• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾವ ಜೀವಿಯ ಕೈ ಹಿಡಿದ ಪ್ರೀತಿಯ ಸೆಲೆ!

By ಲಕ್ಷ್ಮೀಸಾಗರ ಸ್ವಾಮಿ ಗೌಡ
|

ಹಣತೆ ಕಿರಿದಾದರೇನು? ಬೆಳಕು ಬೀರುವ ಶಕ್ತಿ ಹಿರಿದಲ್ಲವೇನು? ಎಂದು ಕವಿತೆ ಬರೆದ ಕವಿಯ ಕೈ ಹಿಡಿಯುವಾಗ ಆ ಪುಟ್ಟ ಕಂಗಳ ಬಾಲೆಯ ಮನಸ್ಸಿನಲ್ಲಿದ್ದುದು ಕವಿತೆಯ ಸಾಲಿನಲ್ಲಿದ್ದಂತದ್ದೇ ಭಾವನೆ. ವರಸೆಯಲ್ಲಿ ಸೋದರ ಮಾವನೇ ಆದರೂ ಎಂದೋ ಕಡಿದು ಹೋಗಿದ್ದ ಸಂಬಂಧದ ಭಾವ ಬಂಧ ಕಂಕಣ ಬಲದ ಮೂಲಕ ಮತ್ತೆ ಕೂಡಿ ಬಂದಾಗ ಎರಡೂ ಕುಟುಂಬಗಳ ನಡುವೆ ಅದೆಂತದೋ ಸಂತೃಪ್ತ ಭಾವ.

ಕನವರಿಸಿ ಕೈಹಿಡಿದ ಪತಿ ಭಾವಜೀವಿ, ಭಾವನೆಗಳ ಲೋಕದಲ್ಲಿ ತೇಲಾಡಿ ಲೇಖನಿಯ ಮೂಲಕ ಮನಸ್ಸಿನ ಭಾವನೆಗಳಿಗೊಂದು ಮೂರ್ತ ರೂಪ ಕೊಡುವ ಕಾವ್ಯ ಶಿಲ್ಪಿ ಇವರೆಂದು ಮದುವೆಯಾದ ಕೆಲ ದಿನಗಳಲ್ಲೇ ಇವರಿಗೆ ಅರಿವಾದಾಗ ಮೆಚ್ಚಿದ ವರನೊಂದಿಗೆ ಮದುವೆಯಾಗಿದ್ದಕ್ಕೆ ಇವರಿಗೆ ಹಿರಿ-ಹಿರಿ ಹಿಗ್ಗು. ಮದುವೆಯಾಯಿತು, ಮುಂದೇನು? ಎಂದವರಿಗೆ ದಿಕ್ಕು ತೋರಿಸಿದ್ದು ಧರ್ಮಪತ್ನಿಯ ತಂದೆಯೇ.

ಮಾವನ ನೆರವಿನಿಂದ ಸ್ನಾತಕೋತ್ತರ ಪದವಿ ಮುಗಿಸಿದವರಿಗೆ ಸರ್ಕಾರಿ ನೌಕರಿ ಸಿಕ್ಕು ದಾವಣಗೆರೆಗೆ ಬಂದಾಗ ಇಂದಿನ ಹಿರಿಯ ಕವಿಗೆ ಅಂದು ಸಿಗುತ್ತಿದ್ದುದು ಕೇವಲ ನೂರಾ ಹತ್ತು ರುಪಾಯಿ ಸಂಬಳ. ವಾಸ್ತವ್ಯ ಹೂಡಿದ್ದ ಬಾಡಿಗೆ ಮನೆಯಲ್ಲಿ ಊಟಕ್ಕೆ ಕೂರುವ ಹತ್ತಾರು ಕೈಗಳು. ಪತಿಗೆ ಬರುವ ತಿಂಗಳ ಸಂಬಳ ಮನೆಮಂದಿಯ ಹೊಟ್ಟೆ ತುಂಬಿಸುತ್ತಿರಲಿಲ್ಲ. ಹಾಗಂತ ಸದಾ ಭಾವನೆಗಳ ಲೋಕದಲ್ಲೇ ತೇಲಾಡುವ ಪತಿಗೆ ಹೇಳಿ ಅವರ ಮನಸ್ಸಿಗೆ ಕಿರಿ-ಕಿರಿ ಉಂಟು ಮಾಡುವ ಮನಸ್ಸಂತೂ ಈ ತಾಯಿ ಹೃದಯಕ್ಕಿರಲಿಲ್ಲ.

