• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿವನ ಪಾದ ಸೇರಿದ ಗೋಕರ್ಣ ಮಹಾಬಲೇಶ್ವರನ ರಾಜ ನಂದಿ

By ಡಾ. ವೈ ವಿ ಕೃಷ್ಣಮೂರ್ತಿ
|

ಬುಧವಾರ (ಮಾ 3) ಐತಿಹಾಸಿಕ ಗೋಕರ್ಣ ಮಹಾಬಲೇಶ್ವರ ದೇವಾಲಯದಲ್ಲಿನ 'ರಾಜನಂದಿ' ಶಿವನ ಪಾದ ಸೇರಿದೆ. ಈ ಸಂಬಂಧ ಪಶುವೈದ್ಯರು ಮತ್ತು ಹವ್ಯಕ ಮಹಾಮಂಡಲದ ಅಧ್ಯಕ್ಷರೂ ಆದ ಡಾ. ವೈ ವಿ ಕೃಷ್ಣಮೂರ್ತಿಯವರು ಬರೆದ ಲೇಖವನನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ (ಸಂ)

ಇದು ಅಂತಿಂಥ ನಂದಿಯಾಗಿರಲಿಲ್ಲ, ಗೋಕರ್ಣನಾಥೇಶ್ವರನ ಸೇವೆಗೆ ನಿಂತಿರುವ ಸಾಕ್ಷಾತ್ ಮಹಾನಂದಿಯೆಂದೇ ಈ ಭಾಗದಲ್ಲಿ ಹೆಸರುವಾಸಿಯಾಗಿತ್ತು. ಶ್ರೀ ಕ್ಷೇತ್ರ ಗೋಕರ್ಣದ ಐತಿಹಾಸಿಕ ಮಹಾಬಲೇಶ್ವರ ದೇವಾಲಯದಲ್ಲಿ ರಾಜನಂದಿಯಾಗಿ ತನ್ನ ಗಾಂಭೀರ್ಯದಿಂದ ಎಲ್ಲರ ಗಮನ ಸೆಳೆದು ಪ್ರೀತಿಗಳಿಸಿದ್ದ 'ರಾಜನಂದಿ' ಗುರುವಾರ (ಮಾ 3) ಇಹಲೋಕ ತೊರೆದು ಶಿವನ ಪಾದ ಸೇರಿದೆ.

ತುಂಬಾ ಸಾಧುವಾಗಿದ್ದ ಈ ನಂದಿ, ದಿನವೂ ಮಹಾಬಲೇಶ್ವರ ದೇವರ ಉತ್ಸವದ ಜೊತೆ ಪ್ರದಕ್ಷಿಣೆ ಬರುತ್ತಿತ್ತು. ತನ್ನ ಸಾಧು ನಡವಳಿಕೆಯಿಂದ, ಸದಾ ಜೀವ ಚೈತನ್ಯದಿಂದ ತುಂಬಿ ತುಳುಕುತ್ತಿದ್ದ 'ರಾಜನಂದಿ'ಯು ರಾಘವೇಶ್ವರಭಾರತೀ ಶ್ರೀಗಳ ಅಚ್ಚು-ಮೆಚ್ಚಿನ ನಂದಿಯಾಗಿತ್ತು.

ಶ್ರೀಗಳವರು ದೇವಾಲಯಕ್ಕೆ ಆಗಮಿಸಿದಾಗಲೆಲ್ಲಾ ಗೋಶಾಲೆಗೆ ತೆರಳಿ ನಂದಿಯನ್ನು ಆತ್ಮೀಯವಾಗಿ ಮಾತನಾಡಿಸಿ , ಸಿಹಿ ತಿನ್ನಿಸುತ್ತಿದ್ದರು. 2009ರಲ್ಲಿ ವಧಾಸ್ಥಳಕ್ಕೆ ಸಾಗಿಸಲಾಗುತ್ತಿದ್ದ ಈ ನಂದಿಯನ್ನು ಗೋಭಕ್ತರು ತಡೆದು ನಿಲ್ಲಿಸಿ ಅದನ್ನು ಕುಮಟಾ ಹೊಸಾಡದ 'ಅಮೃತಧಾರಾ' ಗೋಶಾಲೆಗೆ ತಲುಪಿಸಿ, ಅಲ್ಲಿ ಪಾಲನೆ ಪೋಷಣೆ ಮಾಡಲಾಗಿತ್ತು.

