ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಶಾಲಾ ಶುಲ್ಕ ವಿಚಾರದಲ್ಲಿ ಶಿಕ್ಷಣ ಸಚಿವರ ದ್ವಂದ್ವ ಹೇಳಿಕೆ ವಿವಾದ

|
Google Oneindia Kannada News

ಬೆಂಗಳೂರು, ಜೂ. 13: ರಾಜ್ಯದಲ್ಲಿ ಖಾಸಗಿ ಶಾಲೆಗಳ ಶುಲ್ಕದ ಬಗ್ಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ನೀಡಿರುವ ಹೇಳಿಕೆ ಮತ್ತೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಶಿಕ್ಷಣ ಸಚಿವರು ನೀಡಿರುವ ಎರಡು ದ್ವಂದ್ವ ಹೇಳಿಕೆಯಿಂದ ಒಂದಡೆ ಪೋಷಕರು ಹಾಗೂ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ಎರಡೂ ವರ್ಗ ತಿರುಗಿ ಬಿದ್ದಿವೆ.

ರಾಜಧಾನಿಯ ಪ್ರತಿಷ್ಠಿತ ಶಾಲೆಗಳ ಶುಲ್ಕ ವಿಚಾರವಾಗಿ ಸಾರ್ವನಿಕರು ಪ್ರತಿಭಟನೆ ನಡೆಸಿದ್ದಾರೆ. ಶಿವಾನಂದ ವೃತ್ತದಲ್ಲಿರುವ ಸಿಂದಿ ಶಾಲೆ, ನಂದಿನಿ ಬಡಾವಣೆಯಲ್ಲಿರುವ ಪ್ರೆಸಿಡೆನ್ಸಿ ಸ್ಕೂಲ್, ನಾರಾಯಣ ಇ ಟೆಕ್ನೋ ಸ್ಕೂಲ್ ಶಾಲೆಗಳಲ್ಲಿ ಪ್ರಸಕ್ತ ಸಾಲಿನ ಶಾಲಾ ಶುಲ್ಕದ ಬಗ್ಗೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಖಾಸಗಿ ಶಾಲೆಯೊಂದು ಹಣಕಾಸು ಸಂಸ್ಥೆ ಜತೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿ ಪೋಷಕರಿಗೆ ಫೈನಾನ್ಸ್ ನೀಡುವ ಸಂಗತಿ ಬಯಲಿಗೆ ಬಂದಿತ್ತು.

ಈ ಬೆಳವಣಿಗೆ ನಡುವೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಯಾರಾದರೂ ಶುಲ್ಕ ಕೇಳಿದರೆ ನನಗೆ ದೂರು ಕೊಡಿ. ಇಲ್ಲವೇ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ದೂರು ಕೊಡಿ ಎಂದು ಹೇಳಿದ್ದರು. ಹೀಗೆ ಹೇಳಿಕೆ ನೀಡಿದ ಕೂಡಲೇ ಕಳೆದ ಮೂರು ವರ್ಷದಿಂದ ಬಾಕಿ ಶಾಲಾ ಶುಲ್ಕ ವಸೂಲಿ ಮಾಡದೇ ನರಕ ಅನುಭವಿಸುತ್ತಿರುವ ಖಾಸಗಿ ಶಾಲಾ ಸಂಸ್ಥೆಗಳು ತಿರುಗಿ ಬಿದ್ದವೆ.

