ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಸ್ಸೈ ಬಂಡೆ ಸಾವಿಗೆ ಶಿಂದೆ ಆದೇಶ ಮುಳುವಾಯಿತೇ?

By Srinath
|
Google Oneindia Kannada News

ಗುಲ್ಬರ್ಗ, ಜ.18: ತಾಜಾ ವರದಿಗಳ ಪ್ರಕಾರ ಪಿಎಸ್ಸೈ ಮಲ್ಲಿಕಾರ್ಜುನ ಬಂಡೆ ಸಾವಿನ ಪ್ರಕರಣದ ನಂತರ ಈಶಾನ್ಯ ವಲಯ ಐಜಿಪಿ ವಜೀರ್‌ ಅಹಮದ್‌ ಅವರನ್ನು ಎತ್ತಂಗಡಿ ಮಾಡಲಾಗಿದೆ. ಅವರನ್ನು ಪೊಲೀಶ್ ತರಬೇತಿ ಅಕಾಡೆಮಿಗೆ ವರ್ಗಾಯಿಸಲಾಗಿದೆ. ಇದೇ ವೇಳೆ ಪಿಎಸ್ಸೈ ಬಂಡೆ ಸಾವಿನ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಲಾಗಿದೆ.

Gulbarga PSI Mallikarjun Bande death- IGP Wazir Ahmed responsible
ಬೆಳಗಿನ ಸುದ್ದಿ: ಪಿಎಸ್ಸೈ ಮಲ್ಲಿಕಾರ್ಜುನ ಬಂಡೆ ಸಾವು ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಭಾರಿ ವಿವಾದ/ಚರ್ಚೆಗೆ ಗ್ರಾಸವಾಗುತ್ತಿದೆ. ಬಂಡೆ ಸಾವಿಗೆ ಈಶಾನ್ಯ ವಲಯ ಐಜಿಪಿ ವಜೀರ್‌ ಅಹಮದ್‌ ಅವರೇ ಕಾರಣವೆಂದು ಮಲ್ಲಿಕಾರ್ಜುನರ ಪತ್ನಿ ಮಲ್ಲಮ್ಮ ಅವರು ನೇರವಾಗಿ ಆರೋಪಿಸಿದ್ದರೆ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ, ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟೆಣ್ಣವರ್ ಸೇರಿದಂತೆ ಅನೇಕರು ಆ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಪಿಎಸ್ಸೈ ಬಂಡೆ ಸಾವಿಗೆ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಅವರು ಇತ್ತೀಚೆಗೆ ರಾಜ್ಯ ಸರಕಾರಗಳಿಗೆ ನೀಡಿದ್ದ ಆದೇಶವೂ ಮುಳುವಾಯಿತಾ? ಎಂಬ ಅನುಮಾನ ವ್ಯಕ್ತವಾಗಿದೆ. ಅಲ್ಪಸಂಖ್ಯಾತರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳುವಾಗ ಎರಡೆರಡು ಬಾರಿ ಯೋಚಿಸಿ, ಕ್ರಮ ಕೈಗೊಳ್ಳಿ ಎಂಬರ್ಥದ ಸಂದೇಶವನ್ನು ಕೇಂದ್ರ ಗೃಹ ಸಚಿವರು ಇತ್ತೀಚೆಗೆ ಎರಡೆರಡು ಬಾರಿ ರಾಜ್ಯ ಸರಕಾರಗಳಿಗೆ ನೀಡಿದ್ದರು.

ಇದನ್ನು ಶಿರಸಾವಹಿಸಿ ಪಾಲಿಸಿದ ಐಜಿಪಿ ವಜೀರ್‌ ಅಹಮದ್‌ ಅವರು ತುಸು ಹೆಚ್ಚೇ ಭ್ರಾತೃಪ್ರೇಮದೊಂದಿಗೆ ಪಾತಕಿ ಮುನ್ನಾನನ್ನು ರಕ್ಷಿಸಲು ಹೋಗಿದ್ದಾರೆ. ಆ ಕಾರ್ಯದಲ್ಲಿ ತಮ್ಮ ಇಲಾಖೆಯ ಪೊಲೀಸರಿಗೆ ರಕ್ಷಣೆ ನೀಡುವುದರ ಬಗ್ಗೆ ಯೋಚಿಸದೆ ಅನಾಹುತವೆಸಗಿದ್ದಾರೆ ಎಂದು ಗಿರೀಶ್ ಮಟ್ಟೆಣ್ಣವರ್ ಇಂದಿನ ಉದಯವಾಣಿ ಪತ್ರಿಕೆಯಲ್ಲಿ ಬರೆದಿದ್ದಾರೆ. ( ಮುಸ್ಲಿಂ ಯುವಕರನ್ನು ಬಂಧಿಸಬೇಡಿ: ಶಿಂದೆ ಫರ್ಮಾನು )

