ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಟ್ಟುಹಬ್ಬ ವಿಶೇಷ : ನಿತ್ಯೋತ್ಸವ ಕವಿ ನಿಸಾರ್ @ 79

By ರಾಘವೇಂದ್ರ ಅಡಿಗ
|
Google Oneindia Kannada News

ನಿತ್ಯೋತ್ಸವ ಖ್ಯಾತಿಯ ಕವಿ ನಿಸಾರ್ ಅಹಮದ್ ಫೆ.5ರಂದು ಎಂಭತ್ತಕ್ಕೆ ಕಾಲಿರಿಸುತ್ತಿದ್ದಾರೆ. ತಮ್ಮ ಸರಳತೆ, ಸಾಹಿತ್ಯ ಪ್ರೌಡಿಮೆ, ಕವಿತೆಗಳಿಂದ ಕನ್ನಡಿಗರ ಮನೆಮಾತಾಗಿರುವ ಈ ಸಜ್ಜನ ಕವಿಯ ಜನುಮದಿನದಂದು ಈ ಸಮಯದಲ್ಲಿ ಕನ್ನಡಕ್ಕೆ ಇನ್ನೊಬ್ಬ ರಾಷ್ಟ್ರಕವಿ ಆಯ್ಕೆ ಪ್ರಕ್ರಿಯೆಯೂ ನಡೆಯುತ್ತಿದ್ದು, ನಮ್ಮೆಲ್ಲರ ಪ್ರೀತಿಯ ನಿಸಾರ್ ಅಹಮದ್ ಮುಂದಿನ ರಾಷ್ಟ್ರಕವಿಯಾಗಲೆಂದು ಹಾರೈಸೋಣ.......ಅವರ ದಶಕಗಳ ಸಾಹಿತ್ಯ ಯಾತ್ರೆಯ ಒಂದು ಕಿರು ಪರಿಚಯವನ್ನು ಮಾಡಿಕೊಳ್ಳೋಣ...

ಕರ್ನಾಟಕದಾದ್ಯಂತ ಕವಿಗಳಾಗಿ, ವಿಮರ್ಶಕರಾಗಿ ಮತ್ತು ವೈಚಾರಿಕ ಬರಹಗಾರರಾಗಿ ಪ್ರಸಿದ್ಧರಾದ ಪ್ರೊ. ಕೆ. ಎಸ್. ನಿಸಾರ್ ಅಹಮದ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನ ಹಳ್ಳಿಯಲ್ಲಿ 05-02-1936ರಂದು ಕೆ. ಎಸ್. ಹೈದರ್ ಮತ್ತು ಹಮೀದಾ ಬೇಗಂ ಅವರ ಪುತ್ರರಾಗಿ ಜನಿಸಿದರು.

ತಂದೆ ಸರಕಾರಿ ನೌಕರಿಯಲ್ಲಿದ್ದು ಕನ್ನಡ, ಇಂಗ್ಲಿಷ್, ಸಂಸ್ಕೃತ ಬಲ್ಲ ಸುಸಂಸ್ಕೃತರು. ನಿಸಾರರು ಪ್ರಾಥಮಿಕ, ಮಾಧ್ಯಮಿಕ ಶಾಲೆ ಓದಿದ್ದು ದೇವನಹಳ್ಳಿಯಲ್ಲಾದರೆ, ಪ್ರೌಢಶಾಲೆಗೆ ಹೊಸಕೋಟೆ ಹೈಸ್ಕೂಲು ಸೇರಿಕೊಂಡರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಭೂಗರ್ಭ ಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದರು.

ವೃತ್ತಿ ಬದುಕು : ಹೀಗೆ ಬೆಂಗಳೂರಿನಲ್ಲಿ ಭೂವಿಜ್ಞಾನದಲ್ಲಿ ಎಂ.ಎಸ್ಸಿ. ವರೆಗಿನ ಅಧ್ಯಯನವನ್ನು ಮುಗಿಸಿ 1958ರಲ್ಲಿ ಗುಲ್ಬರ್ಗದಲ್ಲಿ ಸಹಾಯಕ ಭೂವಿಜ್ಞಾನಿಯಾಗಿ ಸರಕಾರಿ ಸೇವೆಯನ್ನು ಆರಂಭಿಸಿದರು.

