ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರಗ್ ಮಾಫಿಯಾ, ಪೋಸ್ಟ್ ಮಾರ್ಟಮ್ ಕಾನೂನು ಹಾಗೂ ಹೆಡ್ ಲೈನ್ ಮ್ಯಾನೇಜ್ ಮೆಂಟ್

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

"ಅನುಮಾನಾಸ್ಪದ ಸಾವು, ಅಸಹಜ ಸಾವು ಎಂದಾದ ಪಕ್ಷದಲ್ಲಿ ಮಾತ್ರ ಪೋಸ್ಟ್ ಮಾರ್ಟಮ್ (ಮರಣೋತ್ತರ ಪರೀಕ್ಷೆ) ಮಾಡಲಾಗುತ್ತದೆ. ಕೆಲವು ವೈದ್ಯಕೀಯ ಪ್ರಕರಣಗಳಲ್ಲಿ ಚಿಕಿತ್ಸಾ ವಿಧಾನ ತಪ್ಪು ಎಂದೆನಿಸಿದಲ್ಲಿ ಮೃತರ ಕುಟುಂಬಸ್ಥರು ಹಾಗೂ ಕೊಲೆಯಂಥ ಪ್ರಕರಣದಲ್ಲಿ ಪೊಲೀಸ್ ಕೇಸ್ ಆದಲ್ಲಿ ಪೋಸ್ಟ್ ಮಾರ್ಟಮ್ ಗೆ ಕೇಳಬಹುದು". - ಹೀಗೆ 'ಒನ್ ಇಂಡಿಯಾ ಕನ್ನಡ'ಕ್ಕೆ ಹೇಳಿದವರು ಪೊಲೀಸ್ ಅಧಿಕಾರಿ.

Recommended Video

Lakshmi Hebbalkar, ಕೆಲವು ದಿನದ ಹಿಂದೆ ಮಗ.. ಈ ವಾರ ಮಗಳ ಸಿಹಿಸುದ್ಧಿ | Oneindia Kannada

ಪತ್ರಕರ್ತರೂ ಹಾಗೂ ಸಿನಿಮಾ ನಿರ್ದೇಶಕರೂ ಎಂದು ಗುರುತಿಸಿಕೊಂಡಿರುವ ಇಂದ್ರಜಿತ್ ಲಂಕೇಶ್ ಹೇಳಿದ ಮಾತುಗಳು ಸದ್ಯಕ್ಕೆ ಚರ್ಚೆಗೆ ಕಾರಣವಾಗಿವೆ. "ಒಬ್ಬ ನಟನ ಸಾವಾಯಿತು. ಅದರ ತನಿಖೆ ಮಾಡಲು ಕೇಳಿದರಾ? ಪೋಸ್ಟ್ ಮಾರ್ಟಮ್ ಮಾಡಿಸಿದರಾ?" ಹೀಗೆ ಪ್ರಶ್ನೆಗಳನ್ನು ಕೇಳಿದ್ದಾರೆ ಇಂದ್ರಜಿತ್.

ಇನ್ನೂ ಮುಂದುವರಿದು, ರಾಜಕೀಯ ಒತ್ತಡ ಬಿತ್ತಾ, ಪೊಲೀಸರು ತನಿಖೆ ಏಕೆ ಮಾಡಲಿಲ್ಲ ಎಂಬ ಪ್ರಶ್ನೆ ಕೇಳಿ, ಇದೇನೋ ಸ್ಫೋಟಕ ಸಂಗತಿ ತಾನು ಹೇಳುತ್ತಿರುವಂತೆ ಹುಬ್ಬೇರಿಸುತ್ಟಾರೆ. 'ಈಚೆಗೆ ನಟನ ಸಾವಾಯಿತು' ಎಂದು ಹೇಳಿರುವ ಅವರು, ಆ ನಟನ ಹೆಸರನ್ನೇನೂ ಹೇಳಿಲ್ಲ. ಆದರೆ ಆ ನಟ ಚಿರಂಜೀವಿ ಸರ್ಜಾ ಎಂಬುದನ್ನು ಮಾಧ್ಯಮಗಳೇ ಊಹಿಸಿ ಪದೇ ಪದೇ ಸುದ್ದಿ ಬಿತ್ತರಿಸುತ್ತಿವೆ.

