• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಓ ಮನಸೇಗೆ ನೂರು ಚಪ್ಪಾಳೆ ಹೊಡೆದವರು ನೀವು: ಬೆಳಗೆರೆ

By Mahesh
|

‘ಓ ಮನಸೇ..' ಗೆ ನೂರು ತುಂಬಿತು.

ದೇಹಕ್ಕೆ ವಯಸ್ಸಾಗುತ್ತದೆ, ಮನಸ್ಸಿಗೆ ವಯಸ್ಸಾಗುವುದು ಉಂಟಾ ಎಂದು ನೀವು ಕೇಳಬಹುದು. ಇದನ್ನೇ ಕೊಂಚ ಬೇರೆ ಥರ ಪಾಸಿಟಿವ್ ಆಗಿ ನೋಡಿ. ದೇಹಕ್ಕೆ ವಯಸ್ಸಾಗುವುದು ಅಂದರೆ ಸುಸ್ತಾಗುವುದು, ಅಂಗಾಂಗಳು ಕಸುವನ್ನು ಕಳೆದುಕೊಳ್ಳುವುದು. ಮನಸ್ಸಿಗೆ ವಯಸ್ಸಾಗುವುದು ಅಂದರೆ ಅದು ಇನ್ನಷ್ಟು ಮಾಗುವುದು ಮತ್ತು ಪ್ರಬುದ್ಧವಾಗುವುದು. ಆ ಲೆಕ್ಕಾಚಾರದಲ್ಲಿ ‘ಓ ಮನಸೇ' ಪತ್ರಿಕೆಯನ್ನು ನೀವು ನೋಡಬೇಕು ಅನ್ನುವುದು ನಮ್ಮ ಬಿನ್ನಹ.

‘ಓ ಮನಸೇ' ಪತ್ರಿಕೆಯ ಓದುಗರೆಲ್ಲರೂ ಮೂಲತಃ ಭಾವಜೀವಿಗಳು. ಮನಸ್ಸಿಗೆ ಆಪ್ತವೆನಿಸುವ, ಮನಸ್ಸನ್ನು ಕಲಕುವ, ಪ್ರಫುಲ್ಲಿತವಾಗಿಸುವ, ಚೇತೋಹಾರಿಯಾಗಿಸುವ ಸಂಗತಿಗಳನ್ನು ಇಷ್ಟಪಡುವವರು. ಅವರಿಗೆ ರಂಜನೆ ನೀಡುವುದಕ್ಕೆ ಸಿನಿಮಾಗಳಿವೆ ಮತ್ತು ನ್ಯೂಸ್ ಚಾನೆಲ್ಲುಗಳಿವೆ! ಸುದ್ದಿ, ಮಾಹಿತಿ ನೀಡುವುದಕ್ಕೆ ದಿನಪತ್ರಿಕೆಗಳಿವೆ. ಆದರೆ ಬದುಕು ಅಂದರೆ ಅಷ್ಟೇ ಅಲ್ವಲ್ಲ. ಮನಸ್ಸಿನ ಕಲಾಪಗಳನ್ನು ವಿವರಿಸುತ್ತಾ, ನಿಮ್ಮ ಜ್ಞಾನದಿಗಂತವನ್ನು ವಿಸ್ತರಿಸುವ ಕೆಲಸ ಮಾಡುವುದಕ್ಕೂ ಒಂದು ಪತ್ರಿಕೆ ಬೇಕಲ್ವಾ? ಆ ಕೆಲಸವನ್ನು ‘ಓ ಮನಸೇ' ಮಾಡುತ್ತದೆ.