ಆದರೆ, ತಾನು ಮಾಡುತ್ತಿರುವ ಕೆಲಸ ಅವರಿಗೆ ತೃಪ್ತಿ, ಸಂತೋಷವನ್ನು ತಂದುಕೊಡಲಿಲ್ಲ. ಹೀಗಾಗಿ ಆ ಉದ್ಯೋಗವನ್ನು ತೊರೆದು, ಅಧ್ಯಾಪನ ವೃತ್ತಿಗೆ ಸೇರಿಕೊಂಡರು. ಬೆಂಗಳೂರು ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭ ಮಾಡಿದ ನಿಸಾರ್ ಅಹ್ಮದ್ ನಂತರದಲ್ಲಿ ಚಿತ್ರದುರ್ಗ, ಶಿವಮೊಗ್ಗ, ಬೆಂಗಳೂರು ಪುನಃ ಶಿವಮೊಗ್ಗ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಕಾಲೇಜಿನ ಪ್ರಾಧ್ಯಾಪಕರಾಗಿರುವಾಗ ಎನ್.ಸಿ.ಸಿ.ಯಲ್ಲಿ ಲೆಪ್ಟಿನೆಂಟ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವವೂ ಅವರಿಗಿದೆ.

ಸಾಹಿತ್ಯಾಸಕ್ತಿ ಚಿಗುರೊಡೆದಿದ್ದು ಯಾವಾಗ?: ಅವರ ಸಾಹಿತ್ಯಾಸಕ್ತಿ ಎಳವೆಯಲ್ಲೇ ಚಿಗುರಿತ್ತು. ತನ್ನ 10ನೇ ವಯಸ್ಸಿನಲ್ಲೇ 'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು ಅನರ್ಸ್ ಅಧ್ಯಯನ ಸಮಯದಲ್ಲಿ ಎಲ್. ಗುಂಡಪ್ಪ, ಎಂ.ವಿ. ಸೀತಾರಾಮಯ್ಯ, ರಾಜರತ್ನಂ, ವಿ.ಸೀ. ಇವರ ಗುರುಗಳಾಗಿದ್ದರು. ಇದರಿಂದ ನಿಸಾರ್ ರವರಿಗೆ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಇನ್ನಷ್ಟು ಹೆಚ್ಚಲು ಸಾಧ್ಯವಾಯಿತು.

ಸೇವೆಯಲ್ಲಿದ್ದಾಗಲೇ ರಾಜ್ಯಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಪ್ರಕಟಿಸಿದ 'ಚಂದನ' ತ್ರೈಮಾಸಿಕ, ಸಾಹಿತ್ಯದ ಎಲ್ಲ ಪ್ರಕಾರಗಳ ದಶವಾರ್ಷಿಕ ಸಂಚಿಕೆ ಪ್ರಕಟಣೆ. ಹೊರತಂದ ನಿಸಾರ್ ದೆಹಲಿಯಲ್ಲಿ CONTEMPORARY INDIAN LITERATURE ಸೆಮಿನಾರ್ ವ್ಯವಸ್ಥೆ ಮಾಡಿದ ಹೆಗ್ಗಳಿಕೆ ಯನ್ನೂ ಹೊಂದಿದ್ದಾರೆ. ರಾಷ್ಟ್ರೀಯ ಶಿಕ್ಷಣ ಮತ್ತು ಸಂಶೋಧನಾ ಮಂಡಲಿಯ ಸದಸ್ಯರಾಗಿದ್ದರು.

ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನ ಒಡನಾಟ, ಅಲ್ಲಿನ ಪ್ರಕೃತಿಯ ಸೊಬಗು, ಕವಿಗಳಿಗೆಂದೇ ಹೇಳಿ ಮಾಡಿಸಿದ ಹವಾಗುಣ, ಇವೆಲ್ಲ ನಿಸಾರ್ ಅಹಮದರ ಕವಿತಾ ಹೃದಯವನ್ನು ಪಕ್ವಗೊಳಿಸಿ ಅವರನ್ನೊಬ್ಬ ಶ್ರೇಷ್ಠ ಕವಿಯನ್ನಾಗಿ ರೂಪಿಸಿತು.

