ಕರ್ನಾಟಕ; ನವೆಂಬರ್ 23ರ ಬಳಿಕ ತಗ್ಗಲಿದೆ ಮಳೆ ಆರ್ಭಟ
ಬೆಂಗಳೂರು, ನವೆಂಬರ್ 21; ವಾಯುಭಾರ ಕುಸಿತದ ಪರಿಣಾಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ ನವೆಂಬರ್ 23ರ ಬಳಿಕ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಶನಿವಾರ ಬೆಂಗಳೂರು ನಗರದಲ್ಲಿ ಮಳೆ ಬಿಡುವು ನೀಡಿತ್ತು.
ವಾಯುಭಾರ ಕುಸಿತ ದುರ್ಬಲಗೊಂಡಿದೆ. ಆದರೆ ಮೇಲ್ಮೈ ಸುಳಿಗಾಳಿ ಸಕ್ರಿಯವಾಗಿದೆ. ಆದ್ದರಿಂದ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾನುವಾರವೂ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಬಿಜೆಪಿಗೆ ಮಳೆ ಪರಿಹಾರಕ್ಕಿಂತ ಚುನಾವಣೆ ಮುಖ್ಯವಾಗಿದೆ: ಕುಮಾರಸ್ವಾಮಿ
ಮೇಲ್ಮೈ ಸುಳಿಗಾಳಿಯ ತೀವ್ರತೆ ಸಹ ತಗ್ಗುವುದರಿಂದ ಮುಂದಿನ ಎರಡು ದಿನಗಳ ಕಾಲ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ. ನವೆಂಬರ್ 23ರ ಬಳಿಕ ಉತ್ತರ ಒಳನಾಡಿನಲ್ಲಿ ಮಳೆ ಕಡಿಮೆಯಾಗಲಿದ್ದು, ದಕ್ಷಿಣ ಒಳನಾಡಿನ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ.
ದಾವಣಗೆರೆ ಜಿಲ್ಲೆಯಲ್ಲಿ ಮಳೆ ನಿಂತರೂ, ನಿಲ್ಲದ ರೈತರ ಕಣ್ಣೀರು!
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾನುವಾರ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.
ಮಂಚನಬೆಲೆ ಜಲಾಶಯದಿಂದ ನೀರು ಬಿಡುಗಡೆ; ನದಿ ಪಾತ್ರದ ಜನರಿಗೆ ಎಚ್ಚರಿಕೆ

ವಿವಿಧ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ
ಭಾನುವಾರ ತುಮಕೂರು, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ದಾವಣಗೆರೆ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ. ಕೆಲವು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದ್ದು, ಇನ್ನೂ ಕೆಲವು ಕಡೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗಾಳಿಯ ವೇಗ ಪ್ರತಿ ಗಂಟೆಗೆ 40-50 ಕಿ. ಮೀ. ಇರಲಿದ್ದು, ಅದು 60 ಕಿ. ಮೀ. ತನಕ ಸಹ ತಲುಪುವ ನಿರೀಕ್ಷೆ ಇದೆ. ಇದರಿಂದಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರಲ್ಲೂ ಮಳೆ
ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ನವೆಂಬರ್ 23ರ ತನಕ ಸಹ ಮಳೆ ಮುಂದುವರೆಯಲಿದೆ. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಈಗಾಗಲೇ ಮಳೆ ಅಪಾರವಾದ ಹಾನಿಯನ್ನು ಉಂಟು ಮಾಡಿದೆ.
ಶನಿವಾರ ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಸಂಜೆ ಕೆಲವು ಬಡಾವಣೆಗಳಲ್ಲಿ ಜಿಟಿ-ಜಿಟಿ ಮಳೆಯಾಗಿದೆ. ಉಳಿದಂತೆ ನಗರದಲ್ಲಿ ಶನಿವಾರ ಮಳೆ ಬಿಡುವು ನೀಡಿತ್ತು. ಶುಕ್ರವಾರ ಮತ್ತು ಶನಿವಾರ ನಗರದಲ್ಲಿ ಮಳೆ ಕಡಿಮೆ ಆಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಎಲ್ಲಿ, ಎಷ್ಟು ಮಳೆಯಾಗಿದೆ?
ಶನಿವಾರ ಹಾವೇರಿ ಜಿಲ್ಲೆಯ ಕೆಲವರಕೊಪ್ಪದಲ್ಲಿ 19 ಸೆಂ. ಮೀ. ಮಳೆಯಾಗಿದೆ. ಮಂಗಳೂರು ಮತ್ತು ಕಡೂರು 16, ಹಾನಗಲ್ 13, ಹಿರೇಕೆರೂರು 9, ಶಿಢ್ಲಘಟ್ಟ 8, ಮದ್ದೂರು 7, ಮಧುಗಿರಿ 6, ಕೋಲಾರ 5, ಚಿತ್ರದುರ್ಗ, ದಾವಣಗೆರೆ ಮತ್ತು ಕಂಪ್ಲಿ 4 ಸೆಂ. ಮೀ. ಮಳೆಯಾಗಿದೆ.
ರಾಮನಗರ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಪ್ರಾಣ ಹಾನಿ, ಮನೆ ಹಾನಿ ಹಾಗೂ ಬೆಳೆ ಹಾನಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಗೂ ಜನ ಪ್ರತಿನಿಧಿಗಳಿಂದ ದೂರು ಸ್ವೀಕರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 24*7 ಕಂಟ್ರೋಲ್ ರೂಂ ಆರಂಭ ಮಾಡಲಾಗಿದೆ. ದೂರವಾಣಿ ಸಂಖ್ಯೆ 080-27271029ಗೆ ಕರೆ ಮಾಡಬಹುದಾಗಿದೆ.

ವಿವಿಧ ರಾಜ್ಯಗಳಲ್ಲಿಯೂ ಮಳೆ
ವಾಯುಭಾರ ಕುಸಿತದ ಹಿನ್ನಲೆಯಲ್ಲಿ ಕರ್ನಾಟಕ ಮಾತ್ರವಲ್ಲ ತಮಿಳುನಾಡು, ಆಂಧ್ರ ಪ್ರದೇಶ, ಕೇರಳದಲ್ಲಿ ಸಹ ಮಳೆಯಾಗುತ್ತಿದೆ. ಗೋವಾ, ಮಹಾರಾಷ್ಟ್ರದಲ್ಲಿಯೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆ ನಷ್ಟವಾಗಿದೆ. ಅಡಿಕೆ, ಭತ್ತ, ಜೋಳ. ತರಕಾರಿ ಬೆಳೆಗೆ ಹಾನಿಯಾಗಿದೆ. ಬೆಂಗಳೂರು ನಗರದಲ್ಲಿ ತರಕಾರಿಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಕೋಲಾರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಟೊಮೆಟೋ ಬೆಳೆಗೆ ಹಾನಿಯಾದ್ದು, ಏಷ್ಯಾದ 2ನೇ ಅತಿ ದೊಡ್ಡ ಮಾರುಕಟ್ಟೆಯಲ್ಲಿ ಟೊಮೆಟೋ ಕೊರತೆ ಎದುರಾಗಿದೆ.