ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹೃದಯ ಕವಿವರ್ಯ ನಿಸಾರ್ ರಾಷ್ಟ್ರಕವಿಯಾಗಲಿ

By ರಾಘವೇಂದ್ರ ಅಡಿಗ
|
Google Oneindia Kannada News

ತಮ್ಮ ಹಲವು ಕೃತಿಗಳಿಗೆ ರಾಜ್ಯಸಾಹಿತ್ಯ ಅಕಾಡೆಮಿಯ ಬಹುಮಾನಗಳನ್ನು ನಿಸಾರ್ ಅಹಮದ್ ಪಡೆದಿದ್ದಾರೆ. 'ಹಕ್ಕಿಗಳು' ಎಂಬ ಕೃತಿಗೆ 1978ರಲ್ಲಿ, 'ಇದು ಬರಿ ಬೆಡಗಲ್ಲೊ ಅಣ್ಣ' ಎಂಬ ಕೃತಿಗೆ 1981ರಲ್ಲಿ 'ಅನಾಮಿಕ ಆಂಗ್ಲರು' ಕೃತಿಗೆ 1982ರಲ್ಲಿ, 'ಹಿರಿಯರು ಹರಸಿದ ಹೆದ್ದಾರಿ' ಕೃತಿಗೆ 1992ರಲ್ಲಿ ಅಕಾಡೆಮಿ ಪ್ರಶಸ್ತಿಗಳು ಬಂದಿವೆ.

1981ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1996ರಲ್ಲಿ ಕುವೆಂಪು ಹೆಸರಿನ ವಿಶ್ವಮಾನವ ಪ್ರಶಸ್ತಿ, 1992ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, 1993ರಲ್ಲಿ ಬೆಂಗಳೂರು ಮಹಾನಗರಪಾಲಿಕೆಯ ಕೆಂಪೇಗೌಡ ಪ್ರಶಸ್ತಿ, 2003ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪುರಸ್ಕಾರ, 2006 ರ ಅರಸು ಪ್ರಶಸ್ತಿ, 2006 ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ,'73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ'ರಾಗಿ ಆಯ್ಕೆಯಾಗಿದ್ದ ನಿಸಾರ್ ರವರಿಗೆ 2012ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ 2014ರಲ್ಲಿ ಮಂಜೇಶ್ವರ ಗೋವಿಂದ ಪೈ ಪ್ರಶಸ್ತಿ ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ - ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದ ಹಿರಿಮೆ ಇವರದು.

ಇದಲ್ಲದೆ ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಸಾಂಸ್ಕೃತಿಕ ಸಂಘಟನೆಗಳು ಹಾಗೂ ದುಬೈ, ಅಬುದಾಬಿ, ಕುವೈತ್, ಇಂಗ್ಲೆಂಡ್, ಸಿಂಗಾಪುರ ಮೊದಲಾದೆಡೆಗಳ ಕನ್ನಡ ಬಳಗಗಳು ಇವರನ್ನು ಸಮ್ಮಾನಿಸಿವೆ.

1967 ಮತ್ತು 1985ರಲ್ಲಿ ಎರಡು ಬಾರಿ ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಕನ್ನಡವನ್ನು ಪ್ರತಿನಿಧಿಸಿದ ಹಿರಿಮೆ ಇವರಿಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ದುಡಿದಿದ್ದಾರೆ.

ಡಾ. ಕೆ. ಎಸ್. ನಿಸಾರ್ ಅಹಮದ್ ಅವರ ಕವಿತೆಗಳು ಇಂಗ್ಲೀಷ್, ಹಿಂದಿ, ಉರ್ದು, ತೆಲುಗು, ಮಲಯಾಳಂ, ಮರಾಠಿ, ತಮಿಳು ಹಾಗೂ ಚೀನಿ ಭಾಷೆಗಳಿಗೆ ಅನುವಾದಿತವಾಗಿವೆ. ಇವರ ಬದುಕು ಬರವಣಿಗೆಗಳ ಕುರಿತು ಬೆಂಗಳೂರು ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯಗಳಲ್ಲಿ ಪಿಎಚ್. ಡಿ. ಮಟ್ಟದ ಅಧ್ಯಯನಗಳು ನಡೆದು ಪುಸ್ತಕಗಳು ಹೊರಬಂದಿವೆ.

ಕರ್ನಾಟಕ ಸರಕಾರವು ಇವರನ್ನು 2011ರಲ್ಲಿ ರಾಜ್ಯಮಟ್ಟದ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯಕಾರ ಸಮಿತಿಗೆ ಸದಸ್ಯರಾಗಿ ನೇಮಕ ಮಾಡಿದೆ. 2006ರಲ್ಲಿ ಡಾ. ಕೆ. ಎಸ್. ನಿಸಾರ್ ಅಹಮದ್ ಅವರಿಗೆ 'ನಿಸಾರ್ ನಿಮಗಿದೋ ನಮನ' ಎಂಬ ಬೃಹತ್ ಅಭಿನಂದನ ಗ್ರಂಥವನ್ನು ಸಮರ್ಪಿಸಿ ಗೌರವಿಸಲಾಯಿತು.