ಅದರ ಗುಣ -ಸ್ವಭಾವಗಳನ್ನು ಅರಿತ ಶ್ರೀಗಳು ಈ ಪುಣ್ಯ ಜೀವಿಯನ್ನು ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ಅಧಿಕೃತ ನಂದಿಯಾಗಿ ಕರುಣಿಸಿದ್ದರು. ಎಲ್ಲಾ ಕಾರ್ಯಕರ್ತರ ಅಚ್ಚುಮೆಚ್ಚಿನದಾಗಿದ್ದ, ಯಾತ್ರಾರ್ಥಿಗಳ ಪ್ರೀತಿಗೆ ಪಾತ್ರವಾಗಿದ್ದ ಈ ನಂದಿ ಶಿವರಾತ್ರಿಯ ಮಹೋತ್ಸವದ ಶುಭ ಸಂದರ್ಭದಲ್ಲಿ ಸಾರ್ವಭೌಮನ ಪಾದ ಸೇರಿತು. ರಾಜನಂದಿಯ ಬಗ್ಗೆ ನನ್ನ ನೆನಪಿನ ಬರಹವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ಉಡುಪಿಯಿಂದ ಗೋಕರ್ಣಕ್ಕೆ ಹೋಗುತ್ತಿದ್ದೆ

ಉಡುಪಿಯಿಂದ ಗೋಕರ್ಣಕ್ಕೆ ಹೋಗುತ್ತಿದ್ದೆ

ಅಂದು ಬೆಳಿಗ್ಗೆ ಗೋಕರ್ಣಕ್ಕೆ ಹೋಗುವುದಕ್ಕಾಗಿ ಉಡುಪಿಯಲ್ಲಿದ್ದೆ. ಗೋಕರ್ಣಕ್ಕೆ ಹೋಗುತ್ತಿದ್ದದ್ದು ಶಿವರಾತ್ರಿಯ ಸಮಯವಾಗಿದ್ದರೂ ಮೂಲದಲ್ಲಿ ರಾಜಾ ನಂದಿಯನ್ನು ನೋಡುವುದಕ್ಕಾಗಿ ಆಗಿತ್ತು. ಅಷ್ಟೊತ್ತಿಗಾಗಲೇ ಗೋಕರ್ಣದಿಂದ ದೂರವಾಣಿ ಬಂತು. ರಾಜಾ ನಂದಿಯು ಇಂದು ಪ್ರಾತಃ ಕಾಲ ಶಿವನ ಪಾದ ಸೇರಿದ ಎಂದರು. ಈ ಮಾತು ಕಳೆದ ಕೆಲವು ದಿನಗಳಿಂದ ನಿರೀಕ್ಷಿತವಾಗಿದ್ದರೂ, ಮನಸ್ಸಿಗೆ ಮಂಕು ಕವಿಸಿತ್ತು. ಉಡುಪಿಯಿಂದ ಗೋಕರ್ಣದ ವರೆಗೂ ರಾಜಾನ ಗತಜೀವನವು ಮತ್ತೆ ಮತ್ತೆ ಮನಃಪಲ್ಲಟದಲ್ಲಿ ಹಾದು ಹೋಗುತ್ತಿತ್ತು.