ಕುಟುಂಬದ ಜಂಜಡಗಳನ್ನು ಹೇಳಿದರೆ ಅವರ ಕಾವ್ಯ ಕೃಷಿಗೆ ಎಲ್ಲಿ ತೊಡಕಾಗುವುದೋ ಎಂಬ ಕಳವಳ. ಆದ್ದರಿಂದಲೇ ಬಂದ ಕಷ್ಟವನ್ನೆಲ್ಲಾ ನಾನೇ ಅನುಭವಿಸುತ್ತೇನೆ ಎಂದು ಮನಸ್ಸನ್ನು ಗಟ್ಟಿ ಮಾಡಿಕೊಂಡು ಸಂಸಾರದ ಸಾರಥ್ಯವನ್ನು ಮುನ್ನಡೆಸಿಕೊಂಡು ಬಂದರು. ತಾವು ಅರೆ ಹೊಟ್ಟೆಯಲ್ಲಿದ್ದರೂ ಅದರ ಸುಳಿವು ಪತಿಗೆ ಗೊತ್ತಾಗದಂತೆ ಎಚ್ಚರವಹಿಸಿದ್ದರು. ಹಣಕ್ಕೆ ಕೊರತೆಯಾದರೂ ರಾತ್ರಿ ಊಟದ ನಂತರ ಪತಿಗೆ ತಾಂಬೂಲದ ಸವಿ ತಪ್ಪದಂತೆ ನೋಡಿಕೊಂಡಿದ್ದರು ಮುಂದೆ ಓದಿ...

ಎಚ್ಚರದಿಂದ ಕಾಯ್ದ ಪತ್ನಿ

ಎಚ್ಚರದಿಂದ ಕಾಯ್ದ ಪತ್ನಿ

ಹಣಕ್ಕೆ ಕೊರತೆಯಾದರೂ ರಾತ್ರಿ ಊಟದ ನಂತರ ಪತಿಗೆ ತಾಂಬೂಲದ ಸವಿ ತಪ್ಪದಂತೆ ನೋಡಿಕೊಂಡಿದ್ದರು. ಅವರ ವಾರದ ಅಭ್ಯಂಜನ ಸ್ನಾನಕ್ಕೂ ತೊಂದರೆಯಾಗದಂತೆ ಎಚ್ಚರವಹಿಸಿದ್ದರು. ಅವರ ಕಾವ್ಯ ಕೃಷಿಯ ಹಿಂದೆ ಇವರ ತಾಳ್ಮೆ ಇದ್ದುದರಿಂದಲೇ ಭಾವಜೀವಿ, ಹಿರಿಯ ಕವಿ ಜಿ.ಎಸ್.ಶಿವರುದ್ರಪ್ಪನವರು ರಾಷ್ಟ್ರ ಕವಿಯ ಪಟ್ಟವನ್ನಲಂಕರಿಸಿದ್ದು. ಆ ಕವಿಯ ಹೃದಯದ ಕೋಟೆಯನ್ನು ಎಚ್ಚರದಿಂದ ಕಾಯ್ದ ಪತ್ನಿ ರುದ್ರಾಣಿಯವರ ಮಾತೃ ಹೃದಯದ ಮಮತೆಗೆ ಅವರಿಗವರೇ ಸಾಟಿ.

