ನಮಗೆ ಮಾತ್ರ ಏಕೆ ಕೋವ್ಯಾಕ್ಸಿನ್ ಲಸಿಕೆ?: ಸರ್ಕಾರಕ್ಕೆ ನಿವಾಸಿ ವೈದ್ಯರ ಪ್ರಶ್ನೆ
ಬೆಂಗಳೂರು, ಜನವರಿ 19: ರಾಜ್ಯದಲ್ಲಿ ಕೋವಿಡ್ ಲಸಿಕೆ ಪಡೆದುಕೊಳ್ಳಲು ಅರ್ಹರಾಗಿರುವ ಆರೋಗ್ಯ ಕಾರ್ಯಕರ್ತರು ತಮ್ಮ ಆಯ್ಕೆಯ ಲಸಿಕೆಯನ್ನು ಪಡೆದುಕೊಳ್ಳಲು ಅವಕಾಶ ನೀಡುವಂತೆ ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ (ಕೆಎಆರ್ಡಿ) ರಾಜ್ಯ ಸರ್ಕಾರಕ್ಕೆ ಬೇಡಿಕೆ ಇರಿಸಿದ್ದಾರೆ.
ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರಿಗೆ ಪತ್ರಬರೆದಿರುವ ವಿವಿಧ ಜಿಲ್ಲೆಗಳಲ್ಲಿನ ನಿವಾಸಿ ವೈದ್ಯರು, ಕೋವಿಡ್ ಲಸಿಕೆ ಹಂಚಿಕೆಯಲ್ಲಿ ತಮಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕೊವ್ಯಾಕ್ಸಿನ್ ಬಗ್ಗೆ ಎಚ್ಚರ: ಲಸಿಕೆಯು ಯಾರಿಗೆ ಸೂಕ್ತ, ಯಾರಿಗೆ ಸೂಕ್ತವಲ್ಲ?
ಪ್ರಸ್ತುತ ಚಿಕ್ಕಮಗಳೂರು, ಹಾಸನ, ಬಳ್ಳಾರಿ, ಶಿವಮೊಗ್ಗ, ಚಾಮರಾಜನಗರ ಮತ್ತು ದಾವಣಗೆರೆ ಜಿಲ್ಲಾಸ್ಪತ್ರೆಗಳಲ್ಲಿ ಮಾತ್ರ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. ಈ ಜಿಲ್ಲೆಗಳಲ್ಲಿನ ವೈದ್ಯರಲ್ಲಿ ಲಸಿಕೆಯ ಕುರಿತು ಕಳವಳ ಉಂಟಾಗಿದೆ.
ಕೋವ್ಯಾಕ್ಸಿನ್ ಲಸಿಕೆ ಹಾಗೂ ಕೋವಿಶೀಲ್ಡ್ ಲಸಿಕೆಗಳು ತುರ್ತು ಬಳಕೆಗೆ ಭಾರತದಲ್ಲಿ ಅನುಮೋದನೆ ಪಡೆದಿವೆ. ಅದರಲ್ಲಿ ಕೋವ್ಯಾಕ್ಸಿನ್ ಇನ್ನೂ ಮೂರನೇ ಹಂತದ ಪ್ರಯೋಗ ಪೂರ್ಣಗೊಳಿಸಿಲ್ಲ. ಆದರೂ ಅದರ ಬಳಕೆಗೆ ಅನುಮತಿ ನೀಡಿರುವುದು ಚರ್ಚೆಗೆ ಒಳಗಾಗಿದೆ. ಕೆಲವು ಆಯ್ದ ಜಿಲ್ಲೆಗಳಲ್ಲಿ ಮಾತ್ರ ಕೋವ್ಯಾಕ್ಸಿನ್ ನೀಡಲಾಗುತ್ತಿದೆ ಎಂದು ವೈದ್ಯರು ಆರೋಪಿಸಿದ್ದಾರೆ. ಮುಂದೆ ಓದಿ.

ಉಳಿದೆಡೆ ಕೋವಿಶೀಲ್ಡ್, ನಮಗ್ಯಾಕೆ ಕೋವ್ಯಾಕ್ಸಿನ್?
