ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಸಾರ ಭಾರತಿಗೆ ಸೂರ್ಯ ಪ್ರಕಾಶ್, ಸಂಭ್ರಮಿಸಿದ ಅರಕಲಗೂಡು

By ಅರಕಲಗೂಡು ಜಯಕುಮಾರ್
|
Google Oneindia Kannada News

ಅರಕಲಗೂಡು, ಅ. 29 : ಪ್ರಸಾರ ಭಾರತಿ ಅಧ್ಯಕ್ಷರಾಗಿ ಡಾ. ಅರಕಲಗೂಡು ಸೂರ್ಯ ಪ್ರಕಾಶ್ ಹೆಸರನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದ ಸುದ್ದಿ ಹೊರ ಬೀಳುತ್ತಿದ್ದಂತೆ ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ಸಂಭ್ರಮದ ವಾತಾವರಣ ನೆಲೆಸಿತ್ತು.

ಪ್ರಸಾರ ಭಾರತಿ ಅಧ್ಯಕ್ಷ ಸ್ಥಾನಕ್ಕೆ 10ಕ್ಕೂ ಹೆಚ್ಚು ಹೆಸರುಗಳು ಸ್ಪರ್ಧೆಯಲ್ಲಿದ್ದವು. ಈ ಪೈಕಿ ಡಾ. ಅರಕಲಗೂಡು ಸೂರ್ಯ ಪ್ರಕಾಶ್ ಹೆಸರು ಮುಂಚೂಣಿಯಲ್ಲಿತ್ತು. ದೆಹಲಿಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಸೂರ್ಯ ಪ್ರಕಾಶ್ ದೇಶದ ಖ್ಯಾತ ಅಂಕಣಕಾರ ಹಾಗೂ ಭಾರತ ಸಂವಿಧಾನ ಮತ್ತು ಸಂಸದೀಯ ವಿಷಯಗಳ ಪ್ರಮುಖ ವಿಮರ್ಶೆಕಾರರಾಗಿ ಹೆಸರು ಮಾಡಿದವರು. ಅಷ್ಟೇ ಅಲ್ಲ ಪ್ರಚಲಿತ ರಾಜಕೀಯ ವಿದ್ಯಮಾನಗಳ ಕುರಿತು ಆಳ ಚಿಂತನೆಗಳನ್ನು ಹೊಂದಿದ ಪತ್ರಕರ್ತರಾಗಿದ್ದಾರೆ.

Prasar Bharati chairman Arkalgud Surya Prakash profile

ವಲಸೆ ಹೋದ ಪ್ರತಿಭಾವಂತರ ಕುಟುಂಬ : ಸೂರ್ಯ ಪ್ರಕಾಶ್ ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದವರಾಗಿದ್ದು, ಇವರ ಸಹೋದರ ಡಾ|| ಅರಕಲಗೂಡು ರಾಮದಾಸ್ ದೇಶದ ಪ್ರತಿಷ್ಠಿತ ಏಮ್ಸ್ ವೈದ್ಯಕೀಯ ಸಂಸ್ಥೆಯಲ್ಲಿ ಬೈಪಾಸ್ ಸರ್ಜರಿ ವಿಭಾಗದ ಪ್ರಮುಖ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶದ ಮಾಜಿ ಪ್ರದಾನಿ ಮನಮೋಹನ್ ಸಿಂಗ್, ಪ್ರಧಾನಿಯಾಗಿದ್ದಾಗ ಬೈಪಾಸ್ ಸರ್ಜರಿ ಚಿಕಿತ್ಸೆಗೆ ಒಳಗಾಗಿದ್ದರು. ಆ ಸಂಧರ್ಭದಲ್ಲಿ ಚಿಕಿತ್ಸಾ ತಂಡದ ನೇತೃತ್ವವನ್ನು ಡಾ|| ಅರಕಲಗೂಡು ರಾಮದಾಸ್ ವಹಿಸಿದ್ದರು.

ಸೂರ್ಯ ಪ್ರಕಾಶ್ ಮತ್ತು ರಾಮದಾಸ್ ಕುಟುಂಬ ದಶಕಗಳ ಹಿಂದೆಯೇ ಉದ್ಯೋಗದ ಸಲುವಾಗಿ ಪಟ್ಟಣವನ್ನು ತೊರೆದಿದೆ. ಆದರೆ ಹುಟ್ಟೂರಿನ ನೆನಪಿನಲ್ಲಿ ಸೂರ್ಯಪ್ರಕಾಶ್ ಪಟ್ಟಣಕ್ಕೆ ಆಗಾಗ ಭೇಟಿ ನೀಡುತ್ತಿರುತ್ತಾರೆ ಹಾಗೂ ಹುಟ್ಟೂರಿನ ನೆನಪಿಗಾಗಿ ಸಹೋದರರಿಬ್ಬರು ಹೆಸರಿನ ಮುಂದೆ ಅರಕಲಗೂಡು ಹೆಸರನ್ನು ಇಟ್ಟುಕೊಂಡಿದ್ದಾರಲ್ಲದೇ ತಮ್ಮ ಮಕ್ಕಳ ಹೆಸರಿನ ಮೊದಲಿಗೆ ಅರಕಲಗೂಡು ಹೆಸರನ್ನು ಸೇರ್ಪಡೆ ಮಾಡಿಕೊಂಡಿರುವುದು ಹುಟ್ಟೂರಿನ ಪ್ರೀತಿಗೆ ಸಾಕ್ಷಿಯಾಗಿದೆ.

