ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಭಾನುವಾರ ಜಾನಪದಲೋಕದಲ್ಲಿ ಜನಪದ ಹಬ್ಬ

By Shami
|
Google Oneindia Kannada News

ರಾಮನಗರ, ಫೆ. 5 : ಕರ್ನಾಟಕ ಜಾನಪದದ ಪದರಪದರಗಳನ್ನು ಬಲ್ಲ ವಿದ್ವಾಂಸ ಡಾ ಎಚ್ಎಲ್ ನಾಗೇಗೌಡರು (1915-2005) ಮಂಡ್ಯ ಜಿಲ್ಲೆಯ ಹೆರಗನಹಳ್ಳಿಯವರು. ಕಾಲಚಕ್ರದ ಉರುಳಲ್ಲಿ ಅಪ್ಪಚ್ಚಿಯಾಗುತ್ತಿದ್ದ ಜನಪದದ ಅನೇಕ ಪ್ರಕಾರಗಳನ್ನು ಹೆಕ್ಕಿಹೆಕ್ಕಿ ತೆಗೆದು ಅದರ ಅಮೂಲ್ಯ ಭಂಡಾರವನ್ನೇ ನಿರ್ಮಿಸಿದವರು ಅವರು. ಈಗ ಅವರ ಜನ್ಮಶತಮಾನೋತ್ಸವ ವರ್ಷ.

ಅವರು ಓದಿದ್ದು ವಿಜ್ಞಾನ ಮತ್ತು ಕಾನೂನು. ಐಎಎಸ್ ಅಧಿಕಾರಿ ಆಗಿದ್ದರು. ವಿಧಾನ ಪರಿಷತ್ ಸದಸ್ಯರಾಗಿದ್ದರು. ಅನೇಕ ಕೃತಿಗಳನ್ನು ರಚಿಸಿದರು. ದಕ್ಷಿಣ ಕರ್ನಾಟಕದ ಗ್ರಾಮೀಣ ಸಂಸ್ಕೃತಿ ಕುರಿತು ಅವರ ರಚಿಸಿದ ಮೇರು ಕೃತಿ "ದೊಡ್ಡ ಮನೆ". ಮುಖ್ಯವಾಗಿ ನಿವೃತ್ತಿನಂತರ ಜನಪದ ಅಧ್ಯಯನ ಮತ್ತು ಅದರ ಜೋಪಾನಕ್ಕೆ ಬದುಕನ್ನು ಮೀಸಲಿಟ್ಟರು ನಾಗೇಗೌಡರು.

ಕರ್ನಾಟಕ ಜಾನಪದ ಪರಿಷತ್ತನ್ನು ಆರಂಭಿಸಿದ್ದು ಅವರೇ (1979). ಕರ್ನಾಟಕದ ಪಾರಂಪರಿಕ ಕಲೆಗಳು, ಜಾನಪದ ಗೀತ ಗಾಯನಗಳು, ಕರಕುಶಲ ವಸ್ತುಗಳು.. ಹೀಗೆ ಜನಪದ ಲೋಕವನ್ನು ಅಗೆದು ಬಗೆದು ಮುಂದಿನ ತಲೆಮಾರಿಗೆ ಬಳುವಳಿಯಾಗಿ ಕೊಟ್ಟವರು. ಬೆಂಗಳೂರು-ಮೈಸೂರು ರಸ್ತೆಯಲ್ಲಿ ರಾಮನಗರದ ಸಮೀಪ "ಜಾನಪದ ಲೋಕ" ಎಂಬ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿದರು (1986)