Indrajith Lankesh

ಸಿಆರ್ ಪಿಸಿ 174 UDR (Unnatural Death Report)
ಇನ್ನೂ ತಮಾಷೆ ಸಂಗತಿ ಏನೆಂದರೆ, 'ಕನಿಷ್ಠ ಯಾವುದೇ ಸಾವಾದರೂ ಪೋಸ್ಟ್ ಮಾರ್ಟಮ್ ಆಗಬೇಕಲ್ಲವಾ?' ಎಂದು ಮಾಧ್ಯಮಗಳ ಮುಂದೆ ಪ್ರಶ್ನೆ ಕೇಳುತ್ತಿರುವ ಇಂದ್ರಜಿತ್ ಲಂಕೇಶ್ ಗೆ ಸಿಆರ್ ಪಿಸಿ 174 UDR (Unnatural Death Report) ಪ್ರಕಾರ ಯಾವ ಸಂದರ್ಭಗಳಲ್ಲಿ ಪೋಸ್ಟ್ ಮಾರ್ಟಮ್ ಮಾಡುತ್ತಾರೆ ಎಂಬ ಸಂಗತಿ ಕೂಡ ಗೊತ್ತಿಲ್ಲವಾ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆತ್ಮಹತ್ಯೆ, ಅಸಹಜ ಸಾವು ಪ್ರಕರಣಗಳಲ್ಲಿ ಮಾತ್ರ ಪೋಸ್ಟ್ ಮಾರ್ಟಮ್ ಎಂಬುದು ಮುನ್ನೆಲೆಗೆ ಬರುತ್ತದೆ.

ಮೃತ ವ್ಯಕ್ತಿಯ ದೇಹದ ಮೇಲೆ ಗುರುತಿಸಬಹುದಾದ ಗಾಯಗಳು ಇವೆಯಾ ಎಂದು ಮೊದಲಿಗೆ ಪೊಲೀಸರು ಪರೀಕ್ಷಿಸುತ್ತಾರೆ. ಇದನ್ನು ಪಂಚನಾಮೆ ಎನ್ನುತ್ತಾರೆ. ಆ ನಂತರ ದೇಹದ ಒಳಭಾಗದಲ್ಲಿ ಆದ ಗಾಯಗಳು ಹಾಗೂ ಸಾವಿಗೆ ಕಾರಣವಾದ ಅಂಶಗಳನ್ನು ವೈದ್ಯರು ಪರೀಕ್ಷಿಸುತ್ತಾರೆ. ಅದನ್ನು ಪೋಸ್ಟ್ ಮಾರ್ಟಮ್ (ಮರಣೋತ್ತರ ಪರೀಕ್ಷೆ) ಎಂದು ಕರೆಯಲಾಗುತ್ತದೆ. ಈ ಪೋಸ್ಟ್ ಮಾರ್ಟಮ್ ಪ್ರಕ್ರಿಯೆಯನ್ನು ವಿಡಿಯೋ ಸಹ ಮಾಡಲಾಗುತ್ತದೆ.

ಇನ್ನು ತಾವೇನೋ ಕಂಡುಹಿಡಿದಂತೆ ಮಾತನಾಡುತ್ತಿರುವ ಇಂದ್ರಜಿತ್ ಲಂಕೇಶ್, ಕೆಪಿಎಲ್ ಹನಿ ಟ್ರ್ಯಾಪ್ ಬಗ್ಗೆ ಮಾಧ್ಯಮ ವರದಿ ಆಯಿತು. ಆ ನಂತರ ಕೇಸ್ ಏನಾಯಿತು? ಯಾರ್ಯಾರೋ ನಟಿಯರು ವಿಲಾಸಿ ಕಾರು ತಗೊಂಡರು ಅಂತ ಸುದ್ದಿ ಆಗಿತ್ತು. ಆ ಪ್ರಕರಣ ದಡ ಮುಟ್ಟಿತಾ ಎಂದು ಹಳೇ ಪ್ರಕರಣಗಳ ಮೈದಡವುತ್ತಾರೆ. ಇದರ ಜತೆಗೆ ಪೊಲೀಸರ ತನಿಖೆಗೆ ಸಹಕರಿಸುತ್ತೇನೆ, ನನಗೆ ಗೊತ್ತಿರುವ ಮಾಹಿತಿ ನೀಡುತ್ತೇನೆ ಎಂಬ ಸಂಗತಿಗಳು ಬಿಟ್ಟು ಈಗ ಏನು ಹೇಳಲು ಹೊರಟರು ಎಂಬುದಕ್ಕೆ ಸ್ಪಷ್ಟತೆ ಸಿಗಲ್ಲ.