'ನಿವಾಸಿ ವೈದ್ಯರಿಗೆ ಕೋವ್ಯಾಕ್ಸಿನ್ ನೀಡುತ್ತಿರುವುದರ ಬಗ್ಗೆ ಆತಂಕ ಉಂಟಾಗಿದೆ. ಏಕೆಂದರೆ ಕರ್ನಾಟಕದ ಇತರೆ ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಶೀಲ್ಡ್ ನೀಡಲಾಗುತ್ತಿದೆ. ಕೋವ್ಯಾಕ್ಸಿನ್ ನೀಡುವ ಮುನ್ನ, ಕೋವ್ಯಾಕ್ಸಿನ್ ಲಸಿಕೆಯ ಪರಿಣಾಮದ ದತ್ತಾಂಶಗಳು ಇನ್ನೂ ಲಭ್ಯವಾಗಿಲ್ಲ ಎಂದು ತಿಳಿವಳಿಕೆ ನೀಡಲಾಗುತ್ತಿದೆ' ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಲಸಿಕೆ ಹಂಚಿಕೆ ಬಗ್ಗೆ ಅನುಮಾನ
'ಲಸಿಕೆ ಹಂಚಿಕೆಯಲ್ಲಿನ ಜವಾಬ್ದಾರಿ ಮತ್ತು ವ್ಯತ್ಯಾಸಗಳು ಬಹಳ ಅನುಮಾನಗಳಿಗೆ ಕಾರಣವಾಗುತ್ತಿದೆ. ನಿವಾಸಿ ವೈದ್ಯರಿಗೆ ಬಹಳ ಕಾವಲಿನಲ್ಲಿ ಲಸಿಕೆ ನೀಡಲಾಗುತ್ತಿದೆ. ಕೋವ್ಯಾಕ್ಸಿನ್ ಲಸಿಕೆ ಪ್ರಯೋಗದ ಮೂರನೇ ಹಂತದ ಪರೀಕ್ಷೆಯ ಫಲಿತಾಂಶವನ್ನೇ ಇನ್ನೂ ಘೋಷಣೆ ಮಾಡದೆಯೂ ಅದನ್ನು ನೀಡಲು ಸರ್ಕಾರ ನಿರ್ಧರಿಸಿರುವುದು ಶಿವಮೊಗ್ಗ, ಹಾಸನ, ಚಾಮರಾಜನಗರ ಮತ್ತು ಬಳ್ಳಾರಿಗಳಲ್ಲಿನ ವೈದ್ಯಕೀಯ ಕಾಲೇಜುಗಳ ನಿವಾಸಿ ವೈದ್ಯರಲ್ಲಿ ತೀವ್ರ ಕಳವಳ ಮೂಡಿಸಿದೆ' ಎಂದು ಹೇಳಿದ್ದಾರೆ.
ಬೇಡಪ್ಪಾ ಬೇಡ ಲಸಿಕೆ: ಕೊವ್ಯಾಕ್ಸಿನ್ ಬಗ್ಗೆ ಜನರಲ್ಲಿ ಭಯವೇಕೆ?

ಸಚಿವರ ಸ್ಪಷ್ಟನೆ
ವ್ಯಾಕ್ಸಿನ್ ತೆಗೆದುಕೊಳ್ಳಲು ಹಿಂಜರಿಕೆ ಇದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಇಡೀ ದೇಶದಲ್ಲಿ ನಿನ್ನೆ ಅತಿ ಹೆಚ್ಚು ಜನರು ನಮ್ಮರಾಜ್ಯದಲ್ಲಿ ಲಸಿಕೆ ಪಡೆದಿದ್ದಾರೆ. ಲಸಿಕೆಗಳು ಸುರಕ್ಷಿತವಾಗಿದ್ದು ರಾಜ್ಯದಲ್ಲಿ ಲಸಿಕೆ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ವದಂತಿಗಳನ್ನು ನಂಬಬೇಡಿ. ಲಸಿಕೆ ಕುರಿತು ಯಾವುದೇ ಭಯ ಬೇಡ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಮತ್ತೆ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದಲ್ಲಿ ಇಳಿಕೆಯಾದ ಪ್ರಮಾಣ
ಕರ್ನಾಟಕದಲ್ಲಿ ಲಸಿಕೆ ಕಾರ್ಯಕ್ರಮದ ಮೊದಲ ದಿನವಾದ ಶನಿವಾರ ಉದ್ದೇಶಿತ ಸಂಖ್ಯೆಯ ಶೇ 63ರಷ್ಟು ಮಂದಿಗೆ ಲಸಿಕೆ ನೀಡಲಾಗಿತ್ತು. ಭಾನುವಾರ ಇದು ಶೇ 58.4ಕ್ಕೆ ಇಳಿಕೆಯಾಗಿದ್ದರೆ, ಸೋಮವಾರ ರಾಜ್ಯಾದ್ಯಂತ ಕೇವಲ ಶೇ 47ರಷ್ಟು ಮಾತ್ರ ಕೋವಿಲ್ ಲಸಿಕೆ ಕಾರ್ಯಕ್ರಮ ನಡೆದಿದೆ.