ಲೌಕಿಕ ಜಂಜಡಗಳು ಇರಬಾರದು

ಲೌಕಿಕ ಜಂಜಡಗಳು ಇರಬಾರದು

ಕನ್ನಡ ಸಾಹಿತ್ಯ ಲೋಕದಲ್ಲಿ ಕಾವ್ಯ ಮೀಮಾಂಸೆಯ ಕವಿ ಎಂದೇ ಖ್ಯಾತಿ ಪಡೆದ ರಾಷ್ಟ್ರ ಕವಿ ಜಿ.ಎಸ್.ಶಿವರುದ್ರಪ್ಪನವರು ತಮ್ಮ ಕಾವ್ಯ ಕೃಷಿಯಲ್ಲಿ ಮನಸ್ಸಿನ ಭಾವನೆಗಳಿಗೆ ಅಕ್ಷರದ ರೂಪ ಕೊಟ್ಟು, ಅದನ್ನೊಂದು ಭಾವಗೀತೆಯಾಗಿ ನಿರೂಪಿಸಿದ ಭಾವಜೀವಿಯೂ ಹೌದು. ಈ ಹಿರಿಯ ಕವಿಯ ಸಮಗ್ರ ಕಾವ್ಯ ಕೃಷಿಯನ್ನೊಮ್ಮೆ ತಿರುವಿ ಹಾಕಿದರೆ ಅಲ್ಲಿ ಭಾವನೆಗಳದೇ ಹೊಯ್ದಾಟ. ಹಾಗಂತ ಇವರ ಕಾವ್ಯದಲ್ಲಿ ಗಾಂಭೀರ್ಯ, ಮಾಧುರ್ಯಗಳಿಲ್ಲವೆಂದು ಅರ್ಥವಲ್ಲ. ಭಾವವಿರುವೆಡೆ ಮಾಧುರ್ಯ, ಗಾಂಭೀರ್ಯಗಳು ತಾವೇ ತಾವಾಗಿ ಮೇಳೈಸುತ್ತವೆ. ಇಂತಹದೊಂದು ಕಾವ್ಯ ಸೃಷ್ಟಿಗೆ ಕವಿ ಮನಸ್ಸಿಗೆ ಏಕಾಂತವಿರಬೇಕು. ಲೌಕಿಕ ಜಂಜಡಗಳು ಇರಬಾರದು.

ಸಂಸಾರದ ತಾಪತ್ರಯ

ಸಂಸಾರದ ತಾಪತ್ರಯ

ಆದರೆ, ಸಂಸಾರದ ತಾಪತ್ರಯವಿದ್ದರೂ ಈ ಕವಿ ಮನಸ್ಸಿಗೆ ತಮ್ಮ ಸಾಹಿತ್ಯ ಸೃಷ್ಟಿಯ ಸಂದರ್ಭದಲ್ಲಿ ಅದು ತಡೆಯೊಡ್ಡಲಿಲ್ಲ. ಸಂಸಾರಸ್ಥರಾದರೂ ಸಂಸಾರದ ವ್ಯವಹಾರದಲ್ಲಿ ಇವರೆಂದೂ ತಲೆ ಹಾಕಲಿಲ್ಲ. ಹಾಗಂತ ಜಿ.ಎಸ್.ಎಸ್ ಸಂಸಾರ ಬಂಧನವನ್ನು ಹರವಿಕೊಂಡು ಹೊರಬಂದಿರಲಿಲ್ಲ. ಅವರ ಮಕ್ಕಳು, ಮೊಮ್ಮಕ್ಕಳು, ಸೋದರ-ಸೋದರಿಯರ ಜೊತೆ ಮಧುರ ಸಂಬಂಧ ಗಟ್ಟಿಯಾಗಿ ಬೆಸಗೊಂಡಿದ್ದರೂ ಅದ್ಯಾವುದು ಇವರ ಕಾವ್ಯ ಸೃಷ್ಟಿಗೆ ಅಡ್ಡಿಯಾಗಲೇ ಇಲ್ಲ. ಹಾಗಾಗದಂತೆ ಬದುಕಿನುದ್ದಕ್ಕೂ ಎಚ್ಚರವಹಿಸಿಕೊಂಡು ಬಂದವರು ಅವರ ಪತ್ನಿ ರುದ್ರಾಣಿ.

ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ

ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ

ಜಿ.ಎಸ್.ಶಿವರುದ್ರಪ್ಪನವರ ಬದುಕೇ ಹಾಗೆ. ಎಂದೂ ಹೂವಿನ ಹಾಸಿಗೆಯಾಗಿರಲಿಲ್ಲ. ಚಿಕ್ಕಂದಿನಿಂದಲೂ ನೋವನ್ನು ಅನುಭವಿಸಿಕೊಂಡು ಬಂದವರು. ಹಾಗಾಗಿ ಬದುಕಿನುದ್ದಕ್ಕೂ ಕಠೋರ ಶಿಸ್ತನ್ನು ಹಾಕಿಕೊಂಡು ಅದರಂತೆ ನಡೆದು ಬಂದಿದ್ದರು. ಅವರೆಂದೂ ಅಶಿಸ್ತನ್ನು ಸಹಿಸಿಕೊಂಡವರಲ್ಲ. ವಿದ್ಯಾಭ್ಯಾಸ ಮುಗಿಸಿ, ಸರ್ಕಾರಿ ನೌಕರಿಗೆ ಸೇರಿದ ಮೇಲಂತೂ ಕೆಲಸ ಮಾಡುವ ಜಾಗದಲ್ಲಿ ಅಶಿಸ್ತಿಗೆ ಅವಕಾಶ ಕೊಟ್ಟಿರಲಿಲ್ಲ. ಆದ್ದರಿಂದಲೇ ಇವರನ್ನು ಕಂಡರೆ ಶಿವರುದ್ರಪ್ಪನವರ ಸ್ನೇಹಿತರು, ಕಾಲೇಜಿನ ಸಿಬ್ಬಂದಿಗಳು ಇವರ ಹೆಸರು ಶಿವರುದ್ರಪ್ಪ ,

