• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿರಿಯ ಜೀವಿ ಜಿ.ಮಾದೇಗೌಡರ ನಿಧನಕ್ಕೆ ಮುಖಂಡರಿಂದ ಸಂತಾಪ

|
Google Oneindia Kannada News

ಹಿರಿಯ ರಾಜಕಾರಣಿ, ಮಾಜಿ ಲೋಕಸಭಾ ಸದಸ್ಯರು ಹಾಗೂ ಮಾಜಿ ಸಚಿವ ಜಿ.ಮಾದೇಗೌಡರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾದೇಗೌಡರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 4ಕ್ಕೆ ಹನುಮಂತನಗರ ಎಂಬಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ ಎಂದು ಸಿಎಂ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಗಾಂಧಿವಾದಿಯಾಗಿ, ಗಾಂಧಿ ಅವರ ತತ್ವ ಆದರ್ಶಗಳನ್ನು ಜೀವನುದ್ದಕ್ಕೂ ಪಾಲಿಸಿದ ಮಾದೇಗೌಡರು, ಕಾವೇರಿ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದವರು. ರೈತ ಹೋರಾಟಗಳಲ್ಲಿ ಅವರು ಸಕ್ರಿಯರಾಗಿ ಅಪಾರ ಜನಮನ್ನಣೆ ಗಳಿಸಿದ್ದರು. ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು.

ಅವರ ನಿಧನದಿಂದ ರೈತ ಹಾಗೂ ಜನಪರ ಹೋರಾಟಗಾರರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದ ಸದಸ್ಯರು ಹಾಗೂ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರಿಂದ ಸಂತಾಪ: ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷರು, ರೈತ ಹೋರಾಟಗಾರರು, ಭಾರತಿ ವಿದ್ಯಾ ಸಂಸ್ಥೆಯ ಜನಕರು, ಮಾಜಿ ಸಚಿವರು ಮತ್ತು ಸಂಸದರೂ ಆಗಿದ್ದ ಶ್ರೀ ಜಿ ಮಾದೇಗೌಡರವರು ಚಿರನಿದ್ರೆಗೆ ಜಾರಿದ ಸುದ್ದಿ ಅತೀವ ದುಃಖ ತಂದಿದೆ.

ಮಾಜಿ ಸಂಸದ, ರೈತ ಹೋರಾಟಗಾರ ಜಿ. ಮಾದೇಗೌಡ ನಿಧನಮಾಜಿ ಸಂಸದ, ರೈತ ಹೋರಾಟಗಾರ ಜಿ. ಮಾದೇಗೌಡ ನಿಧನ

ರಾಜ್ಯಕ್ಕೆ ತಮ್ಮ ನಿಸ್ವಾರ್ಥ ಸೇವೆ ಮತ್ತು ಹೋರಾಟದ ಛಲ ಮುಂಬರುವ ಪೀಳಿಗೆಗಳಿಗೆ ಮಾದರಿಯಾಗಿ ಉಳಿಯಲಿದೆ. ತಮ್ಮ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ತಮ್ಮ ಕುಟುಂಬದವರಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ತಮ್ಮ ಆತ್ಮಕ್ಕೆ ಶಾಂತಿ ಕೋರುತ್ತೇನೆ.

ರೈತರಿಗಾಗಿ ಬದುಕು ಮುಡಿಪಿಟ್ಟ ಹೋರಾಟಗಾರ

ರೈತರಿಗಾಗಿ ಬದುಕು ಮುಡಿಪಿಟ್ಟ ಹೋರಾಟಗಾರ

ನಾಡು ಕಂಡ ಶ್ರೇಷ್ಠ ರಾಜಕಾರಣಿ, ರೈತಪರ ನಾಯಕ, ಹೋರಾಟಗಾರ ಜಿ.ಮಾದೇಗೌಡರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಕೆ.ಎಂ.ದೊಡ್ಡಿಯ ಆಸ್ಪತ್ರೆಗೆ ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿಕೊಂಡು ಬಂದಿದ್ದೆ. ಆರೋಗ್ಯ ಸುಧಾರಣೆಯಾಗಿ ಕ್ಷೇಮವಾಗಿ ಅವರು ಮನೆಗೆ ವಾಪಸ್‌ ಬರುತ್ತಾರೆಂಬ ವಿಶ್ವಾಸವಿತ್ತು. ಆದರೆ ನನ್ನನ್ನೂ ಒಳಗೊಂಡಂತೆ ಅಸಂಖ್ಯಾತ ಅಭಿಮಾನಿಗಳನ್ನು ನಿರಾಶೆಗೊಳಿಸಿ ಅವರು ಅಗಲಿರುವುದು ತೀವ್ರ ದುಃಖ ಉಂಟು ಮಾಡಿದೆ ಎಂದು ಡಿಸಿಎಂ ಕಂಬನಿ ಮಿಡಿದ್ದಾರೆ.

