ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಜ್ಞಾನ ಸಂಪತ್ತು ಬೆಳೆಯಬೇಕು : ಸಿದ್ದರಾಮಯ್ಯ

By Prasad
|
Google Oneindia Kannada News

ಕನ್ನಡ ಭಾಷೆಯು ಬೆಳೆಯ ಬೇಕಾದರೆ ಬೇರೆ ಬೇರೆ ಜ್ಞಾನ ಶಿಸ್ತುಗಳಲ್ಲಿ ತೊಡಗಿಸಿಕೊಂಡ ಪಂಡಿತರು, ವಿದ್ವಾಂಸರು ಕನ್ನಡ ಭಾಷೆಯಲ್ಲಿ ಬರೆಯುವ ಇಚ್ಛಾ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಜ್ಞಾನಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಪರಿಭಾಷೆಯನ್ನು ಕಂಡುಕೊಳ್ಳಬೇಕು. ಕನ್ನಡದ ಜ್ಞಾನ ಸಂಪತ್ತು, ಶಬ್ದ ಸಂಪತ್ತು ಬೆಳೆಯಬೇಕು.

ವಿಜ್ಞಾನ-ತಂತ್ರಜ್ಞಾನವನ್ನು ಕನ್ನಡದಲ್ಲಿ ಹೇಳಲಿಕ್ಕೆ ಬರುವುದಿಲ್ಲ ಎನ್ನುವುದು ಸುಳ್ಳು. ಕನ್ನಡ ಭಾಷೆಯು ಅಪಾರ ಚೈತನ್ಯವುಳ್ಳ ಭಾಷೆ. ಕನ್ನಡದ ಮೂಲಕ ಕಲಿತೂ ಶ್ರೇಷ್ಠ ವಿಜ್ಞಾನಿಯಾಗಬಹುದು ಎನ್ನುವುದಕ್ಕೆ ನಮ್ಮವರೇ ಉದಾಹರಣೆಗಳಾಗಿ ಇದ್ದಾರೆ. ನಾನೂ ಕೂಡಾ ಕನ್ನಡ ಮಾಧ್ಯಮದಲ್ಲಿಯೇ ವ್ಯಾಸಂಗ ಮಾಡಿದವನು.[82ನೇ 'ರಾಯಚೂರು' ಕನ್ನಡ ಸಾಹಿತ್ಯ ಸಮ್ಮೇಳನದ ಚಿತ್ರಸಂಪುಟ]

Raichur Kannada Sahitya Sammelana : Siddaramaiah Speech Part 2

ಈ ಹಿನ್ನೆಲೆಯಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ನೀಡಿ ಬೇರೆ ಭಾಷೆಗಳ ಸಾಹಿತ್ಯವೂ ಸೇರಿದಂತೆ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಕನ್ನಡಕ್ಕೆ ಪರಿಚಯಿಸುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಈ ಸಾಹಿತ್ಯ ಸಮ್ಮೇಳನಕ್ಕೆ ನಮ್ಮ ಸರ್ಕಾರದಿಂದ ಸಾಹಿತ್ಯಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಕೊಡಬಲ್ಲ ದೊಡ್ಡ ಕೊಡುಗೆಯೊಂದು ಸಿದ್ಧಗೊಳ್ಳುತ್ತಿದೆ. ಹೈದರಾಬಾದ್-ಕರ್ನಾಟಕದ ಗ್ರಾಮ ಜಗತ್ತಿನ ಜೀವ ಸಮಾನತಾ ದೃಷ್ಟಿಕೋನವನ್ನು ಬಿಂಬಿಸಿದ ತತ್ವಪದ ಸಾಹಿತ್ಯದ ಸಂಗ್ರಹ ಮತ್ತು ಪ್ರಕಟಣೆಯ ಯೋಜನೆಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಹಮ್ಮಿಕೊಳ್ಳಲಾಗಿದೆ.

Raichur Kannada Sahitya Sammelana : Siddaramaiah Speech Part 2

ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಇಡೀ ಕರ್ನಾಟಕದಾದ್ಯಾಂತ ಇರುವ ತತ್ವ ಪದಗಳನ್ನು ಸಂಗ್ರಹಿಸಿ, ಒಂದೊಂದು 500 ಪುಟಗಳವರೆಗೆ ಇರುವಂತಹ 50 ಸಂಪುಟಗಳನ್ನು ಮುದ್ರಿಸುವ ಕಾರ್ಯ ಪ್ರಗತಿಯಲ್ಲಿದೆ.

ರಾಜ್ಯದಲ್ಲಿ ಭೀಕರ ಬರ

ರಾಜ್ಯವು ಸತತವಾಗಿ ಮೂರನೇ ಬಾರಿಗೆ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ರಾಜ್ಯದ 26 ಜಿಲ್ಲೆಗಳ 139 ತಾಲ್ಲೂಕುಗಳು ಈ ಬಾರಿ ಬರ-ಪೀಡಿತ ಎಂದು ಘೋಷಿತವಾಗಿವೆ. ಬರ ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ 17,193 ಕೋಟಿ ರೂ ನಷ್ಟ ಸಂಭವಿಸಿದೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿಯ ಮಾರ್ಗಸೂಚಿಗಳಂತೆ 4702.54 ಕೋಟಿ ರೂ ನೆರವು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರದ ತಂಡ ಬರಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಅಂತೆಯೇ, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿದೆ.