ತವರಿಗೆ ಒಳ್ಳೆ ಮಗಳೂ ಅಲ್ಲ: ಅತ್ತೆ ಮನೆಗೆ ಒಳ್ಳೆ ಸೊಸೆಯೂ ಅಲ್ಲ

ತವರಿಗೆ ಒಳ್ಳೆ ಮಗಳೂ ಅಲ್ಲ: ಅತ್ತೆ ಮನೆಗೆ ಒಳ್ಳೆ ಸೊಸೆಯೂ ಅಲ್ಲ

ಕೋರೊನಾ ಸೊಂಕು ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷದಿಂದ ಶುಲ್ಕ ಬಾಕಿಯಿದೆ. ದುಬಾರಿ ಶುಲ್ಕ ವಿಧಿಸುವ ಶಾಲೆಗಳ ವಿರುದ್ಧ ಸ್ಪಷ್ಟ ಮಾಹಿತಿ ಪಡೆದು ಶಿಕ್ಷಣ ಸಚಿವರು ಕ್ರಮ ಜರುಗಿಸಲಿ. ಇಡೀ ಖಾಸಗಿ ಶಾಲಾ ಸಂಸ್ಥೆಗಳಿಗೆ ಅನ್ವಯ ವಾಗುವಂತೆ ಶಾಲಾ ಶುಲ್ಕ ಪಾವತಿಸಬೇಡಿ. ಕೇಳಿದರೆ ದೂರು ಕೊಡಿ ಎಂದು ಹೇಳಿಕೆ ನೀಡುವುದರಿಂದ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ನಡುವೆ ಗುದ್ದಾಟಕ್ಕೆ ನಾಂದಿ ಹಾಡಿದ್ದಾರೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಆಕ್ರೋಶ ವ್ಯಕ್ತಪಡಿಸಿದವು.

ಅಲ್ಲದೇ , ಮೂರು ವರ್ಷದಿಂದ ಬಾಕಿ ಇರುವ ಶಾಲಾ ಶುಲ್ಕ ಪಾವತಿಸದ ಪೋಷಕರನ್ನು ಶುಲ್ಕ ಕೇಳುವುದು ತಪ್ಪೇ ಆಗುವುದಾದರೆ, ಶಾಲೆಗಳನ್ನು ಹೇಗೆ ನಡೆಸಬೇಕು. ಈಗಾಗಲೇ ಶಾಲಾ ಶಿಕ್ಷಕರಿಗೆ ವೇತನ ಪಾವತಿಸಲಾಗದೇ ಕೆಲವು ಶಾಲಾ ಸಂಸ್ಥೆಗಳು ಮುಚ್ವುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಶಾಲಾ ಶುಲ್ಕದ ಬಗ್ಗೆ ಶಿಕ್ಷಣ ಸಚಿವರು ತೆಗೆದುಕೊಂಡ ಅವೈಜ್ಞಾನಿಕ ತೀರ್ಮಾನದಿಂದಲೇ ವಿವಾದ ಕೋರ್ಟ್ ಮೆಟ್ಟಿಲೇರಿದೆ. ಈಗಿರುವಾಗ ಖಾಸಗಿ ಶಾಲೆಗಳು ಶುಲ್ಕ ವಸೂಲಿ ಕುರಿತು ಶಿಕ್ಷಣ ಸಚಿವರೇ ಹೇಳಿಕೆ ನೀಡಲಿ. ಈ ವಿಚಾರದಲ್ಲಿ ನಾವು ಮತ್ತೆ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದು ಶಾಲಾ ಸಂಸ್ಥೆಗಳು ಎಚ್ಚರಿಕೆ ನೀಡಿದವು. ಅಂತೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ತೀರ್ಮಾನಗಳು ಅತ್ತ ತವರಿಗೆ ಒಳ್ಳೆಯ ಮಗಳು ಅಲ್ಲ, ಇತ್ತ ಅತ್ತೆ ಮನೆಗೆ ಒಳ್ಳೆಯ ಸೊಸೆಯೂ ಅಲ್ಲ ಎಂಬಂತಾಗಿದೆ.

ಆಕ್ಷನ್ ಗೆ ಸಚಿವರ ರಿಯಾಕ್ಷನ್!

ಆಕ್ಷನ್ ಗೆ ಸಚಿವರ ರಿಯಾಕ್ಷನ್!