ದುಡ್ಡು ಸಂಪಾದಿಸುವುದು ಹೇಗೆ ಅನ್ನುವುದನ್ನು ನಾವು ಹೇಳಿಕೊಡುವುದಿಲ್ಲ, ಬದಲಾಗಿ ಗೆಳೆಯರನ್ನು ಸಂಪಾದಿಸುವುದು ಹೇಗೆ ಅನ್ನುವುದನ್ನು ಹೇಳಿಕೊಡುತ್ತೇವೆ. ಶೇರು ಮಾರುಕಟ್ಟೆಯ ಸ್ಥಿತಿಗತಿ ಬಗ್ಗೆ ನಾವು ವಿವರಿಸುವುದಿಲ್ಲ, ಬದಲಾಗಿ ಶೇರುಗಳ ಹಂಗಿಲ್ಲದೇ ಬದುಕನ್ನು ಸುಂದರವಾಗಿಸುವುದು ಹೇಗೆ ಅನ್ನುವುದನ್ನು ವಿವರಿಸುತ್ತೇವೆ. ಹಿರಿಯರನ್ನು ಗೌರವಿಸುವುದು ಹೇಗೆ, ಕಿರಿಯರನ್ನು ಸಂಭಾಳಿಸುವುದು ಹೇಗೆ ಅನ್ನುವುದರ ಬಗ್ಗೆ ಬರೆಯುತ್ತೇವೆ.

ಓ ಮನಸೇ ಬಗ್ಗೆ ಮೆಚ್ಚುಗೆ ಏಕೆ? : ಮೋದಿಯವರು ಸ್ವಚ್ಛ ಭಾರತದ ಬಗ್ಗೆ ಹೇಳಿದರೆ, ನಾವು ನಮ್ಮೊಳಗನ್ನು ಸ್ವಚ್ಛಗೊಳಿಸುವುದು ಅಂದರೆ ಭಾವನೈರ್ಮಲ್ಯದ ಬಗ್ಗೆ ಹೇಳುತ್ತೇವೆ.

ಓದುಗರು ‘ಓ ಮನಸೇ' ಯನ್ನು ಮೆಚ್ಚಿಕೊಂಡಿರುವುದೂ ಇದೇ ಕಾರಣಕ್ಕೆ. ದಿನಪತ್ರಿಕೆಗಳ ಸಾಪ್ತಾಹಿಕ ಪುರವಣಿಗಳಲ್ಲಿ ಪ್ರಕಟವಾಗುವ ಕಥೆಕವನಗಳನ್ನು ಓದುವವರ ಸಂಖ್ಯೆ ಇತ್ತೀಚೆಗೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದು ಕತೆಗಾರ ಮತ್ತು ಪತ್ರಕರ್ತ ಜೋಗಿ ಮೊನ್ನೆ ಹೇಳುತ್ತಿದ್ದರು. ಅದು ಸ್ವಲ್ಪಮಟ್ಟಿಗೆ ನಿಜವೂ ಕೂಡಾ. ಇಂದಿನ ಪೀಳಿಗೆಗೆ ಕಥೆಕವನಗಳಿಗಿಂತ ಆತ್ಮಚರಿತ್ರೆಗಳು, ಪ್ರವಾಸಿ ಕಥನಗಳು, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಪಟ್ಟ ಲೇಖನಗಳು ಹೆಚ್ಚು ಇಷ್ಟವಾಗುತ್ತಿವೆ. [ಹಳೆ ಸಂಚಿಕೆ ಆನ್ ಲೈನ್ ನಲ್ಲಿ ಲಭ್ಯ]

ಹಾಗಂತ ಅವುಗಳನ್ನೇ ಮಣಗಟ್ಟಲೆ ತುಂಬಿ ಪತ್ರಿಕೆಯನ್ನು ರೂಪಿಸುವುದಕ್ಕಾಗುವುದಿಲ್ಲ. ಓದುಗರ ಇಷ್ಟಕ್ಕೆ ತಕ್ಕಂತೆ ಪತ್ರಿಕೆಯನ್ನು ರೂಪಿಸುವುದು ಒಂದು ವಿಧ, ನಮ್ಮಿಷ್ಟಕ್ಕೆ ತಕ್ಕಂತೆ ಓದುಗರನ್ನು ಒಲಿಸಿಕೊಳ್ಳುವುದು ಇನ್ನೊಂದು ವಿಧ. ಪ್ರೇಕ್ಷಕರು ನೋಡುತ್ತಾರೆ ಅನ್ನುವ ಕಾರಣಕ್ಕೆ ಬ್ಲೂಫಿಲಂ ತಯಾರಿಸುವುದಕ್ಕಾಗುವುದಿಲ್ಲ. ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದಂತೆ ಓದುಗರ ಇಷ್ಟಾರ್ಥಗಳೇನು ಎಂದು ಸರ್ವೆ ನಡೆಸಿದರೆ ತಲೆಗೊಂದರಂತೆ ಅಭಿಪ್ರಾಯಗಳು ಮೂಡಿಬರುವುದು ಗ್ಯಾರಂಟಿ.

