ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುತೂಹಲ ಮೂಡಿಸಿದ ಮಠಾಧೀಶರ ಬೆಂಗಳೂರು ಸಮಾವೇಶ ಯಾರಿಗಾಗಿ?

|
Google Oneindia Kannada News

ಬೆಂಗಳೂರು, ಜು. 23: ಒಂದೆಡೆ ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ಆಗುತ್ತಿರುವಾಗಲೇ ಮಠಾಧೀಶರು ಬೆಂಗಳೂರಿನಲ್ಲಿ ಸಮಾವೇಶ ನಡೆಸಲು ತಯಾರಿ ನಡೆಸಿರುವುದು ಕುತೂಹಲ ಮೂಡಿಸಿದೆ. ಜುಲೈ 25ರಂದು ಅರಮನೆ ಮೈದಾನದಲ್ಲಿ ಮಠಾಧಿಪತಿಗಳ ಸಮಾವೇಶ ಕರೆದಿದ್ದೇವೆ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶ ರಾಜ್ಯದ ಹಿತ ರಕ್ಷಣೆಗಾಗಿ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

"ಈ ಸಮಾವೇಶದಲ್ಲಿ ರಾಜ್ಯದ ಅಗ್ರಗಣ್ಯ ಮಠಾಧಿಪತಿಗಳು ಭಾಗವಹಿಸಲಿದ್ದು, ಮಠಾಧಿಪತಿಗಳ ಕರ್ತವ್ಯದ ಕುರಿತು ಚಿಂತನೆ ಮಾಡಲಿದ್ದೇವೆ. ಇದು ಸಾರ್ವಜನಿಕ ಸಭೆಯಲ್ಲ. ಇದು ಮಠಾಧಿಪತಿಗಳ ಸಭೆ. ಇದು ಯಾವುದೇ ಒಂದು ಸಮಾಜದ ಸಭೆಯಲ್ಲ. ಎಲ್ಲಾ ಸಮಾಜಗಳ ಮಠಾಧೀಶರ ಸಭೆಯಾಗಿದೆ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಯಾವುದೇ ಒಬ್ಬ ವ್ಯಕ್ತಿಯ ಕುರಿತು ನಾವು ಸಮಾವೇಶ ಮಾಡುತ್ತಿಲ್ಲ. ಹಲವು ಧ್ಯೇಯೋದ್ದೇಶಗಳನ್ನು ಕುರಿತು ಸಮಾವೇಶದಲ್ಲಿ ಚರ್ಚಿಸಲಿದ್ದೇವೆ. ಹೀಗಾಗಿ ರಾಜ್ಯದ ಮಠಾಧಿಪತಿಗಳು ನಾಳೆ (ಜು.24) ಬೆಂಗಳೂರಿಗೆ ಆಗಮಿಸಬೇಕು" ಎಂದು ದಿಂಗಾಲೇಶ್ವರ ಶ್ರೀಗಳು ಮನವಿ ಮಾಡಿದ್ದಾರೆ.

ಅಷ್ಟಕ್ಕೂ ಈ ಸಮಾವೇಶ ನಡೆಯುತ್ತಿರುವುದು ಯಾಕೆ? ಯಾರಿಗಾಗಿ? ಮುಂದಿದೆ ಮಾಹಿತಿ!

ಮಠಗಳು ಯಾವುದೇ ಪಕ್ಷದ ಪರವಾಗಿಲ್ಲ!

ಮಠಗಳು ಯಾವುದೇ ಪಕ್ಷದ ಪರವಾಗಿಲ್ಲ!

"ನಾಡಿನ ಸಮಗ್ರ ಚಿಂತನೆಯನ್ನು ಇಟ್ಟುಕೊಂಡು ಸಮಾವೇಶ ಮಾಡುತ್ತೇವೆ. ಅದರಲ್ಲಿ ರಾಜಕೀಯ ಚಿಂತನೆಯೂ ಇರಲಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಮಠಗಳು ಮುಂದೆ ಬರಲಿಲ್ಲ ಎಂಬ ಆರೋಪ ಮಾಡಲಾಗಿದೆ. ಆದರೆ ಮಠಗಳು ಸಾಕಷ್ಟು ಒಳ್ಳೆಯ ಕೆಲಸ ಮಾಡಿವೆ. ಕೊರೊನಾ ಸಂದರ್ಭದಲ್ಲಿ ಮಠಾಧೀಶರು ಏನೂ ಮಾಡಿಲ್ಲ ಎಂಬುದು ಸರಿಯಲ್ಲ" ಎಂದು ಬಾಲೆಹೊಸೂರು ದಿಂಗಾಲೇಶ್ವರ್ ಸ್ವಾಮೀಜಿ ಹೇಳಿದ್ದಾರೆ.