ಅಷ್ಟರಲ್ಲಿಯೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಪೋಷಕರ ಪರ ಹೃದಯದ ಮಾತು ಮರೆತು ಹೋಯಿತು. ಶಾಲಾ ಶುಲ್ಕದ ವಿಚಾರ ನ್ಯಾಯಾಲಯದಲ್ಲಿದೆ. ಶುಲ್ಕದ ಗೊಂದಲದ ಬಗ್ಗೆ ಆಡಳಿತ ಮಂಡಳಿ ಜತೆ ಕೂತು ಪೋಷಕರು ಬಗೆ ಹರಿಸಿಕೊಳ್ಳಲಿ. ಉಳಿದಂತೆ ನಾನು ಏನು ಮಾಡಲಿ ಸಾಧ್ಯ ಎಂದು ಉಲ್ಟಾ ಹೊಡೆದರು. ಈ ಮೂಲಕ ಪ್ರತಿಷ್ಠಿತ ಖಾಸಗಿ ಶಾಲೆಗಳ ಅತಿ ದುಬಾರಿ ಶುಲ್ಕದ ಬಗ್ಗೆ ಧ್ವನಿಯೆತ್ತಿದ್ದ ಪೋಷಕರು ಇದೀಗ ಸಿಟ್ಟಾಗಿದ್ದಾರೆ. ಶಿಕ್ಷಣ ಸಚಿವರು ಖಾಸಗಿ ಶಾಲಾ ಸಂಸ್ಥೆಗಳ ಲಾಬಿಗೆ ಮಣಿದರು ಎಂಬ ಆರೋಪ ಕೇಳಿ ಬರುತ್ತಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೊರೊನಾ ದಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ಎದುರಾಗಿರುವ ಸಮಸ್ಯೆಗಳನ್ನು ವೈಜ್ಞಾನಿಕ ನೆಲೆಯಲ್ಲಿ ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳುತ್ತಿಲ್ಲ. ಹೀಗಾಗಿ ಅವರ ಪ್ರತಿ ಹೇಳಿಕೆಯೂ ಶಿಕ್ಷಣ ವ್ಯವಸ್ಥೆಯಲ್ಲಿ ದಿನಕ್ಕೊಂದು ವಿವಾದ ಸೃಷ್ಟಿಸಿ ಮತ್ತಷ್ಟು ಗೊಂದಲಕ್ಕೆ ಎಡೆ ಮಾಡಿಕೊಡುತ್ತಿದ್ದಾರೆ.

ಶಾಲಾ ಶುಲ್ಕದ ಪರಿಹಾರ ಮಾರ್ಗ ಏನು?

ಶಾಲಾ ಶುಲ್ಕದ ಪರಿಹಾರ ಮಾರ್ಗ ಏನು?

