ ಮರೆತು ಬಂದ ಮಕ್ಕಳಿಗೆ ಶಾಲೆಯ ಶಿಕ್ಷಕರು ಮಾಸ್ಕ್‌ಗಳನ್ನು ನೀಡಿದರು.

ಶಾಲೆಗೆ ಬರುವುದರಿಂದ ಹಿಡಿದು, ಶಾಲೆಯಿಂದ ಹೋಗುವ ತನಕವೂ ಒಬ್ಬರಿಗೊಬ್ಬರು ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ಶಿಕ್ಷಕರು ನೋಡಿಕೊಂಡರು. ಮೊದಲ ದಿನವಾದ ಇಂದು ತರಗತಿಗಳಲ್ಲಿ ಕೋವಿಡ್ ಕುರಿತು ಮುಂಜಾಗ್ರತ ಕ್ರಮಗಳು, ಅನುಸರಿಸಬೇಕಾದ ನಿಯಮಗಳು, 10 ಮತ್ತು 12ನೇ ತರಗತಿಗಳ ಶಿಕ್ಷಣದ ಮಹತ್ವ ಮತ್ತು ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗಿ ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿತರಬೇಕೆಂಬುದರ ಉಪಯುಕ್ತತೆಯನ್ನು ಶಿಕ್ಷಕರು ಹೇಳುತ್ತಿದ್ದರು ಎಂದು ಸಚಿವರು ಹೇಳಿದರು.

ಪೋಷಕರ ಸಮಾಧಾನ

ಪೋಷಕರ ಸಮಾಧಾನ

ಶಾಲೆಗಳಿಗೆ ತಮ್ಮ ಮಕ್ಕಳೊಂದಿಗೆ ಬಂದ ಪೋಷಕರು ಶಾಲೆಯಲ್ಲಿ ಮಕ್ಕಳಿಗಾಗಿ ಕೈಗೊಂಡಿರುವ ಕ್ರಮಗಳು, ಸ್ವಚ್ಛತೆ ಕುರಿತು ಕೈಗೊಂಡ ಕ್ರಮಗಳನ್ನು ಗಮನಿಸಿ ತಮ್ಮ ಮಕ್ಕಳ ಸುರಕ್ಷೆ ಕುರಿತು ಸಮಾಧಾನದಿಂದ ಹೋಗುತ್ತಿದ್ದುದು ವಿಶೇಷವಾಗಿತ್ತು. ಹಲವಾರು ಕಡೆಗಳಲ್ಲಿ ದೃಶ್ಯಮಾಧ್ಯಮಗಳ ಪ್ರತಿನಿಧಿಗಳು ಶಾಲೆಗಳಿಗೆ ಭೇಟಿ ನೀಡಿ ಶಾಲಾರಂಭಕ್ಕೆ ಕೈಗೊಳ್ಳಲಾದ ಸಚಿತ್ರ ವರದಿಗಳನ್ನು ಬಿತ್ತರಿಸುತ್ತಿದ್ದುದರಿಂದ ಪೋಷಕರು ಸಮಾಧಾನವಾಗಿದ್ದರು. ಕೆಲವು ಕಡೆಗಳಲ್ಲಿ ಶಿಕ್ಷಕರು ಆರತಿ ಬೆಳಗಿದರು. ಸಿಹಿ ತಿನ್ನಿಸಿದರು. ಚಾಕೋಲೇಟ್ ಹಂಚಿದರು. ವಿದ್ಯಾರ್ಥಿಗಳು ಬಹಳ ದಿನಗಳ ನಂತರ ಸ್ನೇಹಿತರು-ಸಹಪಾಠಿಗಳನ್ನು ಕಂಡು ಪುಳಕಿತರಾಗಿ ಹಾಯ್ ಹಾಯ್ ಎನ್ನುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು ಎಂದು ಅವರು ವಿವರಿಸಿದರು.

English summary
After ten months School reopens for classes 10th and 12th today in Karnataka, Know more about school reopen here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X