ನಾಗೇಗೌಡರ ಜನ್ಮಶತಮಾನೋತ್ಸವಕ್ಕೆ ಜಾನಪದಲೋಕ ಈಗ ಸಜ್ಜಾಗಿದೆ. ಈ ಉತ್ಸವ ನೋಡುವುದಕ್ಕಾಗಿ ನೀವು ಈ ಭಾನುವಾರವನ್ನು (ಫೆ.8) ಮೀಸಲಿಡಬಹುದು. ಬೆಂಗಳೂರಿನಿಂದ 53 ಕಿಮೀ. ಮೈಸೂರಿನಿಂದ 80 ಕಿಲೋಮೀಟರ್. ಜಾನಪದ ಕಲೆ, ಸಾಹಿತ್ಯ, ನೃತ್ಯಗಳನ್ನು ಪ್ರೋತ್ಸಾಹಿಸುವ "ಪ್ರವಾಸಿ ಜಾನಪದ ಲೋಕೋತ್ಸವ 2015" ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಬಹುದು. 300 ಕಲಾವಿದರು ತಮ್ಮ ಕಲಾಪ್ರೌಢಿಮೆಯನ್ನು ಪ್ರದರ್ಶಿಸುತ್ತಾರೆ.

ಎಲ್ಲದಕ್ಕಿಂತ ವಿಶೇಷವಾದದ್ದು ಏನಪ್ಪಾ ಅಂದ್ರೆ, ಅಪ್ಪಟ ಜಾನಪದ ಗಾಯಕರು ಹಾಡಿದ 100 ಸಿಡಿ ಬಿಡುಗಡೆ ಆಗತ್ತೆ. 2,000 ಗಂಟೆಗಳ ಜಾನಪದ ಗೀತ ಭಂಡಾರ ಡಿಜಿಟಲ್ ಆಗಿದೆ. ಇನ್ನೇನು ಬೇಕು! ಜಾನಪದ ಲೋಕದ ಸಮೀಪ ಕಾಮತ್ ಲೋಕ ರುಚಿ ಹೋಟೆಲ್ ಇದೆ. ಅಲ್ಲಿ ನೀವು, ನಿಮ್ಮ ಪರಿವಾರ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ ಊಟ ಮಾಡಿ, ಎಲೆ ಅಡಿಕೆ ಹಾಕಿಕೊಳ್ಳಬಹುದು!

ಜಾನಪದ ಲೋಕದಲ್ಲಿ ಏನೇನಿದೆ ಎಂಬುದನ್ನು ಮುಂದಿನ ಸ್ಲೈಡುಗಳಲ್ಲಿ ನೋಡಿರಿ. ಇವುಗಳನ್ನು ನೋಡಿದರೆ ಅಲ್ಲಿಗೆ ಹೋಗಲೇಬೇಕು ಎಂದು ನಿಮಗನ್ನಿಸುವುದು ನಿಶ್ಚಿತ.

ಜಾನಪದ ಲೋಕದ ಸೃಷ್ಟಿಕರ್ತ ನಾಗೇಗೌಡರು

ಜಾನಪದ ಲೋಕದ ಸೃಷ್ಟಿಕರ್ತ ನಾಗೇಗೌಡರು

ಕರ್ನಾಟಕದ ಹಳ್ಳಿಹಳ್ಳಿ ಸುತ್ತಿ, ಅಲ್ಲಿನ ಸಂಸ್ಕೃತಿಯನ್ನು ಕಣ್ಣಿಗೆ ಕಟ್ಟುವಂತೆ ಜಾನಪದ ಲೋಕದಲ್ಲಿ ಸೃಷ್ಟಿಸಿದ್ದಾರೆ ಡಾ. ಎಚ್ಎಲ್ ನಾಗೇಗೌಡರು.

ಕೈಮುಗಿದು ಬನ್ನಿ ಜಾನಪದ ಲೋಕದೊಳಗೆ

ಕೈಮುಗಿದು ಬನ್ನಿ ಜಾನಪದ ಲೋಕದೊಳಗೆ

ಜಾನಪದ ಲೋಕದ ಪ್ರವೇಶ ದ್ವಾರದಲ್ಲಿರುವ ಆಕರ್ಷಕ ಕೃತಿ. ಇಲ್ಲಿಂದ ಆರಂಭಿಸುತ್ತಿದ್ದಂತೆ ಹಳ್ಳಿಗಾಡಿನ ಒಂದೊಂದು ವಿಸ್ಮಯ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