ರಾಜ್ಯದಲ್ಲಿ ಖಾಸಗಿ ಶಾಲೆಗಳಲ್ಲಿ ಕೂಡ ಮೂರು ರೀತಿ ಇವೆ. ಕೆಳ ಹಂತದ ಕೆಲವು ಖಾಸಗಿ ಶಾಲೆಗಳು ವಾರ್ಷಿಕ ಕನಿಷ್ಠ 15 ರಿಂದ 25 ಸಾವಿರ ರೂ. ಶುಲ್ಕ ನಿಗದಿ ಪಡಿಸಿ, ಸರ್ಕಾರ ಪ್ರತಿ ಮಗುವಿಗೆ ವ್ಯಯಿಸುತ್ತಿರುವ ಶುಲ್ಕಕ್ಕೆ ಸಮಾನ ಶುಲ್ಕದಲ್ಲಿ ನಡೆಯುತ್ತಿವೆ. ಇನ್ನು ಕೆಲವು ಶಾಲೆಗಳು 30 ರಿಂದ 35 ಸಾವಿರ ರೂ. ವಾರ್ಷಿಕ ಶುಲ್ಕ ವಿಧಿಸುತ್ತಿವೆ. ಕೊರೊನಾ ಹಿನ್ನೆಲೆಯಲ್ಲಿ ಪೋಷಕರಿಗೆ ತೊಂದರೆಯಾಗದಿರಲಿ ಎಂದು ಈ ಎರಡೂ ವರ್ಗದ ಶಾಲೆಗಳು ಈ ಬಾರಿಯೂ ಶುಲ್ಕವನ್ನು ಹೆಚ್ಚಿಸದೇ ಬಹುತೇಕ ಶಾಲೆಗಳು ಪೋಷಕರಿಗೆ ಅನುಕೂಲ ಮಾಡಿಕೊಟ್ಟಿವೆ. ಆದರೆ ಪ್ರತಿಷ್ಠಿತ ಹೆಸರು ಗಳಿಸಿರುವ ಹಾಗೂ ಕಾರ್ಪೋರೇಟ್ ಹಿನ್ನೆಲೆಯುಳ್ಳ ಶಾಲೆಗಳು ವಾರ್ಷಿಕ ಲಕ್ಷಾಂತರ ಶುಲ್ಕ (ಕನಿಷ್ಠ 60 ಸಾವಿರ ರೂ. ನಿಂದ 2 ಲಕ್ಷ ರೂ.) ವಿಧಿಸುತ್ತಿವೆ. ಈ ಕಾರ್ಪೋರೇಟ್ ಶಾಲೆಗಳು ಸರ್ಕಾರದ ಯಾವ ಸುತ್ತೋಲೆಗಳನ್ನು ಕಿವಿಗೆ ಹಾಕಿಕೊಂಡಿಲ್ಲ. ಹೀಗಾಗಿ ಇಲ್ಲಿ ಆರಂಭವಾಗಿರುವ ಸಮಸ್ಯೆಯನ್ನು ಇಡೀ ಖಾಸಗಿ ಶಾಲೆಗಳು ಶುಲ್ಕ ವಸೂಲಿ ಮಾಡುತ್ತಿವೆ ಎಂಬ ಅರ್ಥ ಕಲ್ಪಿಸುತ್ತಿರುವುದು ಶಾಲಾ ಶುಲ್ಕದ ಗೊಂದಲಕ್ಕೆ ದೊಡ್ಡ ನಾಂದಿ ಹಾಡಿದೆ.

ಸರ್ಕಾರ ಆರ್‌ಟಿಈ ಶುಲ್ಕ ಪಾವತಿ ಎಷ್ಟು?

ಸರ್ಕಾರ ಆರ್‌ಟಿಈ ಶುಲ್ಕ ಪಾವತಿ ಎಷ್ಟು?

ರಾಜ್ಯದಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅಡಿ ಖಾಸಗಿ ಶಾಲೆಗೆ ದಾಖಲಾಗುತ್ತಿರುವ ಒಂದು ವಿದ್ಯಾರ್ಥಿಗೆ 18 ಸಾವಿರ ರೂ. ಶಿಕ್ಷಣ ಇಲಾಖೆಯೇ ಪಾವತಿಸುತ್ತಿದೆ. ವಾರ್ಷಿಕ 20 ಸಾವಿರ ರೂ. ಶುಲ್ಕ ವಿಧಿಸುವ ಸಾವಿರಾರು ಖಾಸಗಿ ಶಾಲೆಗಳು ಕೊರೊನಾ ಸಂಕಷ್ಟದಿಂದ ಪಾರಾಗದೇ ಸಮಸ್ಯೆ ಎದುರಿಸುತ್ತಿವೆ. ಇಂತಹ ಶಾಲೆಗಳು ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಬೋಧನಾ ಶುಲ್ಕದಲ್ಲಿ ಕಡಿಮೆ ಮಾಡಿ ಪೋಷಕರಿಗೆ ಅನುಕೂಲ ಮಾಡಿ ಅಸ್ತಿತ್ವ ಉಳಿಸಿಕೊಳ್ಳಲು ಒದ್ದಾಡುತ್ತಿವೆ. ವಿಪರ್ಯಾಸವೆಂದರೆ ಶಿಕ್ಷಣ ಸಚಿವರು ಆದೇಶಗಳು, ಸುತ್ತೋಲೆಗಳು ಪರಿಣಾಮ ಬೀರುತ್ತಿರುವುದು ಈ ವರ್ಗದ ಶಾಲೆಗಳ ಮೇಲೆ. ಅದೇ ಕಾರ್ಪೋರೇಟ್ ಮುಖವಾಡ ಧರಿಸಿ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವ ಒಂದೇ ಒಂದು ಶಿಕ್ಷಣ ಸಂಸ್ಥೆಯ ಶಾಲಾ ಶುಲ್ಕವನ್ನು ಶಿಕ್ಷಣ ಇಲಾಖೆ ಕಡಿಮೆ ಮಾಡಿದ ಉದಾಹರಣೆ ಇದೆಯೇ ? ಇಲ್ಲ. ಈ ವಾಸ್ತವಿಕ ಅಂಶಗಳನ್ನು ಪರಿಗಣಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ತೆಗೆದುಕೊಳ್ಳುತ್ತಿರುವ ತೀರ್ಮಾನಗಳು ಒಂದಡೆ ಖಾಸಗಿ ಶಾಲೆಗಳಿಗೂ ಹಾಗೂ ಪೋಷಕರಿಗೆ ನೆರವಿಗೆ ಬರುತ್ತಿಲ್ಲ.