ಮಾದೇಗೌಡರು ಶಾಸಕರಾಗಿದ್ದರು, ಸಚಿವರಾಗಿದ್ದರು, ಸಂಸದರಾಗಿದ್ದರು. ಛಲಬಿಡದ ಹೋರಾಟಗಳಿಂದ ಸಮಾಜಮುಖಿಯಾಗಿ ಕೆಲಸ ಮಾಡಿದ ಅವರು ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದರು. ಕಾವೇರಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದ ಅವರು, ರೈತರ ಹಿತಕ್ಕಾಗಿ ತಮ್ಮ ರಾಜಕೀಯ ಭವಿಷ್ಯವನ್ನು ಲೆಕ್ಕಿಸದ ನಿಷ್ಠುರ ನಾಯಕರಾಗಿದ್ದರು. ಅವರ ರಾಜಕೀಯ ಮತ್ತು ವೈಯಕ್ತಿಕ ಜೀವನ ತೆರೆದ ಪುಸ್ತಕವಾಗಿತ್ತು.

ಜೀವನಪೂರ್ತಿ ಹೋರಾಟ, ಮೌಲ್ಯಗಳೊಂದಿಗೆಯೇ ಬದುಕಿದ ಮಾದೇಗೌಡರು ಮಂಡ್ಯ ಜಿಲ್ಲೆಗೆ ಮಾತ್ರವಲ್ಲ ಇಡೀ ರಾಜ್ಯ ಮತ್ತು ದೇಶಕ್ಕೆ ಗೌರವ ತಂದುಕೊಟ್ಟ ಅಪರೂಪದ ನಾಯಕರಾಗಿದ್ದರು. ಸರಳತೆ, ಸಜ್ಜನಿಕೆ ಹಾಗೂ ನೇರ ನಡವಳಿಕೆಯಿಂದ ಮಾದರಿಯಾಗಿದ್ದರು.

ಜಿ.ಮಾದೇಗೌಡರ ನಿಧನ ವೈಯಕ್ತಿಕವಾಗಿ ನನಗೆ ಬಹಳ ದುಃಖ ಉಂಟು ಮಾಡಿದೆ. ಅವರ ಅಗಲಿಕೆಯನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಸಿಗಲಿ ಹಾಗೂ ಆ ಮಹಾನ್‌ ಚೇತನಕ್ಕೆ ಚಿರಶಾಂತಿ ದೊರೆಯಲಿ ಎಂದು ಡಾ.ಅಶ್ವತ್ಥನಾರಾಯಣ ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ದಾರೆ.

ಮಾದೇಗೌಡರ ನಿಧನಕ್ಕೆ ಜಗದೀಶ್ ಶೆಟ್ಟರ್ ತೀವ್ರ ಸಂತಾಪ

ಮಾದೇಗೌಡರ ನಿಧನಕ್ಕೆ ಜಗದೀಶ್ ಶೆಟ್ಟರ್ ತೀವ್ರ ಸಂತಾಪ

ಜನಪರ ಹೋರಾಟಗಾರ, ಹಿರಿಯ ಗಾಂಧಿವಾದಿ, ಮಾಜಿ ಸಚಿವರು ಹಾಗೂ ಸಂಸದರಾದ ಜಿ ಮಾದೇಗೌಡರ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ದಶಕಗಳ ಜನಪರ ಚಳುವಳಿಗಳ ಮೂಲಕ ಮಂಡ್ಯ ಜಿಲ್ಲೆಯ, ಕಾವೇರಿ ನದಿಯ ಹಾಗೂ ರಾಜ್ಯದ ಅಸ್ಮಿತೆ ಎತ್ತಿ ಹಿಡಿಯುವ ಕಾರ್ಯಮಾಡಿದ್ದರು. ಅದರಲ್ಲೂ ಕಾವೇರಿ ನದಿ ನೀರು ಹೋರಾಟಗಳಲ್ಲಿ ಅವರ ಪಾತ್ರ ಮಹತ್ವವಾದದ್ದು. ಅವರ ಅಕಾಲಿಕ ನಿಧನದಿಂದ ರಾಜ್ಯ ಮತ್ತು ಭಾರತ ದೇಶ ಜನಪರ ಕಾಳಜಿಯ ನಾಯಕರನ್ನು ಕಳೆದುಕೊಂಡಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಅಪಾರ ಬಂಧುಗಳಿಗೆ ಹಾಗೂ ಕುಟುಂಬ ವರ್ಗದವರಿಗೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ

ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ

ಮಾಜಿ ಸಂಸದ, ಮಾಜಿ ಸಚಿವ, ಹಿರಿಯ ರೈತ ಪರ ಹೋರಾಟಗಾರ ಜಿ. ಮಾದೇಗೌಡ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.