ದಂಡಿಸುತ್ತಿದ್ದ ಸೌಮ್ಯ 'ಶಿವ'

ದಂಡಿಸುತ್ತಿದ್ದ ಸೌಮ್ಯ 'ಶಿವ'

ಆದರೆ ಇವರಲ್ಲಿ ಶಿವನ ಅಂಶಕ್ಕಿಂತ ರುದ್ರನ ರೌದ್ರತೆಯೇ ಜಾಸ್ತಿ ಎಂದು ತಮಾಷೆ ಮಾಡುತ್ತಿದ್ದರು. ಸಣ್ಣ-ಪುಟ್ಟ ತಪ್ಪಾದರೂ ಇವರ ಮೂಗಿನ ಮೇಲಿದ್ದ ಕೋಪ ಒಮ್ಮೆಲೆ ಹೊರ ಹೊಮ್ಮುತ್ತಿತ್ತು. ಇದು ಕಚೇರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಮನೆಯಲ್ಲೂ ಮಕ್ಕಳು, ಸೋದರರು ಅಶಿಸ್ತು ಪ್ರದರ್ಶಿಸಿದರೆ ಮುಲಾಜಿಲ್ಲಾದೆ ದಂಡಿಸುತ್ತಿದ್ದರು. ಇಂತಹ ವೇಳೆಯಲ್ಲೇ ಅವರನ್ನು ಸಾಂತ್ವನಗೊಳಿಸುವ ಶಕ್ತಿ ಇದ್ದುದು ಅವರ ಪತಿಗೊಬ್ಬರಿಗೆ. ಅದಕ್ಕೆ ಕಾರಣವೂ ಇದೆ.

ಶಿಕ್ಷಕರ ಮಗ ಶಿವರುದ್ರಪ್ಪ ಮೂಲತಃ ಶಿವಮೊಗ್ಗ ಜಿಲ್ಲೆ

ಶಿಕ್ಷಕರ ಮಗ ಶಿವರುದ್ರಪ್ಪ ಮೂಲತಃ ಶಿವಮೊಗ್ಗ ಜಿಲ್ಲೆ

ಶಿಕಾರಿಪುರದವರಾದ ಶಿವರುದ್ರಪ್ಪನವರ ತಂದೆ ಶಾಂತವೀರಪ್ಪ ವೃತ್ತಿಯಿಂದ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯರು. ಇವರ ಪತ್ನಿ ವೀರಮ್ಮ . ಇವರಿಗಿದ್ದ ಇಬ್ಬರು ಮಕ್ಕಳ ಪೈಕಿ ಶಿವರುದ್ರಪ್ಪನವರೇ ಹಿರಿಯರು. ಇವರಿನ್ನು ಬಾಲ್ಯಾವಸ್ಥೆಯಲ್ಲಿರುವಾಗಲೇ ತಾಯಿ ಅಕಾಲ ಮರಣಕ್ಕೆ ತುತ್ತಾಗಿದ್ದರು. ಪತ್ನಿಯ ನಿಧನದ ನಂತರ ತಂದೆ ಮತ್ತೊಂದು ಮದುವೆಯಾಗಿದ್ದರು. ಮದುವೆಯಾಗಿ ಬಂದ ಎರಡನೇ ಪತ್ನಿ ಇವರನ್ನೆಂದೂ ಮಲಮಗನಂತೆ ಕಂಡಿರಲಿಲ್ಲ. ಅವರಿಂದ ತಾಯಿ ಹೃದಯದ ಮಮತೆ ಸಿಕ್ಕರೂ ಶಿವರುದ್ರಪ್ಪನವರ ಮನಸ್ಸಿನಲ್ಲಿ ಅದೆಂಥದೋ ಕೊರತೆ.

