ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ ಘೋಷಣೆ: ಯಾರು ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ!

|
Google Oneindia Kannada News

ಬೆಂಗಳೂರು, ಸೆ. 28: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೊಷಣೆಯಾಗಿದೆ. ಉಪ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೆ ಮೂರು ರಾಜಕೀಯ ಪಕ್ಷಗಳಲ್ಲಿ ಬಹಳಷ್ಟು ಬೆಳವಣಿಗೆಗಳಾಗುತ್ತಿವೆ. ಉಪ ಚುನಾವಣೆ ಘೋಷಣೆ ನಿರೀಕ್ಷಿತವೇ, ಆದರೂ ಒಂದೇ ತಿಂಗಳಲ್ಲಿ ಚುನಾವಣೆ ಮಾಡಿ ಮುಗಿಸಲು ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಹೀಗಾಗಿ ಮೂರು ರಾಜಕೀಯ ಪಕ್ಷಗಳು ಅದರಲ್ಲಿಯೂ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಈ ಉಪ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ.

ಮೂರು ರಾಜಕೀಯ ಪಕ್ಷಗಳ ನಾಯಕರು ತಮ್ಮದೇ ರೀತಿಯಲ್ಲಿ ಚುನಾವಣೆಗೆ ತಂತ್ರ ರೂಪಿಸಿವೆ. ಗೆಲ್ಲುವ ಉತ್ಸಾಹ ಎಲ್ಲರಲ್ಲಿಯೂ ಇದೆ. ಹೀಗಾಗಿ ಮೂರು ರಾಜಕೀಯ ಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಜೊತೆಗೆ ಅದಕ್ಕೆ ಸೂಕ್ತ ಕಾರಣಗಳನ್ನು ಕೊಟ್ಟಿದ್ದಾರೆ.

ಉಪ ಚುನಾವಣೆ ಕುರಿತು ತಮ್ಮ ಪ್ರತಿಕ್ರಿಯೆಯನ್ನು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಕೊಟ್ಟಿದ್ದಾರೆ. ಯಾರು ಏನು ಹೇಳಿದ್ದಾರೆ? ಮುಂದಿದೆ ಓದಿ!

ಉಪ ಚುನಾವಣೆಗೆ ಜೆಡಿಎಸ್ ಸಿದ್ಧತೆ!

ಉಪ ಚುನಾವಣೆಗೆ ಜೆಡಿಎಸ್ ಸಿದ್ಧತೆ!

ಉಪ ಚುನಾವಣೆ ಗೆಲ್ಲಲು ಈಗಾಗಲೇ ನಾವು ತುರಾಯಿಯನ್ನು ನಡೆಸಿದ್ದೇವೆ ಎಂದು ಜೆಡಿಎಸ್ ನಾಯಕ ವೈ.ಎಸ್.ವಿ. ದತ್ತಾ ಹೇಳಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿರುವ ಅವರು, "ನಮ್ಮ ಪಕ್ಷದ ವರಿಷ್ಠರಾದ ದೇವೇಗೌಡರು ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮ ಮಾಡಿದ್ದಾರೆ. ನಾಳೆ, ನಾಡಿದ್ದು ಪಕ್ಷದ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಣೆ ಮಾಡುತ್ತೇವೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳನ್ನು ಸಮಾನವಾದ ದೂರದಲ್ಲಿಟ್ಟು, ನಮ್ಮ ಪಕ್ಷದ ಅಸ್ತಿತ್ವ ಹಾಗೂ ನಮ್ಮ ಕಾರ್ಯಕರ್ತರ ಅಳಿವು ಉಳಿವಿನ ಪ್ರಶ್ನೆ ಇಟ್ಟುಕೊಂಡು ಹೋರಾಟ ಮಾಡುತ್ತೇವೆ" ಎಂದಿದ್ದಾರೆ.

ಉಪ ಸಮರದ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆ!

ಉಪ ಸಮರದ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆ!