Prof KS Nisar Ahmed, poet, critic and writer birthday Special

ಅವರ ಬಗೆಗೆ ಸಾಕ್ಷ್ಯಚಿತ್ರ, ಸಂದರ್ಶನ, ಕವನವಾಚನ ಮೊದಲಾದ ಸಿ.ಡಿಗಳು ಹೊರಬಂದಿವೆ. 'ಕುರಿಗಳು ಸಾರ್ ಕುರಿಗಳು' ಎಂಬ ಕವಿತೆಯ ಮೂಲಕ ಸಾಹಿತ್ಯಲೋಕಕ್ಕೆ ಆತ್ಮೀಯರಾದ ಡಾ. ಕೆ. ಎಸ್. ನಿಸಾರ್ ಅಹಮದ್ ಅವರು ಇಂದೂ ಆ ಜನಪ್ರಿಯತೆಯನ್ನೂ ವೈಚಾರಿಕತೆಯನ್ನೂ ಉಳಿಸಿಕೊಂಡು ಸಾಹಿತ್ಯಕ್ಷೇತ್ರದಲ್ಲಿ ಸಕ್ರಿಯರಾಗಿರುವುದು ನಮಗೆಲ್ಲ ಸಂತೋಷದ ಸಂಗತಿ.

ಇಷ್ಟೆಲ್ಲಾ ಪ್ರಶಸ್ತಿ, ಗೌರವಗಳೊಂದಿಗೆ ಕನ್ನಡಿಗರ ಹೃದಯ ಗೆದ್ದಿರುವ ಇವರು ಒಬ್ಬ ವಿವಾದಾತೀತ ವ್ಯಕ್ತಿ. ಕನ್ನಡ ಸಾಹಿತ್ಯ ಲೋಕದಲ್ಲಿ ಜಾತಿಯ, ರಾಜಕಾರಣದ, ಪ್ರಾದೇಶಿಕತೆಯ ಲಾಬಿಗಳೇ ರಾರಾಜಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಯಾವ ಲಾಬಿಗೂ ಇಳಿಯದೆ ಸ್ವಯಂ ತೇಜೋಮಾನರಾಗಿರುವ ಯುಗದ ಕವಿ ಯಾಗಿದ್ದಾರೆ.

ನಿಸಾರ್ ಅಹ್ಮದ್ ಬರೆದಿರುವ ಬೆಣ್ಣೆ ಕದ್ದ ಹಾಡು ಹಾಗೂ ನೃತ್ಯ

ಅವರೊಮ್ಮೆ ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಜೊತೆಯಲ್ಲಿ ತಮ್ಮ ಪತ್ನಿಯನ್ನೂ ಕರೆದೊಯ್ಯಬೇಕಿತ್ತು. ಸರಿ ಶುರುವಾಯಿತು ಅವರ ಪತ್ನಿಯ ಮೇಕಪ್ಪು. ವಸ್ತ್ರಾಲಂಕಾರ, ಪ್ರಸಾಧನ, ಒಡವೆಗಳ ಭೂಷಣ ಎಲ್ಲವೂ ಆದವು. ನಮ್ಮ ಕವಿಯೂ ಪತ್ನಿಯ ಸರ್ವಾಲಂಕಾರ ಸೊಬಗನ್ನು ಕಣ್ತಣಿಯೆ ನೋಡಿ ಹೆಮ್ಮೆಪಟ್ಟುಕೊಂಡರು. ಇನ್ನೇನು ಹೊರಡಬೇಕು ಆಗ ಅವರ ಪತ್ನಿ ಬುರ್ಖಾ ತೊಟ್ಟುಕೊಂಡರಂತೆ.

ಎಲ್ಲ ಅಲಂಕಾರವನ್ನೂ ಆ ಬುರ್ಖಾ ಮರೆ ಮಾಡಿದ ಬಗೆಯನ್ನು ಕಂಡು ವಿಷಾದಿಸುತ್ತಾ ಅವರು ಕವನ ಬರೆದರು. ನವಿರು ಹಾಸ್ಯ ಮತ್ತು ವಿಚಾರವಂತಿಕೆಯಿಂದ ಕೂಡಿದ ಆ ಕವನಕ್ಕೆ ಮುಸ್ಲಿಂ ಬಾಂಧವರು ಕೋಪಗೊಳ್ಳಲಿಲ್ಲ, ಫತ್ವಾ ಹೊರಡಿಸಲಿಲ್ಲ. ಇದು ಕವಿ ಕೆ ಎಸ್ ನಿಸಾರ್ ಅಹಮದರ ಸರ್ವವಂದ್ಯ ವರ್ಚಸ್ಸಿಗೆ ಸಾಕ್ಷಿ.

ಇಂತಹಾ ಸಹೃದಯ ಕವಿವರ್ಯರು ಇಂದು ತಮ್ಮ 79ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಕನ್ನಡಕ್ಕೆ ಇನ್ನೊಬ್ಬ ರಾಷ್ಟ್ರಕವಿ ಆಯ್ಕೆ ಪ್ರಕ್ರಿಯೆಯೂ ನಡೆಯುತ್ತಿದ್ದು, ನಮ್ಮೆಲ್ಲರ ಪ್ರೀತಿಯ ನಿಸಾರ್ ಅಹಮದ್ ಮುಂದಿನ ರಾಷ್ಟ್ರಕವಿಯಾಗಲೆದು ಹಾರೈಸೋಣ...

English summary
Prof KS Nisar Ahmed, poet, critic and writer in Kannada literature world is celebrating his 79th birthday today. Here is a special article about him by citizen journalist Raghavendra Adiga. His fans desire that he should get 'Rashtrakavi' award soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X