ಮಠಾಧೀಶರು ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. "ಮಠಗಳು‌ ಸಮಾಜ ಮುಖಿ ಕೆಲಸ ಮಾಡಬೇಕಿದೆ. ಅದು ಎಲ್ಲರ ಹಿತವಾಗಿದೆ. ಸಮಾಜದ ಹಿತಕ್ಕಾಗಿ ರಾಜಕಾರಣಿಗಳ ಬಳಿ ಮಠಾಧೀಶರು ಬರಬೇಕಾಗುತ್ತದೆ. ನಾವು ಯಾವುದೇ ಹೊಸ ಸಂಪ್ರದಾಯ ಹಾಕಿಕೊಂಡಿಲ್ಲ. ಶಿಕ್ಷಣ ಸಂಸ್ಥೆಗಳನ್ನು ಮಠಗಳು ಕಟ್ಟಿವೆ. ಶಿಕ್ಷಣ ಕ್ಷೇತ್ರದ ಕೆಲಸಗಳನ್ನು ಮಾಡಿಕೊಳ್ಳಬೇಕಾದರೆ ರಾಜಕಾರಣಿಗಳ ಬಳಿ ಬರಬೇಕಾಗುತ್ತದೆ. ಯಾವುದೇ ಒಂದು ಪಕ್ಷದ ಪರ ಮಠಗಳು ನಿಂತಿಲ್ಲ. ಆದರೆ ಅನ್ಯಾಯವಾದಾಗ ಮಠಾಧೀಶರು ಮಧ್ಯಪ್ರವೇಶ ಮಾಡುತ್ತಾರೆ. ವ್ಯಕ್ತಿಗೆ ಅನ್ಯಾಯವಾದಾಗ ಕೇಳುವುದರಲ್ಲಿ ತಪ್ಪಿಲ್ಲ. ಎಲ್ಲಿ ಅನ್ಯಾಯ ನಡೆಯುತ್ತದೆಯೊ ಅಲ್ಲಿ‌ಮಾರ್ಗದರ್ಶನ ಮಾಡಬೇಕಾಗುತ್ತದೆ" ಎಂದು ದಿಂಗಾಲೇಶ್ವರ ಶ್ರೀ ಹೇಳಿಕೆ ನೀಡಿದ್ದಾರೆ.

ಸಾವಿರ ಮಠಾಧೀಶರ ಸಮಾವೇಶ!

ಸಾವಿರ ಮಠಾಧೀಶರ ಸಮಾವೇಶ!

"ಎಲ್ಲ ಮಠಗಳು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟಿವೆ. ಮಠಾಧಿಪತಿಗಳ ಸಾಲಿನ ರಾಜ್ಯಕ್ಕೆ ವಿಶಿಷ್ಟ ಸ್ಥಾನಮಾನವಿದೆ. ಸಮಾಜದಲ್ಲಿ‌ ಗೊಂದಲವಾದಾಗ ಜನರು ಮಠಕ್ಕೆ ಭೇಟಿ ಕೊಡುತ್ತಾರೆ. ಮಠಾಧೀಶರ ಸಲಹೆಗಳನ್ನು ಕೇಳುತ್ತಾರೆ. ಸಮಾಜದ ಅಂಕುಡೊಂಕು ಸರಿ ಮಾಡಬೇಕು. ಹೀಗಾಗಿ ಜುಲೈ 25 ರಂದು ಮಠಾಧೀಶರ ಸಭೆ ನಡೆಸುತ್ತಿದ್ದೇವೆ. ಅರಮನೆ ಮೈದಾನದಲ್ಲಿ ನಡೆಯುವ ಸಭೆಯಲ್ಲಿ ಸುಮಾರು ಸಾವಿರ ಮಠಾಧೀಶರು ಭಾಗವಹಿಸಲಿದ್ದಾರೆ" ಎಂದು ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಯಲ್ಲಿ ಕೊಟ್ಟಿದ್ದ ಲಕೋಟೆಗೆ ಸಂಬಂಧಿಸಿದಂತೆ ದಿಂಗಾಲೇಶ್ವರ ಶ್ರೀಗಳು ಸ್ಪಷ್ಟನೆ ಕೊಟ್ಟಿದ್ದಾರೆ.

ಲಕೋಟೆಯಲ್ಲಿ ಏನಿತ್ತು?

ಲಕೋಟೆಯಲ್ಲಿ ಏನಿತ್ತು?