Raichur Kannada Sahitya Sammelana : Siddaramaiah Speech Part 2

ಬರ ಪರಿಸ್ಥಿಯ ಸಂದರ್ಭದಲ್ಲಿ ತಿನ್ನಲು ಅನ್ನವಿಲ್ಲದೆ ಸಾವು ನೋವುಗಳು ಸಂಭವಿಸುವುದು ಸಾಮಾನ್ಯ. ಬರದ ಬವಣೆಯಿಂದ ಬಳಲುತ್ತಿರುವ ನೆರೆ ರಾಜ್ಯಗಳಲ್ಲಿ ಸಾವು-ನೋವುಗಳು ಸಂಭವಿಸಿವೆ. ಆದರೆ, ನಮ್ಮ ರಾಜ್ಯದಲ್ಲಿ ಇಂತಹ ಒಂದು ಕಹಿ ಘಟನೆಯೂ ಸಂಭವಿಸಿಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ. ಇದು ನಮ್ಮ ಸರ್ಕಾರದ ಅನ್ನಭಾಗ್ಯ ಯೋಜನೆಯ ಯಶಸ್ಸಿಗೆ ಉತ್ತಮ ಉದಾಹರಣೆಯಾಗಿದೆ.

ಪ್ರತ್ಯೇಕ ರಾಜ್ಯ : ಕೆಲವರ ಹತಾಶ ಪ್ರಯತ್ನ

ರಾಜಕೀಯ ಸ್ವಾರ್ಥಕ್ಕಾಗಿ ನೆಲ, ಜಲ, ಭಾಷೆಗಳನ್ನು ದುರ್ಬಳಕೆ ಮಾಡುವುದು ಜನ ವಿರೋಧಿಯಾದುದು. ನಮ್ಮಲ್ಲಿಯೂ ಆಗಾಗ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತಿರುತ್ತವೆ. ಇದು ಪ್ರಚಾರದ ಮೂಲಕ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕೆಲವರು ಮಾಡುತ್ತಿರುವ ಹತಾಶ ಪ್ರಯತ್ನ ಅಷ್ಟೆ. ನಾಡು-ನುಡಿಯನ್ನು ಪ್ರೀತಿಸುವ ಯಾರೂ ಇಂತಹ ಹೊಣೆಗೇಡಿ ಕೆಲಸ ಮಾಡುವುದಿಲ್ಲ. ಉತ್ತರ, ದಕ್ಷಿಣ, ಹೈದರಾಬಾದ್, ಮುಂಬೈ ಕರ್ನಾಟಕಗಳೆನ್ನುವುದು ನಮ್ಮ ಅನುಕೂಲಕ್ಕಾಗಿ ಕರೆಯುವ ಹೆಸರುಗಳಷ್ಟೇ. ನಮ್ಮಲ್ಲಿರುವುದು ಒಂದೇ ಕರ್ನಾಟಕ. ಅದು ಅಖಂಡ ಕರ್ನಾಟಕ.

Raichur Kannada Sahitya Sammelana : Siddaramaiah Speech Part 2

ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮಾನತೆ ದೂರ ಮಾಡಿ ಹೈದರಾಬಾದ್ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಬೇಕೆಂಬ ಸದುದ್ದೇಶದಿಂದಲೇ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಪರಿಚ್ಛೇಧ 371(ಜೆ) ಅಡಿಯಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರಕಿಸಿ ಕೊಡುವ ಶ್ಲಾಘನೀಯ ಕಾರ್ಯವನ್ನು ನಮ್ಮ ಸರ್ಕಾರ ಮಾಡಿದೆ. ಇದರ ಭಾಗವಾಗಿಯೇ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕೂಡಾ ರಚನೆಯಾಗಿದೆ.

Raichur Kannada Sahitya Sammelana : Siddaramaiah Speech Part 2

ಕನ್ನಡ ಅಧಿಕೃತ ಭಾಷೆಯಾಗಿ ಬಳಕೆಯಾಗಬೇಕು ಎನ್ನುವುದು ನಿಜ. ಅದೇ ರೀತಿ ಅದು ನಮ್ಮ ನಿತ್ಯಜೀವನದಲ್ಲಿ ವ್ಯವಹಾರದ ಭಾಷೆಯೂ ಆಗಬೇಕು. ಆಗ ಮಾತ್ರ ನಮ್ಮ ಕನ್ನಡ ಭಾಷೆ ಉಳಿಯುತ್ತದೆ, ಬೆಳೆಯುತ್ತದೆ. ನಮ್ಮ ಓದು, ಬರಹ, ವ್ಯವಹಾರ ಎಲ್ಲವೂ ಕನ್ನಡದಲ್ಲಿಯೇ ಇರಲಿ. ಇಂತಹ ಸಮ್ಮೇಳನಗಳು ನಮ್ಮ ಎದೆಯೊಳಗಿನ ಕನ್ನಡದ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಲು ನೆರವಾಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಜೈ ಹಿಂದ್! ಜೈ ಕರ್ನಾಟಕ!

English summary
82nd All India Kannada Literary Conference in Raichur. Inaugural speech by chief minister of Karnataka Siddaramaiah. Siddaramaiah has said, all the facilities shall be provided to Hyderabad Karnataka and no one should talk about bifurcation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X