ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ಬರುವ ಸಾಧ್ಯತೆ
ಬೆಂಗಳೂರು, ಜನವರಿ 13: ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ. ಕಳೆದ ಒಂದು ವಾರದಿಂದ ಮಲೆನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ರೈತರನ್ನು ಹೈರಾಣಾಗಿಸಿದ್ದ ಮಳೆ ಇನ್ನೂ ಮುಗಿದಿಲ್ಲ, ಇಂದೂ ಕೂಡ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೈಂದೂರು ಭಾಗದಲ್ಲಿ ಕಲ್ಲಂಗಡಿ ಬೆಳೆ ಇತ್ತೀಚಿನ ದಿನಗಳಲ್ಲಿ ವಿಸ್ತಾರಗೊಳ್ಳುತ್ತಿದೆ. ಮುಂಗಾರು ಭತ್ತ ಕೃಷಿಯ ಬಳಿಕ ಇಲ್ಲಿನ ರೈತರು ಕಲ್ಲಂಗಡಿ ಮತ್ತು ನೆಲಗಡಲೆ ಬೆಳೆಗೆ ಪ್ರಾಧಾನ್ಯತೆ ನೀಡುತ್ತಾರೆ. ಕಲ್ಲಂಗಡಿ ಹಿತಮಿತ ತೇವಾಂಶ ಮತ್ತು ಬಿಸಿ ವಾತಾವರಣಕ್ಕೆ ಚೆನ್ನಾಗಿ ಬೆಳೆಯುತ್ತದೆ. ಪ್ರಸ್ತುತ ವಾತಾವರಣದಲ್ಲಿ ವೈಪರೀತ್ಯ ಉಂಟಾಗಿ ಆಗಾಗ್ಗೆ ಮಳೆ ಸುರಿಯುತ್ತಿದೆ.
ದಕ್ಷಿಣ ಒಳನಾಡು ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ದಿನವಿಡೀ ಮೋಡ ಕವಿದ ವಾತಾವರಣ ಇರುತ್ತದೆ. ಇದರಿಂದ ಗಿಡಗಳು ಮುರುಟುವ ಸಂಭವ ಹೆಚ್ಚು. ಹುಳು ಬಾಧೆಯೂ ಕಾಣಿಸಬಹುದು. ಕಾಯಿಗಳು ನಿರೀಕ್ಷಿತ ಗಾತ್ರಕ್ಕೆ ಬಲಿಯಲಾರವು ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಗೆಯೇ ದಕ್ಷಿಣ ಕನ್ನಡ, ಮಲೆನಾಡು ಭಾಗಗಳಲ್ಲಿ ಅಕಾಲಿಕ ಮಳೆಯಿಂದಾಗಿ ಅಡಿಕೆ ಫಸಲು ನಾಶವಾಗಿದೆ, ಸರಿಯಾಗಿ ಬಿಸಿಲು ಸಿಗದೆ ಅಡಿಕೆಗೆ ಹುಳು ಹಿಡಿದಿದೆ.
ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರದಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ 25 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.