Recommended Video

Biharನ ಬ್ಯಾಂಕ್ ಒಂದರಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ | Bank Robbery | Oneindia Kannada
ವೈಜ್ಞಾನಿಕ ಶುಲ್ಕ ಕಡಿತ ತೀರ್ಮಾನ ಹೇಗೆ?

ವೈಜ್ಞಾನಿಕ ಶುಲ್ಕ ಕಡಿತ ತೀರ್ಮಾನ ಹೇಗೆ?

ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಪೋಷಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದೇ ರೀತಿ ಸುಮಾರು ಐದು ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸಿರುವ ಕೆಳ ಹಾಗೂ ಮಧ್ಯಮ ವರ್ಗದ ಶಿಕ್ಷಣ ಸಂಸ್ಥೆಗಳು ( ಬಡ ಮಕ್ಕಳು ಓದುವ ಖಾಸಗಿ ಶಾಲೆಗಳು) ಆರ್ಥಿಕವಾಗಿ ಜರ್ಜರಿತವಾಗಿವೆ. ಕಳೆದ ಎರಡು ವರ್ಷದಿಂಧ ಶುಲ್ಕ ವಸೂಲಿಯಾಗದೇ ಉಗುಳು ನುಂಗುತ್ತಿವೆ. ಇನ್ನು ಕಾರ್ಪೋರೇಟ್ ಖಾಸಗಿ ಶಾಲೆಗಳ ವಿಚಾರಕ್ಕೆ ಬಂದರೆ ಅವು ಎಂದಿನಂತೆ ದುಬಾರಿ ಶಾಲಾ ಶುಲ್ಕವನ್ನೇ ವಿಧಿಸುತ್ತಿವೆ. ಹೀಗಾಗಿ ಅದರ ಹೊರೆ ಪೋಷಕರ ಮೇಲೆ ಬೀಳುತ್ತಿದೆ ನಿಜ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೊದಲು ಖಾಸಗಿ ಶಾಲೆಗಳನ್ನು ಶಿಕ್ಷಣ ಸಚಿವರು ಅದರ ಶುಲ್ಕ ಹಾಗೂ ವಿದ್ಯಾರ್ಥಿಗಳ ನೋಂದಣಿ ಆಧಾರವಾಗಿ ಶಾಲೆಗಳನ್ನು ವರ್ಗೀಕರಣ ಮಾಡಬೇಕು.

