ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಹತ್ತಿರವಾಗುತ್ತಿದ್ದಂತೆ ವೇಗ ಪಡೆದ ರಾಜಕೀಯ ಚಟುವಟಿಕೆಗಳು

By ಒನ್‌ಇಂಡಿಯಾ ಕನ್ನಡ ಡೆಸ್ಕ್‌
|
Google Oneindia Kannada News

ಬೆಂಗಳೂರು, ಆಗಸ್ಟ್‌ 12:ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ನಾಯಕರ ನಡುವೆ ಆರೋಪ- ಪ್ರತ್ಯಾರೋಪ ಜೋರಾಗಿದೆ. ಚಿಕ್ಕ ಚಿಕ್ಕ ವಿಚಾರಗಳು ದೊಡ್ಡ, ದೊಡ್ಡ ಸುದ್ದಿಯಾಗುತ್ತಿವೆ. ಸ್ವಲ್ಪ ಎಚ್ಚರ ತಪ್ಪಿದರೂ ಅದು ರಾಜಕೀಯಕ್ಕೆ ದಾಳವಾಗುತ್ತಿದೆ.

ಇದೆಲ್ಲವೂ ಹೊಸತೇನಲ್ಲ. ಪ್ರತಿಬಾರಿ ಚುನಾವಣೆ ಬಂದಾಗಲೂ ಇದೆಲ್ಲವೂ ಮಾಮೂಲಿಯಾಗಿ ನಡೆಯುತ್ತಲೇ ಇರುತ್ತದೆ. ಐದು ವರ್ಷಗಳ ಕಾಲ ನಿದ್ದೆಗೆ ಜಾರಿದ ಆಡಳಿತರೂಢರು ಚುನಾವಣೆ ಹತ್ತಿರವಿರುವಾಗಲೇ ನಿದ್ದೆಯಿಂದ ಎದ್ದು ಬಡಬಡಾಯಿಸುವವರಂತೆ ಜನರ ಸೆಳೆಯುವ ಅಭಿವೃದ್ಧಿ ಘೋಷಣೆ ಮಾಡುವುದು, ಕೋಟ್ಯಂತರ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವುದು ಹೀಗೆ ಒಂದೇ ಎರಡೇ ಹತ್ತಾರು ಕಾರ್ಯಕ್ರಮಗಳು, ನೂರಾರು ಘೋಷಣೆಗಳು ಎಗ್ಗಿಲ್ಲದಂತೆ ನಡೆಯುತ್ತವೆ. ಇದೆಲ್ಲವೂ ಗಿಮಿಕ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಜತೆಗೆ ಇದೆಲ್ಲವನ್ನು ಜನ ನೋಡುತ್ತಲೇ ಬಂದಿದ್ದಾರೆ.

ನಳಿನ್‌ ಕುಮಾರ್‌ ಕಟೀಲ್‌ ನಿರ್ಗಮನ, ಕರ್ನಾಟಕ ಬಿಜೆಪಿಗೆ ಸಾರಥಿ ಯಾರು?ನಳಿನ್‌ ಕುಮಾರ್‌ ಕಟೀಲ್‌ ನಿರ್ಗಮನ, ಕರ್ನಾಟಕ ಬಿಜೆಪಿಗೆ ಸಾರಥಿ ಯಾರು?

ಕಳೆದ ಬಾರಿಯ 2018ರ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಘೋಷಣೆ ಮಾಡಿದ್ದ ಭರವಸೆಗಳು ಎಷ್ಟು ಈಡೇರಿವೆ. ಮತ್ತು ಈಡೇರಿಸಲು ಯಾವ, ಯಾವ ಪಕ್ಷಗಳು ಹೋರಾಟ ನಡೆಸಿವೆ. ಚುನಾವಣೆ ನಡೆದು ಫಲಿತಾಂಶ ಬಂದ ಬಳಿಕ ಆಡಳಿತ ಪಕ್ಷಗಳು ನೀಡಿದ ಭರವಸೆ ಮರೆತು ತಮ್ಮ ಅನುಕೂಲಕ್ಕೆ ತಕ್ಕಂತೆ ಆಡಳಿತ ನಡೆಸಿದರೆ ಅದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾದ ವಿಪಕ್ಷಗಳು ನಿದ್ದೆ ಮಾಡಿ ಈಗ ಮೈಕೊಡವಿಕೊಂಡು ಎದ್ದು ನಿಂತರೆ ಏನು ಪ್ರಯೋಜನ? ಸಾಮಾನ್ಯವಾಗಿ ವಿಪಕ್ಷದಲ್ಲಿದ್ದಾಗ ಎಲ್ಲ ಪಕ್ಷಗಳು ಪಾದರಸದಂತೆಯೇ ಇರುತ್ತವೆ. ಮತದಾರರನ್ನು ತಮ್ಮೆಡೆಗೆ ಸೆಳೆಯಲು ಆಡಳಿತರೂಢರ ವಿರುದ್ಧ ಭ್ರಷ್ಟಾಚಾರದ ಪಟ್ಟಿಯನ್ನಿಟ್ಟು ಪ್ರತಿಭಟಿಸುತ್ತಾ ಮತದಾರರ ಮುಂದೆ ಅನುಕಂಪ ಸೃಷ್ಟಿಸುವ ಮತ್ತು ತಾವು ಅಧಿಕಾರಕ್ಕೆ ಬಂದರೆ ಸ್ವರ್ಗವನ್ನೇ ಸೃಷ್ಟಿಸುತ್ತೇವೆ ಎನ್ನುವ ಭ್ರಮೆ ಹುಟ್ಟಿಸುತ್ತವೆ.