ಊರೂರಿಗೆ ವರ್ಗಾವಣೆ

ಊರೂರಿಗೆ ವರ್ಗಾವಣೆ

ತಂದೆಗೆ ಸರ್ಕಾರಿ ನೌಕರಿಯಾಗಿದ್ದರಿಂದ ರಾಜ್ಯದ ವಿವಿಧ ಊರುಗಳಿಗೆ ಪದೇ-ಪದೇ ವರ್ಗಾವಣೆಯಾಗುತ್ತಿತ್ತು. ಆದ್ದರಿಂದ ಶಿವರುದ್ರಪ್ಪನವರ ತಂದೆಗೆ ಅವರ ಹತ್ತಿರದ ಬಂಧುಗಳ ಸಂಪರ್ಕ ಕಡಿದು ಹೋಗಿತ್ತು. ಆಗಷ್ಟೇ ತುಮಕೂರು ಜಿಲ್ಲೆಯ ಗುಬ್ಬಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾಂತವೀರಪ್ಪನವರಿಗೆ ಅದೊಂದು ದಿವಸ ಬೀರೂರಿನಿಂದ ಪತ್ರ ಬಂದಿತ್ತು. ಅವತ್ತು ಆ ಪತ್ರ ಬರೆದಿದ್ದವರು ಬೇರೆ ಯಾರು ಅಲ್ಲ, ಶಿವರುದ್ರಪ್ಪನವರ ಧರ್ಮಪತ್ನಿ ರುದ್ರಾಣಿ.

ರುದ್ರಾಣಿ ಅವರ ಜತೆ ಮದುವೆ

ರುದ್ರಾಣಿ ಅವರ ಜತೆ ಮದುವೆ

ರುದ್ರಾಣಿಯವರು ವರಸೆಯಲ್ಲಿ ಶಿವರುದ್ರಪ್ಪನವರಿಗೆ ಅಕ್ಕನ ಮಗಳು. ಹುಟ್ಟಿದ ಎಂಟೇ ದಿವಸಕ್ಕೆ ತಾಯಿಯನ್ನು ಕಳೆದುಕೊಂಡಿದ್ದ ಆ ಹಾಲಗಲ್ಲದ ಹಸುಗೂಸನ್ನು ಸಾಕಿದ್ದು ಮುತ್ತಜ್ಜಿ. ರುದ್ರಾಣಿಯ ತಂದೆ ಚನ್ನವೀರಪ್ಪ ಊರಿಗೆ ಹಿರಿಯರು. ಆ ಕಾಲಕ್ಕೆ ಊರಿನ ಛೇರ್ ‍ಮನ್ ಆಗಿದ್ದರು. ಜೊತೆಗೆ ಮಂಡಿ ವ್ಯಾಪಾರ ಇತ್ತು. ಆರ್ಥಿಕವಾಗಿ ಸ್ಥಿತಿವಂತರಾಗಿದ್ದರು. ಇಂತಹ ಕುಟುಂಬದೊಂದಿಗೆ ಶಿವರುದ್ರಪ್ಪನವರ ಕುಟುಂಬಕ್ಕೆ ಸಂಬಂಧವಿದ್ದುದರಿಂದ ಅವರಿಗೂ ಮಗಳು ರುದ್ರಾಣಿಯನ್ನು ಇವರಿಗೇ ಕೊಡಬೇಕೆಂಬ ಆಸೆ.

ಈ ವೇಳೆಗಾಗಲೇ ಮೈಸೂರಿನಲ್ಲಿ ಬಿ.ಎ ಆನರ್ಸ್ ಕಲಿಯುತ್ತಿದ್ದ ಶಿವರುದ್ರಪ್ಪನವರಿಗೆ ಮಗಳು ಕೊಡಬೇಕೆಂಬ ಇಚ್ಛೆಯಿಂದಲೇ ಪತ್ರ ಬರೆದು ಗುಬ್ಬಿಗೆ ಬಂದ ರುದ್ರಾಣಿಯವರ ಮನೆಯವರಿಗೆ ತಮ್ಮ ಮನೆಯ ಪರಿಸ್ಥಿತಿ ವಿವರಿಸಿದ ಜಿ.ಎಸ್.ಎಸ್, ತಾನು ಮುಂದೆ ಇನ್ನೂ ಓದುವುದಿದೆ ಎಂದಿದ್ದರು. ಅದಕ್ಕೆ ರುದ್ರಾಣಿಯವರ ತಂದೆ ಆರ್ಥಿಕ ನೆರವು ನೀಡುವ ಭರವಸೆ ನೀಡಿದಾಗ ಇಸ್ವಿ 1950ರ ಮೇ ತಿಂಗಳಲ್ಲಿ ರುದ್ರಾಣಿಯವರು ಜಿ.ಎಸ್.ಎಸ್ ಅವರ ಕೈಹಿಡಿದಿದ್ದರು.