ಮಠಾಧೀಶರಿಗೆ ಸಿಎಂ ಯಡಿಯೂರಪ್ಪ ಅವರ ನಿವಾಸದಲ್ಲಿ ಕವರ್ ಕೊಟ್ಟ ವಿಚಾರಕ್ಕೆ ದಿಂಗಾಲೇಶ್ವರ ಶ್ರೀಗಳು ಸ್ಪಷ್ಟನೆ ಕೊಟ್ಟಿದ್ದಾರೆ. "ಸಚಿವರು ಕಾಗದ ತೋರಿಸಿದ್ದಕ್ಕೆ ಅಷ್ಟು ಸುದ್ದಿಯಾಗಿತ್ತು. ನಂತರ ಅದರಲ್ಲಿರುವುದು ಏನು ಅಂತಾ ಗೊತ್ತಾದಾಗ ಎಲ್ಲರೂ ಸುಮ್ಮನಾದರು. ಹಾಗೆ ಮಠಾಧೀಶರಿಗೂ ಪತ್ರ ಕೊಟ್ಟಿದ್ದಾರೆ. ಅದನ್ನೇ ಬೇರೆ ರೀತಿಯಲ್ಲಿ‌ ತೋರಿಸುವವರ ಮನಸ್ಸಿನ ವಿಕೃತಿ ತೋರಿಸುತ್ತದೆ. ಮಠಾಧೀಶರು ಹೋದಾಗ ಹಣ್ಣು-ಹಂಪಲು ಕೊಡುತ್ತಾರೆ. ಮಠಾಧೀಶರು ಭಕ್ತರ ಮನೆಗೆ ಬಂದಾಗ ನೀವೇ ಕೊಡುತ್ತೀರಿ ಅಲ್ಲವಾ? ಅದನ್ನೇ ಬೇರೆ ರೀತಿ ತೋರಿಸಿದರೆ ಹೇಗೆ ಮಾಡುವುದು? ಅವರು ಕೊಟ್ಟ ಕವರ್‌ನಲ್ಲಿ ಏನೂ ಇರಲಿಲ್ಲ. ಕಾಣಿಕೆ ಕೊಡುವ ಸಂಸ್ಕೃತಿ ಭಕ್ತರಲ್ಲಿದೆ. ಅದಕ್ಕೆ ಬೇರೆ ಅರ್ಥ ಮಾಡಿಕೊಳ್ಳುವುದು ಸರಿಯಲ್ಲ" ಎಂದಿದ್ದಾರೆ.

Recommended Video

ಸಿದ್ದು ವಿರುದ್ದ ತಿರುಗಿ ಬಿದ್ದ ಕಟೀಲ್ | Oneindia Kannada
ಯಾರಿಗಾಗಿ ಮಠಾಧೀಶರ ಸಭೆ?

ಯಾರಿಗಾಗಿ ಮಠಾಧೀಶರ ಸಭೆ?

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಮಠಾಧೀಶರೇ ಬೆಂಗಳೂರಿನಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಹಿನ್ನೆಲೆಯಲ್ಲಿ ಸಮಾವೇಶ ಮಾಡಲಾಗುತ್ತಿದೆಯಾ? ಎಂಬ ಪ್ರಶ್ನೆಗೆ ನೇರವಾಗಿ ಉತ್ತರವನ್ನು ಮಠಾಧೀಶರು ಕೊಟ್ಟಿಲ್ಲ.

ಆದರೆ ಅವತ್ತು ಬಿಜೆಪಿ ಹೈಕಮಾಂಡ್ ಕೂಡ ತನ್ನ ನಿರ್ಣಯವನ್ನು ಪ್ರಕಟಿಸಲಿದೆ. ಹೀಗಾಗಿ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಪ್ರಕಟಿಸುವ ಸಾಧ್ಯತೆಯಿದೆ. ಜೊತೆಗೆ ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದರೆ ಅದನ್ನು ಖಂಡಿಸುವುದು ಲಿಂಗಾಯತ ಮಠಾಧೀಶರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಜುಲೈ 25ರಂದು ಎಲ್ಲ ಮಠಾಧೀಶರು ಕೈಗೊಳ್ಳುವ ನಿರ್ಧಾರ ಕುತೂಹಲ ಮೂಡಿಸಿದೆ. ಸುದ್ದಿಗೋಷ್ಠಿಯಲ್ಲಿ ನಾವು ಯಡಿಯೂರಪ್ಪ ಅವರ ಪರವಾಗಿ ಮಠಾಧೀಶರ ಸಮಾವೇಶ ಮಾಡುತ್ತಿದ್ದೇವೆ. ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂದು ಮಠಾಧೀಶರು ಹೇಳಲಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ನಡೆಯುವ ಮಠಾಧೀಶರ ಸಮಾವೇಶ ಕುತೂಹಲ ಮೂಡಿಸಿದೆ.

English summary
It is interesting to note that the preparations were being made for a convention of the seers on the 25th of July at the Palace grounds, Bengaluru. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X