2007ರ ಘಟನೆ

2007ರ ಘಟನೆ

ಅದು 2007ರ ಘಟನೆ. ಹೈದರಾಬಾದ್‌ ನಲ್ಲಿ ಗೋಯಾತ್ರೆಯ ಅಂಗವಾಗಿ ಗೋಭಕ್ತರ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಆಂಧ್ರದಿಂದ ಭಟ್ಕಳಕ್ಕೆ ಕಸಾಯಿಗಾಗಿ ಸಾಗಿಸುತ್ತಿದ್ದ 13 ಓಂಗೋಲ್ ತಳಿಯ ಹೋರಿಗಳನ್ನು ತಡೆದ ಗೋಭಕ್ತರ ತಂಡ ಅವುಗಳೆಲ್ಲವನ್ನು ಹೊಸಾಡಕ್ಕೆ ತಂದಿಳಿಸಿದ್ದರು. ಇದು ಕಾನೂನು ಹೋರಾಟಕ್ಕೆ ನಾಂದಿ ಹಾಡಿತ್ತು. ಘಟನೆಯ ಬೆಳವಣಿಗೆಗೆಳ ಬಗ್ಗೆ ಹೊಸಾಡ ಗೋಶಾಲೆಯಿಂದ ನಿರಂತರ ದೂರವಾಣಿಗಳು ಬರುತ್ತಲಿದ್ದವು. ಶ್ರೀಗಳವರು ಸಮಾವೇಶದಲ್ಲಿ ಸಾನ್ನಿಧ್ಯವಹಿಸಲು ಹೊರಡುತ್ತಿರುವಾಗ ಮಠದ ಪ್ರಮುಖರೊಬ್ಬರ ದೂರವಾಣಿ ಕರೆಬಂತು. ಹೊಸಾಡದಲ್ಲಿ ಇರುವ ಅಷ್ಟೂ ಹೋರಿಗಳನ್ನು ಕಸಾಯಿಖಾನೆಯವರಿಗೆ ಬಿಟ್ಟು ಬಿಡಬೇಕೆಂದು ನ್ಯಾಯಾಲಯದ ತೀರ್ಪು ಬಂದಿದೆ ಎಂದು.

ಸ್ಥಳೀಯ ಪೊಲೀಸ್ ಅಧಿಕಾರಿಗಳು

ಸ್ಥಳೀಯ ಪೊಲೀಸ್ ಅಧಿಕಾರಿಗಳು

ಸ್ಥಳೀಯ ಪೋಲಿಸ್ ಅಧಿಕಾರಿಗಳು ಹೋರಿಗಳನ್ನು ತಮ್ಮ ವಶಕ್ಕೆ ಪಡೆಯುವುದಕ್ಕೆ ಗೋಶಾಲೆಗೆ ಬರುತ್ತಿದ್ದಾರೆ, ಪೊಲೀಸ್ ಅಧಿಕಾರಿಯವರು ವೈಯುಕ್ತಿಕವಾಗಿ ಶ್ರೀಗಳವರಗೆ ಮಾಹಿತಿ ತಿಳಿಸಲು ಹೇಳಿದ್ದಾರೆ ಎನ್ನುವ ಮಾಹಿತಿ ಬಂತು. ಈ ಬಗ್ಗೆ ಶ್ರೀಗಳ ಬಳಿ ವಿಷಯ ಪ್ರಸ್ತಾವಿಸಿದಾಗ ಸಭೆ ಮುಗಿದ ಮೇಲೆ ತೀರ್ಮಾನ ಹೇಳುತ್ತೇವೆ ಎಂದರು. ಆದರೆ ಸಭೆಯ ಕೊನೆಯವರೆಗೆ ಕಾಯದೇ, ನಿಮ್ಮೂರಿನಿಂದ ನಮ್ಮೂರಿಗೆ ಕಸಾಯಿಗಾಗಿ ಓಂಗೋಲ್ ಹೋರಿಗಳನ್ನು ತಂದಿದ್ದಾರೆ. ಅದೃಷ್ಟವಶಾತ್ ಅವುಗಳೆಲ್ಲವೂ ನಮ್ಮ ಸುಪರ್ದಿಯಲ್ಲಿ ಈಗ ಇದೆ.