ಆ ಸಾವಿನ ಬಗ್ಗೆ ಅನುಮಾನವೇ ಇರಲಿಲ್ಲ
ಚಿರಂಜೀವಿ ಸರ್ಜಾ ಹೆಸರನ್ನೇ ಎತ್ತದಿದ್ದರೂ ಈಚೆಗೆ ಮೃತಪಟ್ಟ ನಟ ಅವರೇ ಎಂದು ತೀರ್ಮಾನಕ್ಕೆ ಬಂದಂತೆ ಇರುವುದರಿಂದ ಕೆಲವು ವಿಚಾರಗಳನ್ನು ಈ ಸಂದರ್ಭದಲ್ಲಿ ಅವಲೋಕಿಸಬೇಕು. ಚಿರಂಜೀವಿ ಸರ್ಜಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಜೀವಂತ ಇದ್ದರು. ಅವರಿಗೆ ಬ್ರೈನ್ ಹ್ಯಾಮರೇಜ್ ಆಗಿ, ಹಾರ್ಟ್ ಅಟ್ಯಾಕ್ ಆಗಿದೆ ಎಂಬುದು ಸಾವಿಗೆ ಕಾರಣ.

ಈ ಪ್ರಕರಣದಲ್ಲಿ ಪೊಲೀಸ್ ಕೇಸ್ ಆಗಿಲ್ಲ. ಕುಟುಂಬಸ್ಥರಿಗೆ ಚಿಕಿತ್ಸೆ ನೀಡಿದ ವಿಧಾನದ ಬಗ್ಗೆ ಅನುಮಾನ ಇಲ್ಲ. ಇದು ಆತ್ಮಹತ್ಯೆ ಅಲ್ಲ ಹಾಗೂ ಅಸಹಜ ಸಾವೂ ಅಲ್ಲ ಎಂದಾದ ಮೇಲೆ ಪೋಸ್ಟ್ ಮಾರ್ಟಮ್ ಎಂಬ ವಿಷಯವೇ ಬರುವುದಿಲ್ಲ. ಆದರೆ ಇಂದ್ರಜಿತ್ ಲಂಕೇಶ್ ಅವರು, 'ಕನಿಷ್ಠ ಯಾವುದೇ ಸಾವಾದರೂ ಪೋಸ್ಟ್ ಮಾರ್ಟಮ್ ಆಗಬೇಕಲ್ಲವಾ?' ಎಂದು ಬಿಡುತ್ತಾರೆ.

ಇನ್ನು ಈಗ ಚರ್ಚೆಗೆ ಬಂದಿರುವ ಮಾದಕ ದ್ರವ್ಯ ವ್ಯಸನದ ಬಗ್ಗೆ ಬೆಂಗಳೂರಿನಲ್ಲೇ ಕಾರ್ಯ ನಿರ್ವಹಿಸುವ, ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಮದ್ಯ ಸೇವನೆ ಎಂಬುದು ಎಷ್ಟು ಸಹಜ ಎಂಬಂತೆ ನಡೆಯುತ್ತದೋ ಸಮಾಜದ ಒಂದು ವರ್ಗದಲ್ಲಿ ಮಾದಕ ದ್ರವ್ಯ ಸೇವನೆ ಎಂಬುದು ಕೂಡ ಸಹಜ ಎಂಬಂತೆ ಇದೆ.

ಈ ಬಗ್ಗೆ ಐಎಎಸ್- ಐಪಿಎಸ್ ಅಧಿಕಾರಿಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳು ಹೀಗೆ ಹಲವರಿಗೆ ಮಾಹಿತಿ ಇದೆ ಹಾಗೂ ಸ್ವತಃ ಅದರಲ್ಲಿ ಇದ್ದಾರೆ. ಅಲ್ಲಿ ಹೊಸಬರಿಗೆ ಪ್ರವೇಶವೇ ಇರುವುದಿಲ್ಲ. ಅದೆಷ್ಟು ಗುಟ್ಟಾದ ಹಾಗೂ ಮೇಲ್ಮಟ್ಟದ ವ್ಯವಹಾರ ಅಂದರೆ, ಎಷ್ಟೋ ಕಡೆಗೆ ಅಂಥವರಿಗೆ ಅಧಿಕಾರಸ್ಥರಿಂದಲೇ ರಕ್ಷಣೆ ಇರುತ್ತದೆ. ಈಗ ಸುಶಾಂತ್ ಸಿಂಗ್ ಸಾವಿನ ಪ್ರಕರಣ ಆಚೆ ಬಂದಿರುವುದರಿಂದ ಇಷ್ಟೆಲ್ಲ ಚರ್ಚೆಗಳು ನಡೆಯುತ್ತಿವೆ ಎಂದರು.