ಹಳ್ಳಿಯಲ್ಲಿರುವಂತೆ ನಿರ್ಮಿಸಿರುವ ಗುಡಿಸಲು

ಹಳ್ಳಿಯಲ್ಲಿರುವಂತೆ ನಿರ್ಮಿಸಿರುವ ಗುಡಿಸಲು

ನಗರ ಸಂಸ್ಕೃತಿಯಿಂದ ದೂರವಿರುವ ಅಪ್ಪಟ ಹಳ್ಳಿಯಲ್ಲಿರುವ ಗುಡಿಸಲಿನಂತೆ ಜಾನಪದ ಲೋಕದಲ್ಲಿಯೂ ಗುಡಿಸಲನ್ನು ನಾಗೇಗೌಡರು ನಿರ್ಮಿಸಿದ್ದಾರೆ.

ನಗರದಲ್ಲಿದ್ದೇವಾ, ಹಳ್ಳಿಯಲ್ಲಿದ್ದೇವಾ?

ನಗರದಲ್ಲಿದ್ದೇವಾ, ಹಳ್ಳಿಯಲ್ಲಿದ್ದೇವಾ?

ಗುಡಿಸಲನ್ನು ಪ್ರವೇಶಿಸುತ್ತಿದ್ದಂತೆ ಕಣ್ಣಿಗೆ ಕಾಣುವ ಒಂದೊಂದು ವಸ್ತುಗಳು ಅಚ್ಚರಿಯನ್ನುಂಟು ಮಾಡುತ್ತವೆ. ಪುರಾತನ ಕಾಲದಲ್ಲಿ ಹೀಗೂ ಮನೆಗಳು ಇದ್ದವಾ ಎಂಬಂತೆ ಅಚ್ಚರಿಪಡುವ ಸರದಿ ವೀಕ್ಷಕರದು.

ಇದು ಸೃಷ್ಟಿಸಿದ್ದಲ್ಲ, ಹುಡುಕಾಡಿ ತಂದಿದ್ದು

ಇದು ಸೃಷ್ಟಿಸಿದ್ದಲ್ಲ, ಹುಡುಕಾಡಿ ತಂದಿದ್ದು

ಗುಡಿಸಲಿನಲ್ಲಿನ ಒಂದೊಂದು ವಸ್ತುಗಳೂ ಸಂತಸದ ಬುಗ್ಗೆಯುಕ್ಕಿಸುತ್ತವೆ. ಅಂದಿನ ಕಾಲದಲ್ಲಿ ಇರುತ್ತಿದ್ದ ಮಣ್ಣಿನ ಮಡಕೆಗಳು, ಮಾಡುಗಳು, ರಂಟೆ ಹೊಡೆಯುವ ಸಾಧನ, ಧಾನ್ಯ ಕೂಡಿಡುತ್ತಿದ್ದ ಗೂಡು... ವಾಹ್ ವಾಹ್!

ಇನ್ನೂ ಏನೇನಿದೆ ನೀವೇ ಹೋಗಿ ನೋಡಿರಿ

ಇನ್ನೂ ಏನೇನಿದೆ ನೀವೇ ಹೋಗಿ ನೋಡಿರಿ

ಇಡೀ ದಿನ ಸುತ್ತಾಡಿದರೂ ದಣಿವಾಗದಂತಹ ಸ್ಥಳ ಜಾನಪದ ಲೋಕ. ಇನ್ನು ಹೊಟ್ಟೆ ಹಸಿದರಂತೂ ಪಕ್ಕದಲ್ಲಿಯೇ ಇದೆ ಕಾಮತ್ ಹೋಟೆಲ್. ಹೋಗಿ ಬನ್ನಿ, ಮಸ್ತ್ ಮಜಾ ಮಾಡಿ.

English summary
100 CDs containing 2000 hours of Karnataka Folklore songs rendered by original singers set for release, on Sunday 8th February during Pravasi Janapada Lokotsava - 2015 at folk art museum near Ramanagar, off Mysore road. 2015 is centenary year of Dr H.L. Nagegowda, the founder of Janapada Loka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X