ಶ್ರೀಗಳ ಕರೆ

ಶ್ರೀಗಳ ಕರೆ

ಎಷ್ಟೇ ಬೆಲೆ ತೆತ್ತಾದರೂ ಅವುಗಳೆಲ್ಲವೂ ಅವುಗಳ ಜೀವನ ಕೊನೆಯ ಉಸಿರಿನ ವರೆಗೆ ನಮ್ಮಲ್ಲಿಯೇ ಇರುತ್ತವೆ. ಈ ಹೋರಾಟಕ್ಕೆ ನಾವೆಲ್ಲ ಸಜ್ಜಾಗೋಣ ಎಂದು ಶ್ರೀಗಳವರು ಕರೆ ನೀಡಿದರು. ಆದರೆ ಇತ್ತ ಹೊಸಾಡದಲ್ಲಿ ಮೈನವಿರೇಳಿಸುವ ಘಟನೆಗಳಿಗೆ ಗೋಭಕ್ತರು ಸಾಕ್ಷಿಯಾಗಿದ್ದರು. ಕಳೆದ ಆರು ತಿಂಗಳಿನ ಹಿಂದಿನಿಂದ ಈ ಹೋರಾಟ ಶುರುವಾಗಿದ್ದು ಹೈದರಾಬಾದ್‌ನಿಂದ ಭಟ್ಕಳಕ್ಕೆ ಕಸಾಯಿಗಾಗಿ ಸಾಗಿಸುತ್ತಿದ್ದ 13ಹೋರಿಗಳನ್ನು ತಡೆಹಿಡಿದಾಗ. ಮೆರವಣಿಗೆಯಲ್ಲಿ ಈ ಹೋರಿಗಳು ಹೊಸಾಡ ಗೋಶಾಲೆಗೆ ಬಂದಿಳಿದಾಗ ಅವುಗಳನ್ನು ನೋಡುವುದೇ ಹಬ್ಬ.

ಗೋಭಕ್ತರಿಗೆ ಜಯ

ಗೋಭಕ್ತರಿಗೆ ಜಯ

ಆದರೆ ಕಾನೂನು ಹೋರಾಟದಲ್ಲಿ ಕಸಾಯಿಯವರಿಗೆ ಗೆಲುವು ಸಿಕ್ಕಿ ಹೋರಿಗಳನ್ನು ಬಿಡುವುದು ಅನಿವಾರ್ಯ ಎಂಬ ಸ್ಥಿತಿಯಿತ್ತು. ಆಗಲೇ ಜಾಗೃತವಾದ ಗೋಪ್ರೇಮ. ಕುಮಟಾದ ಗೋಭಕ್ತರೆಲ್ಲ ಒಟ್ಟು ಸೇರಿ ಭಜನೆ ಮಾಡುತ್ತಾ, ಗೋಶಾಲೆಯಲ್ಲಿ ಜಮಾಯಿಸಿದರು. ಅಂದು ಸಾಧ್ಯವಾಗಲಿಲ್ಲ ಎಂದು ಕಸಾಯಿಯವರು ಪೊಲೀಸ್ ಬೆಂಬಲದೊಂದಿಗೆ ಇನ್ನೊಂದು ದಿನ ಬರಲು ಹೊರಟಾಗ ರಸ್ತೆಯನ್ನೇ ಅಗೆದು ಹಾಕಿ ತಡೆಯಲಾಯಿತು. ಕಾನೂನು ಹೋರಾಟವೂ ಮುಂದುವರಿಯಿತು. ವರ್ಷಗಳ ಕಾಲ ನಡೆದ ಹೋರಾಟದಲ್ಲಿ ಕೊನೆಗೆ ಗೋಭಕ್ತರಿಗೇ ಜಯವಾಯಿತು.

ಮಹಾಬಲೇಶ್ವರನ ಸೇವೆಗಾಗಿ ನಿಯುಕ್ತಿ

ಮಹಾಬಲೇಶ್ವರನ ಸೇವೆಗಾಗಿ ನಿಯುಕ್ತಿ

2009ರಲ್ಲಿ ಈ ಹೋರಿಗಳಲ್ಲಿ ಒಂದು ಗೋಕರ್ಣದ ಮಹಾಬಲೇಶ್ವರನ ಸೇವೆಗಾಗಿ ನಿಯುಕ್ತಿಗೊಂಡಿತ್ತು. ಅವನೇ ರಾಜಾ ನಂದಿ. ಶಿವ ಪುರಾಣಗಳಲ್ಲಿ ವಿವರಿಸಿದ ನಂದಿಯ ಎಲ್ಲಾ ಲಕ್ಷಣಗಳನ್ನೂ ಹೊಂದಿದ್ದ ರಾಜಾ ನಂದಿ ಗೋಕರ್ಣದಲ್ಲಿ ಮಹಾಬಲೇಶ್ವರನಷ್ಟೇ ಪ್ರಸಿದ್ಧಿಯನ್ನೂ ಜನಮನ್ನಣೆಯನ್ನೂ ಗಳಿಸಿಕೊಂಡಿತ್ತು. ದೇವಸ್ಥಾನದ ಒಳಗೇ ಇದ್ದುಕೊಂಡು ನಿತ್ಯ ದೇವರ ಬಲಿಯ ಸಂದರ್ಭದಲ್ಲಿ ಪಾಲ್ಗೊಂಡು, ಬೃಹದಾಕಾರವನ್ನು ಹೊಂದಿ ಮೊದಲ ನೋಟಕ್ಕೆ, ಹೆದರಿಕೆ ಹುಟ್ಟಿಸುತ್ತಿದ್ದರೂ ಅತ್ಯಂತ ಸಾಧು ಸ್ವಭಾವದವನಾಗಿ, ದೇವಸ್ಥಾನದೊಳಗೆ ಸ್ವಚ್ಚಂದವಾಗಿ ಅಡ್ಡಾಡುತ್ತಿದ್ದ. ಒಂದೇ ಒಂದು ಬಾರಿಯೂ ಯಾರನ್ನೂ ಹೆದರಿಸಿದವನಲ್ಲ ಈ ನಂದಿ.