ಉಪ ಚುನಾವಣೆ ಕುರಿತು ವಿಧಾನಸೌಧದಲ್ಲಿ ಮಾತನಾಡಿರುವ ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಅಮರೇಗೌಡ ಭಯ್ಯಾಪುರ ಅವರು, "ಬಿಜೆಪಿಯ ಆಡಳಿತ ಮತ್ತು ಬೆಲೆ ಏರಿಕೆ, ರೈತರ ಮೇಲಿನ ದೌರ್ಜನ್ಯದಿಂದ ಜನರು ಬೇಸತ್ತಿದ್ದಾರೆ. ಬಿಜೆಪಿ ರೈತರ ಬೆನ್ನೆಲುಬು ಮುರಿದಿರುವ ಸರ್ಕಾರ. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ. ದೊಡ್ಡ ಬಹುಮತದಿಂದ ಉಪ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಮಸ್ಕಿ ಉಪ ಚುನಾವಣೆಯಲ್ಲಿ ಜನರು ಈಗಾಗಲೇ ತೀರ್ಪು ಕೊಟ್ಟಿದ್ದಾರೆ. ಅದು ಈ ಉಪ ಚುನಾವಣೆಯಲ್ಲಿಯೂ ಆಗಲಿದೆ" ಎಂದಿದ್ದಾರೆ.

ಗೆಲ್ಲೋದು ನಾವೇ ಅಂತಿದ್ದಾರೆ ಬಿಜೆಪಿ ನಾಯಕರು!

ಗೆಲ್ಲೋದು ನಾವೇ ಅಂತಿದ್ದಾರೆ ಬಿಜೆಪಿ ನಾಯಕರು!

ಇನ್ನು ಉಪ ಚುನಾವಣೆ ಬಗ್ಗೆ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರು, "ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ. ಉಪ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಅಡ್ರೆಸ್ ಇಲ್ಲದಂತೆ ಹೋಗಲಿದೆ. ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್ ಎಲ್ಲರ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ನಮ್ಮಲ್ಲಿ ಡಜನ್ ಗಟ್ಟಲೆ ನಾಯಕರಿದ್ದಾರೆ. ನಿಮಗೆ ತಾಕತ್ತು ಇದ್ದರೆ, ಸಿಎಂ ಅಭ್ಯರ್ಥಿ ಯಾರು? ಅಂತ ಮೊದಲು ಹೇಳಿ. ಡಿ.ಕೆ. ಶಿವಕುಮಾರ್ ಅವರಾ ಅಥವಾ ಸಿದ್ದರಾಮಯ್ಯ ಅವರಾ?" ಎಂದು ಪ್ರಶ್ನಿಸಿದ್ದಾರೆ. ಆ ಮೂಲಕ ಗೆಲುವು ನಮ್ಮದೇ ಎಂದು ಬಿಜೆಪಿ ಹೇಳಿದೆ. ಇದಕ್ಕೆ ಕಾಂಗ್ರೆಸ್ ನಾಯಕರು ತಿರುಗೇಟು ಕೊಟ್ಟಿದ್ದಾರೆ.

ರವಿಕುಮಾರ್‌ಗೆ ತಿರುಗೇಟು ಕೊಟ್ಟ ಖಂಡ್ರೆ!

ರವಿಕುಮಾರ್‌ಗೆ ತಿರುಗೇಟು ಕೊಟ್ಟ ಖಂಡ್ರೆ!

ಕಾಂಗ್ರೆಸ್ ಅಡ್ರೆಸ್ಸಿಲ್ಲದಂತೆ ಹೋಗಲಿದೆ ಎಂಬ ರವಿಕುಮಾರ್ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿರುಗೇಟು ಕೊಟ್ಟಿದ್ದಾರೆ. "ಕಾಂಗ್ರೆಸ್ ಪಕ್ಷ ಚುನಾವಣೆಗೆ ಸಂಪೂರ್ಣವಾಗಿ ಸಜ್ಜಾಗಿದೆ. ಸಿಂಧಗಿ ಕ್ಷೇತ್ರಕ್ಕೆ ಅಶೋಕ್ ಮನಗೂಳಿ ಹೆಸರು ಘೋಷಣೆಯಾಗಿದೆ. ಹಾನಗಲ್ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ರಾಜ್ಯದ ನಾಯಕರೊಂದಿಗೆ ರಾಯಚೂರಿನಲ್ಲಿ ಚರ್ಚೆ ಮಾಡಿದ್ದಾರೆ. ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಕೊರೊನಾದಿಂದ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸುತ್ತದೆ" ಎಂದಿದ್ದಾರೆ.

ಒಟ್ಟಾರೆ ಮೂರು ಪಕ್ಷಗಳ ನಾಯಕರು ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಯಾರು ಗೆಲ್ಲುತ್ತಾರೆ ಎಂಬುದು ನ. 2ರಂದು ತಿಳಿಯಲಿದೆ.

English summary
Political leaders Reaction On Sindagi And Hangal By Election. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X