ಜನಪ್ರಿಯ ಕವನಗಳು1 : 1960ರಲ್ಲಿ ಪ್ರಕಟಗೊಂಡ 'ಮನಸು ಗಾಂಧಿಬಜಾರು' ಎಂಬ ಕವಿತಾಸಂಕಲನದಿಂದ ತೊಡಗಿ 2013ರ 'ವ್ಯಕ್ತಿಪರ ಕವನಗಳು' ಕೃತಿಯವರೆಗೆ 19 ಕವನಸಂಕಲನಗಳನ್ನೂ 12 ಗದ್ಯ, ಪ್ರಬಂಧ, ವಿಮರ್ಶೆಯ ಲೇಖನ ಸಂಕಲನಗಳನ್ನೂ 5 ಮಕ್ಕಳ ಸಾಹಿತ್ಯಗ್ರಂಥಗಳನ್ನೂ 5 ಅನುವಾದ ಗ್ರಂಥಗಳನ್ನೂ ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟ ಹಿರಿಮೆ ಇವರದು ಇವರ ಹಲವು ಕವಿತಾಸಂಕಲನಗಳು ಮೂರು ಮೂರು ಆವೃತ್ತಿಗಳನ್ನು ಕಂಡಿವೆ.

Prof KS Nisar Ahmed, poet, critic and writer birthday Special

'ನಿತ್ಯೋತ್ಸವ' ಎಂಬ ಕವನಸಂಕಲನವು 24 ಬಾರಿ ಮುದ್ರಿತವಾಗಿರುವುದು ಇವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಷೇಕ್ಸ್ ಪಿಯರನ ನಾಟಕಗಳನ್ನೂ, ರಷ್ಯನ್ ಕಥೆಗಳನ್ನೂ , ಸ್ಪಾನಿಷ್ ಕವಿ ಪಾಬ್ಲೊ ನೆರುಡನ ಕವಿತೆಗಳನ್ನೂ ಇವರು ಕನ್ನಡಕ್ಕೆ ತಂದಿದ್ದಾರೆ.

ಸುಗಮಸಂಗೀತ ಕ್ಷೇತ್ರಕ್ಕೆ ಕೊಡುಗೆ : 1978ರಲ್ಲಿ ಭಾರತೀಯ ಭಾಷೆಗಳಲ್ಲೇ ಮೊತ್ತಮೊದಲನೆಯದಾಗಿ ಭಾವಗೀತಗಳ ದನಿಸುರುಳಿಯನ್ನು ಹೊರತಂದು ಸುಗಮ ಸಂಗೀತ ಕ್ಷೇತ್ರದಲ್ಲಿ ಹೊಸ ಹಾದಿಯನ್ನು ನಿರ್ಮಿಸಿದ ಹಿರಿಮೆ ಇವರದು. 'ನಿತ್ಯೋತ್ಸವ' ಎಂಬ ಭಾವಗೀತಗಳ ಆ ಧ್ವನಿಸುರುಳಿಯು ಕನ್ನಡದ ಸುಗಮಸಂಗೀತ ಕ್ಷೇತ್ರದಲ್ಲಿ ಇಂದಿಗೂ ಜನಪ್ರಿಯವಾಗಿ ಉಳಿದಿದೆ.

ಇವರ ಯಾವುದೇ ಕವನವು ನಮ್ಮನ್ನು ಕ್ಷೋಭೆಗೀಡು ಮಾಡದೇ, ಮನವನ್ನು ಖತಿಗೊಳಿಸದೇ ಯಾವುದೇ ಸಂದರ್ಭದಲ್ಲೂ ಮುದನೀಡುವ ರಸೋನ್ನತಿಯನ್ನೂ ಭಾವಸಂಚಾರವನ್ನೂ ಹೊಂದಿರುತ್ತದೆ.