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ

ಕಳೆದ ಕೆಲವು ದಿನಗಳಿಂದ ನಂದಿಗೆ ಆರೋಗ್ಯದ ಸಮಸ್ಯೆಗಳು ಕಾಡುತ್ತಲಿತ್ತು. ಮೊನ್ನೆ ಚಿಕಿತ್ಸೆಗೆಂದು ಹೋಗಿದ್ದಾಗ ಧ್ಯಾನಕ್ಕೆ ಹೋದ ಯೋಗಿಯಂತಿದ್ದ. ಈ ಗಾತ್ರದ ಹೋರಿಗಳಿಗೆ ಚಿಕಿತ್ಸೆ ನೀಡಲು ಹತ್ತಾರು ಜನ ಸೇರಿ ಬಿಗಿಯಾಗಿ ಹಿಡಿದಿಟ್ಟುಕೊಳ್ಳಬೇಕಾಗುತ್ತದೆ. ಚಿಕಿತ್ಸೆಯ ನಿಟ್ಟಿನಲ್ಲಿ ಚುಚ್ಚುಮದ್ದು ನೀಡುವಾಗ, ದೇಹದ ಕೆಳಭಾಗದಲ್ಲಿ ನೀರು ತುಂಬಿ ಮೂತ್ರ ಮಾಡಲು ತೊಂದರೆಯಗುತ್ತದೆ ಎಂದು ಅಗತ್ಯವಿರುವ ಚಿಕಿತ್ಸೆಗಳನ್ನು ಮಾಡುವಾಗ ಒಂದಷ್ಟೂ ಅಲ್ಲಾಡದೆ ಸಹಕರಿಸಿದ್ದ.

ಶಿವನೆಡೆಗೆ ಯಾತ್ರೆ

ಶಿವನೆಡೆಗೆ ಯಾತ್ರೆ

ಈ ದೇಹವನ್ನು ಆಗಲೇ ಬಿಟ್ಟು ಶಿವನಡೆಗೆ ಯಾತ್ರೆ ಹೊರಟು ಆಗಿದೆ, ಇನ್ನು ನೀನು ಯಾಕೆ ಈ ಎಲ್ಲಾ ಕಸರತ್ತುಗಳನ್ನು ಮಾಡುವೆ ಎಂದು ಪ್ರಶ್ನೆ ಮಾಡುವ ಮುಖಭಾವವನ್ನು ತೋರಿಸಿದ್ದ. ಮನುಷ್ಯ ಪ್ರಯತ್ನ ಮಾಡುವುದು ನಮಗೆ ಬಿಟ್ಟಿದ್ದು ಉಳಿದದ್ದೆಲ್ಲಾ ಆ ಶಿವನಿಗೆ ಬಿಟ್ಟಿದ್ದು ಎಂದು ಚಿಕಿತ್ಸೆ ನೀಡಿ ಹೊರಡುತ್ತಿರುವಾಗ ಜೊತೆಗಿದ್ದವರು ರಾಜಾ ನಂದಿ ಕಣ್ಣಲ್ಲಿ ನೀರು ಇಳಿಯುತ್ತಿದೆ, ಅಳುತ್ತಿದ್ದಾನೆಯೇ ಎಂದು ಕೇಳಿದರು. ನನ್ನ ಕಣ್ಣಂಚಿನಿಂದ ಒಂದು ಹನಿ ನೀರು ಇಳಿದದ್ದು ಸುಳ್ಳಲ್ಲ. ದೇಹದ ಮೇಲ್ಭಾಗ ಸೊರಗಿದ್ದರೂ ಕೆಳಭಾಗ ನೀರು ತುಂಬಿ ಬಾತುಕೊಂಡಿತ್ತು.