 ಬಡಪ್ರಜೆಗಳು ಹೈರಾಣ

ಬಡಪ್ರಜೆಗಳು ಹೈರಾಣ

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದಾಗ ವಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಪಡೆದ ಬಳಿಕ ಮಾಡಿದ್ದೇನು? ರಾಮರಾಜ್ಯ ಸೃಷ್ಟಿಯಾಗಿ ಬಿಟ್ಟಿತೇ? ಇದೀಗ ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಕೂಡ ಅದನ್ನೇ ಮಾಡುತ್ತಿದೆ. ಎಲ್ಲ ಪಕ್ಷದ ನಾಯಕರು ಕೂಡ ಅಧಿಕಾರ ಪಡೆದ ಬಳಿಕ ಜನ ಹಿತಾಸಕ್ತಿಗಿಂತ ಸ್ವಹಿತಾಸಕ್ತಿಯತ್ತಲೇ ಹೆಚ್ಚಿನ ಗಮನಹರಿಸುತ್ತವೆ. ವಿರೋಧ ಪಕ್ಷಗಳು ಎಲ್ಲವನ್ನೂ ವಿರೋಧಿಸುತ್ತಲೇ ಬರುತ್ತಿದ್ದರೆ, ಆಡಳಿತರೂಢರು ತಮ್ಮ ಅನುಕೂಲಕ್ಕೆ ತಕ್ಕಂತೆ ಅಧಿಕಾರ ನಡೆಸುತ್ತಾರೆ. ಇವರ ನಡುವೆ ಬಡಪ್ರಜೆಗಳು ಹೈರಾಣರಾಗುತ್ತಿದ್ದಾರೆ. ದೇಶ, ರಾಜ್ಯ, ನೆಲ, ಜಲಕ್ಕಿಂತ ಪಕ್ಷ ಮತ್ತು ನಾಯಕರೇ ಮುಖ್ಯವಾಗಿ ಬಿಡುತ್ತಾರೆ.

 ಎಲ್ಲಾ ವಿಷಯಗಳೂ ಇಂದು ರಾಜಕೀಯವಾಗುತ್ತಿವೆ

ಎಲ್ಲಾ ವಿಷಯಗಳೂ ಇಂದು ರಾಜಕೀಯವಾಗುತ್ತಿವೆ

ಸಂದಿಗ್ಧ ಪರಿಸ್ಥಿತಿಗಳು ಎದುರಾದಾಗ ಅದನ್ನು ಎಲ್ಲರೂ ಒಂದೆಡೆ ಸೇರಿ ರಾಜ್ಯದ ಮತ್ತು ಜನತೆಯ ಹಿತ ದೃಷ್ಟಿಯಿಂದ ಬಗೆಹರಿಸುವ ಬದಲಿಗೆ ರಾಜಕೀಯವಾಗಿ ಬಳಸಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವತ್ತ ಹೆಚ್ಚು ಒತ್ತು ನೀಡುತ್ತಾರೆಯೇ ವಿನಃ ಒಳಿತು ಮಾಡುವ ತೀರ್ಮಾನವನ್ನು ಯಾರು ಮಾಡುವುದಿಲ್ಲ. ಇದರ ಪರಿಣಾಮಗಳು ಜನರ ಮೇಲೆ ಬೀಳುತ್ತಿದೆ. ಇನ್ನು ರಾಜಕೀಯ ನಾಯಕರ ವರಸೆಗಳನ್ನು ನೋಡಿದ ಜನರಿಗೆ ಪಾರದರ್ಶಕತೆ ಎನ್ನುವುದು ಮರೀಚಿಕೆಯಾಗಿದೆ. ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ ತಮ್ಮ ಗೋಳು ತಪ್ಪಿದಲ್ಲ ಎನ್ನುವುದು ಪ್ರತಿಯೊಬ್ಬ ನಾಗರಿಕನಿಗೂ ಗೊತ್ತಾಗಿದೆ.