'ಜಿ.ಮಾದೇಗೌಡ ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ. ಅವರು ನಮ್ಮೊಡನೆ ಇಲ್ಲ ಎಂಬುದೇ ಬಹಳ ನೋವಿನ ಸಂಗತಿ.

ರಾಜ್ಯ ಕಂಡ ಜನಪರ, ರೈತಪರ ಹೋರಾಟಗಾರ ಜಿ. ಮಾದೇಗೌಡರು. ಇವರು ಆರು ಬಾರಿ ಶಾಸಕರಾಗಿ, ಮಾಜಿ ಸಿಎಂ ಗುಂಡೂರಾವ್ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಎರಡು ಬಾರಿ ಲೋಕಸಭೆಗೂ ಆಯ್ಕೆಯಾಗಿದ್ದರು. ತಮ್ಮ ರಾಜಕೀಯ ಜೀವನದುದ್ದಕ್ಕೂ ರೈತಪರ ಹೋರಾಟಕ್ಕೆ ತಮ್ಮ ಶ್ರಮವನ್ನು ಧಾರೆಯೆರೆದರು.

ಕಾವೇರಿ ಹೋರಾಟವನ್ನು ತಮ್ಮ ಉಸಿರಾಗಿಸಿಕೊಂಡು, ಆ ನೀರಿನ ಹಕ್ಕಿಗಾಗಿ ನಡೆದ ಹೋರಾಟಕ್ಕೆ ತಮ್ಮ ಜೀವನವನ್ನೇ ಮುಡಿಪಿಟ್ಟರು. ತಮ್ಮ ಇಳಿ ವಯಸ್ಸಿನಲ್ಲೂ ಕಾವೇರಿ ಹೋರಾಟದಲ್ಲಿ ಭಾಗವಹಿಸಿದ್ದು ಅವಿಸ್ಮರಣೀಯ.

ನಾವೆಲ್ಲರೂ ಹಿರಿಯ ನಾಯಕರೊಬ್ಬರನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಶಿವಕುಮಾರ್ ಅವರು ತಮ್ಮ ಶೋಕಸಂದೇಶದಲ್ಲಿ ತಿಳಿಸಿದ್ದಾರೆ.

ನಳಿನ್‍ಕುಮಾರ್ ಕಟೀಲ್ ಸಂತಾಪ

ನಳಿನ್‍ಕುಮಾರ್ ಕಟೀಲ್ ಸಂತಾಪ

ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷರು ಮತ್ತು ಮಾಜಿ ಸಂಸದರೂ ಆದ ಶ್ರೀ ಜಿ.ಮಾದೇಗೌಡ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಅವರ ನಿಧನದಿಂದಾಗಿ ನಾಡು, ರೈತಪರ ಮತ್ತು ಜನಪರ ಹೋರಾಟಗಾರರೊಬ್ಬರನ್ನು ಕಳೆದುಕೊಂಡಿದೆ ಎಂದು ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಶ್ರೀ ಮಾದೇಗೌಡರು ಕಾವೇರಿ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿದ್ದರು. 1962ರಿಂದ ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಿರುಗಾವಲು ಕ್ಷೇತ್ರ ಮಳವಳ್ಳಿ ಕ್ಷೇತ್ರದೊಂದಿಗೆ ಸೇರಿಕೊಂಡ ನಂತರ ಮಂಡ್ಯಕ್ಕೆ ಬಂದರು. 1989, 1995ರಲ್ಲಿ 2 ಬಾರಿ ಲೋಕಸಭಾ ಸದಸ್ಯರಾಗಿದ್ದರು. 1980ರಿಂದ 1983ರವರೆಗೆ ಶ್ರೀ ಗುಂಡೂರಾವ್ ಅವರ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾಗಿದ್ದರು ಎಂದು ಸ್ಮರಿಸಿದ್ದಾರೆ.
ಮೃತರ ಕುಟುಂಬ, ಬಂಧುಮಿತ್ರರಿಗೆ ಹಾಗೂ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ಪ್ರಾರ್ಥಿಸಿದ್ದಾರೆ.