ತಮ್ಮ ಪೊಲೀಸ್ ಬುದ್ಧಿಯಿಂದ ಸಾಂದರ್ಭಿಕ ಸಾಕ್ಷ್ಯಗಳನ್ನೆಲ್ಲಾ ಎದುರಿಗಿಟ್ಟುಕೊಂಡು ವಿಶ್ಲೇಷಣೆ ಮಾಡಿರುವ ಗಿರೀಶ್ ಮಟ್ಟೆಣ್ಣವರ್ ಅವರು ಪಿಎಸ್ಸೈ ಮಲ್ಲಿಕಾರ್ಜುನ ಬಂಡೆ ಸಾವಿಗೆ ಸರಕಾರ/ ಇಲಾಖೆಯ ವೈಫ್ಯವೇ ಕಾರಣ ಎಂದು ಅರ್ಥೈಸಿದ್ದಾರೆ.

ವಜೀರ್‌ ಅಹಮದ್‌ ಅವರ ನಡುವಳಿಕೆ ಪ್ರಶ್ನಾರ್ಹವಾಗಿದೆ. ಹತ್ಯೆಯಾದ ಮುನ್ನಾಗೆ ಭೂಗತ ಪಾತಕಿಗಳ ಸಂಪರ್ಕವಿದೆ ಎಂಬ ಮಾಹಿತಿಯಿದ್ದರೂ ಸರಿಯಾದ ಪ್ಲಾನ್ ಹಾಕಿಕೊಳ್ಳದೆ, ಕಡಿಮೆ ಸಿಬ್ಬಂದಿಯನ್ನು ಕಳುಹಿಸಿದ್ದು ಯಾಕೆ ಎಂಬ ಪ್ರಶ್ನೆ ಉದ್ಭವವಾಗಿದೆ. ಹೀಗಾಗಿ ವಜೀರ್‌ ಮೊಬೈಲ್‌ ವಶಕ್ಕೆ ಪಡೆದುಕೊಂಡು ಅವರು ಯಾರೊಂದಿಗೆ ಸಂಪರ್ಕ ಇಟ್ಟಕೊಂಡಿದ್ದರು ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಸಹ ಆಗ್ರಹಿಸಿದ್ದಾರೆ.

ವಜೀರ್‌ ಅಹಮದ್‌ ಐಜಿಪಿ ಆಗಿರುವವರೆಗೂ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಗುಲ್ಬರ್ಗಾದ ಬಹುತೇಕ ಪೊಲೀಸರು ಸಹ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಕ್ಷಣವೇ ಅವರನ್ನು ವಾಪಸ್‌ ಕರೆಸಿಕೊಂಡು ಇಡೀ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಗಳು ಹೆಚ್ಚಾಗುತ್ತಿವೆ.

'ಒಂದು ವೇಳೆ ಪಿಎಸ್ಸೈ ಮಲ್ಲಿಕಾರ್ಜುನ ಬಂಡೆ ಬದುಕುಳಿದಿದ್ದರೆ ಮೊದಲು ಮಾನವ ಹಕ್ಕು ಹೋರಾಟಗಾರರು ಹುರಿದು ಮುಕ್ಕುತ್ತಿದ್ದರು. ಸಾಲು ಸಾಲು ವಿಚಾರಣೆಗಳು ಆ ತಂಡದ ಬೆನ್ನುಹತ್ತುತ್ತಿದ್ದವು. ಕೋಮು ಸೌಹಾರ್ದ ವೇದಿಕೆಯವರು, ಬುದ್ಧಿಜೀವಿಗಳು ಗುಲ್ಬರ್ಗ ಪೊಲೀಸರಿಗೆ ಕೋಮುವಾದಿ ಪಟ್ಟ ಕಟ್ಟುತ್ತಿದ್ದರು. ಆದರೆ ಈಗ ಇವರು ಯಾರೂ ಬಲಿಯಾದ ಅಧಿಕಾರಿಯ ಪರ ಒಂದೇ ಒಂದು ಮಾತನಾಡುತ್ತಿಲ್ಲ' ಎಂದು ಗಿರೀಶ್ ಮಟ್ಟೆಣ್ಣವರ್ ವಿಷಾದಿಸಿದ್ದಾರೆ.

English summary
Girish Mattannavar, a Sub-Inspector of Police who was suspended for allegedly planting crude explosives in the Legislators' Home in Bangalore, alleged that IGP Wazir Ahmed is responsible for Gulbarga PSI Mallikarjun Bande death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X