ವಾಸ್ತವ ಏನಂದರೆ ನಮ್ಮಲ್ಲಿ ಬಹಳಷ್ಟು ಜನರಿಗೆ ತಮಗೇನು ಬೇಕು ಅನ್ನುವುದೇ ಗೊತ್ತಿರುವುದಿಲ್ಲ. ಒಂದು ಪುಟ್ಟ ಮಗುವನ್ನು ಆಟಿಕೆ ಅಂಗಡಿಯ ಮುಂದೆ ನಿಲ್ಲಿಸಿದರೆ ಅದು ಕಕ್ಕಾಬಿಕ್ಕಿಯಾಗುತ್ತಲ್ವಾ ಹಾಗೆ. ಹಾಗಾಗಿ ಪತ್ರಿಕೆ ಅನ್ನುವುದು ಕೇವಲ ಜನರ ಇಷ್ಟಾರ್ಥಗಳನ್ನು ಈಡೇರಿಸುವ ಯಂತ್ರವಾಗಬಾರದು. ಬದಲಾಗಿ ಜನರ ಇಷ್ಟಗಳಿಗೆ ಸ್ಪಂದಿಸುತ್ತಲೇ ಒಂದು ಸದಭಿರುಚಿಯ ಓದುಗವರ್ಗವನ್ನು ಕಟ್ಟುವ ಕೆಲಸವನ್ನು ಮಾಡಬೇಕು.

ಪತ್ರಿಕೆ ಗ್ರಾಹಕರಿಗೆ ತಲುಪಿಸುವುದೆ ದೊಡ್ಡ ಸರ್ಕಸ್: ಈಗ ಏನಿದ್ದರೂ ಮಾರ್ಕೆಟಿಂಗ್ ತಂತ್ರಗಳ ಕಾಲ. ಕಾರ್ಪೋರೇಟ್ ಸಂಸ್ಥೆಗಳು ಜನರನ್ನು ಗ್ರಾಹಕರು ಅನ್ನುತ್ತವೆ, ಇನ್ನೂ ಕೆಟ್ಟ ಭಾಷೆಯಲ್ಲಿ ಹೇಳುವುದಾದರೆ ಗಿರಾಕಿಗಳು ಎಂದೇ ಕರೆಯುತ್ತವೆ. ಈ ಸಂಸ್ಥೆಗಳು ಒಂದು ಪ್ರಾಡಕ್ಟನ್ನು ಗ್ರಾಹಕರಿಗೆ ತಲುಪಿಸುವುದಕ್ಕೆ ನಾನಾ ರೀತಿಯ ಸರ್ಕಸ್ ಮಾಡುತ್ತವೆ. ಪತ್ರಿಕೆ ಮತ್ತು ಟೀವಿಗಳಲ್ಲಿ ಜಾಹಿರಾತು ನೀಡುವುದು, ರಸ್ತೆಬದಿಯಲ್ಲಿ ದೊಡ್ಡ ಹೋರ್ಡಿಂಗುಗಳನ್ನು ಹಾಕುವುದು, ಸಿನಿಮಾ ನಾಯಕರನ್ನು ಮತ್ತು ಗಾಯಕರನ್ನು ಕರೆಸಿ ಈವೆಂಟುಗಳನ್ನು ಏರ್ಪಡಿಸುವುದು ಇತ್ಯಾದಿ.