ಹೆಡ್ ಲೈನ್ ಮ್ಯಾನೇಜ್ ಮೆಂಟ್ ಥಿಯರಿ
ಈಗ ಮತ್ತೆ ಇಂದ್ರಜಿತ್ ಲಂಕೇಶ್ ಅವರ ಹೇಳಿಕೆ ಮೌಲ್ಯ ಏನು, ಅದರಿಂದ ದೊಡ್ಡದೇನನ್ನೋ ಸಾಧಿಸಲು ಪೊಲೀಸರಿಗೆ ನೆರವಾಗುತ್ತದಾ ಎಂದು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಏನೇನೂ ಪ್ರಯೋಜನ ಇಲ್ಲ ಎನ್ನುತ್ತಾರೆ. ಆ ನಟ ತೀರಿಕೊಂಡಾಗ ಅಥವಾ ಮಾದಕ ದ್ರವ್ಯ ಸೇವನೆ ನಡೆಯುವಾಗ ದೂರು ನೀಡಬೇಕಿತ್ತು. ಹಾಗಂತ ವ್ಯಸನಿಗಳ ಪರೀಕ್ಷೆಯನ್ನು ಸಹ ಸುಮ್ಮನೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಕೋರ್ಟ್ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ಈಗ ಜೀವಂತ ಇಲ್ಲದ ವ್ಯಕ್ತಿಯ ಹೆಸರನ್ನು ಹೇಳಿ, ಮಾಧ್ಯಮಗಳ ಮುಂದೆ ಬಂದಿರುವುದರ ಉದ್ದೇಶವೇ ಅನುಮಾನಾಸ್ಪದ ಎನ್ನುತ್ತಾರೆ.

ಸರಿ, ಇದೇ ಚರ್ಚೆಗೆ ಇನ್ನೂ ವ್ಯಾಪ್ತಿ ಸಿಗುವಂತೆ ಮಾಡುತ್ತಾರೆ ಮತ್ತೊಬ್ಬ ಪೊಲೀಸ್ ಅಧಿಕಾರಿ. ಮಾಧ್ಯಮದವರು ತಾವು ರಾಜಕಾರಣಿಗಳಿಗಿಂತ ಬುದ್ಧಿವಂತರು ಅಂದುಕೊಳ್ಳುತ್ತಾರೆ. ಹಾಗೇ ಗಮನಿಸಿ ನೋಡಿ. ಕೇಂದ್ರ ಹಾಗೂ ರಾಜ್ಯದಲ್ಲಿ ನಾನಾ ಸಮಸ್ಯೆಗಳಿವೆ. ಜಿಎಸ್ ಟಿ ಪರಿಹಾರ ಕೊಡಲು ಆಗುತ್ತಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ತಮ್ಮದೇ ಪಕ್ಷದ ಸರ್ಕಾರ ಇರುವಾಗ ನೂರಾರು ಕೋಟಿ ರುಪಾಯಿ ಬರಲಿಲ್ಲ ಎಂದು ಆರೋಪ ಮಾಡಿದರು.

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ನೆರೆ- ಬರ ಪರಿಹಾರ ಬರುತ್ತಿಲ್ಲ. ಇದರ ಜತೆಗೆ ಕೊರೊನಾ ನಿರ್ವಹಣೆ ಕಷ್ಟವಾಗುತ್ತಿದೆ. ಇಷ್ಟೆಲ್ಲ ಸಂಗತಿ ಜನರ ಮಧ್ಯೆ ಚರ್ಚೆ ಆಗುವಂತೆ ಆದಲ್ಲಿ ಅದರಿಂದ ಸರ್ಕಾರಕ್ಕೆ ಹೊಡೆತ. ಅದರಿಂದ ಜನರ ಗಮನ ಬೇರೆಡೆ ಸೆಳೆಯುವುದಕ್ಕೆ ಈ ರೀತಿ ಡ್ರಗ್ಸ್ ದಂಧೆ ವಿಚಾರ ಹರಿಬಿಟ್ಟಿದ್ದಾರೆ ಎಂಬ ಗುಮಾನಿ ಇದೆ. ಅದಕ್ಕೆ ತಕ್ಕಂತೆ ಮಾಧ್ಯಮಗಳಲ್ಲಿ ಕೂಡ ಇದೇ ವಿಚಾರ ಹೈಲೈಟ್ ಆಗುತ್ತಿದೆ. ಈಗೆಲ್ಲ ಮಾಧ್ಯಮಗಳಲ್ಲಿ ಯಾವ ಸುದ್ದಿ ಪ್ರಾಮುಖ್ಯ ಪಡೆಯಬೇಕು ಎಂದು ನಿರ್ಧರಿಸುವುದು ಕೂಡ ರಾಜಕೀಯ ಪಕ್ಷಗಳೇ ಎನ್ನುವ ಅವರು, ತಮ್ಮ ಹೆಸರನ್ನು ಪ್ರಸ್ತಾವ ಮಾಡಬಾರದು ಎಂಬ ಷರತ್ತಿನೊಂದಿಗೆ ಈ ವಿಚಾರ ಹಂಚಿಕೊಂಡರು.

English summary
Bengaluru police gave clarification on Indrajit Lankesh questioning on recently died Kannada actor Post-Mortem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X