ಸಂಸಾರ ತಾಪತ್ರಯ

ಸಂಸಾರ ತಾಪತ್ರಯ

ಮದುವೆಯಾದ ಎರಡೇ ವರ್ಷಗಳಲ್ಲಿ ಜಿ.ಎಸ್.ಎಸ್ ಅವರ ಓದು ಮುಗಿದಿತ್ತು. ಅದರ ಬೆನ್ನಿಗೇ ದಾವಣಗೆರೆಯ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರ ನೌಕರಿ ದೊರೆತಿತ್ತು. ಅಲ್ಲಿನ ಮೂವತ್ತೈದು ರುಪಾಯಿ ಬಾಡಿಗೆಯ ಪುಟ್ಟ ಮನೆಯ ತುಂಬಾ ಮಕ್ಕಳು. ಜಿ.ಎಸ್.ಎಸ್ ದಂಪತಿ, ಮೂವರು ಮಕ್ಕಳು, ಸೋದರ-ಸೋದರಿಯರು ಸೇರಿದರೆ ಏಳೆಂಟು ಮಂದಿ. ಆದರೆ, ಜಿ.ಎಸ್.ಎಸ್ ಗೆ ಬರುತ್ತಿದ್ದುದು ಕೇವಲ ನೂರಾ ಹತ್ತು ರುಪಾಯಿ ಸಂಬಳ ಮಾತ್ರ. ಇದರಿಂದ ಕುಟುಂಬದ ಹೊಟ್ಟೆ ತುಂಬುವುದು ಕಷ್ಟ ಎಂದು ಗೊತ್ತಿದ್ದರೂ ರುದ್ರಾಣಿಯವರು ಪತಿಗೆ ಮನೆಯ ಪರಿಸ್ಥಿತಿ ತಿಳಿಸುವ ಧೈರ್ಯ ಮಾಡಲಿಲ್ಲ. ತಾವು ಉಪವಾಸವಿದ್ದು ಪತಿ, ಮಕ್ಕಳು, ಮೈದುನ, ನಾದಿನಿಯನ್ನು ಸಲುಹಿದ ಗಟ್ಟಿಗಿತ್ತಿ ಅವರು.

ತ.ಸು.ಶಾಮರಾಯರ ನೆರವು

ತ.ಸು.ಶಾಮರಾಯರ ನೆರವು

ಮುಂದೆ, ದಾವಣಗೆರೆಯಿಂದ ಮೈಸೂರಿಗೆ ವರ್ಗಾವಾದರೂ ಕುಟುಂಬದ ಆರ್ಥಿಕ ಸ್ಥಿತಿ ಹಿಂದಿನಂತೆಯೇ ಇತ್ತು. ಆದರೆ ಅಲ್ಲಿ ಕುಟುಂಬದ ನೆರವಿಗೆ ಬಂದವರು ತ.ಸು.ಶಾಮರಾಯರು. ತಿಂಗಳ ಕೊನೆಯಲ್ಲಿ ಕುಟುಂಬದ ವ್ಯವಹಾರಕ್ಕೆ ಅವರು ಕೈಗಡ ಕೊಡುತ್ತಿದ್ದರು. ಅಲ್ಲದೆ ಜಿ.ಎಸ್.ಎಸ್ ಅವರಿಗೆ ತಿಳಿ ಹೇಳಿ ಟ್ಯೂಶನ್ ಆರಂಭಿಸುವಂತೆ ಹೇಳಿದ್ದರು. ಅದರಿಂದ ಅವರ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಿತು. ಮನೆಯ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ರುದ್ರಾಣಿಯವರು ಪತಿಯ ಕಾವ್ಯ ಕೃಷಿಗೆ ಸಂಪೂರ್ಣ ಸಹಕಾರ ಕೊಟ್ಟರು. ಮನೆವಾರ್ತೆಯನ್ನೆಲ್ಲಾ ಸಂಪೂರ್ಣ ತಮ್ಮ ಹೆಗಲಿಗಾಕಿಕೊಂಡರು. ಇದರಿಂದ ಜಿ.ಎಸ್.ಎಸ್ ಅವರ ಕಾವ್ಯ ಕೃಷಿ ನಿರಾತಂಕವಾಗಿ ಸಾಗಿ, ಸಾಲು-ಸಾಲಾಗಿ ಅವರ ಕವನ ಸಂಕಲಗಳು ಹೊರಬಂದವು.