 ರಾಷ್ಟ್ರಧ್ವಜದ ಮೇಲೂ ರಾಜಕೀಯ

ರಾಷ್ಟ್ರಧ್ವಜದ ಮೇಲೂ ರಾಜಕೀಯ

ಇಷ್ಟಕ್ಕೂ ನಾವು ಪ್ರಾಮಾಣಿಕರು ನಾವು ದೇಶಕ್ಕಾಗಿ ಹೋರಾಡಿದವರು ಎಂದೆಲ್ಲ ಬಡಬಡಾಯಿಸಿಕೊಳ್ಳುವ ನಾಯಕರು ಜನರ ಹಿತದೃಷ್ಟಿಯಿಂದ ಮಾಡಿದ ಯೋಜನೆಗಿಂತ ಹೆಚ್ಚಾಗಿ ಮತವನ್ನು ಗಟ್ಟಿಮಾಡಿಕೊಳ್ಳುವ ದೃಷ್ಟಿಯಿಂದ ಮಾಡಿದ ಯೋಜನೆಗಳೇ ಜಾಸ್ತಿಯಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಯಿದೆ. ಹೀಗಿರುವಾಗಲೇ ರಾಜಕೀಯ ಜಟಾಪಟಿ ಶುರುವಾಗಿದೆ.

ಎರಡು ರಾಷ್ಟ್ರೀಯ ಪಕ್ಷಗಳು ಜನರಿಗೆ ದೇಶಭಕ್ತಿ ಪಾಠ ಮಾಡಲು ಮುಂದಾಗಿವೆ. ಇದುವರೆಗೆ ಬೇರೆ ಬೇರೆ ವಿಚಾರಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಇದೀಗ ರಾಷ್ಟ್ರಧ್ವಜವನ್ನು ರಾಜಕೀಯಕ್ಕೆ ಎಳೆದು ತಂದಿದ್ದಾರೆ. ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ದೇಶಭಕ್ತಿಯಿದೆ ಅಷ್ಟೇ ಅಲ್ಲದೆ ರಾಷ್ಟ್ರಧ್ಚಜದ ಬಗ್ಗೆ ಗೌರವಿದೆ. ಹೀಗಿರುವಾಗ ಅದು ಯಾವುದೇ ಪಕ್ಷದ ಸ್ವತ್ತಲ್ಲ. ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಸಣ್ಣತನವನ್ನು ಬಿಟ್ಟು ಸ್ವಾತಂತ್ರ್ಯೋತ್ಸವ ಆಚರಣೆಯತ್ತ ಗಮನ ನೀಡಿದರೆ ಉತ್ತಮ.

 ಮತದಾರರನ್ನು ಸೆಳೆಯಲು ನಾನಾ ನಾಟಕ

ಮತದಾರರನ್ನು ಸೆಳೆಯಲು ನಾನಾ ನಾಟಕ

ವರ್ಷದಿಂದ ವರ್ಷಕ್ಕೆ ಲಕ್ಷಾಂತರ ಯುವ ಮತದಾರರು ಸೇರ್ಪಡೆಯಾಗುತ್ತಿದ್ದಾರೆ. ಇವರೆಲ್ಲರೂ ವಿದ್ಯಾವಂತರು, ವಿಚಾರವಂತರು, ಎಲ್ಲವನ್ನು ಅರಿಯುವ ಶಕ್ತಿವಂತರು ಹೀಗಾಗಿ ರಾಜಕಾರಣಿಗಳು ಹೇಳುವ ಗಿಣಿಪಾಠ ಕೇಳಿಕೊಂಡು ಅದರಂತೆ ಮತ ನೀಡುವವರು ಅವರಲ್ಲ. ಚುನಾವಣೆ ಬಂದಾಗ ಅವರು ಏನು ಮಾಡಬೇಕೋ ಅದನ್ನೇ ಮಾಡುತ್ತಾರೆ.

ಅದು ಏನೇ ಇರಲಿ ಚುನಾವಣೆ ಮುಗಿಯುವ ತನಕ ರಾಜಕಾರಣಿಗಳು ಮತದಾರರನ್ನು ಸೆಳೆಯುವ ಸಲುವಾಗಿ ಮಾಡಲಿರುವ ನಾಟಕ ಮತ್ತು ಹೋರಾಟ, ಪ್ರತಿಭಟನೆ, ಸಮಾವೇಶ ಹೀಗೆ ಎಲ್ಲವನ್ನು ಮತದಾರರಾದ ನಾವು ಸಹಿಸಿಕೊಳ್ಳಲೇ ಬೇಕಾಗಿದೆ.

Recommended Video

ಭ್ರಷ್ಟರ ಬೇಟೆಯಾಡೋಕೆ ಮತ್ತೆ ರೆಡಿಯಾದ ಲೋಕಾಯುಕ್ತ: ಹಾಗಾದ್ರೆ ACB ಕತೆಯೇನು? | Oneindia Kannada

English summary
Political activities have gained momentum from All parties for the 2023 Legislative Assembly election in Karnataka,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X