  ದಕ್ಷಿಣ ಆಫ್ರಿಕಾ ಮಾಜಿ ಪ್ರಧಾನಿ ಜುಮಾ ಬಂಧನದ ನಂತರ ಹಿಂಸಾಚಾರ | Oneindia Kannada
  ಸಿದ್ದರಾಮಯ್ಯ ತೀವ್ರ ಸಂತಾಪ ಸೂಚಿಸಿದ್ದಾರೆ.

  ಸಿದ್ದರಾಮಯ್ಯ ತೀವ್ರ ಸಂತಾಪ ಸೂಚಿಸಿದ್ದಾರೆ.

  ಕಾವೇರಿ ನದಿ ನೀರು ಮತ್ತು ಕನ್ನಡ ನಾಡಿನ ನೆಲ, ಜಲದ ವಿಚಾರದಲ್ಲಿ ರಾಜೀರಹಿತ ಹೋರಾಟ ನಡೆಸುತ್ತಿದ್ದ ರೈತ ಮತ್ತು ಶ್ರಮಿಕರ ಒಡನಾಡಿ ಜಿ.ಮಾದೇಗೌಡ ಅವರು ನನ್ನ ಅತ್ಯಂತ ಆತ್ಮೀಯರು.

  ಇವರ ನಿಧನ ನನಗೆ ಅಪಾರ ದುಃಖ ತಂದಿದೆ. ಜಿ. ಮಾದೇಗೌಡರು ತಮ್ಮ 94 ನೇ ವಯಸ್ಸಿನಲ್ಲಿ ನಿಧನರಾಗಿದ್ದು ಉಸಿರಿರುವವರೆಗೂ ಹೋರಾಟ ಮನೋಭಾವವನ್ನು ಬಿಟ್ಟಿರಲಿಲ್ಲ.

  ತಮ್ಮ ಬದುಕಿನ ಕೊನೆಯವರೆಗೂ ಕ್ರಿಯಾಶೀಲರಾಗಿದ್ದ ಮಾದೇಗೌಡರು ಜಿಲ್ಲೆಯ ರೈತರ ಹಿತಕ್ಕೆ ದಕ್ಕೆ ಬಂದಾಗೆಲ್ಲ ಪ್ರತಿಭಟನೆಯ ಧ್ವನಿಯಾಗಿದ್ದರು. ಅಗತ್ಯ ಬಿದ್ದಾಗಲೆಲ್ಲಾ ಸರ್ಕಾರಕ್ಕೆ ಸಲಹೆಗಳನ್ನೂ ನೀಡುತ್ತಿದ್ದರು.

  ಇತ್ತೀಚಿನ ದಿನಗಳಲ್ಲಿ ಮೈಷುಗರ್ ಕಾರ್ಖಾನೆಯ ಖಾಸಗೀಕರಣದ ಪ್ರಸ್ತಾಪದ ವಿರುದ್ಧ ನಿರಂತರವಾಗಿ ಹೋರಾಟಗಾರರ ಜೊತೆ ನಿಂತಿದ್ದರು ಮತ್ತು ಇಳಿ ವಯಸ್ಸಿನಲ್ಲಿಯೂ ಅನೇಕ ಪ್ರತಿಭಟನೆಗಳಲ್ಲಿ ಖುದ್ದು ಭಾಗವಹಿಸಿದ್ದರು.

  ಹಿಡಿದ ಕೆಲಸವನ್ನು ಸಾಧಿಸುವ ಹಟವಾದಿಯಾಗಿದ್ದ ಮಾದೇಗೌಡರು ಕೆ.ಎಂ.ದೊಡ್ಡಿಯಲ್ಲಿ ಭಾರತಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ತಮ್ಮ ನೆಲೆಯಲ್ಲೇ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಿದ್ದರು.

  ಸದಾ ಜಿಲ್ಲೆಯ ರೈತರ ಧ್ವನಿಯಾಗಿದ್ದ ಮಾದೇಗೌಡರ ಸಾವು ಜಿಲ್ಲೆಯ ಜನಪರ ಹೋರಾಟಗಳಿಗೆ ಮತ್ತು ರಾಜಕಾರಣಕ್ಕೆ ಆದ ಬಹುದೊಡ್ಡ ನಷ್ಟ. ಇವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತಲೇ ಜಿಲ್ಲೆಯ ರೈತ ಸಮುದಾಯಕ್ಕೆ, ಕುಟುಂಬವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

  English summary
  Former PM HD Deve Gowda and other political leaders condolence message on demise of Cauvery dispute fighter, former MP G Madegowda.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X