ನಿಸಾರ್ ಅಹಮದರ ಕವಿತೆಗಳು ಬರೀ ಹೆಣ್ಣನ್ನೇ ಅಥವಾ ಬರೀ ಪ್ರೇಮವನ್ನೇ ಮುಖ್ಯ ವಸ್ತುವಾಗಿಸಿಲ್ಲ. ಅವರ ಕವಿತೆಗಳು ಮಾಸ್ತಿಯವರ ವಾಕಿಂಗನ್ನು, ಕಾಲೇಜು ಯೂನಿಯನ್ನು ಪ್ರೆಸಿಡೆಂಟನ ತಳಮಳವನ್ನು, ಬುರ್ಖಾ ಎಂಬ ಸಾಮಾಜಿಕ ಮೌಢ್ಯವನ್ನು, ವಿಮರ್ಶಕರ ಕಿರಿಕಿರಿಯನ್ನು, ರಾಜಕಾರಣಿಗಳ ದೊಂಬರಾಟವನ್ನು, ಸೋಗಲಾಡಿ ಶಿಕ್ಷಣವನ್ನು ಬಿಂಬಿಸುತ್ತದೆ.

ಇದೇ ಕಾರಣದಿಂದಾಗಿಯೇ 'ಉತ್ತನೆಲದ ಗೆರೆ' 'ಆಗಷ್ಟೇ ಕೊಂದ ಕುರಿಮರಿಯ ರಕ್ತದ ಬಿಸುಪು', 'ಕೊಯ್ದ ಹಸಿಮರದ ಕಂಪು', 'ಸಮಾಜವಾದದ ರೊಟ್ಟಿಯ ತುಣುಕು' ಇಂಥ ಸಾಮಾನ್ಯ ವಿಷಯಗಳ ಮೇಲೆ ಕವನ ಬರೆದ ಪಾಬ್ಲೊ ನೆರೂಡ ಇವರಿಗೆ ಅತ್ಯಂತ ಪ್ರಿಯರಾಗುತ್ತಾರೆ.

ನೆರೂಡ ಬಗ್ಗೆ ಒಲವು: ನೆರೂಡನನ್ನು ಆಳವಾಗಿ ಅಭ್ಯಸಿಸಿರುವ ಇವರು ಅವನನ್ನು ಸುಮ್ಮನೇ ಕೋಟ್ ಮಾಡುವವರ ವಿರುದ್ಧ ಸಹಜವಾಗಿ ಕೋಪಗೊಳ್ಳುತ್ತಾರೆ. ನಿಸಾರರ ಕವನಗಳಲ್ಲಿ ಮಷಾಲು, ನಾಚು, ಖುಲ್ಲಾ ಮುಂತಾದ ಅರಬ್ಬೀ ಪದಗಳ ಹಾಸುಹೊಕ್ಕು ಹೇರಳವಾಗಿರುತ್ತದೆ.

'ಇಪ್ಪತ್ತೆಂಟನಾಡುವುದು ನಡುವೆ ಅದೂ ಇದೂ ಇಪ್ಪತ್ತೆಂಟನಾಡುವುದು' ಎಂಬಂಥ ಪದಚಮತ್ಕಾರಗಳೂ ಇರುತ್ತದೆ. . 'ನಾಡಿದ್ದು ನಾಳೆಯ, ನಾಳೆ ಇವೊತ್ತಿನ, ಇಂದು ನಿನ್ನೆಯ ಪುನರಾವರ್ತನೆಯ ಏಕತಾನತೆಯಲ್ಲಿ' ಎಂಬಂಥ ತರ್ಕ ಜಿಜ್ಞಾಸೆಯೂ ಇರುತ್ತದೆ.

ಅದೇ ರೀತಿಯಲ್ಲಿ ಇವರ 'ಇದು ಬರಿ ಬೆಡಗಲ್ಲೋ ಅಣ್ಣ' ಎಂಬ ವಿಮರ್ಶಾ ಕೃತಿ ಇತರ ವಿಮರ್ಶೆಗಳಂತೆ ಕಹಿಯೂ ಆಗದೆ ತೇಲಿಕೆಯೂ ಆಗದೆ ಅತ್ಯಂತ ಭಾವಪೂರ್ಣವೂ ತೂಕವುಳ್ಳದ್ದೂ ಆಗಿ ವಿಮರ್ಶಾಲೋಕದಲ್ಲಿ ಕುವೆಂಪುರವರ ಸಮಾನರಾಗಿ ನಿಲ್ಲುವ ಶಕ್ತಿಯನ್ನು ಅವರಿಗೆ ದೊರಕಿಸಿದೆ.

English summary
Prof KS Nisar Ahmed, poet, critic and writer in Kannada literature world is celebrating his 79th birthday today. Here is a special article about him by citizen journalist Raghavendra Adiga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X