ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂಪಿ ವಿವಿ ಕನ್ನಡಿಗರ ಅಸ್ಮಿತೆಯ ಪ್ರತೀಕ: ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ

|
Google Oneindia Kannada News

ಬೆಂಗಳೂರು, ಡಿಸೆಂಬರ್ 28: ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ಉಳಿಸಿಕೊಳ್ಳುವ ಚಳುವಳಿಯನ್ನು ತೀವ್ರಗೊಳಿಸಲಾಗುವುದು. ಸರ್ಕಾರವು ಕನ್ನಡಿಗರ ಒಕ್ಕೊರಲ ಆಗ್ರಹಕ್ಕೆ ಕಿವುಡಾಗಿ ಕುಳಿತಿದ್ದು, ಇದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ತನ್ನದೇ ಆದ ವಿಧಾನದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದರು.

ಇನ್ನು ಐದು ದಿನಗಳೊಳಗೆ ರಾಜ್ಯ ಸರ್ಕಾರ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಬಿಡುಗಡೆ ಮಾಡುವುದರ ಜೊತೆಗೆ ಅದರ ಪ್ರತ್ಯೇಕ ಅಸ್ತಿತ್ವವನ್ನು ಹಾಗೇ ಉಳಿಸಿಕೊಳ್ಳುವ ಘೋಷಣೆಯನ್ನು ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಕರವೇ ಕಾರ್ಯಕರ್ತರು ಬೀದಿಗೆ ಬಂದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

'ಕನ್ನಡ ವಿವಿ ಉಳಿಸಿ' ಕರವೇ ಅಭಿಯಾನಕ್ಕೆ ನಾಡಿನ ಮಠಾಧೀಶರ ಬೆಂಬಲ'ಕನ್ನಡ ವಿವಿ ಉಳಿಸಿ' ಕರವೇ ಅಭಿಯಾನಕ್ಕೆ ನಾಡಿನ ಮಠಾಧೀಶರ ಬೆಂಬಲ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪದೇ ಪದೇ ಚಳುವಳಿ‌ ಮಾಡಬೇಡಿ, ಮಾತುಕತೆಗೆ ಬನ್ನಿ. ಚಳುವಳಿಗಳಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ ಎನ್ನುತ್ತಾರೆ. ಆದರೆ ಸರ್ಕಾರಕ್ಕೆ ಮನವಿ ಸಲ್ಲಿಸಿದ ಮೇಲೂ ಮೌನವಾಗಿದ್ದಾರೆ. ಉನ್ನತ ಶಿಕ್ಷಣ ಸಚಿವರು ನೀಡಿದ ಭರವಸೆ ಹುಸಿಯಾಗಿದೆ ಎಂದರು.

Release The Grant To The Hampi Kannada University: TA Narayana Gowda

ರಾಜ್ಯ ಸರ್ಕಾರ ಸಂವೇದನಾಶೀಲತೆಯನ್ನು ಕಳೆದುಕೊಂಡಿದೆ. ದಪ್ಪಚರ್ಮದ ರಾಜಕಾರಣಿಗಳು, ಅಧಿಕಾರಿಗಳು ರಾಜ್ಯದ ಜನರ ಕೂಗಿಗೆ ಬೆಲೆಕೊಡುತ್ತಿಲ್ಲ. ಹೀಗಾದಲ್ಲಿ ಸಾಮಾನ್ಯ ಜನರ ಸಿಟ್ಟು ಕಟ್ಟೆಯೊಡೆದು, ಅದರ ಪರಿಣಾಮವನ್ನು ಸರ್ಕಾರವೇ ಎದುರಿಸಬೇಕಾಗುತ್ತದೆ.

ಕರ್ನಾಟಕ ರಕ್ಷಣಾ ವೇದಿಕೆ, ಹಂಪಿ ಕನ್ನಡ ವಿಶ್ವವಿದ್ಯಾಲಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು #ಕನ್ನಡವಿವಿಉಳಿಸಿ ಟ್ವಿಟರ್ ಅಭಿಯಾನ ನಡೆಸಿತ್ತು.‌ ಸುಮಾರು 11,800 ಟ್ವೀಟ್ ಗಳಲ್ಲಿ ಸರ್ಕಾರದ ಧೋರಣೆಯನ್ನು ಖಂಡಿಸಲಾಗಿತ್ತು. ಸುಮಾರು 40 ಲಕ್ಷಕ್ಕೂ ಹೆಚ್ಚು ಜನರಿಗೆ ಈ‌ ಅಭಿಯಾನ ತಲುಪಿತ್ತು.

ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರನ್ನು ನಾನು, ಕರವೇ ಮುಖಂಡರ ನಿಯೋಗದೊಂದಿಗೆ ಭೇಟಿ‌ ಮಾಡಿ ಆಗ್ರಹ ಪತ್ರ ಸಲ್ಲಿಸಿದ್ದೆ. ಸಚಿವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿ,‌ ಕೂಡಲೇ ಹಂಪಿ ಕನ್ನಡ ವಿವಿಗೆ ಅನುದಾನ‌ ಬಿಡುಗಡೆ‌ ಮಾಡುವುದಾಗಿ ಆಶ್ವಾಸನೆ ನೀಡಿದ್ದರು.

ಆದರೆ ಸರ್ಕಾರ ತನ್ನ ಮಾತು ನಡೆಸಿಕೊಳ್ಳಲಿಲ್ಲ. ಕರವೇ ನಾಡಿನ ವಿದ್ವಜ್ಜನರ ಹೇಳಿಕೆಗಳನ್ನು ಪಡೆದು ಸಾಮಾಜಿಕ‌ ಜಾಲತಾಣಗಳಲ್ಲಿ "ಭಿತ್ತಿಪತ್ರ ಚಳವಳಿ' ನಡೆಸುತ್ತಿದೆ. ನಾಡಿನ ಹೆಸರಾಂತ ಸಾಹಿತಿಗಳು, ಸಂಶೋಧಕರು, ಸಮಾಜ ವಿಜ್ಞಾನಿಗಳು, ಮಠಾಧೀಶರು, ಚಿಂತಕರು, ಧರ್ಮಗುರುಗಳು ಈ ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಲಕ್ಷಾಂತರ ಜನರ ಗಮನ ಸೆಳೆದಿದೆ.

ಇಷ್ಟಾದರೂ ಸರ್ಕಾರ ಬೇಜವಾಬ್ದಾರಿ ಮತ್ತು ಉದಾಸೀನ‌ ಪ್ರವೃತ್ತಿಯನ್ನು ಮುಂದುವರೆಸಿದೆ. ಇಂಥ ಸಮಯದಲ್ಲಿ‌ ನಮಗೆ ತೀವ್ರ ಸ್ವರೂಪದ‌ ಚಳುವಳಿ ನಡೆಸದೇ ಬೇರೆ ದಾರಿ‌ ಉಳಿದಿಲ್ಲ. ಐದು ದಿನಗಳೊಳಗೆ ಸರ್ಕಾರ ಕಿವಿಗೊಡದೇ ಇದ್ದರೆ,‌ ಕರವೇ ನಡೆಸುವ ಚಳುವಳಿ‌ ಮತ್ತು ಅದರ ಪರಿಣಾಮಗಳಿಗೆ ಸರ್ಕಾರವೇ ಹೊಣೆ ಹೊರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.

English summary
"The state government should release the grant to the Kannada University within five days and announce that it will retain its separate existence," TA Narayana Gowda said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X