ಹಾಗಂತ ಜಿ.ಎಸ್.ಎಸ್ ಸಂಪೂರ್ಣವಾಗಿ ಸಾಹಿತಿಯ ಸೃಷ್ಟಿಯಲ್ಲಿ ಮುಳಗಿ ಸಂಸಾರವನ್ನು ಮರೆತರೆಂದು ಅರ್ಥವಲ್ಲ. ಬಿಡುವಿನ ವೇಳೆಯಲ್ಲಿ ಕುಟುಂಬದವರೊಂದಿಗೆ ಬೆರೆಯುತ್ತಿದ್ದರು. ಮಕ್ಕಳ ವಿದ್ಯಾಭ್ಯಾಸ ಪ್ರಗತಿಯ ಕಡೆ ಗಮನ ಹರಿಸುತ್ತಿದ್ದರು.

ತಾಂಬೂಲಸ ಸವಿ ನೆನಪು

ತಾಂಬೂಲಸ ಸವಿ ನೆನಪು

ಇವೆಲ್ಲದರ ನಡುವೆ ರಾತ್ರಿ ಊಟದ ನಂತರ ಪತ್ನಿ ರುದ್ರಾಣಿ ಕೊಡುತ್ತಿದ್ದ ತಾಂಬೂಲದ ಸವಿಯನ್ನು ಸವಿಯುತ್ತಿದ್ದರು. ಪ್ರತಿವಾರ ಅವರ ಕೈಯಿಂದಲೇ ಅಭ್ಯಂಜನ ಸ್ನಾನ ಮಾಡಿಸಿಕೊಂಡು ಉಲ್ಲಾಸಭರಿತರಾಗುತ್ತಿದ್ದರು. ಅಂತಹ ಸಂತೋಷದ ಕ್ಷಣಗಳನ್ನು ಆಸ್ವಾದಿಸಿಯೇ ಜಿ.ಎಸ್.ಎಸ್ ಕನ್ನಡದ ರಾಷ್ಟ್ರ ಕವಿಗಳಲ್ಲೊಬ್ಬರಾಗಿ ಕನ್ನಡಾಂಬೆಯ ಪಾದದಡಿ ಸಾಹಿತ್ಯದ ಹಣತೆ ಹಚ್ಚಿದರು. ಅಂದು ಜಿ.ಎಸ್.ಎಸ್ ಹಚ್ಚಿದ ಹಣತೆಗೆ ಪಕ್ಕದಲ್ಲಿ ನಿಂತು ಎಣ್ಣೆ, ಬತ್ತಿ ಹಾಕಿದವರೇ ಅವರ ಪತ್ನಿ ರುದ್ರಾಣಿ ಎಂಬುದು ಅಪ್ಪಟ ಸತ್ಯ. ಹಾಗಾಗಿಯೇ ಜಿ.ಎಸ್.ಎಸ್ ಅವರ ಅಭಿಮಾನಿಗಳು ರುದ್ರಾಣಿಯವರನ್ನು ಕಂಡರೆ ತಮ್ಮ ಗುರುವಿನ ಹೆಸರಿನ ಶಿವ ಉಳಿಯಲು ಮುಂದಿನ ಶಬ್ಧ ರುದ್ರ ರುದ್ರಾಣಿಯಾಗಿ ಪಕ್ಕದಲ್ಲೇ ನಿಂತಿದ್ದಾರೆ ಎನ್ನುತ್ತಾರೆ.

English summary
Kannada poet, writer and researcher, Rashtrakavi GS Shivarudrappa was a sensitive and open mind person manages his personal and professional life well he worked and led literary movements and social movements together also his family narrates Lakshmi Sagar Gowda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X