ಆದರೆ ಇವೆಲ್ಲ ಕಸರತ್ತುಗಳು ಅಲ್ಪಾಯುಷಿಗಳು. ಕೊನೆಗೆ ಒಂದು ಉತ್ಪನ್ನ ಜನರಿಗೆ ಇಷ್ಟವಾಗಬೇಕಾದರೆ ಅದರ ಗುಣಮಟ್ಟ ಚೆನ್ನಾಗಿರಬೇಕು. ನಿಮಗೆ ಗೊತ್ತಿರುವ ಹಾಗೆ ‘ಬಂಗಾರದ ಮನುಷ್ಯ' ಸಿನಿಮಾ ತೆರೆಕಂಡಾಗ ಟೀವಿ ಚಾನೆಲ್ಲುಗಳಿರಲಿಲ್ಲ, ಎರಡೇ ದಿನಪತ್ರಿಕೆಗಳಿದ್ದವು, ರಾಜ್ ಕುಮಾರ್ ಅಷ್ಟೊಂದು ದೊಡ್ಡ ಸ್ಟಾರ್ ಆಗಿರಲಿಲ್ಲ. ಆದರೂ ಆ ಸಿನಿಮಾ ಗೆದ್ದಿತು, ನಾಡಿನಾದ್ಯಂತ ಜನರು ಹುಚ್ಚೆದ್ದು ಆ ಸಿನಿಮಾವನ್ನು ನೋಡಿದರು. ನೆನಪಿರಲಿ, ಆಗ ಜನರು ಆ ಚಿತ್ರದ ನಾಯಕ ರಾಜೀವನಲ್ಲಿ ರಾಜ್ ಕುಮಾರ್ ಅವರನ್ನು ನೋಡಲಿಲ್ಲ, ರಾಜ್ ಕುಮಾರ್ ಅವರಲ್ಲಿ ರಾಜೀವನನ್ನು ಕಂಡರು. [ಮಾಸ ಪತ್ರಿಕೆ 1 ಪೌಂಡಿಗೆ ಮಾರಾಟ]

ಹಾಗಾಗಿ ಭರ್ಜರಿ ಮಾರ್ಕೆಟಿಂಗ್ ಅಥವಾ ಅಬ್ಬರದ ಪ್ರಚಾರದ ಮೂಲಕ ಜನರನ್ನು ಗೆಲ್ಲಬಹುದು ಅನ್ನುವುದು ಒಂದು ಮಿಥ್, ಮೂಢನಂಬಿಕೆ ಅಷ್ಟೆ. ಆ ಕಾರಣಕ್ಕೇ ನಾವು ಜಾಹಿರಾತುಗಳನ್ನು ನೆಚ್ಚಿಕೊಂಡಿಲ್ಲ. ವೇಗವಾಗಿ ಬಂದಿದ್ದು ವೇಗವಾಗಿಯೇ ಕಣ್ಮರೆಯಾಗುತ್ತದೆ, ಜಡಿ ಮಳೆಯಂತೆ. ನಮ್ಮದು ತುಂತುರು ಮಳೆ, ನೆಲದೊಳಗೆ ಇಂಗಿ ಒರತೆಯಾಗಿ ಒಳ್ಳೆಯ ಫಸಲು ತೆಗೆಯುವ ಮಳೆ. ಅದೇ ರೀತಿಯಲ್ಲಿ ನಿಮ್ಮ ಮನಸ್ಸಿನೊಳಗೆ ಇಳಿದು, ಅಲ್ಲೇ ಶಾಶ್ವತವಾಗಿ ನೆಲೆಯಾಗುವ ಪತ್ರಿಕೆಯನ್ನು ರೂಪಿಸಿದ್ದೇವೆ ಎಂಬ ಹೆಮ್ಮೆ ನಮ್ಮದು.

ಓ ಮನಸೇಗೆ ನೂರು ತುಂಬಿದ ಸಂದರ್ಭದಲ್ಲಿ ನಮ್ಮ ನೆಚ್ಚಿನ ಕವಿ, ಸಹೃದಯಿ ಜಯಂತ್ ಕಾಯ್ಕಿಣಿ ಅವರು ನಾಲ್ಕು ಮನಮುಟ್ಟುವ ಸಾಲುಗಳನ್ನು ಬರೆದು ಕಳಿಸಿದ್ದಾರೆ. ಇದು ನಿಮಗೂ ಇಷ್ಟವಾದೀತು...ಜಯಂತ್ ಹೇಳಿದ್ದೇನು ಮುಂದೆ ಓದಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Preface to O Manase 100th edition by Ravi Belagere. Popular Kannada Magazine O Manase re launched on Dec.14 at Belagere Books and Coffee shop, Gandhi Bazar, Bangalore.O Manase Kannada magazine editor is Udaya Marakini
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more