ಭಕ್ತ ಮಾರ್ಕಂಡೇಯ

ಭಕ್ತ ಮಾರ್ಕಂಡೇಯ

ಭಕ್ತ ಮಾರ್ಕಂಡೇಯನಂತೆ, ಆ ಪರಶಿವನನ್ನು ಅಪ್ಪಿಕೊಂಡವರಿಂದ ಯಮನೂ ದೂರವಿರುತ್ತಾನೆ ಎಂಬಂತೆ, ಕಸಾಯಿಗಳ ಕೈಗೆ ಸಿಲುಕಿ ನೂರಾರು ಮೈಲು ದೂರ ಪ್ರಯಾಣಿಸಿ ಕೊನೆಗೆ ಶಿವನ ಸೇವೆಯ ಭಾಗ್ಯವಿದ್ದುದರಿಂದ ಕಸಾಯಿಗಳಿಂದ ತಪ್ಪಿಸಿ ಬಂದನಲ್ಲ ಈ ರಾಜಾ ನಂದಿ, ಏನೆನ್ನೋಣ, ಆ ಶಿವನ ಮಹಿಮೆಗೆ. ಶಿವನ ಕೃಪೆಯಿಂದ ತಾನು ಪಾರಾಗುವುದರ ಜೊತೆಗೆ ತನ್ನೊಂದಿಗಿದ್ದವರನ್ನೂ ಪಾರು ಮಾಡಿದ ಮಹಾಮಹಿಮನೀತ.

ಹೊರಗಣ್ಣಿಗೆ ಮರೆಯಾದ ಆ ದಿವ್ಯ ಚೇತನ

ಹೊರಗಣ್ಣಿಗೆ ಮರೆಯಾದ ಆ ದಿವ್ಯ ಚೇತನ

ಮಹಾನಂದಿ ದೇಹಾಂತ್ಯ ಮಾಡಿದ್ದಾಗ ಶ್ರೀಗಳವರು ನುಡಿದ ಮುತ್ತುಗಳು ‘ಹೊರಗಣ್ಣಿಗೆ ಮರೆಯಾದ ಆ ದಿವ್ಯ ಚೇತನಕ್ಕಾಗಿ ಕಣ್ಣೀರು ಸುರಿಸೋಣವೇ, ಅಥವಾ ಒಳಗಣ್ಣು ತೆರೆದು ನಿತ್ಯ ಗೋಳಿಡುವವರ ಕಣ್ಣೀರು ಒರೆಸೋಣವೇ' ಎಂದದ್ದು ನೆನಪಾಗುತ್ತಿದೆ. ಈ ಮಾತುಗಳು ಮಹಾನಂದಿಗಿಂತ ಹೆಚ್ಚಾಗಿ ರಾಜಾನಂದಿಗೇ ಅನ್ವಯಿಸುತ್ತದೆ. ಯಾಕೆಂದರೆ ಕಸಾಯಿಗಳ ಕರಾಳ ಹಸ್ತವನ್ನೂ , ಶಿವಸಾನ್ನಿಧ್ಯದ ಸವಿಯನ್ನೂ ಉಂಡವನು ರಾಜಾನಂದಿ. ಹಾಗಾಗಿಯೇ ರಾಜಾನಂದಿಯು ಗೋಸಂರಕ್ಷಣೆಯ ನಿಟ್ಟಿನಲ್ಲಿ ಪ್ರೇರಣಾಶಕ್ತಿ. ರಾಜಾ ನಂದಿ ಮತ್ತೆ ಜನ್ಮ ತಾಳಿ ಗೋಕರ್ಣದಲ್ಲಿ ಸೇವೆಗೆ ಬರಲಿ ಎಂಬುದೇ ಎಲ್ಲರ ಆಶಯ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rajanandi of Mahabaleshwara temple, Gokarna in Uttara Kannada district of Karnataka died on March 3. An article by President of Havyaka Mahamandala Dr. Y V Krishnamurthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more