ಎ ವರ್ಗ, ಬಿ, ವರ್ಗ, ಹಾಗೂ ಸಿ. ವರ್ಗದ ಶಾಲೆಗಳ ಪಟ್ಟಿ ಮಾಡಿ, ಪ್ರತಿ ವರ್ಗವೂ ಶಾಲಾ ಶುಲ್ಕ ರಿಯಾಯಿತಿ, ಪೋಷಕರಿಗೆ ಅನುಕೂಲ, ಶಾಲಾ ಸಂಸ್ಥೆಗಳು ಉಳಿವಿನ ಬಗ್ಗೆ ಗಂಭೀರ ಅಧ್ಯಯನ ನಡೆಸಿ ತೀರ್ಮಾನ ಪ್ರಕಟಿಸಿದ್ದ ಪಕ್ಷದಲ್ಲಿ ರಾಜ್ಯದಲ್ಲಿ ಶಾಲಾ ಶುಲ್ಕದ ವಿಚಾರವಾಗಿ ಗೊಂದಲವೂ ಸೃಷ್ಟಿಯಾಗುತ್ತಿರಲಿಲ್ಲ. ಖಾಸಗಿ ಶಾಲೆಗಳು ನ್ಯಾಯಾಲಯದ ಮೊರೆ ಹೋಗುವ ಅಗತ್ಯವೂ ಬೀಳುತ್ತಿರಲಿಲ್ಲ. ಆಕ್ಷನ್ ಗೆ ರಿಯಾಕ್ಷನ್ ಕೊಟ್ಟರೆ ಶಾಲಾ ಶುಲ್ಕದ ವಿಚಾರದಲ್ಲಿ ತಲೆ ದೋರಿರುವ ಸಮಸ್ಯೆಗೆ ಪರಿಹಾರ ಸಾಧ್ಯವೇ ಇಲ್ಲ ಎಂಬ ಮಾತು ಶಿಕ್ಷಣ ತಜ್ಞರ ವಲಯದಿಂದ ಕೇಳಿ ಬರುತ್ತಿರುವ ಮಾತು.

ಕ್ಯಾಮ್ಸ್ ಖಂಡನೆ: ಶಾಲಾ ಶುಲ್ಕದ ವಿಚಾರವಾಗಿ ಶಿಕ್ಷಣ ಸಚಿವರು ಗೊಂದಲದ ನೀತಿ ಅನುಸರಿಸುತ್ತಿದ್ದಾರೆ. ಮೂರು ವರ್ಷದಿಂದ ಪೋಷಕರು ಶುಲ್ಕ ಪಾವತಿ ಮಾಡುತ್ತಿಲ್ಲ. ಅದನ್ನು ಕೇಳುವುದೇ ತಪ್ಪು ಎನ್ನುವುದಾದರೆ, ಶಿಕ್ಷಣ ಸಚಿವರೇ ಸ್ವತಃ ಶಾಲೆಗಳ ನಿರ್ವಹಣೆ ವಹಿಸಿಕೊಳ್ಳಿ. ಪಾಲಕ ಪೋಷಕರನ್ನು ಪ್ರಚೋದನೆ ನೀಡಿ ದೂರು ಕೊಡಿ ಎಂದರೆ ಯಾರೂ ಒಪ್ಪುವಂತದ್ದಲ್ಲ. ಹೋದ ವರ್ಷದ ಶುಲ್ಕದ ಬಗ್ಗೆ ಗೊಂದಲಯ ಆದೇಶ ಹೊರಡಿಸಿದ್ರಿ. ನಾವು ಎರಡು ವರ್ಷದಿಂದ ಶಾಲಾ ಶುಲ್ಕ ಏರಿಸಿಲ್ಲ. ಕನಿಷ್ಠ ಶುಲ್ಕ ಪಾವತಿಸಿ ದಾಖಲಾತಿ ಮಾಡುವ ಬಗ್ಗೆ ಶಿಕ್ಷಣ ಸಚಿವರೇ ಸ್ಪಷ್ಟ ಆದೇಶ ಹೊರಡಿಸಲಿ. ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಎಸ್. ಶಶಿಕುಮಾರ್ ಪ್ರಶ್ನಿಸಿದ್ದಾರೆ.

English summary
Education minister S. Suresh Kumar controversy statement on private school fee know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X