ಎರಡನೇ ಕನ್ನಡಿಗ : ಹಿರಿಯ ಪತ್ರಕರ್ತ ಎಂ.ವಿ ಕಾಮತ್ ಪ್ರಸಾರ ಭಾರತಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ಕನ್ನಡಿಗರಾಗಿದ್ದರು. ಈಗ ಡಾ. ಅರಕಲಗೂಡು ಸೂರ್ಯ ಪ್ರಕಾಶ್ ಪ್ರಸಾರ ಭಾರತಿ ಅಧ್ಯಕ್ಷರಾಗುವ ಮೂಲಕ ದೇಶದ ಪ್ರತಿಷ್ಠಿತ ಪ್ರಸಾರ ಭಾರತಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಎರಡನೇ ಕನ್ನಡಿಗರೆಂಬ ಹೆಮ್ಮೆಗೆ ಭಾಜನರಾಗಿದ್ದಾರೆ.

ಡಾ. ಅರಕಲಗೂಡು ಸೂರ್ಯ ಪ್ರಕಾಶ್ 2004ರಲ್ಲಿ ನಡೆದ ಮಹಾಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಸರ್ಕಾರಿ ವೆಚ್ಚದಲ್ಲಿ ಪಕ್ಷದ ಮುಖಂಡ ಕಾನ್ಸಿರಾಂ, ಆನೆ ಮತ್ತು ಮಾಯವತಿ ವಿಗ್ರಹಗಳನ್ನು ಸ್ಥಾಪಿಸಿದ ಕುರಿತು ಆಕ್ಷೇಪವೆತ್ತಿದ್ದರು. ಇದಕ್ಕೆ ಕಾಂಗ್ರೆಸ್ ಕೂಡ ಹೊರತಾಗಿಲ್ಲ ಎಂದು ಕಾಂಗ್ರೆಸ್ ಪಕ್ಷವೂ ಕಳೆದ 60 ವರ್ಷಗಳಿಂದ ಹೇಗೆ ಸರ್ಕಾರಿ ಯೋಜನೆಗಳಿಗೆ ಗಾಂಧಿ ಕುಟುಂಬದ ಹೆಸರನ್ನು ಬಳಸಿಕೊಂಡಿದೆ ಎಂಬುದನ್ನು ವಿವರವಾಗಿ ಅಧ್ಯಯನ ಮಾಡಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿ, ಕ್ರಮಕ್ಕೆ ಆಗ್ರಹಿಸಿ, ರಾಷ್ಟ್ರದಾದ್ಯಂತ ಸುದ್ದಿಗೆ ಗ್ರಾಸವಾಗಿದ್ದರು. ದೇಶದ ಥಿಂಕ್ ಟ್ಯಾಂಕ್ ಸದಸ್ಯರ ಪೈಕಿ ಸೂರ್ಯ ಪ್ರಕಾಶ್ ಒಬ್ಬರು ಎಂಬುದು ಸಹಾ ಹೆಮ್ಮೆಯ ಸಂಗತಿಯಾಗಿದೆ.

ಅಲಂಕರಿಸಿದ ಹುದ್ದೆಗಳು ಹಲವಾರು : ಕಳೆದ ಎರಡೂವರೆ ದಶಕಗಳಿಂದ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಪ್ರಮುಖ ಹುದ್ದೆಗಳನ್ನು ಸೂರ್ಯಪ್ರಕಾಶ್ ಅಲಂಕರಿಸಿದ್ದಾರೆ. ಝೀ ಸುದ್ದಿ ವಾಹಿನಿಯ ಸಂಪಾದಕ, ಪಯೋನೀರ್ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ, ಏಷ್ಯನ್ ಟೈಮ್ಸ್ ಸಿಂಗಪುರ್ ಮತ್ತು ಬ್ಯಾಂಕಾಕ್ ಆವೃತ್ತಿಯ ಸಂಪಾದಕ, ಈ ನಾಡು ಸಮೂಹ ಸಂಸ್ಥೆಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದ ಅವರು ಸದ್ಯ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ದೆಹಲಿ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. 1971ರಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಬೆಂಗಳೂರು ವರದಿಗಾರರಾಗುವ ಮೂಲಕ ಸೂರ್ಯ ಪ್ರಕಾಶ್ ಪತ್ರಿಕಾ ರಂಗವನ್ನು ಪ್ರವೇಶಿಸಿದ್ದರು.

English summary
Arkalgud Surya Prakash is the second Kannada after M.V. Kamath to head Prasar Bharati, which is India's largest public broadcaster. Dr. A. Surya Prakash is an author and Columnist and a leading commentator on Indian constitutional and parliamentary issues and governance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X